ಬೀದರ್

ಜ್ಞಾನಪೀಠಿಗಳ ಕಣ್ಣೇಕೆ ಹಸಿರು?

Published On :

ಕ.ಪ್ರ. ವಾರ್ತೆ   ಗುಲ್ಬರ್ಗ   ಜು. 18
ವೃತ್ತಿ ರಂಗಭೂಮಿಯ ಬಗ್ಗೆ, ಅಲ್ಲಿನ ನಾಟಕ ಸಾಹಿತ್ಯ, ನಾಟಕಕಾರರ ಬಗ್ಗೆ ಜ್ಞಾನಪೀಠಿಗಳು ಕೀಳುಭಾವನೆ ಹೊಂದಿದ್ದಾರೆ ಎಂದು ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ಎಲ್.ಬಿ.ಕೆ. ಶೇಖ್ ಮಾಸ್ಟರ್ ಯಾರ ಹೆಸರನ್ನೂ ಪ್ರಸ್ತಾಪಿಸದೆ ಜ್ಞಾನಪೀಠಿಗಳ ಧೋರಣೆಯ ಬಗ್ಗೆ ಖಾರವಾದ ಹೇಳಿಕೆ ನೀಡಿದ್ದಾರೆ.
ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿ ಎರಡೂ ಅಳಿವಿನಂಚಲ್ಲಿವೆ. ಇವುಗಳನ್ನು ಪೋಷಿಸುವ, ಅಲ್ಲಿನ ಕಲಾವಿದರು, ನಾಟಕಕಾರರನ್ನು ಪ್ರೋತ್ಸಾಹಿಸುವ ಕೆಲಸ ನಡೆಯಬೇಕಾಗಿದೆ. ಆದರೆ ನಮ್ಮ ಜ್ಞಾನಪೀಠಿಗಳು ವೃತ್ತಿ ರಂಗಭೂಮಿಯ ಬಗ್ಗೆ ಅದ್ಯಾಕೋ ಕೀಳುಭಾವನೆಯನ್ನೇ ಹೊಂದಿದ್ದಾರೆ. ನಾಟಕಕಾರರು ಸಾಹಿತಿಗಳಲ್ವಾ, ಇವರು ಬರೆಯೋದು ಸಮಾಜ ತಿದ್ದುವ ಸಾಹಿತ್ಯ ಅಲ್ವಾ ಎಂದು ಶೇಖ್ ಮಾಸ್ಟರ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಶುಕ್ರವಾರ ರಂಗ ಸಂಗಮ ವೇದಿಕೆಯಡಿಯಲ್ಲಿ ನಡೆದ ಜಂಗಮಶೆಟ್ಟಿ ರಂಗ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಶೇಖ್ ಮಾಸ್ಟರ್, ವೃತ್ತಿ ರಂಗಭೂಮಿ ಅಂದ್ರೆ ಕೇವಲ ದ್ವಂದ್ವಾರ್ಥ(ಡಬ್ಬಲ್ ಮೀನಿಂಗ್) ಹಾಗೂ ಅಶ್ಲೀಲ ಪದಗಳನ್ನು ಬಳಸುವ ಕಲೆ ಎಂಬರ್ಥವನ್ನು ಯಾರೂ ಹೊಂದಬಾರದೆಂದು ಹೇಳುವ ಮೂಲಕ ವೃತ್ತಿ ರಂಗಭೂಮಿಯ ಪ್ರತಿ ಜನಮಾನಸದಲ್ಲಿರುವ ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು.
ಗುಲ್ಬರ್ಗದ ಲಾಲ ಅಹ್ಮದ್ ಬಂದಾ ನವಾಜ್ ಶೇಖ್ ಅಲ್ದಾಳರು 200ಕ್ಕೂ ಹೆಚ್ಚು ನಾಟಕ ಬರೆದಿದ್ದಾರೆ. ಇವರಿಗೆ ಯಾರು ಪುರಸ್ಕಾರ ಕೊಡುತ್ತಾರೆ, ವೃತ್ತಿ ರಂಗದಲ್ಲಿನ ಇಂತಹ ಸಾಹಿತಿಗಳನ್ನೂ ಜ್ಞಾನಪೀಠದಂತಹ ಪುರಸ್ಕಾರ ನೀಡುವ ಮೂಲಕ ಗುರುತಿಸುವ ಕೆಲಸವಾಗಲೇಬೇಕು ಎಂದರು.


ಬಸವರಾಜಯ್ಯಸ್ವಾಮಿಗೆ ಜಂಗಮಶೆಟ್ಟಿ ರಂಗಪುರಸ್ಕಾರ


ರಂಗ ಸಂಗಮ ಕಲಾ ವೇದಿಕೆಯ ಚೊಚ್ಚಿಲ ಪುರಸ್ಕಾರ ರೂಪದಲ್ಲಿ 10 ಸಾವಿರ ನಗದು ಫಲಕ ಹಾಗೂ ಪುರಸ್ಕಾರ ಒಳಗೊಂಡ ಜಂಗಮಶೆಟ್ಟಿ ರಂಗ ಪುರಸ್ಕಾರವನ್ನು ಚಿತ್ತಾಪುರ ತಾಲೂಕಿನ ಭೀಮಳ್ಳಿಯ ಹಾರ್ಮೋನಿಯಂ ವಾದಕ ಬಸವರಾಜಯ್ಯ ಸ್ವಾಮಿ ಅವರಿಗೆ ನೀಡಲಾಯ್ತು. ಬಣ್ಣಬಣ್ಣದ ಸಮಾರಂಭದಲ್ಲಿ ತಮ್ಮನ್ನು ಆದರರಿಂದ ಕಂಡು ಪುರಸ್ಕಾರ ನೀಡಿದಾಗ ಬಸವರಾಜಯ್ಯ ಸ್ವಾಮಿ ಪುಳಕಿತರಾದರು. ರಂಗಭೂಮಿಯಲ್ಲಿ ಸುಮಾರು 64 ವರ್ಷ ಹಾರ್ಮೋನಿಯಂ ವಾದಕರಾಗಿ ಸೇವೆ ಸಲ್ಲಿಸಿದ ಬಸವರಾಜಯ್ಯಸ್ವಾಮಿ ಅಪ್ಪಟ ಗ್ರಾಮೀಣ ರಂಗ ಕಲಾವಿದರು. 76 ವರ್ಷದ ಬಸವರಾಜಯ್ಯ ಕೇವಲ 10ನೇ ತರಗತಿಯನ್ನು ಮಾತ್ರ ಅಭ್ಯಾಸ ಮಾಡಿದ್ದಾರೆ. ನಾಟಕ ಅಕಾಡೆಮಿ ಅಧ್ಯಕ್ಷ ಎಲ್.ಬಿ.ಶೇಖ್ ಮಾಸ್ತರ್ ಪ್ರಶಸ್ತಿ ಪ್ರದಾನ ಮಾಡಿದರು. ಗುಬ್ಬಿ ವೀರಣ್ಣ ರಂಗ ಪ್ರಶಸ್ತಿ ಪುರಸ್ಕೃತ ಹಿರಿಯ ನಾಟಕಕಾರ ಎಲ್.ಬಿ.ಕೆ. ಆಲ್ದಾಳ ಅಧ್ಯಕ್ಷತೆ ವಹಿಸಿದ್ದರು. ಕೊಪ್ಪಳದ ಹಿರಿಯ ಸಾಹಿತಿ ಶಾಂತಾದೇವಿ ಹಿರೇಮಠ ಮುಖ್ಯ ಅತಿಥಿಗಳಾಗಿದ್ದರು. ಪ್ರಶಸ್ತಿ ಪುರಸ್ಕೃತರ ಕುರಿತು ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಮಾತನಾಡಿದರು. ಸಮಾರಂಭದಲ್ಲಿ ಸುಭದ್ರಾದೇವಿ ಎಸ್.ಜಂಗಮಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿರಿಯ ರಂಗಕರ್ಮಿ ಶಾಂತಾ ಕುಲಕರ್ಣಿ ರಾಯಚೂರು ಮತ್ತು ಸಂಗೀತ ಪ್ರಾಧ್ಯಾಪಕಿ ಲಕ್ಷ್ಮೀ ಶಂಕರ ಜೋಶಿ ಗುಲ್ಬರ್ಗ ಅವರು ರಂಗಗೀತೆಗಳನ್ನು ಪ್ರಸ್ತುತಪಡಿಸಿದರು. ಪ್ರಭಾಕರ ಸಾತಖೇಡ ಸೇರಿದಂತೆ ಹಲವಾರು ರಂಗಕರ್ಮಿಗಳನ್ನು ಸತ್ಕರಿಸಲಾಯ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.