ಬೀದರ್

ಅಧ್ಯಕ್ಷ ಸ್ಥಾನಕ್ಕೆ ಅವಿರೋಧ

Published On :

ಕ.ಪ್ರ. ವಾರ್ತೆ    ಬೀದರ್    ಜು. 17
ತಾಲೂಕು ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆದು ಅಧ್ಯಕ್ಷರಾಗಿ ಚಿಟ್ಟಾ ಕ್ಷೇತ್ರದ ಬಿಜೆಪಿ ಸದಸ್ಯೆ ಶರಣಮ್ಮ ಬಸವರಾಜ ಕೋಡಗೆ ಅವಿರೋಧ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ನಾಗೂರಾ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಶಾಹೇದಾ ಬೇಗಂ ಆಯ್ಕೆಯಾಗಿದ್ದಾರೆ.
23 ಸದಸ್ಯರ ಬಲ ಹೊಂದಿರುವ ಬೀದರ್ ತಾಪಂನಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದ್ದರೆ, ಉಪಾಧ್ಯಕ್ಷ ಸ್ಥಾನ ಪ್ರವರ್ಗ(ಎ) ಮಹಿಳೆಗೆ ಮೀಸಲಾಗಿತ್ತು. ಗುರುವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರೆಲ್ಲ ಒಮ್ಮತದಿಂದ ಬಿಜೆಪಿಯಿಂದ ಸದಸ್ಯೆಗೆ ಬೆಂಬಲಿಸಿದರೆ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಚುನಾವಣೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಲಗ್ಗೆಯಿಟ್ಟ ಬಿಜೆಪಿಗೆ ಉಪಾಧ್ಯಕ್ಷ ಸ್ಥಾನದಲ್ಲಿ ಸೋಲು: ಅಧ್ಯಕ್ಷ ಸ್ಥಾನಕ್ಕೆ ಚಿಟ್ಟಾ ಕ್ಷೇತ್ರದ ಸದಸ್ಯೆ ಶರಣಮ್ಮ ಬಸವರಾಜ ಕೋಡಗೆ ಅವಿರೋಧ ಆಯ್ಕೆಯಾದರೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಮಾಳೆಗಾಂವ ಕ್ಷೇತ್ರದ ಬಿಜೆಪಿಯ ಲಕ್ಷ್ಮೀ ಮಾರುತಿ 8 ಮತಗಳನ್ನು ಪಡೆದರೆ ನಾಗೂರಾ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಶಾಹೇದಾ ಬೇಗಂ 15 ಮತಗಳನ್ನು ಪಡೆಯುವ ಮೂಲಕ ಜಯಭೇರಿ ಬಾರಿಸಿದರು.
ಚುನಾವಣಾಧಿಕಾರಿ, ಸಹಾಯಕ ಆಯುಕ್ತೆ ಆರತಿ ಆನಂದ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ತಾಪಂ ಸದಸ್ಯರು ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಶಿವಾಜಿ ಢೋಣೆ ಇದ್ದರು.
ಜಯ ಒಲಿದರೂ ಮುಜುಗರ: ತಾಪಂ ಚುನಾವಣೆಯಲ್ಲಿ ಬಿಜೆಪಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದರೂ ಪಕ್ಷದ ಪರ ಜಯಘೋಷದ ವಿಷಯ ಒಂದೊಪ್ಪತ್ತಿಗೆ ಮುಜುಗರಕ್ಕೆ ಒಳಗಾಗಬೇಕಾದ ಸಂದರ್ಭ ಒದಗಿ ಬಂದಿತ್ತು.
ಅಧ್ಯಕ್ಷರ ಆಯ್ಕೆಯೊಂದಿಗೆ ಸದನಕ್ಕೆ ಆಗಮಿಸಿದ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು, ಬಿಜೆಪಿ ಪರವಾಗಿ ಘೋಷಣೆ ಕೂಗುತ್ತಿದ್ದಂತೆ ಅವಿರೋಧ ಆಯ್ಕೆಗೆ ಸಹಕರಿಸಿದ್ದ ಜೆಡಿಎಸ್ನ ಸುರೇಶ ಸಿಂಧೆ ಹಾಗೂ ಅಕ್ಬರ್ ಖಾನ್ ಸೇರಿದಂತೆ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಅಧ್ಯಕ್ಷ ಸ್ಥಾನಕ್ಕೆ ಪಕ್ಷ ಬೇಧವಿಲ್ಲದೆ ನಾವೆಲ್ಲ ಸಹಕರಿಸಿದ್ದು, ಯಾವುದೇ ನಿರ್ದಿಷ್ಟ ಪಕ್ಷದ ಜಯ ಇದಲ್ಲ. ಆದ್ದರಿಂದ ಇಲ್ಲಿ ಪಕ್ಷದ ಹೆಸರಲ್ಲಿ ಜಯಭೇರಿ ಬೇಡ ಎಂದರು.
ನಾನೀಗ ಪಕ್ಷಾತೀತ ಎಂದ ಅಧ್ಯಕ್ಷೆ: ಅಷ್ಟಕ್ಕೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿಯ ಲಕ್ಷ್ಮೀ ಅವರು ಕಾಂಗ್ರೆಸ್ ಅಭ್ಯರ್ಥಿ ಶಾಹೇದಾ ಬೇಗಂ ಅವರ ವಿರುದ್ಧ ಸೋಲುಂಡಿದ್ದು ಇಲ್ಲಿ ಬಿಜೆಪಿ ಪರವಾಗಿ ಘೋಷಣೆ ಹಾಕುವುದು ಸರಿಯಲ್ಲ. ಇದಕ್ಕೆ ನಾವು ವಿರೋಧಿಸುತ್ತೇವೆ ಎಂದಾಗ ವಾತಾವರಣ ಕೆಲಕಾಲ ಗೊಂದಲಮಯವಾಗಿತ್ತು.
ಈ ಸಂದರ್ಭದಲ್ಲಿ ನೂತನ ಠಾಣೆಯ ಪಿಎಸ್ಐ ಶ್ರೀಕಾಂತ ಹಾಗೂ ಪೊಲೀಸ್ ಸಿಬ್ಬಂದಿ ಬಂದು ಸಮಾಧಾನಪಡಿಸಿದರು. ನೂತನ ಅಧ್ಯಕ್ಷೆ ಶರಣಮ್ಮ ಮಾತನಾಡಿ, ನನಗೆ ಎಲ್ಲ ಪಕ್ಷದವರು ಬೆಂಬಲಿಸಿದ್ದಾರೆ. ಆದ್ದರಿಂದ ಆಯ್ಕೆಯಾದ ನಂತರ ನಾನು ಯಾವುದೇ ಒಂದು ಪಕ್ಷಕ್ಕೆ ಸೀಮಿತಳಲ್ಲ ಎಂದು ತಿಳಿಸಿದಾಗ ಪರಿಸ್ಥಿತಿ ತಿಳಿಯಾಯಿತು.
ಕೊನೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಣೆ ನಂತರ ಬಿಜೆಪಿ ಪ್ರಮುಖರಾದ ಬಾಬು ವಾಲಿ, ಡಾ. ಶೈಲೇಂದ್ರ ಬೆಲ್ದಾಳೆ, ಅಶೋಕ ಹೊಕ್ರಾಣಿ, ಉಪೇಂದ್ರ ದೇಶಪಾಂಡೆ, ಮಹೇಶ ಪಾಲಂ, ಸುರೇಶ ಮಾಶೆಟ್ಟಿ ಹಾಗೂ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದ ಬಿಎಸ್ಎಸ್ಕೆ ಕಾರ್ಖಾನೆ ಅಧ್ಯಕ್ಷ ಸಂಜಯ ಖೇಣಿ ಸೇರಿದಂತೆ ಮತ್ತಿತರರು ಆಗಮಿಸಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.