ಒವೈಸಿ ವಿರುದ್ಧ ಸುಳ್ಳು ಆರೋಪ
ಬೀದರ್: ಜಿಲ್ಲಾ ಪೊಲೀಸ್ ಅಲ್ಪಸಂಖ್ಯಾತ ಮುಸ್ಲಿಂ ಜನಾಂಗಕ್ಕೆ ರಕ್ಷಣೆ ಒದಗಿಸುವ ಬದಲು ಸುಳ್ಳು ಮೊಕದ್ದಮೆಗಳನ್ನು ಹೂಡುತ್ತ ಆರೆಸ್ಸೆಸ್ ಅಣತಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಎಐಎಂಐಎಂ ಪಕ್ಷ ಆರೋಪಿಸಿದೆ.
ನಗರದ ಗವಾನ್ ವೃತ್ತದಿಂದ ಪಕ್ಷದ ಜಿಲ್ಲಾಧ್ಯಕ್ಷ ಸೈಯದ್ ಮನ್ಸೂರ್ ಅಹ್ಮದ್ ಖಾದ್ರಿ ನೇತೃತ್ವದಲ್ಲಿ ನೂರಾರು ಯುವಕರ ಮೌನ ಮೆರವಣಿಗೆಯು ಮುಖ್ಯ ರಸ್ತೆಯ ಮೂಲಕ ಡಾ. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು. ರಸ್ತೆ ಮಧ್ಯದಲ್ಲಿ ಮಾಜಿ ಶಾಸಕ ಸೈಯದ್ ಜುಲ್ಫಿಕಾರ ಹಾಶ್ಮಿಯವರು ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಸೇರ್ಪಡೆಯಾದರು.
ಅಸದೊದ್ದೀನ್ ಬಿಡುಗಡೆಗೆ ಆಗ್ರಹ: ಕ್ಷುಲ್ಲಕ ಕಾರಣಕ್ಕಾಗಿ ಎಂಐಎಂ ಪಕ್ಷದ ಅಧ್ಯಕ್ಷ ಹಾಗೂ ಸಂಸದ ಅಸದೊದ್ದೀನ್ ಓವೈಸಿ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಗಿದ್ದು, ಕೂಡಲೇ ಪ್ರಕರಣ ಹಿಂಪಡೆದು ಅವರನ್ನು ಬಿಡುಗಡೆ ಮಾಡಬೇಕೆಂದು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಗ್ರಹಿಸಲಾಗಿದೆ.
ಜಿಲ್ಲಾ ಪೊಲೀಸ್ ಮುಸ್ಲಿಂ ಸಮುದಾಯದ ವಿರುದ್ಧ ಕಾರ್ಯಚಟುವಟಿಕೆ ನಡೆಸುತ್ತಿದ್ದು, ಸಂಘ ಪರಿವಾರದವರ ಅಣತಿಯಂತೆ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ಸಂವಿಧಾನದ ಮೂಲ ಆಶಯದಂತೆ ಸಿಗಬೇಕಿದ್ದ ರಕ್ಷಣೆ ಕಾಣದಾಗಿದೆ ಎಂದಿದ್ದಾರೆ.
ತರಕಾರಿ ಮಾರುಕಟ್ಟೆ ಬಂದ್: ನಗರದ ಹಳೆಯ ಭಾಗದಲ್ಲಿರುವ ತರಕಾರಿ ಮಾರುಕಟ್ಟೆ ಸಂಪೂರ್ಣವಾಗಿ ಮುಚ್ಚಲ್ಪಟ್ಟರೆ ಶಾಹ್ ಗಂಜ್ವರೆಗೆ ಮುಖ್ಯ ರಸ್ತೆಯ ಶೇ.50ರಷ್ಟು ಅಂಗಡಿ ಮುಂಗಟ್ಟಗಳು ಮಧ್ಯಾಹ್ನದವರೆಗೆ ಮುಚ್ಚಿದ್ದವು.
ಪೊಲೀಸ್ ಬಂದೋಬಸ್ತ್: ನಗರದಲ್ಲಿ ಎಂಐಎಂ ಪಕ್ಷದಿಂದ ಮೆರವಣಿಗೆ ನಡೆಸಲಾಗುತ್ತಿರುವ ಬೆನ್ನಲ್ಲೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನಗರದ ಗವಾನ್ ವೃತ್ತದಲ್ಲಿ ಹಾಗೂ ನಗರ ಪೊಲೀಸ್ ಠಾಣೆಯ ಎದುರು ಡಿವೈಎಸ್ಪಿ ಜ್ಯೋತಿ ನೇತೃತ್ವದಲ್ಲಿ ಮೂವರು ಸಿಪಿಐ, ಪಿಎಸ್ಐಗಳು ಹಾಗೂ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ದ್ವೇಷ ಸಾಧಿಸಲು ಪ್ರಕರಣ: ಇತ್ತೀಚೆಗೆ ಆಂಧ್ರದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮುತ್ತಂಗಿ ಗ್ರಾಮದ ಸಮೀಪದಲ್ಲಿ ಜಾಮಿಯಾ ಮಸೀದಿ ಕಟ್ಟಡದ ಕೆಲ ಭಾಗವನ್ನು ಅಕ್ರಮವಾಗಿ ತೆರವುಗೊಳಿಸಿದ್ದರ ಸಂದರ್ಭ ಸಂಸದ ಅಸಾದುದ್ದೀನ್ ಓವೈಸಿ ಹಾಗೂ ಎಂಐಎಂ ಮುಖಂಡರು ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಕ್ಕೆ ದ್ವೇಷ ಸಾಧಿಸಲು ಮುಂದಾದ ಪೊಲೀಸರು ಓವೈಸಿ ವಿರುದ್ಧ ಸುಳ್ಳು ದೂರು ದಾಖಲಿಸಿದ್ದು ಅದನ್ನು ಕೂಡಲೇ ವಾಪಸ್ ಪಡೆಲು ಸರ್ಕಾರಕ್ಕೆ ಸೂಚಿಸಬೇಕೆಂದು ಮನವಿಸಿದ್ದಾರೆ.
ಈಗಾಗಲೇ ಆರೆಸ್ಸೆಸ್ ಸಂಘಟನೆ ಭಯೋತ್ಪಾದನೆ ಬಿತ್ತುವ ಕೆಲಸದಲ್ಲಿ ತೊಡಗಿರುವ ಕುರಿತು ಸ್ವತಃ ದೇಶದ ಗೃಹ ಸಚಿವರೇ ಹೇಳಿದ್ದರಿಂದ ಕೂಡಲೇ ಆ ಸಂಘಟನೆಗೆ ನಿಷೇಧ ಹೇರಬೇಕೆಂದೂ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

