ಸಹಕಾರ ಸಂಘಗಳ ಯಶಸ್ಸಿಗೆ ಶ್ರಮಿಸಿ..
ಬೀದರ್: ಯಾವುದೇ ಸಹಕಾರ ಸಂಘಗಳು ಯಶಸ್ವಿಯಾಗಿ ನಡೆಯಬೇಕಾದರೆ ಸಂಘದ ಅಧ್ಯಕ್ಷರು, ನಿರ್ದೇಶಕರು ಸಾಲ ಪಡೆಯಬಾರದು ಎಂದು ಮಾಜಿ ಸಚಿವ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುರುಪಾದಪ್ಪ ನಾಗಮಾರಪಳ್ಳಿ ಸಲಹೆ ನೀಡಿದರು.
ನಗರದ ಕನ್ನಡ ಸಾಹಿತ್ಯ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಅಕ್ಕ ಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘದಲ್ಲಿ ಭಾನುವಾರ ಸಂಜೆ ಇ-ಸ್ಟ್ಯಾಂಪಿಂಗ್ ಕೇಂದ್ರ ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಘಗಳ ನಿರ್ದೇಶಕರು ಸಾಲ ಪಡೆದು ಮರಳಿಸದಿರುವುದರಿಂದ ಬಹುತೇಕ ಸಹಕಾರ ಸಂಘಗಳು ಮುಚ್ಚಿವೆ. ನಿರ್ದೇಶಕರಿಗೆ ಸಾಲ ಮರಳಿಸುವಂತೆ ಹೇಳಲು ಆಗುವುದಿಲ್ಲ. ಅದಕ್ಕಾಗಿ ನಿರ್ದೇಶಕರು ಸಾಲ ಪಡೆಯಲೇಬಾರದು. ಸಂಘಗಳು ಹುಟ್ಟು ಹಾಕುವುದು ದೊಡ್ಡದಲ್ಲ. ಅದನ್ನು ಮುಂದುವರೆಸಿಕೊಂಡು ಹೋಗುವುದು ದೊಡ್ಡದು ಎಂದು ಹೇಳಿದರು.
ಅಭಿವೃದ್ಧಿಗೆ ಪೂರಕ: ಸಂಘದ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳು ಹಾಕಿಕೊಳ್ಳಬೇಕು, ಇ-ಸ್ಟ್ಯಾಂಪಿಂಗ್ ಕೇಂದ್ರ ಆರಂಭಿಸಿರುವುದು ಸಂಘದ ಅಭಿವೃದ್ಧಿಗೆ ಪೂರಕವಾಗಲಿದೆ. ಸಂಘದ ಉಳಿತಾಯ ನೋಡಿ ಡಿಸಿಸಿ ಬ್ಯಾಂಕ್ನಿಂದ ಸಂಘಕ್ಕೆ ಸಹಕಾರ ನೀಡುವುದಾಗಿ ಹೇಳಿದರು.
ಗುಲ್ಬರ್ಗ ವಿಭಾಗದ ಉಪ ಸಾರಿಗೆ ಆಯುಕ್ತರು ಹಾಗೂ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಬೆಂಗಳೂರಿನ ಉಪಾಧ್ಯಕ್ಷ ಶಿವರಾಜ ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಕೃಷಿ, ಕೃಷಿಯೇತರ, ಹಾಲು ಉತ್ಪಾದಕರ, ರೇಷ್ಮೆ, ಕೈಮಗ್ಗ ಹಾಗೂ ಅಂಗವಿಕಲ ಸಹಕಾರ ಸಂಘ ಅಲ್ಲದೇ ವಿವಿಧ ರೀತಿಯ ಸುಮಾರು 3,500 ಪತ್ತಿನ ಸಹಕಾರ ಸಂಘಗಳು ರಾಜ್ಯದಲ್ಲಿ ನೋಂದಣಿಯಾಗಿವೆ. ಆದರೆ ಇದರಲ್ಲಿ ಕೇವಲ ಶೇ.25ರಷ್ಟು ಸಹಕಾರ ಸಂಘಗಳು ಸರಿಯಾಗಿ ನಡೆಯುತ್ತಿವೆ ಎಂದರು.
ಹಣ ಸಂಗ್ರಹ: ಸೌಹಾರ್ದ ಪತ್ತಿನ ಸಹಕಾರ ಮಹಾಮಂಡಳಿಯು ರಾಜ್ಯದ 30 ಜಿಲ್ಲೆಗಳು, 175 ತಾಲೂಕುಗಳಲ್ಲಿ, ಅಲ್ಲದೇ ಹೋಬಳಿ ಕೇಂದ್ರಗಳಲ್ಲಿ 600 ಇ-ಸ್ಟ್ಯಾಂಪಿಂಗ್ ಕೇಂದ್ರ ಆರಂಭಿಸಿದೆ. ಅದೇ ರೀತಿ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ 300ರಿಂದ 320 ಸಹಕಾರ ಸಂಘಗಳಿಗೆ ಇ-ಸ್ಟ್ಯಾಂಪಿಂಗ್ ಕೇಂದ್ರಗಳು ಆರಂಭಿಸಲು ಲೈಸನ್ಸ್ ನೀಡಿದ್ದು, ಈ ಎಲ್ಲಾ ಇ-ಸ್ಟ್ಯಾಂಪಿಂಗ್ ಕೇಂದ್ರಗಳಿಂದ ಪ್ರತಿ ತಿಂಗಳು 60-70 ಕೋಟಿ ಸಂಗ್ರಹವಾಗುತ್ತಿದೆ. ಸಹಕಾರ ಸಂಘಗಳು, ಪತ್ತಿನ ಸಹಕಾರ ಸಂಘಗಳು ಇ-ಸ್ಟ್ಯಾಂಪಿಂಗ್ ಕೇಂದ್ರಗಳನ್ನು ಆರಂಭಿಸಿದರೆ ಇಬ್ಬರು ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸಿಕೊಟ್ಟಂತಾಗುತ್ತದೆ ಎಂದರು.
ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಸಾವಿತ್ರಿಬಾಯಿ ಹೆಬ್ಬಾಳೆ ಮಾತನಾಡಿ, ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘವು 15 ವರ್ಷಗಳಿಂದ ಅತ್ಯುತ್ತಮ ಸಾರ್ವಜನಿಕರ ಸೇವೆ ಸಲ್ಲಿಸುತ್ತಿದೆ. ಈ ಸಂಘವು ಸುಮಾರು 800 ಸದಸ್ಯತ್ವ ಹೊಂದಿದ್ದು, 40 ಲಕ್ಷ ಮುದ್ದತ್ತು ಠೇವಣಿ ಹೊಂದಿದೆ. 62 ಲಕ್ಷ ಸಾಲ ನೀಡಲಾಗಿದ್ದು, 1.50 ಕೋಟಿ ಬಂಡವಾಳ ಹೊಂದಿ. ಸಂಘವು ಸಂಪೂರ್ಣ ಗಣಕೀಕೃತಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಜಿಲ್ಲಾ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಡಾ. ಚನ್ನಬಸಪ್ಪಾ ಹಾಲಹಳ್ಳಿ, ಬಸವಂತರಾವ್ ಶೆಟಕಾರ ಮಾತನಾಡಿದರು. ಮಹ್ಮದ್ ಜಾಫರ್, ವಿನಾಯಕರಾವ ಬಿರಾದಾರ ಇದ್ದರು. ಕಲಾವತಿ ಎಸ್. ಬಿರಾದಾರ ಸ್ವಾಗತಿಸಿದರೆ, ಸುನೀತಾ ನಿರೂಪಿಸಿ, ಪ್ರೊ.ಮಹಾನಂದ ಮಡಕಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

