ಬೀದರ್

ಸ್ಥಳೀಯರಿಗೆ ಪಕ್ಷದ ಟಿಕೆಟ್ ನೀಡಿ: ಕಾರಬಾರಿ

Published On :

ಬೀದರ್: ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಿಂದ ಸ್ಥಳೀಯರಿಗೆ ಪಕ್ಷದ ಟಿಕೆಟ್ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ಕಮಿಟಿ ಮಾಜಿ ಅಧ್ಯಕ್ಷ ಮಡಿವಾಳಪ್ಪ ಕಾರಬಾರಿ ಮತ್ತಿತರರು ಆಗ್ರಹಿಸಿದ್ದಾರೆ.
ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಬೀದರ್, ಭಾಲ್ಕಿ, ಹುಮನಾಬಾದ್ ಕ್ಷೇತ್ರಕ್ಕೆ ಈಗಾಗಲೇ ಪಕ್ಷದ ಶಾಸಕರಿದ್ದಾರೆ. ಆದ್ದರಿಂದ ಬಸವಕಲ್ಯಾಣ, ಔರಾದ್ ಹಾಗೂ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಗೊಂದಲ ಉಂಟಾಗಿದೆ. ಅದರಲ್ಲಿ ಹೆಚ್ಚಾಗಿ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಹೊರಗಿನ ಅಭ್ಯರ್ಥಿಗಳಿಗೆ ಮಣೆ ಹಾಕುವ ಕೆಲಸ ಪಕ್ಷ ಮಾಡಬಾರದು ಎಂದರು.
ಕಳೆದ ಚುನಾವಣೆಯಲ್ಲಿಯೂ ಕೂಡ ಪಕ್ಷದ ವರಿಷ್ಠರಿಗೆ ಸ್ಥಳಿಯರಿಗೆ ಪಕ್ಷದ ಟಿಕೆಟ್ ನೀಡಬೇಕು ಎಂದು ಕೇಳಲಾಗಿತ್ತು, ಆದರೆ ಹೆಸರಿಗೆ ಮಾತ್ರ ಎಂದಂತೆ ಸಮದ ಸಿದ್ದಿಕಿ ಎಂಬವರರಿಗೆ ಪಕ್ಷವು ಟಿಕೆಟ್ ನೀಡಿತ್ತು. ಇದರಿಂದ ಅಲ್ಲಿ ಕಾಂಗ್ರೆಸ ಪಕ್ಷ ತನ್ನ ಬಲ ಕಳೆದುಕೊಂಡಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಅತಿ ಹೆಚ್ಚು ಮತಗಳು ಕಾಂಗ್ರೆಸ ಪಾಲಾಗಿವೆ ಎಂದರು.
ಈಗಾಗಲೇ ಬೀದರ್ ದಕ್ಷಿಣ ಕ್ಷೇತ್ರದಿಂದ ಪಕ್ಷದ ಟಿಕೇಟ್‌ಗಾಗಿ ಸುಮಾರಿ 15 ಜನರು ಅರ್ಜಿ ಸಲ್ಲಿಸಿದ್ದು, ಇವರಲ್ಲಿ ಯಾರಿಗಾದರೂ ನೀಡಿ, ಹೆಸರಿಗೆ ಮಾತ್ರ ಕಳೆದ ಚುನಾವಣೆಯಂತೆ ಅಪರಿಚಿತ ಅಭ್ಯರ್ಥಿಗಳಿಗೆ ನೀಡಿದರೆ ಸ್ಥಳೀಯ ಮತದಾರರ ಒಲವು ಬೇರೆ ಪಕ್ಷದ ಕಡೆಗೆ ಹೋಗುತ್ತದೆ. ಆದ್ದರಿಂದ ಕಳೆದ ಚುನಾವಣೆಯಂತೆಗೆ ಮರುಕಳಿಸದಂತೆ ಸ್ಥಳೀಯರಿಗೆ ಪಕ್ಷದ ಟಿಕೆಟ್ ನೀಡಿದರೆ ಪಕ್ಷಕ್ಕೆ ಲಾಭವಾಗುತ್ತದೆ ಎಂದರು.
ರಾಮರಾವ್ ಕುಲಕರ್ಣಿ ಮುತ್ತಂಗಿ ಮಾತನಾಡಿ, ಬೀದರ್ ದಕ್ಷಿಣ ಕ್ಷೇತ್ರದಲ್ಲಿ 6 ಜಿ.ಪಂ. ಕ್ಷೇತ್ರಗಳು ಬರುತ್ತವೆ. ಇದರಲ್ಲಿ ಒಂದು ಟಿಕೆಟ್ ಸ್ಥಳೀಯರಿಗೆ ನೀಡಿಲ್ಲ. ಇದೇ ಕಾರಣದಿಂದ 6 ಸ್ಥಾನಗಳಲ್ಲಿ ಪಕ್ಷ ಸೋಲನ್ನಭಿವಿಸಿದೆ. 2008ರ ಚುನಾವಣೆಯಲ್ಲಿ ಸಮದ ಸಿದ್ದಿಖಿಗೆ ಟಿಕೆಟ್ ನೀಡಿದ್ದು ತಪ್ಪು. ಅದನ್ನೇ ಮರುಕಳಿಸಬೇಡಿ ಎನ್ನುವುದೆ ನಮ್ಮೆಲ್ಲರ ಆಗ್ರಹವಾಗಿದೆ. ಕಳೆದ 60 ವರ್ಷಗಳಿಂದ ಪಕ್ಷದಲ್ಲಿ ದುಡಿಯುತ್ತಿದ್ದರೂ, ಚುನಾವಣೆ  ಸಮಯದಲ್ಲಿ ಬೇರೆ ಪಕ್ಷದವರನ್ನು ಮಣೆ ಹಾಕುವುದು ಸರಿಯಲ್ಲ ಎಂದರು.
ಪಕ್ಷ ವಿರೋಧಿ ಮಾಡುತ್ತಿಲ್ಲ: ಬಕ್ಕಪ್ಪ ಶೇರಿಕಾರ ಮಾತನಾಡಿ, ಕಳೆದ ಚುನಾವಣೆಯಂತೆ ಈ ಚುನಾವಣೆಯಲ್ಲಿಯೂ ಪಕ್ಷದ ಹಿರಿಯರು ಹಾಗೂ ನಿಷ್ಠಾವಂತರನ್ನು ಕಡೆಗಣಿಸಬಾರದು, ಸ್ಥಳೀಯರಿಗೆ ಪಕ್ಷದ ಟಿಕೆಟ್ ನೀಡಬೇಕು ಎನ್ನುತ್ತಿದ್ದೇವೆ ವಿನಹ ಪಕ್ಷ ವಿರೋಧಿ ಕೆಲಸ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
 ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಈಗಾಗಲೇ ಪಕ್ಷದ ಟಿಕೆಟ್ ನಮಗೆ ಸಿಗುತ್ತದೆ ಎಂದು ಹೇಳುತ್ತ ಮೀನಾಕ್ಷಿ ಸಂಗ್ರಾಮ, ಪ್ರದೀಪ ಕುಶನೂರ, ಅಮೃತರಾವ್ ಚಿಮಕೋಡೆ ತಮ್ಮ ಬೆಂಬಲಿರ ಭಾವಚಿತ್ರಗಳನ್ನು ಹಚ್ಚಿಕೊಂಡು ಕ್ಷೇತ್ರದಲ್ಲಿ ತಿರುಗಾಡುತ್ತಿದ್ದಾರೆ. ಅಲ್ಲದೆ ದೊಡ್ಡ ವ್ಯಕ್ತಿಗಳನ್ನು ಇಳಿಸುವ ಉಹಾಪೋಹಗಳು ಕೇಳಿ ಬರುತ್ತಿದ್ದು, ಇದರಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ದಿಕ್ಕು ತೋಚದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಭುಶೆಟ್ಟಿ ಪಾಟೀಲ ಉಡಮನಳ್ಳಿ ಮಾತನಾಡಿ, ಕಳೆದ 25-30 ವರ್ಷಗಳಿಂದ ಬೀದರ್ ದಕ್ಷಿಣ ಕ್ಷೇತ್ರದವರು ಟಿಕೆಟ್ ಕೇಳಿದ್ದರೂ, ನೀಡಿಲ್ಲ. ಈ ಭಾಗ ಹುಮನಾಬಾದ್ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದರಿಂದ ಬಸವರಾಜ ಪಾಟೀಲ ಬಾಗೂ ಅವರ ಸುಪುತ್ರ ರಾಜಶೇಖರ ಪಾಟೀಲರು ಗೆಲವು ಸಾಧಿಸುತ್ತ ಬಂದಿದ್ದಾರೆ. ಆದರೆ ಪುರ್ನವಿಂಗಡಣೆ ನಂತರ ಹೊರಗಿನವರಿಗೆ ಟಿಕೆಟ್ ನೀಡಿದ್ದರಿಂದ ಪಕ್ಷಕ್ಕೆ ಸೋಲು ಅನುಭಿಸುವಂತಾಗಿದೆ ಎಂದರು.
ಬೀದರ್ ದಕ್ಷಿಣ ಕ್ಷೇತ್ರದಿಂದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ 15 ಜನರಲ್ಲಿ ಯಾರಿಗಾದರೂ ಟಿಕೆಟ್ ನೀಡಿದರೆ ಎಲ್ಲರೂ ಕೂಡಿ ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ. ಅಲ್ಲದೇ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತೇವೆ ಎಂದು ಮಹಿಳಾ ಕಾಂಗ್ರೆಸಿನ ಹಿರಿಯ ನಾಯಕಿ ರಫತ್ ಮತೀನ್ ನುಡಿದರು.
ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎನ್ನುವ ಸಂದೇಶವು ಬೀದರ್ ಡಿಸಿಸಿಐನಿಂದ ಎಐಸಿಸಿವರೆಗೆ ತಲುಪಿಸುವ ಕೆಲಸ ಮಾಡಲಾಗುವುದು. ಯಾವುದೇ ಕಾರಣಕ್ಕೆ ಹೊರಗಿನವರಿಗೆ ಟಿಕೆಟ್ ನೀಡುವುದು ಬೇಡ ಎಂದರು.
ನಮ್ಮ ಆಸ್ತಿ ಬೇರೆಯವರಿಗೆ ಕೊಡಲ್ಲ: ಬೀದರ್ ದಕ್ಷಿಣ ಕ್ಷೇತ್ರದ ಮೇಲೆ ಸಾವಿರ ಜನರು ಕಣ್ಣಿಟ್ಟಿದ್ದಾರೆ. ಯಾರು ಎನ್‌ಜಿಒ ಹೆಸರಿನ ಮೇಲೆ ಬಂದರೆ ಯಾರು ತಮ್ಮ ಸ್ವಂತ ಬಲದ ಮೇಲೆ ಬರಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ನಮ್ಮ ಅಸ್ತಿ ಬೇರೆಯವರಿಗೆ ಕೊಡಲು ತಯಾರಿಲ್ಲ ಎಂದು ಕೆಪಿಸಿಸಿ ಸದಸ್ಯೆ ದ್ರೌಪತಿ ದಂಡಿನ ತಿಳಿಸಿದರು.
ಕಲಾವತಿ ಪಾಟೀಲ್, ಅಬ್ದುಲ್ ಸತ್ತಾರ ಮಂದಕನಳ್ಳಿ, ಪೆಂಟಾರೆಡ್ಡಿ ಪಾಟೀಲ್ ಹೊಕ್ರಾಣಿ, ಚಾಂದಪಾಶಾ ಮನ್ನಳ್ಳಿ ಹಾಗೂ ಚನ್ನಪ್ಪ ಸಂಗೋಳಗಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.