ಬಳ್ಳಾರಿ

ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

Published On :

ಕೂಡ್ಲಿಗಿ: ಶಾಲೆ ಬಿಟ್ಟ ಬಳಿಕ ಊರ ಪಕ್ಕದ ಚಿಕ್ಕ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಮುಳುಗಿ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂಡೂರು ತಾಲೂಕು ದೇವರ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ.
ದೇವರ ಮಲ್ಲಾಪುರ ಗ್ರಾಮದ ಶಿವಣ್ಣನ ಮಗ ಬಸವರಾಜ (12) ಮತ್ತು ಇದೇ ಗ್ರಾಮದ ಕವಳೆಪ್ಪನ ಮಗ ನಾಗರಾಜ (10) ಮೃತಪಟ್ಟ ಬಾಲಕರು.
ಶನಿವಾರ ಮಧ್ಯಾಹ್ನ ಶಾಲೆ ಬಿಟ್ಟ ಬಳಿಕ ಮಕ್ಕಳು ಮನೆ ಬಂದಿದ್ದಾರೆ. ಮನೆಯವರೆಲ್ಲ ಬಿತ್ತನೆ ಮಾಡಲು ತೆರಳಿದ್ದ ಹಿನ್ನೆಲೆಯಲ್ಲಿ ಬಸವರಾಜ, ನಾಗರಾಜ ಮತ್ತು ವಿಠ್ಠಲ ಈ ಮೂವರು ಬಾಲಕರು ಗ್ರಾಮದ ಪಕ್ಕದಲ್ಲಿರುವ ಗೋಪಾಲಕುಂಟೆ ಕೆರೆಗೆ ಈಜಲು ಹೋಗಿದ್ದಾರೆ. ಮೂವರಿಗೂ ಈಜು ಬರುತ್ತಿರಲಿಲ್ಲ. ವಿಠ್ಠಲ ಧೈರ್ಯ ಸಾಲದೆ ತಟದಲ್ಲೇ ಕುಳಿತಿದ್ದ. ಇನ್ನಿಬ್ಬರು ಧೈರ್ಯ ಮಾಡಿ ನೀರಿಗೆ ಇಳಿದಿದ್ದಾರೆ. ನೀರು ಕಡಿಮೆ ಇದೆ ಎಂದು ಭಾವಿಸಿ ಮುಂದೆ ಮುಂದೆ ಸಾಗಿದ್ದಾರೆ. ಆದರೆ ಬೇಸಗೆ ಸಮಯದಲ್ಲಿ ಫಲವತ್ತಾದ ಮಣ್ಣಿಗೋಸ್ಕರ ಕೆರೆಯಲ್ಲಿ ಹತ್ತಾರು ಅಡಿ ಗುಂಡಿ ತೆಗೆಯಲಾಗಿತ್ತು. ಅದನ್ನು ಅರಿಯದ ಬಾಲಕರು ಹೊಂಡಕ್ಕೆ ಹೋಗಿದ್ದಾರೆ. ಇತ್ತ ತಟದಲ್ಲಿ ಕುಳಿತಿದ್ದ ವಿಠ್ಠಲ, ನೀರಿಗಿಳಿದ ಇಬ್ಬರು ಈಗ ಬರಬಹುದು, ಆಗ ಬರಬಹುದು ಎಂದು ಅವರ ಬಟ್ಟೆ ಹಿಡಿದು ಕಾಯುತ್ತಲೇ ಇದ್ದ. 10-15 ನಿಮಿಷಗಳ ಬಳಿಕ ಅದೇ ಮಾರ್ಗದಲ್ಲಿ ಬಿತ್ತನೆ ಮುಗಿಸಿಕೊಂಡು ಬರುತ್ತಿದ್ದ ರೈತರು ಈ ಬಾಲಕನಲ್ಲಿ 'ಇಲ್ಲಿ ಏಕೆ ಕುಳಿತಿದ್ದೀಯಾ?' ಎಂದು ವಿಚಾರಿಸಿದ್ದಾರೆ. ಆಗ ಬಾಲಕ ನಡೆದ ಸಂಗತಿ ವಿವರಿಸಿದ್ದಾನೆ. ಆಗ ಗ್ರಾಮಸ್ಥರು ನೀರಿಗಿಳಿದು ಹುಡುಕಾಡಿದರು. ಇಬ್ಬರು ಬಾಲಕರ ಶವ ಪತ್ತೆಯಾಯಿತು.
ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಸ್ಮಶಾನಮೌನ ಆವರಿಸಿತ್ತು. ಪಾಲಕರ ರೋದನ ಮುಗಿಲು ಮುಟ್ಟಿತ್ತು. ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ, ಮಕ್ಕಳ ಶವ ನೋಡಿ ರೋದಿಸಿದರು. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.