ಹರಡಿದ ಬಲೆಗೆ ಅಂತೂ ಬಿತ್ತು ಕರಡಿ!
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜೂ. 23
ಭಾನುವಾರ ಬೆಳಗ್ಗೆ ಕಡಾಕೊಳ್ಳ ಗ್ರಾಮದಲ್ಲಿ 16 ವರ್ಷದ ಬಾಲಕನ ತಲೆ ಬುರುಡೆ ಕಾಣುವಂತೆ ಗಾಯಗೊಳಿಸಿದ್ದ ಮೂರು ಕರಡಿಗಳು ಆಮೇಲೆ ಮಾಕನಡಕು ಗ್ರಾಮದ ಬಾಳೆತೋಟಕ್ಕೆ ನುಗ್ಗಿವೆ. ಗ್ರಾಮಸ್ಥರು ಹರಸಾಹಸ ಮಾಡಿ, ಕೊನೆಗೂ ಒಂದು ಕರಡಿಯನ್ನು ಬಲೆಯಲ್ಲಿ ಹಿಡಿದಿದ್ದಾರೆ.
ಕುರಿ ಕಾಯಲು ಹೋಗಿದ್ದ ಬಾಲಕನ ತಲೆ, ಕಣ್ಣಿನ ಭಾಗದಲ್ಲಿ ಕರಡಿಗಳು ಪರಚಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಬಾಲಕ ಈಗ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕರಡಿಗಳು ಮಾಕನಡುಕು ಗ್ರಾಮದ ಮಲ್ಲಿಕಾರ್ಜುನಪ್ಪ ಎಂಬುವರ ಬಾಳೆ ತೋಟದಲ್ಲಿ ಅಡಗಿರುವ ಸುದ್ದಿ ತಿಳಿದ ಗ್ರಾಮಸ್ಥರು ಭಾನುವಾರ ಮಧ್ಯಾಹ್ನ ಅವುಗಳನ್ನು ಹಿಡಿಯಲು ಪ್ರಯತ್ನಿಸಿದರು. ಇಲಾಖೆಗೆ ಸುದ್ದಿ ಮುಟ್ಟಿಸಿದರೆ, ಸಿಬ್ಬಂದಿ ಬಂದರು. ಆದರೆ, ಬಲೆ ಇತ್ಯಾದಿ ಸಲಕರಣೆ ತರಲಿಲ್ಲ. ಕೇಳಿದರೆ, ಗುಡೇಕೋಟೆಯಲ್ಲಿ ಕರಡಿಧಾಮ ಆದಾಗ ಕರಡಿ ಹಿಡಿಯುವ ಎಲ್ಲ ಸಲಕರಣೆಗಳು ಬರುತ್ತವೆ, ಈಗಿಲ್ಲ ಎಂದು ಉತ್ತರಿಸಿದರು. ಕೊನೆಗೆ ಗ್ರಾಮಸ್ಥರೇ ಹಂದಿ ಹಿಡಿಯುವ ಬಲೆ ತಂದು ಕಟ್ಟಿದರು. ಮೂರು ತಾಸಿನ ಕಾರ್ಯಾಚರಣೆಯಲ್ಲಿ ಕಾನಹೊಸಹಳ್ಳಿ ಪಿಎಸ್ಐ ರಘುನಾಥ, ಅರಣ್ಯ ಇಲಾಖೆ ಅಧಿಕಾರಿ ಜಯರಾಂ, ಮಾಕನಡಕು ಗ್ರಾಮದ ಬಸಣ್ಣ, ಧನಂಜಯಗೌಡ, ಬೇಕರಿ ರಮೇಶ್, ಜಿ. ಬಸವರಾಜ, ಕಡಾಕೊಳ್ಳ ಹಾಲಸ್ವಾಮಿ, ಮಂಜುನಾಥ, ಕೇಶವ, ಬೊಮ್ಮಲಿಂಗಪ್ಪ ಹಾಗೂ ನೂರಾರು ಗ್ರಾಮಸ್ಥರುಪಾಲ್ಗೊಂಡಿದ್ದರು.
ಬಾಳೆ ತೋಟದಲ್ಲಿ ಅಡಗಿದ್ದ ಕರಡಿಗಳನ್ನು ಬಲೆಯತ್ತ ಓಡಿಸಲು ಪ್ರಯತ್ನಿಸಿದರು. ಮೂರು ಕರಡಿಗಳು ಬಲೆಗೆ ಬಿದ್ದವು. ಈ ಪೈಕಿ ಎರಡು ತಮ್ಮ ಮೂತಿಯಿಂದ ಬಲೆ ಎತ್ತಿ, ಜನ ನೋಡುತ್ತಿರುವಂತೆಯೇ ಕಾಡಿನತ್ತ ಓಡಿ ತಪ್ಪಿಸಿಕೊಂಡವು. ಒಂದು ಕರಡಿಯಾದರೂ ಸಿಕ್ಕಿತಲ್ಲ ಎಂದು ಗ್ರಾಮಸ್ಥರು ಸಮಾಧಾನಪಟ್ಟರು.
ಬಲೆಗೆ ಬಿದ್ದ ಕರಡಿಗೆ ಸೂಕ್ತ ಅರಿವಳಿಕೆ ಚುಚ್ಚುಮದ್ದು ನೀಡುವ ವ್ಯವಸ್ಥೆಯೂ ಅರಣ್ಯ ಇಲಾಖೆಯಲ್ಲಿ ಇರಲಿಲ್ಲ. ಇಲಾಖೆ ಒಂದಿಷ್ಟು ಎಚ್ಚರ ವಹಿಸಿದ್ದರೆ ಮೂರೂ ಕರಡಿಗಳನ್ನು ಹಿಡಿದು ಕರಡಿಧಾಮಕ್ಕೆ ಬಿಡಬಹುದಿತ್ತು. ಸಿಕ್ಕ ಒಂದು ಕರಡಿಯನ್ನು ದರೋಜಿ ಧಾಮದಲ್ಲಿ ಬಿಡಲು ವಾಹನದಲ್ಲಿ ಕೊಂಡೊಯ್ದರು.
ಕೂಡ್ಲಿಗಿ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಗ್ರಾಮಸ್ಥರು ಜೀವಭಯದಿಂದ ಬದುಕುವಂತಾಗಿದೆ. ಕರಡಿಗಳನ್ನು ಹಿಡಿದು ದರೋಜಿ ಧಾಮಕ್ಕೆ ಬಿಡದಿದ್ದರೆ ಇನ್ನಷ್ಟು ಜನ ಅಂಗವಿಕಲರಾಗಿ ಬದುಕುವಅಪಾಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

