ಬಳ್ಳಾರಿಗೆ ಗುಲ್ಬರ್ಗ ದೂರ...
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 23
ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆಯನ್ನು ದಾವಣಗೆರೆಯ ಪೂರ್ವ ವಲಯದಿಂದ ಗುಲ್ಬರ್ಗ ಈಶಾನ್ಯ ವಲಯ ವ್ಯಾಪ್ತಿಗೆ ಸೇರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಪೊಲೀಸ್ ಇಲಾಖೆಯ ಪ್ರತಿಯೊಂದು ವಿಷಯಕ್ಕೆ ಗುಲ್ಬರ್ಗಕ್ಕೆ ಹೋಗಿ ಬರುವುದೇ ದೊಡ್ಡ ಪ್ರಯಾಸದ ಕೆಲಸವಾಗಿದೆ. ಹೀಗಾಗಿ ಹೈದರಾಬಾದ್ ಕರ್ನಾಟಕದಲ್ಲಿ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳನ್ನೊಳಗೊಂಡ ಮತ್ತೊಂದು ವಲಯ ಮಾಡಬೇಕೆಂಬ ಬೇಡಿಕೆ ಇದೆ.
371(ಜೆ)ರಂತೆ ತಿದ್ದುಪಡಿಯ ಹಿನ್ನೆಲೆಯಲ್ಲಿ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್ -ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ 2013ರ ಅನ್ವಯ ಹೈದರಾಬಾದ್ - ಕರ್ನಾಟಕ ಪ್ರದೇಶ ವ್ಯಾಪ್ತಿ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಅಥವಾ ಸಂಸ್ಥೆ-ಸಂಘಟನೆಗಳಿಗೆ ಸಂಬಂಧಪಟ್ಟ ವೃಂದಗಳಲ್ಲಿ ಸಮೂಹ ಸಿ ಹುದ್ದೆಗಳಲ್ಲಿ ಶೇ. 80 ಹಾಗೂ ಡಿ ಹುದ್ದೆಗಳಲ್ಲಿ ಶೇ. 85ಕ್ಕೆ ಸಮನಾಗುವಂತೆ ಆ ಪ್ರದೇಶದಲ್ಲಿನ ಹುದ್ದೆಗಳ ಒಟ್ಟು ಸಂಖ್ಯೆಯಿಂದ ಪ್ರಾದೇಶಿಕ ಸ್ಥಳೀಯ ವೃಂದ ರಚಿಸಿ ನೇಮಕಾತಿ ಮಾಡಬೇಕಾಗಿದೆ. ವಲಯ ಬದಲಾವಣೆ ಸರಿ. ಆದರೆ, ಬಳ್ಳಾರಿ ಜಿಲ್ಲೆ ಹಾಗೂ ಕೊಪ್ಪಳ ಜಿಲ್ಲೆಯ ಪೊಲೀಸರು ವಲಯದ ವ್ಯಾಪ್ತಿಯ ಪ್ರತಿಯೊಂದು ಕೆಲಸಕ್ಕೆ ಗುಲ್ಬರ್ಗಕ್ಕೆ ಹೋಗಿ ಬರುವುದಕ್ಕೆ ಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ. ಪ್ರತಿಯೊಂದು ಸಭೆಗಳಿಗೆ ಬಳ್ಳಾರಿ ಪೊಲೀಸ್ ಇಲಾಖೆ ಮೇಲಧಿಕಾರಿಗಳು ಗುಲ್ಬರ್ಗಕ್ಕೆ ಹೋಗಬೇಕು. ಇನ್ನು ಹೆಚ್ಚಿನ ಬಂದೋಬಸ್ತ್ ವಿಷಯದಲ್ಲಿ ಬೀದರ್, ಗುಲ್ಬರ್ಗದಿಂದ ಸಿಬ್ಬಂದಿ ಕರೆಸಿಕೊಳ್ಳಬೇಕಾಗುತ್ತದೆ. ಇನ್ನು ಐಜಿಪಿ ಗುಲ್ಬರ್ಗದಿಂದ 307 ಕಿ.ಮೀ. ವ್ಯಾಪ್ತಿಯ ಬಳ್ಳಾರಿಗೆ ಬಂದು ಪರಿಶೀಲನೆ ಅಥವಾ ಸಭೆ ನಡೆಸಿ ಹೋಗುವುದಕ್ಕೆ ಎರಡು ದಿನ ಬೇಕಾಗುತ್ತದೆ. ಇದು ಸಮಸ್ಯೆಗೆ ಕಾರಣವಾಗಿದೆ.
ಬಳ್ಳಾರಿ ಜಿಲ್ಲೆ ಈ ಪೂರ್ವದಲ್ಲಿ ದಾವಣಗೆರೆ ಪೂರ್ವ ವಲಯಕ್ಕೆ ಸೇರ್ಪಡೆಯಾಗಿತ್ತು. ಜಿಲ್ಲಾ ಕೇಂದ್ರದಿಂದ ವಲಯ ಕೇಂದ್ರಕ್ಕೆ 200 ಕಿ.ಮೀ. ಅಂತರ ಇತ್ತು. ಇದೀಗ ಗುಲ್ಬರ್ಗ ಈಶಾನ್ಯ ವಲಯಕ್ಕೆ ಬದಲಾಗಿರುವುದರಿಂದ ಜಿಲ್ಲಾ ಕೇಂದ್ರದಿಂದ ವಲಯ ಕೇಂದ್ರ 307 ಕಿ.ಮೀ. ದೂರದಲ್ಲಿದೆ. ಅಲ್ಲದೆ 8 ತಾಸುಗಳು ಪ್ರಯಾಣ, ಆದರೆ ಗುಲ್ಬರ್ಗಕ್ಕೆ ಹೋಲಿಸಿಕೊಂಡರೆ, ಬೆಂಗಳೂರು ಪ್ರಯಾಣವೇ ಹತ್ತಿರ. ಇದು ಸಹಜವಾಗಿಯೇ ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಹೋರಾಟ, ಬೇಡಿಕೆಗೆ ಧ್ವನಿಯಿಲ್ಲ
ರಾಜ್ಯದಲ್ಲಿ 6 ಪೊಲೀಸ್ ವಲಯಗಳಿವೆ. ಗುಲ್ಬರ್ಗ ವಲಯದಲ್ಲಿ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆ ಇದ್ದು, ಈಗ ಬಳ್ಳಾರಿ ಸೇರ್ಪಡೆ ಮಾಡಿದ್ದಾರೆ. ದೊಡ್ಡ ವಲಯವಾಗಿರುವುದರಿಂದ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳನ್ನೊಳಗೊಂಡ ಒಂದು ವಲಯ ಮಾಡಬೇಕೆಂಬ ಬೇಡಿಕೆ ಸಾಕಷ್ಟು ಇದೆ. ಆದರೆ ಬೇಡಿಕೆ ಮುಂದಿಟ್ಟುಕೊಂಡು ಸರ್ಕಾರದ ಮುಂದೆ ಅದರಲ್ಲೂ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಮುಂದೆ ಹೋಗಲು ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಭಯ ಪಡುತ್ತಾರೆ. ತಮ್ಮೊಳಗೆ ಬೇಡಿಕೆಯ ಬಗ್ಗೆ ಮಾತನಾಡಿಕೊಳ್ಳುತ್ತಾರೆ. ಅದನ್ನು ಹಿರಿಯ ಅಧಿಕಾರಿಗಳ ಮುಂದೆ ಹೇಳಲು, ಬೇಡಿಕೆ ಪತ್ರ ಸಲ್ಲಿಸಲು ಮನಸ್ಸು ಮಾಡುತ್ತಿಲ್ಲ.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

