ನಿವೇಶನಕ್ಕಾಗಿ ಅಹೋರಾತ್ರಿ ಧರಣಿ
ಹಗರಿಬೊಮ್ಮನಹಳ್ಳಿ: ನಿವೇಶನ ಮತ್ತು ವಸತಿ ಸೌಲಭ್ಯ ಪಡೆಯಲು ಮುಂದಿನ ದಿನಗಳಲ್ಲಿ ಹಗರಿಬೊಮ್ಮನಹಳ್ಳಿ ತಾಪಂ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಮುಖಂಡ ಎಚ್. ಉಸ್ಮಾನಬಾಷಾ ಹೇಳಿದರು.
ಅಂಗವಿಕಲರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಮಧ್ಯಾಹ್ನ ತಾಪಂ ಎದುರು ಪ್ರತಿಭಟನೆ ನಡೆಸಿದ ನಂತರ ಹಗರಿ ಆಂಜನೇಯಸ್ವಾಮಿ ಬಯಲು ರಂಗಮಂದಿರದಲ್ಲಿ ಜರುಗಿದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು. ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸುವಂತೆ ತಾಲೂಕಿನಲ್ಲಿ ಹಲವು ಬಾರಿ ಒಕ್ಕೂಟದಿಂದ ಪ್ರತಿಭಟನೆ ನಡೆಸಿದ್ದರೂ ಸಂಬಂಧಿಸಿದ ಗ್ರಾಪಂ ಅಧಿಕಾರಿಗಳಾಗಲಿ, ತಾಪಂ ಅಧಿಕಾರಿಗಳಾಗಲಿ ಸ್ಪಂದಿಸಿಲ್ಲ. ನಿರಂತರ ಹೋರಾಟದ ಮೂಲಕವೇ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ಇದಕ್ಕು ಮುನ್ನ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಅಂಗವಿಕಲರು, ಪಾಲಕರು ಹಳೆ ಬಸ್ ನಿಲ್ದಾಣದಿಂದ ತಾಪಂ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬೇಡಿಕೆಗಳು: ತಾಲೂಕಿನ ಅಂಗವಿಕಲ ಕುಟುಂಬಗಳಿಗೆ ಉಚಿತ ನಿವೇಶನ, ವಸತಿ, ಅಂತ್ಯೋದಯ ಪಡಿತರ ಚೀಟಿ, ಮಾಸಾಶನ ಸಹಿತ ಅನೇಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಪಂ ಇಓ ಅವರಿಗೆ ಮನವಿ ಸಲ್ಲಿಸಿದರು. ಒಕ್ಕೂಟದ ಕಾರ್ಯದರ್ಶಿ ಪಿ. ಚಾಂದಬೀ, ಸಹಕಾರ್ಯದರ್ಶಿ ಬಡಿಗೇರ ಹೇಮಂತಾಚಾರ್, ಹುಲುಗಪ್ಪ, ಮುಖಂಡರಾದ ಎನ್. ನಾಗರತ್ನಾ, ರೇಣುಕಾ, ಕಮ್ಮಾರ್ ಬಸವರಾಜ, ಮರುಳಸಿದ್ದಪ್ಪ, ಭಾಗ್ಯಮ್ಮ, ಇಸ್ಮಾಯಿಲ್, ದೊಡ್ಡಬಸಪ್ಪ, ಬಾವಿಬಸಪ್ಪ, ಕೆ.ಮಲ್ಲಿಕಾರ್ಜುನ, ಅಲಬೂರು ಮಂಜುನಾಥ ಇದ್ದರು.
ರೈಲು ದರ ಏರಿಕೆ: ಪ್ರತಿಭಟನೆ
ಬಳ್ಳಾರಿ: ರೇಲ್ವೆ ಪ್ರಯಾಣ ದರ ಏರಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಎಸ್ಯುಸಿಐ (ಸಿ) ಜಿಲ್ಲಾ ಸಮಿತಿ ಕಾರ್ಯಕರ್ತರು ಸೋಮವಾರ ಬಳ್ಳಾರಿ ರೈಲು ನಿಲ್ದಾಣದ ಆವರಣದಲ್ಲಿ ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ರೇಲ್ವೆ ದರ ಏರಿಕೆಯನ್ನು ಒಪ್ಪುವುದಿಲ್ಲ ಎಂದು ದರ ಏರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಸ್ಯುಸಿಐನ ಜಿಲ್ಲಾ ಕಾರ್ಯದರ್ಶಿ ಕೆ. ಸೋಮಶೇಖರ್ ಮಾತನಾಡಿ, ಪ್ರಜಾತಂತ್ರ ಸರ್ಕಾರವೊಂದು ಬೆಲೆ ಏರಿಕೆಯ ಬೇಗೆಯಲ್ಲಿ ತತ್ತರಿಸುತ್ತಿರುವ ಜನರ ಹೊರೆ ಕಡಿಮೆ ಮಾಡಲು ಮಾರ್ಗಗಳನ್ನು ಹುಡುಕಬೇಕಾದುದು ತನ್ನ ಜವಾಬ್ದಾರಿ ಎಂದು ಪರಿಣಿಸಬೇಕು.
ಸರ್ಕಾರ ರಚನೆಯಾಗಿ ಒಂದು ತಿಂಗಳೂ ಕಳೆದಿಲ್ಲ, ಆಗಲೇ ಕೇಂದ್ರ ಬಿಜೆಪಿ ಸರ್ಕಾರ, ಹಿಂದಿನ ಸರ್ಕಾರದ ವೈಫಲ್ಯಗಳನ್ನು ಬಂಡವಾಳ ಮಾಡಿಕೊಂಡು ಜನವಿರೋಧಿ ನೀತಿಗಳನ್ನು ಪಾಲಿಸುತ್ತಿದೆ. ರೈಲು ದರ ಏರಿಕೆ ಕಾಂಗ್ರೆಸ್ ರೂಪಿಸಿ ನೀತಿ, ನಾವು ಕೇವಲ ಜಾರಿಗೊಳಿಸುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ನೆಪಗಳನ್ನು ನೀಡುತ್ತಿದೆ. ಯಾವುದೇ ಪ್ರಜಾತಾಂತ್ರಿಕ ಚರ್ಚೆಗಳಿಗೆ ಅವಕಾಶ ನೀಡದೆ, ಬಜೆಟ್ಗೆ ಮುನ್ನವೇ ಜನಗಳಿಗೆ ಶಾಕ್ ನೀಡಿದೆ. ಬೆಲೆ ಏರಿಕೆಗೆ ಕ್ರಮ ತೆಗೆದುಕೊಳ್ಳುವುದಾಗಿ ಆಶ್ವಾಸನೆ ನೀಡಿದ್ದ ಬಿಜೆಪಿ ಸರ್ಕಾರ ಜನದ್ರೋಹಿ ಪಕ್ಷವಾಗಿದೆ ಎಂದರು.
ಕಾಂಗ್ರೆಸ್-ಬಿಜೆಪಿ ಈ ಎರಡೂ ಪಕ್ಷಗಳು ಜನವಿರೋಧಿ ಹಾಗೂ ಬಂಡವಾಳಗಾರರ ಪಕ್ಷಗಳಾಗಿವೆ. ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಜನರ ಸಮಸ್ಯೆಗಳಿಗೆ ಈ ಪಕ್ಷಗಳ ಬಳಿ ಉತ್ತರವಿರಲು ಸಾಧ್ಯವಿಲ್ಲ. ಆದ್ದರಿಂದ ಜನರಿಗೆ ಬಲಿಷ್ಠ ಹೋರಾಟವೊಂದೇ ಪರಿಹಾರ. ಜನಸಮಿತಿಗನ್ನು ರಚಿಸಿಕೊಂಡು ಜನವಿರೋಧಿ ಕ್ರಮಗಳನ್ನು ಹಿಮ್ಮೆಟ್ಟಿಸಲು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಎಸ್ಯುಸಿಐ (ಸಿ) ದೇವದಾಸ್, ಸೋಮಶೇಖರ ಗೌಡ, ಮಂಜುಳಾ, ಪ್ರಮೋದ್, ಗೋವಿಂದ್, ಉಮೇಶ್ ಇದ್ದರು.
ಬಳ್ಳಾರಿ-ಬೆಂಗಳೂರು ರೈಲು ಓಡಿಸಲು ಆಗ್ರಹ
ಬಳ್ಳಾರಿ: ಹುಬ್ಬಳ್ಳಿ-ಗುಲ್ಬರ್ಗ ಹಾಗೂ ಬಳ್ಳಾರಿ-ಬೆಂಗಳೂರಿಗೆ ಹೊಸ ರೈಲು ಓಡಿಸಬೇಕೆಂದು ಒತ್ತಾಯಿಸಿ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯಿಂದ ಕೇಂದ್ರ ರೇಲ್ವೆ ಸಚಿವ ಡಿ.ವಿ. ಸದಾನಂದಗೌಡರಿಗೆ ಸೋಮವಾರ ಬೆಂಗಳೂರಿನಲ್ಲಿ ಮನವಿ ಪತ್ರ ಸಲ್ಲಿಸಲಾಯಿತು ಎಂದು ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಸಿರಿಗೇರಿ ಪನ್ನರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಸಂಸದರು ಸತತವಾಗಿ ಎರಡು ಸರ್ಕಾರಗಳಲ್ಲಿ ರೇಲ್ವೆ ಸಚಿವರಾಗುತ್ತಿರುವುದು ನಮಗೆ ತುಂಬಾ ಹರ್ಷ ತಂದಿದೆ. ತಾವು ರೇಲ್ವೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಕ್ಕೆ ಅಭಿನಂದಿಸುತ್ತಾ ರಾಜ್ಯದ ಬಹುದಿನಗಳ ಬೇಡಿಕೆಯಾದ ಹುಬ್ಬಳ್ಳಿಯಿಂದ ಗುಲ್ಬರ್ಗವರೆಗೆ ರೈಲು ಸಂಚಾರ ವ್ಯವಸ್ಥೆ ಕಲ್ಪಿಸಲು ಜುಲೈ ತಿಂಗಳಲ್ಲಿ ತಾವು ಮಂಡಿಸಲಿರುವ ಮುಂಗಡ ಪತ್ರದಲ್ಲಿ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. ರಾಜ್ಯದ ಹೈದರಾಬಾದ್ ಕರ್ನಾಟಕ ಅತ್ಯಂತ ಹಿಂದುಳಿದ ಪ್ರದೇಶವೆಂಬ ಕಾರಣಕ್ಕೆ ಸಂವಿಧಾನದ 371(ಜೆ) ತಿದ್ದುಪಡಿ ಮಾಡುವ ಮೂಲಕ ಅಭಿವೃದ್ಧಿಗೆ ಅವಕಾಶ ದೊರೆತಿದೆ. ಹೈದರಾಬಾದ್ ಕರ್ನಾಟಕ ಪ್ರದೇಶದ ಕೇಂದ್ರ ಸ್ಥಳವಾದ, ವಿಭಾಗೀಯ ಕೇಂದ್ರ ಸ್ಥಳವಾದ ಹಾಗೂ ಹಲವಾರು ಕೇಂದ್ರ ಸರ್ಕಾರದ ಕಚೇರಿಗಳಿರುವ ಗುಲ್ಬರ್ಗಕ್ಕೆ ಈ ಭಾಗದ ಜನರಿಗೆ ನಿರಂತರ ಪ್ರಯಾಣ ಮಾಡುವುದು ಅನಿವಾರ್ಯವಾಗಿದೆ. ಕೊಪ್ಪಳ, ಹೊಸಪೇಟೆ, ಬಳ್ಳಾರಿ ಪ್ರದೇಶದ ಜನರಿಗೆ ನೇರವಾಗಿ ಗುಲ್ಬರ್ಗಕ್ಕೆ ಹೋಗಲು ಯಾವುದೇ ರೈಲು ಸಂಚಾರ ವ್ಯವಸ್ಥೆ ಇರುವುದಿಲ್ಲ. ಈ ಬೇಡಿಕೆಯನ್ನು ಪ್ರಥಮವಾಗಿ 1991ನೇ ಇಸವಿಯಲ್ಲಿಯೇ ಇಡಲಾಗಿತ್ತು, ಈ ವಿಚಾರವಾಗಿ ರೇಲ್ವೆ ಸಚಿವರು ಪರಿಗಣಿಸಬೇಕೆಂದು ಒತ್ತಾಯಿಸಿದರು.
ಹುಬ್ಬಳ್ಳಿಯಿಂದ ಗುಲ್ಬರ್ಗಕ್ಕೆ (ಹುಬ್ಬಳ್ಳಿ, ಗದಗ, ಕೊಪ್ಪಳ, ಮುನಿರಾಬಾದ್, ಹೊಸಪೇಟೆ, ಬಳ್ಳಾರಿ, ರಾಯಚೂರು, ಯಾದಗಿರಿ, ಗುಲ್ಬರ್ಗ) ರೈಲು ಸಂಚಾರ ಆದ್ಯತೆ ಮೇರೆಗೆ ಒದಗಿಸಬೇಕಿದೆ. ರೇಲ್ವೆ ಮುಂಗಡ ಪತ್ರದಲ್ಲಿ ಹುಬ್ಬಳ್ಳಿಯಿಂದ ಗುಲ್ಬರ್ಗಕ್ಕೆ ರೇಲು ಸಾರಿಗೆ ಸಂಪರ್ಕ ಕಲ್ಪಿಸಬೇಕೆಂದು ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ
ಬಳ್ಳಾರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗವಿಕಲರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ರಾಷ್ಟ್ರ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಿದೆ. ಅಂಗವಿಕಲ ನೌಕರರು (ಸ್ವಯಂ ಉದ್ಯೋಗಿಗಳು ಸೇರಿ), ವಿಕಲಚೇತನತೆ ಹೊಂದಿದ ವ್ಯಕ್ತಿಗಳ ಶ್ರೇಷ್ಠ ಉದ್ಯೋಗದಾತರು ಮತ್ತು ಉದ್ಯೋಗ ನೀಡಿಕೆ ಅಧಿಕಾರಿ-ಏಜೆನ್ಸಿ (ಸರ್ಕಾರಿ ನೌಕರರು ಮತ್ತು ಪಿಎಸ್ಯು ಎರಡೂ ಸೇರಿದಂತೆ), ವಿಕಲಚೇತನರಿಗಾಗಿ ಕೆಲಸ ಮಾಡುತ್ತಿರುವ ಶ್ರೇಷ್ಠ ವ್ಯಕ್ತಿ - ಸಂಸ್ಥೆ, ರೋಲ್ ಮಾಡೆಲ್, ವಿಕಲಚೇತನತೆಗೆ ಪರಿಹಾರ ಒದಗಿಸಲು ಅತ್ಯುತ್ತಮ ತಂತ್ರಜ್ಞಾನ ನಾವಿನ್ಯತೆ ಒದಗಿಸಲು ನಾವಿನ್ಯತೆ ಅಳವಡಿಕೆ, ಅಂಗವಿಕಲ ಪ್ರತಿಭಾವಂತ ರಚನಾತ್ಮಕ ವ್ಯಕ್ತಿ, ವಿಕಲಚೇತನತೆ ಹೊಂದಿದ ಜನರಿಗಾಗಿ ಅಡಚಣೆರಹಿತ ಪರಿಸರ ರೂಪಿಸುವಿಕೆಯಲ್ಲಿನ ಪ್ರತಿಭಾವಂತ ಕಾರ್ಯ, ಪುನರ್ವಸತಿ ಸೇವೆ ಒದಗಿಸುವ ಕಾರ್ಯದಲ್ಲಿ ಶ್ರೇಷ್ಠ ಸಾಧನೆ ಮಾಡಿರುವ ಜಿಲ್ಲೆ, ರಾಷ್ಟ್ರೀಯ ದತ್ತಿಯ ಶ್ರೇಷ್ಠ ಸ್ಥಳೀಯ ಮಟ್ಟದ ಸಮಿತಿ, ವಿಕಲಚೇತನ ಪ್ರತಿಭಾವಂತ ರಚನಾತ್ಮಕ ಮಗು, ಅತ್ಯುನ್ನತ ಬ್ರೈಲ್ ಮುದ್ರಣಾಲಯ, ಅತ್ಯುನ್ನತ ಅಸೆಸ್ಸಬಲ್ ವೆಬ್ಸೈಟ್ಗೆ ಪ್ರಶಸ್ತಿ ನೀಡಲಾಗುವುದು. ಆಸಕ್ತರು ವಿಕಲಚೇತರ ಸಬಲೀಕರಣಕ್ಕಾಗಿ ಸಾಧನೆಗೈದಿರುವ ಅತ್ಯುತ್ತಮ ರಾಜ್ಯ ಅರ್ಜಿಯೊಂದಿಗೆ ವ್ಯಕ್ತಿಗಳ ವಿವರದ ಸಾರಾಂಶ, ಉದಾಹರಣೆ ಸಾಮಗ್ರಿ ಮಾದರಿ, ತಮ್ಮ ಇತ್ತೀಚಿನ 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಮತ್ತಿತರ ದಾಖಲೆಗಳನ್ನು ಲಗತ್ತಿಸಬೇಕು. ಅರ್ಜಿ ನಮೂನೆಯನ್ನು ಜಾಲತಾಣ ಡಿಡಿಠ//ಡ್ಟ್ಛ್ಝಛಟಞ್ಡಡಡ್ಝ್ಛಿಜ.ಟ್ಝ್ಛಿ.್ಝಟಿ ಮೂಲಕ ಡೌನ್ ಲೋಡ್ ಮಾಡಿಕೊಳ್ಳ ಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಜೂ.27ರೊಳಗಾಗಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ ಸ್ತ್ರೀಸೇವಾನಿಕೇತನ ಆವರಣ, ದೇವಿನಗರ ಬಳ್ಳಾರಿ ಇವರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯನ್ನು ಸಂಪರ್ಕಿಸಬೇಕೆಂದು ಉಪನಿರ್ದೇಶಕ ಬಿ.ಎಸ್. ಕಲಾದಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

