ಬಳ್ಳಾರಿ

ಜವಾಹರ ನವೋದಯ ಶಾಲೆ ಅವಸ್ಥೆ

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜೂ. 23
ಕೇಂದ್ರೀಯ ಜವಾಹರ ನವೋದಯ ಶಾಲೆಗೆ ವಿದ್ಯಾರ್ಥಿಗಳು ಆಯ್ಕೆಯಾಗುವುದು ತೀರಾ ಪ್ರಯಾಸದ ವಿಷಯ. ಆದರೆ, ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿರುವ ಏಕೈಕ ಜವಾಹರ ನವೋದಯ ಶಾಲೆಯ ಸ್ಥಿತಿ ನೋಡಿದರೆ ನಮ್ಮ ಮಕ್ಕಳು ಇಂಥ ಶಾಲೆಯಲ್ಲಿ ಓದಬೇಕೇ? ಎಂದು ವರ್ಗಾವಣೆ ಪತ್ರ ತೆಗೆದುಕೊಂಡು ಬೇರೆ ಶಾಲೆಗಳಿಗೆ ಸೇರಿಸಲು ಪಾಲಕರು ಮುಂದಾಗುತ್ತಾರೆ.
ಎರಡು ವರ್ಷಗಳಿಂದಲೂ ಈ ಪ್ರತಿಷ್ಠಿತ ಶಾಲೆಯಲ್ಲಿ ರ್ಯಾಗಿಂಗ್ ನಡೆಯುತ್ತಿದ್ದರೂ ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿ ಮೌನ ವಹಿಸಿದ್ದಾರೆ. ಅಂಕ ಗಳಿಕೆಗಾಗಿ ಇಲ್ಲಿಯ ಆಡಳಿತ ಹಪಾಹಪಿಸುತ್ತಿದ್ದು, ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚಿನ ಗಮನ ನೀಡುತ್ತಿಲ್ಲ, ನಮ್ಮ ಮಕ್ಕಳನ್ನು ಬೇರೆ ಕಡೆಗೆ ಸೇರಿಸಲು ಮುಂದಾಗಿದ್ದೇವೆ ಎಂದು ಪೋಷಕರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
6ರಿಂದ 12ನೇ ತರಗತಿಯ ವರೆಗೂ ಸಿಬಿಎಸ್‌ಇ ವ್ಯವಸ್ಥೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದು, ಶಾಲೆಯಲ್ಲಿ ನೂರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ವರ್ಷದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಇಳಿಕೆಯಾಗಿರುವುದು ಇಲ್ಲಿಯ ಶಿಕ್ಷಣ ವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ಈ ಹಿಂದಿನ ವರ್ಷಗಳಲ್ಲಿ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ 10ಕ್ಕೆ 10 ಅಂಕಗಳನ್ನು ಗಳಿಸುತ್ತಿದ್ದರು. ಈ ಬಾರಿ ಯಾವ ವಿದ್ಯಾರ್ಥಿಯೂ 10 ಅಂಕ ಗಳಿಸಿಲ್ಲ.
ವಸತಿ ಶಾಲೆಗೆ ರೇಷನ್, ತರಕಾರಿ, ಬಟ್ಟೆ, ಟೇಲರ್ ಕಟಿಂಗ್, ಶೂ, ಚಪ್ಪಲಿ ಕಂಪನಿಯವರಿಂದಲೂ ಗುಣಮಟ್ಟದ ವಸ್ತುಗಳು ಪೂರೈಕೆಯಾಗುತ್ತಿಲ್ಲ, ಸಾಮಾನ್ಯ ದರ್ಜೆಯ ವಸ್ತುಗಳನ್ನು ಮಕ್ಕಳಿಗೆ ಪೂರೈಸುವ ಮೂಲಕ ಇಲ್ಲಿ ಪರ್ಸೆಂಟೇಜ್‌ಗಾಗಿ ಲಾಬಿ ನಡೆದಿದೆ ಎಂದು ನಿವೃತ್ತ ಶಿಕ್ಷಕರೊಬ್ಬರು ದೂರಿದ್ದಾರೆ.
ಜಿಲ್ಲಾಧಿಕಾರಿಗಳು ಒಮ್ಮೆ ಈ ಶಾಲೆಗೆ ಬಂದು ಆಡಳಿತ ಸಿಬ್ಬಂದಿ, ಬೋಧಕ ವರ್ಗ ಹಾಗೂ ಪೋಷಕರ, ವಿದ್ಯಾರ್ಥಿಗಳ ಪ್ರತ್ಯೇಕ ಸಭೆ ಕರೆದು ಶಾಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸಿದರೆ ನೈಜ ಸ್ಥಿತಿ ಅರಿವಿಗೆಬರುತ್ತದೆ.
ಎಲ್ಲವೂ ಸರಿಯಾಗಿದೆ
ಶಾಲೆಯಲ್ಲಿ ಎಲ್ಲವೂ ಸರಿಯಾಗಿದೆ. ಮಕ್ಕಳಿಗೆ ಸರ್ಕಾರಿ ನಿಯಮಗಳ ಪ್ರಕಾರವೇ ಆಹಾರ, ಬಟ್ಟೆ, ತರಕಾರಿ ಇತರೆ ವಸ್ತುಗಳು ವಿತರಣೆಯಾಗುತ್ತಿವೆ. ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಶಾಲೆಯಲ್ಲಿ ಅಂಥ ಗಂಭೀರ ಸಮಸ್ಯೆಗಳಿಲ್ಲ. ಪೋಷಕರ ಸಭೆ ಕರೆದು ವಿದ್ಯಾರ್ಥಿಗಳ, ಪೋಷಕರ ಸಮಸ್ಯೆಗಳನ್ನು ಚರ್ಚಿಸಿ, ತಕ್ಷಣವೇ ಪರಿಹಾರ ಕಂಡುಕೊಳ್ಳುತ್ತೇವೆ. ಅವ್ಯವಹಾರಗಳಿಗೆ ಆಸ್ಪದ ನೀಡುವುದಿಲ್ಲ.
- ಸಿ. ಹರಿಬಾಬು, ಕಾಲೇಜಿನ ಪ್ರಾಚಾರ್ಯ


-ಭೀಮಣ್ಣ ಗಜಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.