ಬಳ್ಳಾರಿ

ಬೀದಿ ನಾಯಿಗಳಿಗೆ ಬ್ರೇಕ್ ಯಾವಾಗ?

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 22
ಬಳ್ಳಾರಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇತ್ತೀಚೆಗೆ ಬಾಲಕನನ್ನು ನಾಯಿಗಳು ಬಲಿ ತೆಗೆದುಕೊಂಡರೂ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮವಹಿಸದಿರುವುದು ಆಶ್ಚರ್ಯ ಮೂಡಿಸುತ್ತದೆ. ರಾತ್ರಿ ಬೀದಿ ನಾಯಿಗಳ ಕಾಟಕ್ಕೆ ಕೆಲ ಕಡೆಗಳಲ್ಲಿ ಹೊರಗಡೆ ಬರುವುದಕ್ಕೆ ಜನರು ಹೆದರುತ್ತಿದ್ದಾರೆ. ಮಕ್ಕಳಲ್ಲಿ ಸಹಜವಾಗಿಯೇ ಭೀತಿಯನ್ನು ಹುಟ್ಟುಹಾಕಿದೆ.
ದಿನ ದಿನಕ್ಕೆ ಬೀದಿ ನಾಯಿ ಸಂಖ್ಯೆ ಏರಿಕೆಯಾಗುತ್ತಿದೆ. ರಾತ್ರಿ ಹಿಂಡುಗಟ್ಟಲೆ ನಾಯಿಗಳು ಬಡಾವಣೆಗಳಿಗೆ ಬರುತ್ತವೆ. ರಸ್ತೆಗಳಲ್ಲಿಯೇ ನಾಯಿಗಳು ಬೀಡು ಬಿಡುವುದರಿಂದ ಜನರು ರಾತ್ರಿ ಹೊತ್ತಿನಲ್ಲಿ ಓಡಾಡುವುದಕ್ಕೆ ಹಿಂಜರಿಯುತ್ತಿದ್ದಾರೆ.
ಅಪಘಾತಕ್ಕೆ ನಾಯಿಗಳೇ ಕಾರಣ
ಬೀದಿ ನಾಯಿಗಳು ಬೆನ್ನಟ್ಟಿ ಬರುವುದರಿಂದ ದ್ವಿಚಕ್ರ ವಾಹನ ಸವಾರರು ಕೆಳಗಡೆ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಸಾಕಷ್ಟು ಘಟನೆಗಳು ನಡೆದಿವೆ. ಹೀಗಾಗಿ ರಾತ್ರಿ ಹೊತ್ತಿನಲ್ಲಿ ದ್ವಿಚಕ್ರ ವಾಹನ ಸವಾರರು ಹಾಗೂ ಹಿರಿಯರು ಸುತ್ತಾಡುವುದಕ್ಕೂ ಭಯಪಡುವ ಪರಿಸ್ಥಿತಿ ಇದ್ದರೂ ಮಹಾನಗರ ಪಾಲಿಕೆಯು ಬೀದಿ ನಾಯಿಗಳು ನಿಯಂತ್ರಣಕ್ಕೆ ಅಗತ್ಯ ಕಾಳಜಿವಹಿಸಿಲ್ಲ ಎಂಬ ಆರೋಪವು ಕೇಳಿ ಬರುತ್ತಿದೆ.
ಸಂತಾನಹರಣ ಶಸ್ತ್ರಚಿಕಿತ್ಸೆ
ಬೀದಿಗಳ ನಾಯಿಗಳಿಗೆ ಕಡಿವಾಣ ಹಾಕಲು ಮಹಾನಗರ ಪಾಲಿಕೆಯ ನಿಷ್ಕಾಳಜಿವಹಿಸುವುದು ಬಳ್ಳಾರಿಯಲ್ಲಿ ವರ್ಷದಿಂದ ವರ್ಷಕ್ಕೆ ಬೀದಿ ನಾಯಿಗಳು ಹೆಚ್ಚಾಗಲು ಕಾರಣವಾಗಿದೆ. ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆಗೆ ಮಹಾನಗರ ಪಾಲಿಕೆಯು ಪಶುಸಂಗೋಪನಾ ಇಲಾಖೆಯ ಮೂಲಕ ಮಾಡಲು ಮುಂದಾಗಿದ್ದರೂ, ಆದರೆ ಪರಿಣಾಮಕಾರಿಯಾಗಿ ಎಲ್ಲಾ ಬೀದಿನಾಯಿಗಳಿಗೆ ಸಂತಾನ ಹರಣ ಮಾಡದಿರುವುದು ಸಹಜವಾಗಿಯೇ ಬೀದಿನಾಯಿಗಳು ಕಾಟ ಹೆಚ್ಚಾಗಲು ಕಾರಣವಾಗಿದೆ. ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದರೆ, ಕಾಲಾನುಕ್ರಮದಲ್ಲಿ ಸಂಖ್ಯೆಯನ್ನು ಇಳಿಕೆ ಮಾಡಬಹುದು, ಈ ನಿಟ್ಟಿನಲ್ಲಿ ಪಾಲಿಕೆಯ ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ.
ಮಕ್ಕಳು ಹೊರಗಡೆ ಬರುವಂತಿಲ್ಲ
ಕೆಲ ತಿಂಗಳ ಹಿಂದೆ ವಿದ್ಯಾನಗರದಲ್ಲಿ ತಾಯಿ ಕೂಲಿ ಕೆಲಸಕ್ಕೆ ಹೋದಾಗ ಗೋಪಿ ಎನ್ನುವ 6 ವರ್ಷದ ಬಾಲಕ ಬಹಿರ್ದೆಸೆಗೆ ತೆರಳಿದ ಸಂದರ್ಭದಲ್ಲಿ ಬೀದಿನಾಯಿಗಳು ಕಚ್ಚಿ, ಹರಿದು ತಿನ್ನಲು ಮುಂದಾದಾಗ ಸಾರ್ವಜನಿಕರು ತಡೆದು ಗೋಪಿಯನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾನೆ. ಇದರಿಂದ ಎಚ್ಚೆತ್ತುಕೊಂಡ ಪೋಷಕರು ತಮ್ಮ ಮಕ್ಕಳನ್ನು ಹೊರಗಡೆ ಕಳುಹಿಸಲು ಭೀತಿಗೊಂಡಿದ್ದಾರೆ. ಎಲ್ಲಿ ಬೀದಿ ನಾಯಿಗಳು ಮಕ್ಕಳನ್ನು ಕಚ್ಚಿ ತಿನ್ನುತ್ತವೆ ಎಂಬ ಆತಂಕ ಪಾಲಕರಲ್ಲಿ ಶುರುವಾಗಿದೆ. ನರಭಕ್ಷಕ ನಾಯಿಗಳು ಹಾವಳಿಯನ್ನು ತಪ್ಪಿಸಲು ಮಹಾನಗರ ಪಾಲಿಕೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.

ಪಾಲಿಕೆ ಎಚ್ಚೆತ್ತುಕೊಳ್ಳಬೇಕು
ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಮಹಾನಗರ ಪಾಲಿಕೆ ಶೀಘ್ರ ಕ್ರಮ ಕೈಗೊಳ್ಳಬೇಕು, ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಬೇಕು, ನಾಯಿಗಳ ಸಂತತಿ ಹೆಚ್ಚಾಗದಂತೆ ನೋಡಿಕೊಳ್ಳಬೇಕು,  ನಾಯಿ ಕಡಿದರೆ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಮಹಾನಗರ ಪಾಲಿಕೆ, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
       - ಸಿ. ಮಂಜುನಾಥ್, ಸುಭಾಷ            ಭರಣಿ ಸಾಂಸ್ಕೃತಿಕ  ವೇದಿಕೆಯ ಸಂಸ್ಥಾಪಕ
- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.