ಮೇಲ್ವರ್ಗ ದೂರ: ಕ್ಷೌರಿಕರ ದೂರು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 17
ಕಾನೂನು, ಅಧಿಕಾರಿಗಳ ಮಾತಿಗೆ ಕಟ್ಟು ಬಿದ್ದು ದಲಿತರಿಗೆ ಕ್ಷೌರ ಮಾಡಿದ್ದಕ್ಕೆ ಗ್ರಾಮದ ಇತರ ಸಮುದಾಯವರು ತಮ್ಮಲ್ಲಿಗೆ ಬರುತ್ತಿಲ್ಲ. ಜೀವನ ನಡೆಸುವುದೇ ಕಷ್ಟವಾಗುತ್ತಿದೆ ಎಂದು ಸಿರುಗುಪ್ಪ ತಾಲೂಕಿನ ತಾಳೂರಿನ ಕ್ಷೌರಿಕರು ಹಾಗೂ ಕ್ಷೌರಿಕರ ಹಿತರಕ್ಷಣಾ ವೇದಿಕೆಯ ಸಹಕಾರ್ಯದರ್ಶಿ ಶರಣ್ ತಿಳಿಸಿದ್ದಾರೆ.
ಮಂಗಳವಾರ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಭೇದ-ಭಾವ ತೋರಿಸಿಲ್ಲ, ಪರಂಪರಾಗತವಾಗಿ ದಲಿತರಿಗೆ ಕ್ಷೌರ ಮಾಡುತ್ತಿರಲಿಲ್ಲ. ಮೇ 30ರಂದು ದಲಿತರು ಕ್ಷೌರ ಮಾಡುವಂತೆ ಕೇಳಿಕೊಂಡರು. ಊರಿನ ಜನರೊಂದಿಗೆ ಪಂಚನಾಮೆ ಮಾಡಿಸಿ, ಕ್ಷೌರ ಮಾಡುತ್ತೇವೆ ಎಂದು ಹೇಳಿದ್ದೆವು. ಆದರೆ, ಅವರು ಸಿರಿಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ್ವಯ ಪೊಲೀಸ್ ಅಧಿಕಾರಿಗಳು, ಸಮಾಜ ಕಲ್ಯಾಣಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಕ್ಷೌರ ಮಾಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ದಲಿತರಿಗೆ ಕ್ಷೌರ ಮಾಡಿದೆವು. ಈದ ಇತರ ಸಮುದಾಯದವರು ಕ್ಷೌರ ಮಾಡಿಸುವುದಕ್ಕೆ ಬರುತ್ತಿಲ್ಲ ಎಂದು ತಿಳಿಸಿದರು.
ತಾಳೂರಲ್ಲಿ 4000 ಮನೆಗಳಿದ್ದು, ದಲಿತರ ಮನೆಗಳು ಕೇವಲ 200 ಆಸುಪಾಸಿನಲ್ಲಿವೆ. ಜೂ. 6ರಿಂದ ಕ್ಷೌರಿಕ ವೃತ್ತಿಯನ್ನು ಪುನಾರಂಭಿಸಿದ್ದು, ಆದರೆ ದಲಿತರು ಹೊರತುಪಡಿಸಿ, ಗ್ರಾಮದ ಇತರ ಸಮುದಾಯದವರು ಕ್ಷೌರ ಮಾಡಿಸಿಕೊಳ್ಳಲು ಬರುತ್ತಿಲ್ಲ. ಈ ಮೊದಲು ದಿನಕ್ಕೆ ರು. 500ರಿಂದ ರು. 600 ದುಡಿಯುತ್ತಿದ್ದು, ಇದೀಗ ಕೇವಲ ರು. 40ರಿಂದ 50 ಸಂಪಾದನೆ ಆಗುತ್ತಿದೆ. ಜೀವನ ಮಾಡುವುದಕ್ಕೂ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.
ತಾಳೂರಲ್ಲಿ ಸವಿತಾ ಸಮುದಾಯದ 20ಕ್ಕೂ ಹೆಚ್ಚು ಮನೆಗಳಿದ್ದು, ಐದು ಮನೆಯವರು ಅಂಗಡಿ ಇಟ್ಟುಕೊಂಡು ಕ್ಷೌರ ಮಾಡುತ್ತಿದ್ದಾರೆ. ಉಳಿದವರು ಮನೆ-ಮನೆಗೆ ಹೋಗಿ ಕ್ಷೌರ ಮಾಡುತ್ತಿದ್ದರು. ನಮಗೆ ಬೇರೆ ವೃತ್ತಿ ಗೊತ್ತಿಲ್ಲ. ಒಂದು ಕಡೆ ಕಾನೂನು, ಮತ್ತೊಂದು ಕಡೆ ಊರಿನ ಜನ. ಏನು ಮಾಡಬೇಕೆಂದೇ ತಿಳಿಯುತ್ತಿಲ್ಲ. ಕ್ಷೌರಕ್ಕೆ ಬರುವಂತೆ ಊರಿನ ಜನರಲ್ಲಿ ಮನವಿ ಮಾಡಿದ್ದರೂ, ಸ್ಪಂದಿಸಿಲ್ಲ. ನಿಮ್ಮ ಹತ್ತಿರ ಕ್ಷೌರ ಮಾಡಿಸಬೇಕೆಂಬ ಒಪ್ಪಂದ ಮಾಡಿಕೊಂಡಿಲ್ಲ ಎನ್ನುತ್ತಿದ್ದಾರೆ. ಈ ಕುರಿತಾಗಿ ಜಿಲ್ಲಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ನಿವೇದಿಸಿಕೊಳ್ಳುವುದಾಗಿ ಶರಣ್ ತಿಳಿಸಿದರು.
ಸವಿತಾ ಸಮುದಾಯದ ಮಲ್ಲಿಕಾರ್ಜುನ, ಶೇಖರ್, ನವೀನ್, ಪಾಂಡಪ್ಪ, ಮಹೇಶ್, ಗೋವಿಂದ ಇದ್ದರು.
ಅಧಿಕಾರ ಸ್ವೀಕಾರ
ಕೊಟ್ಟೂರು: ಇಲ್ಲಿನ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಜಿ. ಪಂಪಾವತಿ ನಾಯ್ಕ ಈಚೆಗೆ ಅಧಿಕಾರ ವಹಿಸಿಕೊಂಡರು. ಆ ಮೂಲಕ ಮುಖ್ಯಾಧಿಕಾರಿ ಹುದ್ದೆಗೆ ಸಂಬಂಧಿಸಿದ ಎಲ್ಲ ಉಹಾಪೋಹಗಳಿಗೆ ತೆರೆ ಬಿದ್ದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

