ಜಾನಪದ ರಂಗೋತ್ಸವ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 17
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನಾಲಯ ಹಾಗೂ ಬಳ್ಳಾರಿಯ ಶ್ರೀ ರಾಮಾಂಜನೇಯ ತೊಗಲು ಗೊಂಬೆ ಮೇಳ ಟ್ರಸ್ಟ್ ಸಹಯೋಗದಲ್ಲಿ ಜಾನಪದ ರಂಗೋತ್ಸವ ಕಾರ್ಯಕ್ರಮವನ್ನು ಜೂ. 18ರಿಂದ 22ರ ವರೆಗೆ ಐದು ದಿನಗಳ ಕಾಲ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಜೂ. 18ರಂದು ಸಂಜೆ 6 ಗಂಟೆಗೆ ಹಾವೇರಿ ಜಿಲ್ಲೆಯ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ ತೊಗಲು ಗೊಂಬೆಗಳ ವಸ್ತುಪ್ರದರ್ಶನ ಮತ್ತು ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಉದ್ಘಾಟಿಸಲಿದ್ದಾರೆ. ಶಿವಮೊಗ್ಗದ ಕುವೆಂಪು ವಿವಿಯ ಕುಲಸಚಿವರಾದ ಡಾ. ಮಲ್ಲಿಕಾ ಘಂಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಲೋಹಿಯಾ ಪ್ರಕಾಶನದ ಚೆನ್ನ ಬಸವಣ್ಣ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೀರಣ್ಣ ಜತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಹಿರಿಯ ಸಾಹಿತಿ ವೈ. ರಾಘವೇಂದ್ರ ರಾವ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ನಂತರ ಕೊಪ್ಪಳ ಜಿಲ್ಲೆ ಯಲಬುರ್ಗದ ಮರಪ್ಪ ಮರೆಪ್ಪ ದಾಸರ ಅವರು ತತ್ವಪದಗಳನ್ನು ಸಾದರಪಡಿಸಲಿದ್ದಾರೆ. ಶ್ರೀ ರಾಮಾಂಜನೇಯ ತೊಗಲು ಗೊಂಬೆ ಮೇಳದಿಂದ ಲಂಕಾದಹನ ತೊಗಲುಗೊಂಬೆಯಾಟ ಪ್ರದರ್ಶನಗೊಳ್ಳಲಿದೆ. ಜೂ. 19ರಂದು ಸಂಜೆ 6ಕ್ಕೆ ಶ್ರೀಧರಗಡ್ಡೆಯ ಶ್ರೀ ಬಸವೇಶ್ವರ ಯುವಕ ಸಂಘದ ಶ್ರೀ ಪಂಪಯ್ಯ ಸ್ವಾಮಿ ಮತ್ತು ತಂಡದವರಿಂದ ಬಯಲಾಟ ಹಾಗೂ ದೊಡ್ಡಬಳ್ಳಾಪುರ ಚಿಂತಾಮಣಿಯ ಶ್ರೀ ಶಂಕರಪ್ಪ ಮತ್ತು ತಂಡದವರಿಂದ ರಾಮರಾವಣ ಯುದ್ಧ ತೊಗಲುಗೊಂಬೆಯಾಟ ಪ್ರದರ್ಶನವಾಗಲಿದೆ. ಜೂ. 20ರಂದು ಸಂಜೆ 6ಕ್ಕೆ ಬೆಳಗಾವಿ ಜಿಲ್ಲೆ ಬೈಲಹೊಂಗಲದ ಮಲ್ಲವ್ವ ಮೇಗೇರಿಯವರ ಹರಿ ಕಲಾತಂಡದಿಂದ ಕೃಷ್ಣಪಾರಿಜಾತ ಹಾಗೂ ಗಂಗಾವತಿ ತಾಲೂಕಿನ ಹೊಸೂರಿನ ಗಂಗಮ್ಮ ಮತ್ತು ಲಕ್ಷ್ಮಮ್ಮ ತಂಡದವರಿಂದ ವಿರಾಟ ಪರ್ವ ತೊಗಲುಗೊಂಬೆಯಾಟ ಪ್ರದರ್ಶನಗೊಳ್ಳಲಿದೆ.
ಜೂ. 21ರಂದು ಸಂಜೆ 4 ಗಂಟೆಗೆ ಜಾನಪದ ರಂಗ ಕಲೆಗಳ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ. ವೀರೇಶ್ ಬಡಿಗೇರ, ಡಾ. ಮುದೇನೂರು ನಿಂಗಪ್ಪ, ಡಾ. ಮೋಹನ ಕುಂಟಾರ, ಡಾ. ಗಂಗಾಧರ ದೈವಜ್ಞ ಅವರು ವಿಷಯ ಮಂಡಿಸಲಿದ್ದಾರೆ. ಹಂಪಿ ಕನ್ನಡ ವಿವಿಯ ಡಾ. ರಹಮತ್ ತರಿಕೆರೆ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಎ.ಎಂ. ಜಯಶ್ರೀ, ಗಂಗಾಧರ್ ಪತ್ತಾರ್, ಸಿ. ಮಂಜುನಾಥ, ನಿಷ್ಠಿರುದ್ರಪ್ಪ, ಡಾ. ಶ್ಯಾಮಮೂರ್ತಿ, ಡಾ. ವೀರೇಶ್ ಸ್ವಾಮಿ, ಡಾ. ಕೆ. ಬಸಪ್ಪ, ಡಾ. ಕುಮಾರಸ್ವಾಮಿ, ಎಸ್. ಮಂಜುನಾಥ, ಹಂದ್ಯಾಳು ಶಿವಲಿಂಗಪ್ಪ ಅವರು ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ನಂತರ ಕೂಡ್ಲಿಗಿಯ ಲಕ್ಷ್ಮೀ, ಶೃತಿ ಲಯ ಕಲಾತಂಡದಿಂದ ಸಂಗ್ಯಾ-ಬಾಳ್ಯಾ ಸಣ್ಣಾಟ ಹಾಗೂ ಆಂಧ್ರಪ್ರದೇಶ ಅನಂತಪುರ ಜಿಲ್ಲೆ ಧರ್ಮಾವರಂನ ಅಂಜನಿ ಮತ್ತು ತಂಡದವರಿಂದ ಕಿಷ್ಕಿಂದಾ ಕಾಂಡ ತೊಗಲು ಗೊಂಬೆಯಾಟ ಪ್ರದರ್ಶನವಾಗಲಿದೆ.
22ರಂದು ಸಮಾರೋಪ
ಜೂ. 22ರಂದು ಕಾರ್ಯಕ್ರಮದ ಸಮಾರೋಪ ನಡೆಯಲಿದ್ದು, ಹಂಪಿ ಕನ್ನಡ ವಿವಿಯ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ, ಸಾಹಿತಿ ಗಂಗಾಧರ ಪತ್ತಾರ, ಕರ್ನಾಟಕ ಯುವಕ ಸಂಘದ ಅಧ್ಯಕ್ಷ ಪನ್ನಾರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಂತರ ಬೆಂಗಳೂರಿನ ಕರ್ನಾಟಕ ಕಲಾದರ್ಶಿನಿಯ ಶ್ರೀನಿವಾಸ ಸಾಸ್ತಾನ್ ಅವರು ಕಂಸವಧೆ ಯಕ್ಷಗಾನ ಹಾಗೂ ಕೋಲ್ಕತ್ತಾದ ಡಾಲ್ ಪಪೆಟ್ ಥಿಯೇಟರ್ ಸುದೀಪ್ ಗುಪ್ತಾ ಅವರಿಂದ ಪರಸರ ಕತೆ ಗೊಂಬೆಯಾಟ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ 5 ದಿನಗಳ ಕಾಲ ಬೆಳಗ್ಗೆ 10.30 ರಿಂದ ಸಂಜೆ 5 ಗಂಟೆವರೆಗೆ ತೊಗಲು ಗೊಂಬೆಗಳ ಪ್ರದರ್ಶನ ನಡೆಯಲಿದೆ. ಮೈಸೂರಿನ ಬಿ.ಎಂ. ರಾಮಚಂದ್ರ ಜಾನಪದ ಹಬ್ಬದ ನಿರ್ವಹಣೆ ಮಾಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮವನ್ನು ಕೆ.ಬಿ. ಸಿದ್ಧಲಿಂಗಪ್ಪ ಹಾಗೂ ಸಮಾರೋಪವನ್ನು ಎ.ಎಂ. ಜಯಶ್ರೀ ನಿರೂಪಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

