ಮುಂಗಾರು ಬಿತ್ತನೆ ಜೋರು
ಭೀಮಣ್ಣ ಗಜಾಪುರ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜೂ. 11
ತಾಲೂಕಿನಲ್ಲಿ ಐದಾರು ವರ್ಷಗಳಿಂದ ಕೈಕೊಟ್ಟಿದ್ದ ಕೃತ್ತಿಕಾ ಹಾಗೂ ರೋಹಿಣಿ ಮಳೆ ಈ ಬಾರಿ ರೈತರ ಕೈ ಹಿಡಿದಿದೆ. ಹದವಾದ ಮಳೆ ಆಗಿರುವುದರಿಂದ ರೈತರು ಜೋಳ, ಹತ್ತಿ, ಮೆಕ್ಕೆಜೋಳ, ಮಿಡಿಸೌತೆ, ಹೆಸರು ಬಿತ್ತನೆ ಮಾಡಿದ್ದಾರೆ.
ಕೂಡ್ಲಿಗಿ, ಕೊಟ್ಟೂರು, ಹೊಸಹಳ್ಳಿ, ಗುಡೇಕೋಟೆ ಹೋಬಳಿಗಳಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ಖುಷಿಗೊಂಡಿರುವ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕೃಷಿ ಅಧಿಕಾರಿಗಳ ಪ್ರಕಾರ ಈ ಬಾರಿ 81450 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ತಾಲೂಕಿನಲ್ಲಿ ಈಗ್ಗೆ ಐದಾರು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ನಷ್ಟ ಹೊಂದಿದ್ದಾರೆ.
ಬಿತ್ತನೆ ಕಾರ್ಯ ಆರಂಭವಾಗುತ್ತಿದ್ದಂತೆ ಬೀಜ ಮತ್ತು ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚುತ್ತಿದೆ. ಖಾಸಗಿ ವ್ಯಾಪಾರಸ್ಥರು ದಾಸ್ತಾನು ಇದ್ದರೂ ಬೀಜ, ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ರೈತರಿಂದ ಹೆಚ್ಚಿನ ಬೆಲೆ ಪಡೆದುಕೊಳ್ಳುತ್ತಾರೆ. ಇದು ಪ್ರತಿ ವರ್ಷದ ಗೋಳು. ಅಲ್ಲದೇ ರೈತರು ಒಂದೇ ಬ್ರಾಂಡ್ ಬಿತ್ತನೆ ಬೀಜ ಖರೀದಿಸಲು ಮುಂದಾಗುವುದರಿಂದ ಅಲ್ಲಿಯೂ ಕೃತಕ ಅಭಾವ ಸೃಷ್ಟಿಯಾಗುತ್ತದೆ. ಅಧಿಕಾರಿಗಳು ಜಾಣ ಕಿವುಡುತನ ಪ್ರದರ್ಶಿಸದೇ ರೈತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಮುಂದಾಗಬೇಕಿದೆ. ಖಾಸಗಿ ವ್ಯಾಪಾರಸ್ಥರು ತಿಳಿಸುವಂತೆ, ಪ್ರತಿ ವರ್ಷ ಸಾಗಣೆ ದರ ಏರುತ್ತಲೇ ಇರುತ್ತದೆ. ಆದರೆ ಬೀಜ, ಗೊಬ್ಬರಗಳಲ್ಲಿ ಹಳೆ ದರಗಳೇ ಇರುತ್ತವೆ. ಸಾಗಣೆ ಮತ್ತು ವಿತರಣೆ ವೆಚ್ಚಗಳನ್ನು ಸರಿದೂಗಿಸಿಕೊಂಡು ನಾವು ವ್ಯವಹಾರ ಮಾಡಬೇಕಾಗುತ್ತದೆ ಎನ್ನುತ್ತಾರೆ.
ಇನ್ನು ಕೃಷಿ ಕೇಂದ್ರಗಳಲ್ಲಿ ಸಕಾಲದಲ್ಲಿ ಬೀಜ, ಗೊಬ್ಬರ ಪೂರೈಕೆಯಾಗುವುದಿಲ್ಲ. ಪೂರೈಕೆಯಾದರೂ ರೈತರಿಗೆ ಸಾಕಾಗುವಷ್ಟು ಬರುವುದಿಲ್ಲ. ಇದರಿಂದ ರೈತರು ಅನಿವಾರ್ಯವಾಗಿ ಖಾಸಗಿ ಕೇಂದ್ರಗಳನ್ನು ಅವಲಂಬಿಸಬೇಕಾಗುತ್ತದೆ. ಕಳೆದ ವರ್ಷ ಬಿಟಿ ಹತ್ತಿ ಬೀಜದಿಂದ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಯಾವುದು ಉತ್ತಮ ಬೀಜ ಎಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಡುವ ಕೆಲಸ ಇಲಾಖೆಯಿಂದ ಆಗಬೇಕಾಗಿದೆ ಎನ್ನುತ್ತಾರೆ ತಾಲೂಕಿನ ಪ್ರಜ್ಞಾವಂತ ರೈತ ಕೊಟ್ರೇಶ್.
ರೈತರು ಒಂದೇ ಕಂಪನಿ ಬಿತ್ತನೆ ಬೀಜಕ್ಕೆ ಮರುಳಾಗುವುದರಿಂದ ಕೃತಕ ಅಭಾವ ಸೃಷ್ಟಿಯಾಗುತ್ತದೆ. ಬಿತ್ತನೆ ಬೀಜಗಳನ್ನು ನಮ್ಮ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಪೂರೈಸಲಾಗುವುದು. ಒಂದೆರಡು ದಿನಗಳಲ್ಲಿ ಶೇಂಗಾ ಬೀಜ ಸಹ ಪೂರೈಕೆಯಾಗಲಿದೆ.
- ಮಂಜುನಾಥ್,
ತಾಲೂಕು ಕೃಷಿ ಅಧಿಕಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

