ಕೂಡ್ಲಿಗಿ: ಬಲೆಗೆ ಬೀಳದ ಕರಡಿ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜೂ. 11
ತಾಲೂಕಿನ ಕಡಾಕೊಳ್ಳ ಗ್ರಾಮದ ಹೊರವಲಯದ ಜಮೀನಿನಲ್ಲಿ ಸೇರಿದ್ದ ಎಲ್ಲರ ಕೈಯಲ್ಲೂ ಬಡಿಗೆ, ಆಯುಧಗಳಿದ್ದವು. ಆದರೆ, ಕರಡಿ ಮಾತ್ರ ನೂರಾರು ಜನತೆ ಮಧ್ಯೆಯೇ ಬಲೆಯನ್ನು ತೂರಿ ಕಾಡಿಗೆ ನುಗ್ಗಿದ ಪ್ರಸಂಗ ಮಾತ್ರ ಕೌತುಕವಾಗಿತ್ತು.
ಬುಧವಾರ ಕರಡಿಯೊಂದು ಗ್ರಾಮದ ಮುಂದಿರುವ ತೋಟದಲ್ಲಿ ಕಾಣಿಸಿಕೊಂಡಾಗ ಅರಣ್ಯ ಇಲಾಖೆಗೆ ದೂರವಾಣಿ ಮೂಲಕ ಕರೆ ಮಾಡಿದಾಗ, ತಾಲೂಕಿನ ಗುಡೇಕೋಟೆ ಅರಣ್ಯ ಇಲಾಖೆ ಅಧಿಕಾರಿ ದುದ್ದಗಿ ಮತ್ತು ಸಿಬ್ಬಂದಿ ಕರಡಿ ಹಿಡಿಯಲು ಬಲೆ ಸಮೇತ ಆಗಮಿಸಿದರು. ಗ್ರಾಮದ ರುದ್ರಪ್ಪನ ರೇಷ್ಮೆ ಬೆಳೆಯ ಸುತ್ತ ಬಲೆ ಕಟ್ಟಿದರು. ವಿರುದ್ಧ ದಿಕ್ಕಿನಿಂದ ಕರಡಿಯನ್ನು ಬಲೆಯ ಕಡೆಗೆ ಓಡಿಸಲು ಗಲಾಟೆ ನಡೆಸಿದರು. ಜನತೆಯ ಗಲಾಟೆಗೆ ಹೆದರಿದ ಕರಡಿ ಜಪ್ಪಯ್ಯ ಅಂದರೂ ಜಮೀನು ಬಿಟ್ಟು ಕದಲಲಿಲ್ಲ. ಕೊನೆಗೆ ಗ್ರಾಮದ ಕೆಲವು ಯುವಕರು ಬಡಿಗೆ ಹಿಡಿದುಕೊಂಡು ಕರಡಿ ಇರುವ ಜಾಗಕ್ಕೆ ನುಗ್ಗಿದರು. ಆಗ ಕರಡಿ ಘರ್ಜಿಸತೊಡಗಿತು. ಘರ್ಜನೆಗೆ ಅಲ್ಲಿ ಸೇರಿದ್ದ ನೂರಾರು ಜನರ ಜಂಘಾಬಲವೇ ಉಡುಗಿ ಹೋಯಿತು. ಅಷ್ಟರೊಳಗೆ ಬಲೆ ಇರುವ ಕಡೆಯೇ ಕರಡಿ ಗರ್ಜಿಸುತ್ತಲೇ ನುಗ್ಗಿತು. ಇನ್ನೇನು ಕರಡಿ ಬಲೆಗೆ ಬಿತ್ತು ಎನ್ನುವಾಗಲೇ ಸಡಿಲವಾಗಿ ಕಟ್ಟಿದ ಬಲೆಯನ್ನು ಉದ್ದನೆಯ ಬಾಯಿಂದ ಮೇಲಕ್ಕೆತ್ತಿ ಬಲೆಯಿಂದ ಪಾರಾಗಿ ಹೊರಗೆ ಬಂತು. ಅಲ್ಲಿಂದ ಕೇಳಬೇಕೇ ಕರಡಿಯ ಆರ್ಭಟ... ಬಯಲಿಗೆ ಬಿದ್ದ ಕರಡಿ ಖಾಲಿ ಜಮೀನಿನ ತುಂಬಾ ಮನಸ್ಸಿಗೆ ಬಂದಂತೆ ತೂರಾಡಿತು. ಹೂಂಕರಿಸಿತು. ಎದುರಿಗೆ ಯಾರಾದರೂ ಸಿಕ್ಕಿದ್ದರೆ ಅವನ ಕಥೆ ಮುಗಿದೇ ಹೋಗುತ್ತಿತ್ತು. ಆದರೆ ಅದೃಷ್ಟವಶಾತ್ ಅಂಥ ಅಪಾಯವಾಗಲಿಲ್ಲ. ಆದರೆ, ಗ್ರಾಮದ ನೂರಾರು ಜನತೆಗೂ ಅರಣ್ಯ ಇಲಾಖೆ ಸಿಬ್ಬಂದಿಗೂ ಕರಡಿ ಚಳ್ಳೆಹಣ್ಣು ತಿನಿಸಿತು.
ಅರಣ್ಯಾಧಿಕಾರಿ ತರಾಟೆ
ನೀವು ಬೇಕಂತಲೇ ಕರಡಿ ಹಿಡಿಯುವುದನ್ನು ತಪ್ಪಿಸಿದ್ದೀರಿ, ಬಲೆಯನ್ನು ಸರಿಯಾಗಿ ಕಟ್ಟಿದ್ದರೆ ಕರಡಿ ಎಲ್ಲಿ ತಪ್ಪಿಸಿಕೊಂಡು ಹೋಗುತ್ತಿತ್ತು ಎಂದು ಕೆಲವರು ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಗುಡೇಕೋಟೆ ವಲಯ ಅರಣ್ಯಾಧಿಕಾರಿ ದುದ್ದಗಿ ಮಾತ್ರ ಸಮಾಧಾನದಿಂದಲೇ ಜನತೆಯ ಸಂಕಷ್ಟ ಆಲಿಸಿ ಮುಂದಿನ ದಿನಗಳಲ್ಲಿ ಗುಡೇಕೋಟೆಯಲ್ಲಿ ಕರಡಿಧಾಮ ಆಗುತ್ತದೆ. ಈಗಾಗಲೇ ಕೆಲಸ ನಡೆದಿದೆ. ಈಗ ನಮ್ಮ ಕೈಯಲ್ಲಿ ಕರಡಿಯನ್ನು ಹಿಡಿಯುವ ಸರಿಯಾದ ಅಸ್ತ್ರಗಳಿಲ್ಲ, ಕರಡಿಧಾಮವಾದರೆ ಕರಡಿ ಹಿಡಿಯುವ ಎಲ್ಲಾ ಅಸ್ತ್ರಗಳು ನಮ್ಮಲ್ಲಿ ಸಿಗುತ್ತವೆ. ಆಗ ಈ ಭಾಗದ ಕರಡಿಗಳನ್ನು ಸುರಕ್ಷಿತವಾಗಿ ಹಿಡಿದು ಕರಡಿಧಾಮಕ್ಕೆ ಬಿಡುತ್ತೇವೆ ಕರಡಿಗಳು ಸುರಕ್ಷಿತ, ನೀವೂ ಸುರಕ್ಷಿತವಾಗಿರಬಹುದೆಂದು ತಿಳಿವಳಿಕೆ ಮೂಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

