ಶಾಸಕರ ಅನುಚಿತ ವರ್ತನೆ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 9
ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಎರಡು ದಿನಗಳ ಹಿಂದೆ ವಾರ್ಷಿಕ ಕೆಡಿಪಿ ಸಭೆಯಲ್ಲಿ ಜಿ.ಪಂ. ಸಿಇಒ ಜತೆ ಅನುಚಿತವಾಗಿ ವರ್ತಿಸಿದ ಎಚ್.ಬಿ. ಹಳ್ಳಿ ಶಾಸಕರ ಕ್ರಮವನ್ನು ಖಂಡಿಸಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾಧ್ಯಕ್ಷ ಡಾ. ಎಂ.ಟಿ. ಮಲ್ಲೇಶ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಗತಿ ಪರಿಶೀಲಿಸುವಾಗ ಎಚ್.ಬಿ. ಹಳ್ಳಿ ಶಾಸಕರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನಿರ್ಮಿಸಿದ ಓವರ್ ಟ್ಯಾಂಕ್ ವಿಷಯದಲ್ಲಿ ಶಾಸಕರ ಪ್ರಶ್ನೆಗೆ ಸಿಇಓ ಅವರು ಉತ್ತರಿಸುತ್ತಿದ್ದರೂ ಅದನ್ನು ಕೇಳಿಸಿಕೊಳ್ಳದೇ ಏರುಧ್ವನಿಯಲ್ಲಿ 'ಬಾಯಿ ಮುಚ್ಕೊಂಡು ಕೂತ್ಕೊಳ್ಳಿ' ಎಂದು ಕಿರುಚಾಡಿ, ಸಭೆಯಲ್ಲಿ ಅಗೌರವದಿಂದ ವರ್ತಿಸಿರುವ ಕ್ರಮ ಖಂಡನೀಯ ಎಂದು ತಿಳಿಸಿದರು.
ಈ ಘಟನೆ ನಡೆದ ಸಂದರ್ಭದಲ್ಲಿ ಕೂಡಲೇ ಎಲ್ಲ ಅಧಿಕಾರಿಗಳು ಎದ್ದು ನಿಂತು ಸಭೆಯನ್ನು ಬಹಿಷ್ಕರಿಸಲು ಮುಂದಾದಾಗ, ಜಿಲ್ಲಾ ಉಸ್ತುವಾರಿ ಸಚಿವರು, ಕೆಲ ಶಾಸಕರು ಪರಿಸ್ಥಿತಿಯನ್ನು ಶಾಂತಗೊಳಿಸಿದರು. ಆದರೆ ಸಭೆಯಲ್ಲಿ ಜಿಪಂ. ಸಿಇಒ ಮೇಲೆ ಅಸಭ್ಯ ಪದಪ್ರಯೋಗ ಮಾಡಿದ ಬಗ್ಗೆ ಎಚ್.ಬಿ. ಹಳ್ಳಿ ಶಾಸಕರು ಯಾವುದೇ ವಿಷಾದ ವ್ಯಕ್ತಪಡಿಸಿಲ್ಲ ಹಾಗೂ ಸಭೆಯಲ್ಲಿದ್ದ ಉನ್ನತ ಮಟ್ಟದ ಅಧಿಕಾರಿಗಳು ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಸಂಪುಟದ ಸಚಿವರಿಗೆ, ಶಾಸಕರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಬಹುಮುಖ್ಯ ಎಂಬುದನ್ನು ತಿಳಿಹೇಳಬೇಕಾಗಿದೆ ಎಂದು ಒತ್ತಾಯಿಸಿದರು.
ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳು ಸರ್ಕಾರಿ ನೌಕರರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುವುದು, ತಮಗೆ ತೋಚಿದಂತೆ ಮಾತನಾಡಿ, ಸರ್ಕಾರಿ ಕೆಲಸ ಕಾರ್ಯಗಳು ನಿರ್ವಹಿಸುವಲ್ಲಿ ಅಡೆತಡೆ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಇದರಿಂದ ಸರ್ಕಾರಿ ನೌಕರರು, ಅಧಿಕಾರಿಗಳು, ನೆಮ್ಮದಿ ಹಾಗೂ ಸ್ವಾಭಿಮಾನದಿಂದ ಕೆಲಸ ನಿರ್ವಹಿಸುವುದು ಕಷ್ಟಕರವಾಗಿದೆ ಎಂದರು. ಜಿಪಂ ಸಿಇಒ ಜತೆ ಅನುಚಿತವಾಗಿ ವರ್ತಿಸಿದ ಎಚ್.ಬಿ. ಹಳ್ಳಿ ಶಾಸಕರು ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ವಾರದೊಳಗಡೆ ರಾಜ್ಯಾಧ್ಯಕ್ಷರ ಜತೆ ಚರ್ಚಿಸಿ, ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅಧ್ಯಕ್ಷ ಡಾ. ಎಂ.ಟಿ. ಮಲ್ಲೇಶ್ ಎಚ್ಚರಿಸಿದರು.
ನಂತರ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಕೆ. ರಾಮಕೃಷ್ಣ, ಸಿ.ನಿಂಗಪ್ಪ, ಡಿಡಿಪಿಐ ವೀರಣ್ಣ ಎಸ್. ಜತ್ತಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ರಾಜಪ್ಪ, ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಪೋಲಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ.ಎಸ್. ಕಲಾದಗಿ, ಸಂಘದ ರಾಜಾರೆಡ್ಡಿ, ನಾಗರಾಜ, ಶಿವಾಜಿರಾವ್, ನೌಕರರು, ಸಂಘದ ಪದಾಧಿಕಾರಿಗಳು ಇದ್ದರು.
ಜನಪ್ರತಿನಿಧಿಗಳು ಸರ್ಕಾರಿ ನೌಕರರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುವುದು, ತಮಗೆ ತೋಚಿದಂತೆ ಮಾತನಾಡಿ, ಸರ್ಕಾರಿ ಕೆಲಸ ಕಾರ್ಯಗಳು ನಿರ್ವಹಿಸುವಲ್ಲಿ ಅಡೆತಡೆ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಇದರಿಂದ ಸರ್ಕಾರಿ ನೌಕರರು, ಅಧಿಕಾರಿಗಳು, ನೆಮ್ಮದಿ ಹಾಗೂ ಸ್ವಾಭಿಮಾನದಿಂದ ಕೆಲಸ ನಿರ್ವಹಿಸುವುದು ಕಷ್ಟಕರವಾಗಿದೆ.
-ಪ್ರತಿಭಟನಾಕಾರರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

