ಬಳ್ಳಾರಿ

ಕುಡಿವ ನೀರಿಗಾಗಿ ತಾಪಂಗೆ ಮುತ್ತಿಗೆ

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜೂ. 9
ಅಧಿಕಾರಿಗಳ ಬೇಜವಾಬ್ದಾರಿತನ, ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ  ಬೇಸತ್ತ ಮಂಗನಹಳ್ಳಿ ಗ್ರಾಮಸ್ಥರು ತಮ್ಮೂರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವಂತೆ ಒತ್ತಾಯಿಸಿ ತಾಲೂಕು ಪಂಚಾಯ್ತಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಗ್ರಾಮದಿಂದ ತಂದಿದ್ದ ಫ್ಲೋರೈಡ್‌ಯುಕ್ತ ನೀರನ್ನು ಕುಡಿಸಿದ ಘಟನೆಯೂ ನಡೆಯಿತು.
ತಾಲೂಕಿನ ಕಾಳಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಂಗನಹಳ್ಳಿ ಗ್ರಾಮದಲ್ಲಿ 7-8 ತಿಂಗಳಿಂದಲೂ ಜನತೆ ಶುದ್ಧ ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಿದ್ದರೂ ಬರೀ ಭರವಸೆಗಳನ್ನೇ ನೀಡಿದ ಅಧಿಕಾರಿಗಳ ಕಾರ್ಯವೈಖರಿಗೆ ಬೇಸತ್ತು ಮಂಗನಹಳ್ಳಿಯ ನೂರಾರು ಜನತೆ ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ಪ್ರತಿಭಟನೆ ನಡೆಸಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೂ ಬಿಸಿ ಮುಟ್ಟಿಸಿದರು. ಸೋಮವಾರವೇ ತಾಲೂಕು ಪಂಚಾಯ್ತಿ ಸಭೆ ಇದ್ದುದರಿಂದ ಇಡೀ ತಾಲೂಕು ಪಂಚಾಯ್ತಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಆಗಮಿಸಿದ್ದರಿಂದ ಹೋರಾಟಕ್ಕೆ ಸ್ಪಂದನೆ ದೊರಕಿತು. ಪ್ರತಿಭಟನೆ ಸ್ಥಳಕ್ಕೆ ತಾ.ಪಂ.ಅಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷ ಮಹೇಶ್, ತಾ.ಪಂ. ಸದಸ್ಯ ಗುರುಪ್ರಸಾದ್, ಕಾರ್ಯನಿರ್ವಾಹಣಾಧಿಕಾರಿ, ಪಂಚಾಯತ್ ರಾಜ್ ಇಲಾಖೆ ಎಇಇ ವೀರಪ್ಪ,  ಕಿರಿಯ ಅಭಿಯಂತರ ನಾಗಪ್ಪ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮೈಲಪ್ಪ ಮುಂತಾದವರು ಆಗಮಿಸಿ ಸಮಸ್ಯೆ ಬಗೆಹರಿಸುವುದಾಗಿ ಗ್ರಾಮಸ್ಥರ ಮನವೊಲಿಸಿದರು ಇದಕ್ಕೆ ಜಗ್ಗದ ಗ್ರಾಮಸ್ಥರು ಕೊಡದಲ್ಲಿ ತಂದಿದ್ದ ನೀರನ್ನು ನೀವು ಕುಡೀರಿ ಗೊತ್ತಾಗುತ್ತೆ ಎಂದು ಅಧಿಕಾರಿಗಳಿಗೆ ಫ್ಲೋರೈಡ್ ನೀರು ಕುಡಿಸಿದರು. ಹೌದು, ನೀರು ಸರಿಯಿಲ್ಲ ಎಂದು ಅಧಿಕಾರಿಗಳೇ ಒಪ್ಪಿಕೊಂಡರು.  ತಾಲೂಕು ಪಂಚಾಯ್ತಿ ಸಭೆ ಮುಗಿದ ತಕ್ಷಣವೇ ಸಂಜೆ ನಿಮ್ಮೂರಿಗೆ ನಮ್ಮ ಅಧಿಕಾರಿಗಳ ತಂಡ ಬರುತ್ತಿದೆ ಎಂದು ತಿಳಿಸಿದರೂ ಸಭೆ ಮುಗಿಯವರೆಗೂ ಕಚೇರಿ ಮುಂದುಗಡೆ ಪ್ರತಿಭಟನೆ ನಡೆಸಲಾಯಿತು.
ಅಧಿಕಾರಿಗಳು ತಬ್ಬಿಬ್ಬು
 ತಾಪಂ ಸಭೆ ಮುಗಿಯುತ್ತಿದ್ದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಸಭಾಭವನದಲ್ಲಿ ಲಘು ಉಪಾಹಾರ ಮಾಡುತ್ತಿದ್ದಾಗ ನಮಗೆ ಕುಡಿಯಲು ನೀರಿಲ್ಲ, ನಾವು ಹೊರಗಡೆ ಬಿಸಿಲಲ್ಲಿ ಕಾದು ಕುಳಿತಿದ್ದೇವೆ. ನೀವು ಮಾತ್ರ ಊಟ ಮಾಡುವುದು ನ್ಯಾಯವೇ ಎಂದು  ಸಭಾಭವನಕ್ಕೆ ನುಗ್ಗಿದಾಗ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಬ್ಬಿಬ್ಬಾದರು. ಕೆಲವರು ಉಪಾಹಾರ ಸೇವಿಸಿದರೆ ಇನ್ನೂ ಕೆಲವರು ಊಟವೂ ಸರಿ ಇದ್ದಿಲ್ಲ ಎಂದು ಎಲ್ಲರೂ ಸಭೆಯಿಂದ ಹೊರಗೆ ನಡೆದರು. ನಂತರ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
ಕೂಡ್ಲಿಗಿ ಪಿ.ಎಸ್.ಐ. ಕೃಷ್ಣಾನಾಯ್ಕ  ಪ್ರತಿಭಟನಾಕಾರರ ಮನವೊಲಿಸಿ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಆಗ ತಾ.ಪಂ. ಇಓ ಶಿವಪ್ಪ, ಜಿ.ಪಂ. ಎಇಇ ವೀರಪ್ಪ, ಪಿಡಿಒ ಮೈಲಪ್ಪ ಮುಂತಾದ ಅಧಿಕಾರಿಗಳನ್ನು ತಮ್ಮ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಲಾಯಿತು.  ಮಂಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದಾಗ ತಾ.ಪಂ. ಇಓ ಶಿವಪ್ಪ ಮಾತನಾಡಿ, ವಾರದೊಳಗೆ ಕುಡಿಯುವ ನೀರಿನ ಸಮಸ್ಯೆ  ಬಗೆಹರಿಸುವುದಾಗಿ ಭರವಸೆ ನೀಡಿದರು.
ಗ್ರಾಮಸ್ಥರ ಹೋರಾಟಕ್ಕೆ ಅಧಿಕಾರಿಗಳಿಗೆ ಬಿಸಿ ಮುಟ್ಟಿದಂತೂ ನಿಜ. ಭರವಸೆ ಈಡೇರದಿದ್ದರೆ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಮುಂದಿನ ದಿನಗಳಲ್ಲಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಗ್ರಾಮಸ್ಥರು ಮತ್ತೆ  ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.