ಮಳೆ-ಗಾಳಿ: ಮರಗಳು ಧರೆಗೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜೂ. 3
ತಾಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆ- ಗಾಳಿಗೆ ಮರಗಳು ಧರೆಗೆ ಉರುಳಿವೆ. ಕೆರೆ ಕಟ್ಟೆಗಳು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಪುರಾತನ ಬೆಟ್ಟದ ಮಲ್ಲೇಶ್ವರ ದೇವಸ್ಥಾನಕ್ಕೆ ಅಪಾರ ಹಾನಿ ಉಂಟಾಗಿದೆ.
ತಾಲೂಕಿನಲ್ಲಿ ಸೋಮವಾರ ರಾತ್ರಿ 48.33 ಮಿ.ಮೀ ಮಳೆಯಾಗಿರುವ ವರದಿಯಾಗಿದ್ದು, ಮಳೆ-ಗಾಳಿಗೆ ನಾಗತಿ ಬಸಾಪುರ ಜಮೀನಿನ ಮಳೆ ನೀರು ಹತ್ತಾರು ಮನೆಗಳಿಗೆ ಏಕಾಏಕಿ ನುಗ್ಗಿದ್ದು, ಮನೆಯಲ್ಲಿನ ದವಸ ಧಾನ್ಯಗಳು, ಬಟ್ಟೆ ಮತ್ತು ಗೃಹೋಪಯೋಗಿ ವಸ್ತುಗಳು ನೀರಿನಲ್ಲಿ ತೇಲಿ ಹೋಗಿದ್ದು, ಸಾಕಷ್ಟು ಹಾನಿ ಉಂಟಾಗಿದೆ.
ತಾಲೂಕಿನ ಬ್ಯಾಲಹುಣ್ಸಿ, ಮಕರಬ್ಬಿ, ಹೊಸಹಳ್ಳಿ, ಅಂಗೂರು, ಕೋಟಿಹಾಳು, ಮಾಗಳ, ಬನ್ನಿಮಟ್ಟಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಕೊಯ್ಲಿಗೆ ಬಂದಿದ್ದ ಬತ್ತ ಮಳೆ-ಗಾಳಿಗೆ ನೆಲಕಚ್ಚಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಹಿರೇಹಡಗಲಿ ಹೊಸ ಬಸ್ ನಿಲ್ದಾಣ ಹಾಗೂ ಕೆಇಬಿ ಗ್ರೀಡ್ ಬಳಿ ಎರಡು ಮರಗಳು ನೆಲಕ್ಕರುಳಿದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಪುರಾತನ ಕಾಲದ ಬೆಟ್ಟದ ಮಲ್ಲೇಶ್ವರ ದೇವಸ್ಥಾನ ಸೇರಿದಂತೆ ಸಮುದಾಯ ಭವನದಲ್ಲಿ ನೀರು ಹಾಗೂ ಗುಡ್ಡದ ಮೇಲಿನ ಮಣ್ಣು ಹರಿದು ದೇವಸ್ಥಾನದ ಬಾಗಿಲು ಮುಚ್ಚಿದೆ. ದೇವಸ್ಥಾನಕ್ಕೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಈ ಕುರಿತು ದೇವಸ್ಥಾನ ಆಡಳಿತಾಧಿಕಾರಿ ವಿನಾಯಕ ಗೋಡಬೋಲೆ, ಬೆಟ್ಟದ ಮಲ್ಲೇಶ್ವರ ಗುಡ್ಡದ ಮೇಲೆ ಸುಜಲಾನ್ ಕಂಪನಿ ಫ್ಯಾನ್ಗಳನ್ನು ಅಳವಡಿಸಲು ಗುಡ್ಡವನ್ನು ಕಿತ್ತು ಹಾಕಿ ರಸ್ತೆ ಮಾಡಿರುವ ಪರಿಣಾಮ ಮಳೆ ನೀರಿಗೆ ಮೇಲಿಂದ ಅಪಾರ ಪ್ರಮಾಣದಲ್ಲಿ ಮಣ್ಣು, ಕಲ್ಲು ನೀರು ಹರಿದು ಬಂದು ದೇವಸ್ಥಾನಕ್ಕೆ ಹಾನಿ ಉಂಟಾಗಿದೆ ಎಂದರು.
ಈ ಕುರಿತು ಸುಜಲಾನ್ ಕಂಪನಿ ಎಂಜಿನಿಯರ್ ಜತೆಗೆ ಮಾತನಾಡಿ, ಸಿಬ್ಬಂದಿ ಕರೆ ತಂದು ಸ್ವಚ್ಛಗೊಳಿಸುವ ಹಾಗೂ ದೇವಸ್ಥಾನಕ್ಕೆ ಆಗಿರುವ ಹಾನಿಯನ್ನು ಮರು ನಿರ್ಮಾಣ ಮಾಡಬೇಕೆಂದು ತಿಳಿಸಲಾಗಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ, ಜಿಲ್ಲಾಧಿಕಾರಿಗಳು ಸುಜಲಾನ್ ಕಂಪನಿ ಅಧಿಕಾರಿಗಳ ಸಭೆ ಕರೆದು ಶಾಶ್ವತ ಪರಿಹಾರ ಕಂಡುಕೊಂಡು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

