ಬಳ್ಳಾರಿ

ಮಳೆ ಅಬ್ಬರಕ್ಕೆ ಮಹಿಳೆ ಸಾವು

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 3
ಸಂಡೂರು ತಾಲೂಕಿನ ಬೊಮ್ಮಘಟ್ಟ ಗ್ರಾಮದಲ್ಲಿ ಮನೆ ಕುಸಿದು ಮಹಿಳೆಯೋರ್ವಳು ಮೃತ ಪಟ್ಟಿದ್ದಾರೆ. ಹುಲೆಮ್ಮ (50) ಮೃತ ಪಟ್ಟ ಮಹಿಳೆಯಾಗಿದ್ದು, ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಮನೆ ಕುಸಿದ ಪರಿಣಾಮ ಹುಲೆಮ್ಮನ ಸಾವು ಸಂಭವಿಸಿದೆ.
ಸೋಮವಾರ ರಾತ್ರಿ, ಮಂಗಳವಾರ ಬೆಳಗ್ಗೆ ಸಿರುಗುಪ್ಪ ಹೊರತು ಪಡಿಸಿ, ಜಿಲ್ಲಾದ್ಯಂತ ಉತ್ತಮ ಮಳೆಯಾಗಿದೆ. ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ 3 ಜಾನುವಾರುಗಳು ಸಿಡಿಲು ಬಡಿದು ಸಾವನ್ನಪ್ಪಿವೆ. ಇನ್ನು 203 ಮನೆಗಳು ಹಾನಿಯಾಗಿ ಸುಮಾರು ರು. 33.38 ಲಕ್ಷ ಹಾನಿಯಾಗಿದೆ. ಸುರಿದ ಮಳೆಯು ಜಿಲ್ಲೆಯ ಮುಂಗಾರು ಬಿತ್ತನೆಗೆ ಹೆಚ್ಚಿನ ಸಹಕಾರಿಯಾಗಲಿದೆ. ಜಿಲ್ಲಾದ್ಯಂತ ಸರಾಸರಿ 26.3 ಮಿ.ಮೀ ಮಳೆಯಾಗಿದೆ.
ಜಾನುವಾರು ಸಾವು
ಸಂಡೂರು ತಾಲೂಕಿನ ಚೋರನೂರು ಗ್ರಾಮದಲ್ಲಿ ಸಿಡಿಲು ಬಡಿದು ಒಂದು ಆಕಳು, ಕೂಡ್ಲಿಗಿ ತಾಲೂಕಿನ ಕೆ.ಕೆ. ಹಟ್ಟಿ ಗ್ರಾಮದಲ್ಲಿ 1 ಆಕಳು, ಹೂವಿನ ಹಡಗಲಿ ತಾಲೂಕಿನ ಒಂದು ಜಾನುವಾರು ಸಿಡಿಲು ಬಡಿದು ಮೃತ ಪಟ್ಟಿದ್ದು, ಸುಮಾರು ರು. 88 ಸಾವಿರ ನಷ್ಟವಾಗಿದೆ. ಬಳ್ಳಾರಿ ನಗರದಲ್ಲಿ ಭಾರಿ ಮಳೆಯ ಪ್ರಮಾಣದಿಂದ ಬಿಸಿಲ ಬಳ್ಳಾರಿಯಲ್ಲಿ ತಂಪೆರದರೂ, ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನರು ತೀವ್ರ ಸಮಸ್ಯೆಯನ್ನು ಎದುರಿಸುವಂತಾಗಿತ್ತು.
ಮನೆಗಳು ನೆಲಸಮ
ಕೂಡ್ಲಿಗಿ ತಾಲೂಕಿನ ಭಾರಿ ಮಳೆಯಿಂದಾಗಿ 103 ಮನೆಗಳಿಗೆ ಹಾನಿಯಾಗಿ ರು. 24.40 ಲಕ್ಷ ನಷ್ಟವಾಗಿದೆ. ತಾಲೂಕಿನ 30 ಗ್ರಾಮಗಳಲ್ಲಿ ಮನೆಗಳು ಕುಸಿದು ಬಿದ್ದಿವೆ. ಇನ್ನು ಸಂಡೂರು ತಾಲೂಕಿನಲ್ಲಿ ಮಳೆಯಿಂದಾಗಿ 100 ಮನೆಗಳು ಬಿದ್ದಿದ್ದು, ರು. 8 ಲಕ್ಷ ಹಾನಿಯಾಗಿದೆ. ದೇವರ ಬುದ್ದೇನಹಳ್ಳಿ ಗ್ರಾಮದಲ್ಲಿ 30 ಮನೆಗಳು, ತುಂಬರಗುದ್ದಿ ಗ್ರಾಮದಲ್ಲಿ 20 ಮನೆಗಳು, ಜಿಗೇನಹಳ್ಳಿ ಗ್ರಾಮದಲ್ಲಿ 20 ಮನೆಗಳು, ಸ್ವಾಮಿಹಳ್ಳಿಯಲ್ಲಿ 20 ಮನೆಗಳು ಹಾನಿಯಾಗಿವೆ ಎಂದು ಜಿಲ್ಲಾಡಳಿದ ಮೂಲಗಳು ತಿಳಿಸಿವೆ.
ಮಂಗಳವಾರ ಬೆಳಗ್ಗೆಯಿಂದ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮೋಡ ಮುಸುಕಿದ ವಾತಾವರಣದಿಂದ ಕೂಡಿದೆ. ಜೂನ್ ತಿಂಗಳಲ್ಲಿ ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಸರಾಸರಿ 65.34 ಮಿಲಿ ಮೀಟರ್ ಮಳೆಯಾಗಬೇಕಿದ್ದು, ಮೂರು ದಿನಗಳ ಅವಧಿಯಲ್ಲಿಯೇ 29.4.ಮಿಲಿ ಮೀಟರ್ ಮಳೆಯಾಗಿರುವುದು ಜಿಲ್ಲೆಯ ರೈತರಿಗೆ ಮುಂಗಾರು ಬಿತ್ತನೆ ಆಸೆಯನ್ನು ಹುಟ್ಟುಹಾಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.