ಕೊಟ್ಟೂರಲ್ಲಿ ವರ್ಷಧಾರೆ
ಕೊಟ್ಟೂರು: ಕೊಟ್ಟೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ ಬೆಳಗಿನ 7 ರವರೆಗೆ ಭಾರಿ ಮಳೆ ಸುರಿದಿದೆ. ಈ ವರ್ಷದ ಅತಿ ದೊಡ್ಡ ಮಳೆ ಇದಾಗಿದ್ದು, ರೈತರು ಬಿತ್ತನೆ ಕಾರ್ಯಕೈಗೊಳ್ಳಲು ಸಹಕಾರಿಯಾಗಿದೆ. ಕೊಟ್ಟೂರು ಮಳೆ ಮಾಪನದಲ್ಲಿ 93.4 ಮಿ.ಮೀಟರ್ ಮಳೆ ಬಂದಿರುವ ಬಗ್ಗೆ ದಾಖಲೆಯಾಗಿದೆ. ಪಟ್ಟಣದ ಬಳ್ಳಾರಿ ಕ್ಯಾಂಪ್ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ಭಾರಿ ಪ್ರಮಾಣದ ನೀರು ನುಗ್ಗಿದ್ದರಿಂದ ಇಲ್ಲಿನ ನಿವಾಸಿಗರು ನಿದ್ರೆಯಿಂದ ಮೇಲೆದ್ದು ನೀರನ್ನು ಹೊರ ಹಾಕಲು ಹರಸಾಹಸ ಪಟ್ಟರು. ಇಲ್ಲಿನ ಬಳ್ಳಾರಿ ಕ್ಯಾಂಪ್ ಪ್ರದೇಶದಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
31 ಮನೆಗಳು ಜಖಂ
ಭಾರಿ ಮಳೆಯ ಪರಿಣಾಮ ಪಟ್ಟಣ ಸೇರಿದಂತೆ ಕೊಟ್ಟೂರು ಹೋಬಳಿ 31 ಮನೆಗಳು ಭಾಗಶಃ ಜಖಂ ಗೊಂಡಿವೆ. ಹ್ಯಾಳ್ಯಾ ಮಲ್ಲನಾಯಕನಹಳ್ಳಿ ಮತ್ತು ಕೊಟ್ಟೂರು ಪಟ್ಟಣದಲ್ಲಿ ಹಾಳಾದ ಮನೆಗಳನ್ನು ಪರಿಶೀಲಿಸುವ ಪ್ರಕ್ರಿಯೆಗೆ ಕಂದಾಯ ಅಧಿಕಾರಿಗಳು ತೊಡಗಿಸಿಕೊಂಡಿದ್ದಾರೆ. ಮಳೆಯ ಆರ್ಭಟದಿಂದಾಗಿ ಸುತ್ತ ಮುತ್ತಲಿನ ಹಳ್ಳಗಳಿಂದ ಕೊಟ್ಟೂರು ಕೆರೆಗೆ ವ್ಯಾಪಕ ಪ್ರಮಾಣದ ನೀರು ಬರತೊಡಗಿದೆ.
ಗೊಬ್ಬರ ಖರೀದಿ ಜೋರು
ಹಗರಿಬೊಮ್ಮನಹಳ್ಳಿ: ತಾಲೂಕಿನಾದ್ಯಂತ ಮಂಗಳವಾರ ಬೆಳಗಿನ ಜಾವ ಭರ್ಜರಿ ಮಳೆ ಸುರಿದಿದೆ.
ಪಟ್ಟಣದ ರಸಗೊಬ್ಬರ, ಬಿತ್ತನೆಬೀಜ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿತ್ತು. ಇತ್ತ ತಾಲೂಕಿನ ಕೊಗಳಿ ಕಂದಾಯ ವ್ಯಾಪ್ತಿಯಲ್ಲಿ ಅತಿ ಹೆಚ್ಚು 65.2 ಮಿ.ಮೀ.ರಷ್ಟು ಪ್ರಮಾಣದಲ್ಲಿ ಮಳೆ ಸುರಿದಿದೆ.
ಉಳಿದಂತೆ ಮಾಲ್ವಿ ಸುತ್ತಮುತ್ತ 35.0 ಹಾಗೂ ಹಂಪಾಸಾಗರ ವ್ಯಾಪ್ತಿಯಲ್ಲಿ 6.2 ಮತ್ತು ತಂಬ್ರಹಳ್ಳಿ ವ್ಯಾಪ್ತಿಯಲ್ಲಿ 8.2 ಮಿ.ಮೀ.ನಷ್ಟು ಮಳೆಯಾಗಿದೆ. ಕನ್ನಿಹಳ್ಳಿ ಗ್ರಾಮದಲ್ಲಿ ಐದಾರು ಮನೆಗಳು ಜಖಂಗೊಂಡಿದ್ದು ಬಿಟ್ಟರೆ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

