ಬಹುಮಾನ ವಿತರಣೆ
ಬಳ್ಳಾರಿ: ಸ್ಥಳೀಯ ರೇಡಿಯೋ ಪಾರ್ಕ್ನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಈಚೆಗೆ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಶಾಲೆಯ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಗುರುವಾರ ಜರುಗಿತು. ಕ್ರೀಡಾಕೂಟದಲ್ಲಿ ಚಾಂಪಿಯನ್ಶಿಪ್ ಪ್ರಶಸ್ತಿ ಪಡೆದ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಕೆ.ರಾಮು ಹಾಗೂ ವಿಜೇತ ವಿದ್ಯಾರ್ಥಿಗಳಿಗೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಸುರೇಶ್ ಹಾಗೂ ಸಿಬ್ಬಂದಿ ಬಹುಮಾನ ವಿತರಿಸಿ ಅಭಿನಂದಿಸಿದರು.
ಈ ವೇಳೆ ಶಾಲೆಯ ಮುಖ್ಯ ಶಿಕ್ಷಕ ಡಿ. ಮೋಹನದಾಸ್, ಸುರೇಶ್ ಕುಮಾರ್, ಬಿ. ಸೋಮು, ವೆಂಕಟೇಶ, ನಾಗರಾಜ. ಸಿಆರ್ಪಿ ತಿಮ್ಮಪ್ಪ, ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.
ಮೈಸೂರು- ವಾರಾಣಸಿ ರೈಲಿಗೆ ಸ್ವಾಗತ
ಬಳ್ಳಾರಿ: ಮೈಸೂರಿನಿಂದ ವಾರಾಣಸಿಗೆ ಬಳ್ಳಾರಿ ಮಾರ್ಗವಾಗಿ ವಾರಕ್ಕೊಮ್ಮೆ ಸಂಚರಿಸುವ ವಿಶೇಷ ರೈಲು ಮಂಗಳವಾರ ಸಂಜೆ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಕನ್ನಡ ಕ್ರಾಂತಿ ದಳ ಸಂಘಟನೆ ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿದರು. ಸಂಘಟನೆಯ ಕಾರ್ಯಕರ್ತರು ರೈಲಿಗೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ಪ್ರಯಾಣಿಕರಿಗೆ, ರೈಲ್ವೆ ಇಲಾಖೆ ಸಿಬ್ಬಂದಿಗೆ ಸಿಹಿ ವಿತರಿಸುವ ಮೂಲಕ ಸಂತಸ ಹಂಚಿಕೊಂಡರು. ಮೈಸೂರಿನಿಂದ ವಾರಾಣಸಿಗೆ ನೇರ ರೈಲ್ವೆ ಸೇವೆ ಕಲ್ಪಿಸಿಕೊಟ್ಟ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಡಿ.ವಿ. ಸದಾನಂದಗೌಡ ಅವರಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕನ್ನಡ ಕ್ರಾಂತಿ ದಳದ ಜಿಲ್ಲಾಧ್ಯಕ್ಷ ದರೂರು ಶಾಂತನಗೌಡ, ನಗರ ಘಟಕದ ಅಧ್ಯಕ್ಷ ಕುಂದಾಪುರ ನಾಗರಾಜ್, ಮುಖಂಡ ಜಿ.ವಿ. ನಾಯ್ಡು, ಡಾ.ಶ್ರೀನಿವಾಸ, ಸುರೇಶ್, ಅನೆಗಂಗಣ್ಣ, ತಿಮ್ಮನಗೌಡ, ಮಂಜುನಾಥ್ ಗೌಡ, ರಂಗನಾಥ್, ರಾಜಶೇಖರಗೌಡ, ದರೂರು ಲಿಂಗನಗೌಡ, ಶಾನವಾಸಪುರ ಶೇಖರಗೌಡ, ನಾಗೇಂದ್ರ ಇದ್ದರು.
ರು. 1.13 ಲಕ್ಷ ಮೌಲ್ಯದ ವಸ್ತು ಕಳ್ಳತನ: ದೂರು
ಬಳ್ಳಾರಿ: ಬೀಗ ಹಾಕಿದ್ದ ಮನೆಯ ಹಿಂದಿನ ಬಾಗಿಲಿನ ಕೊಂಡಿ ಮುರಿದು ಮನೆಯಲ್ಲಿದ್ದ ರು. 1.13 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಇಲ್ಲಿನ ಕುವೆಂಪು ನಗರದಲ್ಲಿ ನಡೆದಿದೆ. ವಿಷ್ಣುವರ್ಧನ್ ಪಾರ್ಕ್ ಸಮೀಪದಲ್ಲಿ ಬ್ಯಾಂಕಿನ ನಿವೃತ್ತ ನೌಕರ ಕೆ. ಹುಲುಗಪ್ಪ ಮೂರು ತಿಂಗಳ ಹಿಂದೆ ರಾಯಚೂರಿನಲ್ಲಿರುವ ತಮ್ಮ ಮಗನ ಮನೆಗೆ ಕುಟುಂಬ ಸಮೇತ ಹೋಗಿದ್ದರು. ಆದರೆ ಗುರುವಾರ ಅವರ ಮನೆಯ ಹಿಂದಿನ ಬಾಗಿಲು ತೆಗೆದಿರುವುದನ್ನು ಅವರ ಸಂಬಂಧಿಗಳು ನೋಡಿದಾಗ, ಹುಲುಗಪ್ಪ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಯಲ್ಲಿದ್ದ 4 ತೊಲೆ ಬಂಗಾರ, 2 ಕೆಜಿ ಬೆಳ್ಳಿ ಪೂಜಾ ಸಾಮಾಗ್ರಿಗಳು, 25 ಸಾವಿರ ನಗದು ಸಹಿತ ರು. 1.13 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಘಟನಾ ಸ್ಥಳಕ್ಕೆ ನಗರ ಡಿವೈಎಸ್ಪಿ ಮುರುಗಣ್ಣನವರ್, ಕೌಲ್ಬಜಾರ್ ಸಿಪಿಐ ಗೋಳಸಂಗಿ, ಅಪರಾಧ ದಳದ ಪಿಎಸ್ಐ ಯೇಸುರತ್ನಂ ಭೇಟಿ ನೀಡಿ ಪರಿಶೀಲಿಸಿದರು. ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

