ಗ್ರಾಪಂಗೆ ಚನ್ನಮ್ಮ ಅವಿರೋಧ ಆಯ್ಕೆ
ಹೂವಿನಹಡಗಲಿ: ತಾಲೂಕಿನ ನವಲಿ ಗ್ರಾಪಂ ಉಪಾಧ್ಯಕ್ಷರಾಗಿ ಎಚ್. ಚನ್ನಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಹಾಗೂ ತಾಪಂ ಇಒ ಎಚ್.ಎನ್. ತಿಮ್ಮಪ್ಪ ತಿಳಿಸಿದ್ದಾರೆ. ಮೂರು ತಿಂಗಳ ಹಿಂದೆ ಉಪಾಧ್ಯಕ್ಷರಾಗಿದ್ದ ಜಿ. ಗೋಣೆಮ್ಮ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ನವಲಿ ಗ್ರಾಮ ಪಂಚಾಯ್ತಿಯಲ್ಲಿ 10 ಜನ ಸದಸ್ಯರನ್ನು ಹೊಂದಿದ್ದು, ಎಸ್ಇ ಮೀಸಲು ಸ್ಥಾನಕ್ಕೆ ಉಪಾಧ್ಯಕ್ಷ ಸ್ಥಾನ ಮೀಸಲಿರುವ ಕಾರಣ ಒಂದೇ ನಾಮಪತ್ರ ನೀಡಿದ್ದರು. ಕಾರಣ ಎಚ್. ಚನ್ನಮ್ಮ ಅವಿರೋಧ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಲಾಗಿದೆ ಎಂದರು. ಗ್ರಾಪಂ ಅಧ್ಯಕ್ಷ ಎಸ್. ವೀರಭದ್ರಗೌಡ, ಚುನಾವಣಾಧಿಕಾರಿ ಹಾಗೂ ತಾಪಂ ಇಒ ಎಚ್.ಎನ್. ತಿಮ್ಮಪ್ಪ, ಪಶು ಸಂಗೋಪನಾ ಇಲಾಖೆ ಸಹಯಾಕ ನಿರ್ದೇಶಕ ಡಾ. ರಂಗಪ್ಪ, ಗ್ರಾಪಂ ಪಿಡಿಒ ಶಶಿಕಲಾ ಕೊಪ್ಪದ್ ಇದ್ದರು.
ಲಾರಿ ಡಿಕ್ಕಿ: ಬಾಲಕಿ ಸಾವು
ಬಳ್ಳಾರಿ: ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕಿಯೊಬ್ಬಳು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ವಿ.ಟಿ. ಕಾಳೆ ಕ್ಯಾಂಪಿನಲ್ಲಿ ನಡೆದಿದೆ. ಪಲ್ಲವಿ (5) ಮೃತ ಬಾಲಕಿ. ಮಂಗಳವಾರ ಸಂಜೆ ಪಲ್ಲವಿ ರಸ್ತೆ ದಾಟುತ್ತಿದ್ದಾಗ ಲಾರಿಯು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ತಹಸೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ
ಹಗರಿಬೊಮ್ಮನಹಳ್ಳಿ: ಇಲ್ಲಿನ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಇಲ್ಲಿನ ಕಚೇರಿಗೆ ಭೇಟಿ ನೀಡಿದ ಶುಕ್ಲಾ, ಕಚೇರಿಯಲ್ಲಿ ಸ್ವಚ್ಛತೆ, ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರನ್ನು ವಿನಾಕಾರಣ ಕಚೇರಿಗೆ ಅಲೆದಾಡಿಸುವುದು ತಪ್ಪು. ಅವರ ಸಮಸ್ಯೆಗಳಿಗೆ ಸಮರ್ಪಕವಾದ ಉತ್ತರ ನೀಡುವ ಮೂಲಕ ಅವರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವಂತೆ ಸೂಚಿಸಿದರು. ಇದಕ್ಕೂ ಮುನ್ನ ಹೂವಿನಹಡಗಲಿಯಿಂದ ಆಗಮಿಸಿದ್ದ ಜಿಲ್ಲಾಧಿಕಾರಿಗಳು ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ಪಟ್ಟಣದಲ್ಲಿ ಗುರುತಿಸಿರುವ ಸ್ಥಳ ಪರಿಶೀಲಿಸಿದರು. ಮನವಿ: ಸ್ಥಳೀಯ ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಸೇವಾಸಮಿತಿ ಪದಾಧಿಕಾರಿಗಳ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಪಟ್ಟಣದ 100 ಹಾಸಿಗೆಗಳ ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು, ತಾಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ಮನವಿ ಅರ್ಪಿಸಿದರು. ಸಮಿತಿಯ ಜಿಲ್ಲಾಧ್ಯಕ್ಷ ಎಚ್.ಎಂ. ಚನ್ನವೀರ, ಮುಖಂಡ ಫೋಟೊ ಆನಂದ್, ಕೆ. ಮಹೇಶ, ಚಂದ್ರಶೇಖರ ಇತರರು ಇದ್ದರು.
ವಿಕಲಚೇತನರ ಸಮಸ್ಯೆಗೆ ಸ್ಪಂದಿಸಿ: ಪ್ರತಿಭಟನೆ, ಮನವಿ
ಹೊಸಪೇಟೆ: ವಿಕಲಚೇತನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಒತ್ತಾಯಿಸಿ ಹೊಸಪೇಟೆ ತಾಲೂಕು ಗ್ರಾಮೀಣ ವಿಕಲಚೇತನರ ಸಂಘದ ಪದಾಧಿಕಾರಿಗಳು ಮಂಗಳವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ವಿಕಲಚೇತನರ ಸಂಘದ ಮುಖಂಡ ಎನ್. ವೆಂಕಟೇಶ್ ಮಾತನಾಡಿ, ತಾಲೂಕಿನಾದ್ಯಂತ ವಿಕಲಚೇತನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ವಿಕಲಚೇತನರ ಸಮಸ್ಯೆಗಳಿಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ವಿಕಲಚೇತನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ವಿಕಲಚೇತನ ಸಂಘಟನೆ ಮುಖಂಡ ಜಿ. ಮುಕ್ಕಣ್ಣ, ಕೆ.ಜಿ. ವೆಂಕಟೇಶ್, ಜಿ. ರಾಜಶೇಖರ್, ಜಿ. ಅಂಜಿನಿ, ಪಾಂಡುನಾಯ್ಕ, ಹುಲುಗಪ್ಪ, ಶಾಮೀಮ್ ಬಾನು, ಸಮೀನಾ ಕೌಸರ್, ಚಾಂದ್ಬೀ, ಖಾಜಾಬನ್ನಿ, ಪಿ.ಕೆ. ಹಳ್ಳಿ ವೆಂಕಟೇಶ್, ಬಸವರಾಜ, ಲಕ್ಷ್ಮೀ ಇದ್ದರು.
ಗುರು ಪೂರ್ಣಿಮೆ ಆಚರಣೆ
ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದ ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜಿನಲ್ಲಿ ಗುರು ಪೂರ್ಣಿಮೆ ಆಚರಿಸಲಾಯಿತು. ಎಸ್. ಸೋಮನಗೌಡರು ಮಾತನಾಡಿ, ಹಬ್ಬಗಳ ಆಚರಣೆಯಲ್ಲಿ ವಿಶ್ವದಲ್ಲಿಯೇ ಭಾರತಕ್ಕೆ ವಿಶೇಷವಾದ ಸ್ಥಾನವಿದೆ. ಗುರುಗಳನ್ನು ಗೌರವಿಸುವುದು ಅವರನ್ನು ನಿತ್ಯ ಸ್ಮರಣೆಮಾಡಿಕೊಳ್ಳುವ ವಿಚಾರದಲ್ಲಿ ನಮ್ಮ ದೇಶ ಇತರೆ ದೇಶಗಳಿಗೆ ಮಾದರಿಯಾಗಿದೆ ಎಂದರು. ಪ್ರಾಚಾರ್ಯ ಆರ್.ಎಂ. ಅಂಗಡಿ ಅಧ್ಯಕ್ಷತೆವಹಿಸಿದ್ದರು. ಸ್ವಾತಿ ಸಂಗಡಿಗರು ಪ್ರಾರ್ಥಿಸಿದರು.
ಮೂಲಸೌಲಭ್ಯಕ್ಕೆ ಒತ್ತಾಯಿಸಿ ಮನವಿ
ಬಳ್ಳಾರಿ: ಇಲ್ಲಿನ ಸಿರುಗುಪ್ಪ ರಸ್ತೆ ಶ್ರೀನಿವಾಸ ನಗರಕ್ಕೆ ಮೂಲಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಕನ್ನಡ ಸೇನೆ ಕರ್ನಾಟಕ ಕಾರ್ಯಕರ್ತರು ಪಾಲಿಕೆ ಆಯುಕ್ತ ಸಿ. ಚಿಕ್ಕಣ್ಣರಿಗೆ ಸೋಮವಾರ ಮನವಿ ಸಲ್ಲಿಸಿದರು. ಶ್ರೀನಿವಾಸ ನಗರದಲ್ಲಿ 25 ವರ್ಷಗಳಿಂದ ಜನರು ವಾಸಿಸುತ್ತಿದ್ದಾರೆ. ಈ ವರೆಗೂ ಹೊರಚರಂಡಿ, ಒಳಚರಂಡಿ, ಉತ್ತಮ ರಸ್ತೆ, ಬೀದಿ ದೀಪ, ಕುಡಿವ ನೀರು ಸೇರಿ ಯಾವುದೇ ನಾಗರಿಕ ಸೌಲಭ್ಯಗಳಿಲ್ಲ. ಈ ಬಗ್ಗೆ ಸಂಬಂಧಪಟ್ಟ ಪಾಲಿಕೆ ಸದಸ್ಯರಲ್ಲಿ ಹಲವು ಬಾರಿ ಗಮನ ಸೆಳೆದರೂ, ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಶ್ರೀನಿವಾಸ ನಗರಕ್ಕೆ ಮೂಲಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳಬೇಕು ಎಂದು ಸೇನೆಯ ಹೈ-ಕ ಉಪಾಧ್ಯಕ್ಷ ಕೆ. ಎರ್ರಿಸ್ವಾಮಿ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಉದ್ಯೋಗ ಮೇಳ ಇಂದು
ಬಳ್ಳಾರಿ: ಕೌಶಲ್ಯ ಆಯೋಗ, ಉದ್ಯೋಗ ಮತ್ತು ತರಬೇತಿ ಇಲಾಖೆ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಇವರ ಆಶ್ರಯದಲ್ಲಿ ಜು. 16ರಂದು ಜಿಲ್ಲಾಮಟ್ಟದ ಮಿನಿ ಉದ್ಯೋಗ ಮೇಳ ನಡೆಯಲಿದೆ ಎಂದು ಉದ್ಯೋಗಾಧಿಕಾರಿ ಹಟ್ಟೆಪ್ಪ ತಿಳಿಸಿದರು.
ವ್ಯಕ್ತಿ ಕಾಣೆ: ದೂರು
ಬಳ್ಳಾರಿ: ಸ್ಥಳೀಯ ಕೌಲ್ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಕಿವುಡ ಮತ್ತು ಮೂಗ ವ್ಯಕ್ತಿಯೊಬ್ಬ ಕಾಣೆಯಾಗಿರುವ ಘಟನೆ ಜರುಗಿದೆ. ಆಂಜಿನೇಯಲು (28) ಕಾಣೆಯಾದ ವ್ಯಕ್ತಿ. ಜೂನ್ 7 ರಿಂದ ನಾಪತ್ತೆಯಾಗಿದ್ದು, ಈತನು ಕಿವುಡ ಮತ್ತು ಮೂಗರ ಸಭೆಗೆ ಹಾಜರಾಗಲು ಬೆಂಗಳೂರಿಗೆ ಹೋಗಿ ಬರುವುದಾಗಿ ತಿಳಿಸಿ ಹೋದವನು ಮರಳಿ ಬಂದಿಲ್ಲ ಎಂದು ಈತನ ಪತ್ನಿ ಮಾರೆಕ್ಕ ಠಾಣೆಗೆ ದೂರು ನೀಡಿದ್ದಾರೆ. 5.5 ಎತ್ತರ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಯಾರಿಗಾದರೂ ಮಾಹಿತಿ ಇದ್ದಲ್ಲಿ ಸಮೀಪದ ಠಾಣೆ ಮಾಹಿತಿ ನೀಡಬೇಕೆಂದು ತಿಳಿಸಲಾಗಿದೆ.
ಬಾಲಕ ನಾಪತ್ತೆ
ಬಳ್ಳಾರಿ: ಬೆಂಗಳೂರಿನಿಂದ ಬಳ್ಳಾರಿಗೆ ಪೊಲೀಸ್ ಬೆಂಗಾವಲಿನೊಂದಿಗೆ ಬಂದ ಮಾರುತಿ (12) ಎಂಬ ಬಾಲಕ ಮಂಗಳವಾರ ಕಾಣೆಯಾಗಿದ್ದಾನೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮಾರುತಿಯನ್ನು ಬೆಂಗಳೂರಿನಿಂದ ಬಳ್ಳಾರಿಗೆ ಬಿಡುವಂತೆ ಆದೇಶ ನೀಡಿತ್ತು. ಬೆಂಗಳೂರಿನ ವಿಜಯನಗರ ಠಾಣೆಯ ಮುಖ್ಯಪೇದೆ ಎಂ.ಎಸ್. ಗೋವಿಂದರಾವ್ ಮತ್ತು ಕಾಟನ್ ಪೇಟೆಯ ಪೊಲೀಸ್ ಪೇದೆ ಜು. 13ರಂದು ಬೆಳಗ್ಗೆ ಹಂಪಿ ಎಕ್ಸ್ಪ್ರೆಸ್ ರೈಲಿನಿಂದ ಬಂದು ಆಟೋ ಕರೆ ತರಲು ಹೋದಾಗ ಮಾರುತಿ ಕಾಣೆಯಾಗಿದ್ದಾನೆ ಎಂದು ದೂರು ನೀಡಲಾಗಿದೆ. ಈತನ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ತಿಳಿಸಲಾಗಿದೆ.
ಶಂಕಿತ ಡೆಂಘೀಗೆ ಬಾಲಕ ಬಲಿ
ಹೂವಿನಹಡಗಲಿ: ತಾಲೂಕಿನ ಬ್ಯಾಲಹುಣ್ಸಿ ಗ್ರಾಮದಲ್ಲಿ ಬಾಲಕನೊಬ್ಬ ಶಂಕಿತ ಡೆಂಘೀ ಜ್ವರಕ್ಕೆ ಬಳಲಿ ಸಾವನ್ನಪ್ಪಿರುವ ಘಟನೆ ಸೋಮವಾರ ಜರುಗಿದೆ. ಲಿಂಗರಾಜ ಮುಂಡರಗಿ (4) ಡೆಂಘೀಗೆ ಬಲಿಯಾದ ಬಾಲಕ. ಶನಿವಾರದಿಂದ ಲಿಂಗರಾಜ ಜ್ವರದಿಂದ ಬಳಲುತ್ತಿದ್ದ. ದಾವಣಗೆರೆ ಎಸ್ಎಸ್ ಆಸ್ಪತ್ರೆಗೆ ಬಾಲಕನನ್ನು ದಾಖಲಿಸಲಾಗಿತ್ತು. ಆದರೆ ಡೆಂಘೀ ಜ್ವರ ತೀವ್ರವಾಗಿರುವ ಹಿನ್ನೆಲೆಯಲ್ಲಿ ಬಾಲಕ ಮೃತಪಟ್ಟಿದ್ದಾನೆ. ದಾವಣಗೆರೆ ಎಸ್ಎಸ್ ಆಸ್ಪತ್ರೆಯ ವೈದ್ಯರು ಪರೀಕ್ಷೆ ಮಾಡಿ ಡೆಂಘೀ ಜ್ವರದಿಂದ ಮಗು ಮೃತಪಟ್ಟಿದೆ ಎಂದು ಧೃಡಪಡಿಸುವ ಎಲ್ಲ ದಾಖಲೆಗಳನ್ನು ನೀಡಿದ್ದಾರೆ ಎಂದು ಬಾಲಕರು ಪೋಷಕರು ತಿಳಿಸಿದ್ದಾರೆ. ಗ್ರಾಮದ ಸುತ್ತಮುತ್ತಲಿರುವ ಗುಂಡಿಗಳಲ್ಲಿ ಮಳೆ ನೀರು ಹಾಗೂ ಚರಂಡಿ ನೀರು ಸಂಗ್ರಹವಾಗುತ್ತಿದ್ದು, ಕಲುಷಿತ ನೀರು ಹರಿದು ಹೋಗಲು ದಾರಿ ಇಲ್ಲದೆ ಸೊಳ್ಳೆಗಳು ಹೆಚ್ಚಾಗಿವೆ. ಗ್ರಾಮದಲ್ಲಿ ಸ್ವಚ್ಛತೆ ಇಲ್ಲದೆ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಗ್ರಾಪಂ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕೆಂದು ಮುಖಂಡ ಲಕ್ಷ್ಮಣ್ ಒತ್ತಾಯಿಸಿದ್ದಾರೆ.
ನಡುರಾತ್ರಿ ಪೊಲೀಸ್ ಠಾಣೆಯಲ್ಲಿ ಪ್ರೇಮಿಗಳ ಮದುವೆ
ಕನಕಗಿರಿ: ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ವೀರಣ್ಣ ಮಗಿ ಹಾಗೂ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಸೋಮವಾರ ತಡರಾತ್ರಿ ಸತಿ-ಪತಿಗಳಾಗಿದ್ದಾರೆ. ಮಹೇಶ ತೆಗ್ಗಿನಮನಿ (24) ಹಾಗೂ ರಶ್ಮಿ ಬೊಂದಾಡೆ (19) ಇಬ್ಬರೂ ಗಿಣಿಗೇರಾ ಪಕ್ಕದ ಬೇವಿನಹಳ್ಳಿ ಗಾಳೆಮ್ಮ ದೇವಸ್ಥಾನದಲ್ಲಿ ಶನಿವಾರ ವಿವಾಹವಾಗಿದ್ದರು. ಆದರೆ, ಹುಡುಗಿಯ ಪಾಲಕರು ಈ ವಿವಾಹ ತಿರಸ್ಕರಿಸಿ, ತಮ್ಮ ಮಗಳನ್ನು ಮನೆಗೆ ಕರೆದೊಯ್ದಿದ್ದರು. ಪ್ರಿಯಕರ ಮಹೇಶ್ ಕನಕಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದ. ಪಿಎಸ್ಐ ಹಾಗೂ ಗ್ರಾಮದ ಹಿರಿಯರು ರಶ್ಮಿಯ ಪಾಲಕರಿಗೆ ಸೋಮವಾರ ಸಂಜೆ 5 ಗಂಟೆ ತನಕ ಮನವೊಲಿಕೆಗೆ ಸಮಯ ನೀಡಿದ್ದರು. ತನ್ನ ಪ್ರಿಯಕರನನ್ನು ಬಿಟ್ಟುಕೊಡಲು ರಶ್ಮಿ ಒಪ್ಪದ ಕಾರಣ, ಆಕೆಯನ್ನು ಠಾಣೆಗೆ ಕರೆಸಿ, ಮಹೇಶ್ ಜತೆ ಮದುವೆ ಮಾಡಿಸಲಾಯಿತು. ಹಿರಿಯರಾದ ಗಂಗಾಧರಸ್ವಾಮಿ ಕಲುಬಾಗಿಲಮಠ, ಅಮರಗುಂಡಪ್ಪ ತೆಗ್ಗಿನಮನಿ, ಅಂಬೋಜಿರಾವ್ ಬೊಂದಾಡೆ, ಅನಿಲ ಬಿಜ್ಜಳ, ಶರಣಪ್ಪ ಭಾವಿಕಟ್ಟಿ, ವೀರೇಶ ಕಡಿ, ನೀಲಕಂಠಗೌಡ ಮಾಲಿಪಾಟೀಲ್, ಚಂದ್ರೇಗೌಡ, ಪೊಲೀಸ್ ಪೇದೆಗಳಾದ ಬಸವರಾಜ ಅಮೀನಗಡ, ಸಿದ್ದಯ್ಯ ಕುಕನೂರು, ಸಿದ್ರಾಮಪ್ಪ, ಮಂಜುನಾಥ, ಪ್ರದೀಪಕುಮಾರ ಇದ್ದರು.
ಅಧಿಕಾರ ಸ್ವೀಕಾರ
ಹೂವಿನಹಡಗಲಿ: ಬೀದರ್ ಜಿಲ್ಲಾಧಿಕಾರಿಗಳ ಕಚೇರಿಯಿಂದ ವರ್ಗಾವಣೆಗೊಂಡಿರುವ ಏಜಾಜ್ ಬೇಗ ಹೂವಿನಹಡಗಲಿ ತಹಸೀಲ್ದಾರ್ರಾಗಿ ನೇಮಕಗೊಂಡಿದ್ದಾರೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೀದರ್ ಜಿಲ್ಲಾಧಿಕಾರಿಗಳ ಕಚೇರಿಗೆ ವರ್ಗಾವಣೆಯಾಗಿದ್ದ ಏಜಾಜ್ ಬೇಗ್ ನೂತನ ತಹಸೀಲ್ದಾರ್ರಾಗಿ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಹಿಂದಿನ ತಹಸೀಲ್ದಾರ್ ವಿಶ್ವಜಿತ್ ಮೆಹತಾ ಬೀದರ್ ಜಿಲ್ಲೆಗೆ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಇಲ್ಲಿನ ತಹಸೀಲ್ದಾರ್ ಹುದ್ದೆಗೆ ಏಜಾಜ್ ಬೇಗ್ ವರ್ಗಾವಣೆಯಾಗಿದ್ದಾರೆ.
ಬಳ್ಳಾರಿ: ರು. 50ರ ಆಸೆಗೆ ರು. 6.83 ಲಕ್ಷ ಕಳಕೊಂಡ!
ಬಳ್ಳಾರಿ: ರಸ್ತೆಯಲ್ಲಿ ಬಿದ್ದ ರು. 10 ಮುಖಬೆಲೆಯ ಐದು ನೋಟು ಹೆಕ್ಕಲು ಹೋಗಿ ಹಲಕುಂದಿ ಗ್ರಾಮದ ಪಾಲಾಕ್ಷಿ ಎಂಬುವರು ರು. 6.83 ಲಕ್ಷ ಕಳೆದುಕೊಂಡ ವಿಲಕ್ಷಣ ಘಟನೆ ಬಳ್ಳಾರಿಯ ಅನಂತಪುರ ರಸ್ತೆಯಲ್ಲಿ ಮಂಗಳವಾರ ನಡೆದಿದೆ. ಆಂಧ್ರ ಪ್ರದೇಶದ ಓಬಳಾಪುರಂ ಪೆಟ್ರೋಲ್ ಬಂಕ್ ಮಾಲೀಕರಾಗಿರುವ ಪಾಲಾಕ್ಷಿ ಬ್ಯಾಂಕ್ಗೆ ಹಣ ತುಂಬಲು ಸ್ಕಾರ್ಪಿಯೋ ವಾಹನದಲ್ಲಿ ರು. 6.83 ಲಕ್ಷ ತಂದಿದ್ದರು. ಅನಂತಪುರ ರಸ್ತೆಯ ಐಸಿಐಸಿಐ ಬ್ಯಾಂಕ್ನ ಚೆಕ್ ನಗದೀಕರಿಸಲು ಹೋದಾಗ ಅವರು ತಮ್ಮ ವಾಹನದಲ್ಲಿ ಹಣ ಇಟ್ಟುಕೊಂಡು ಫೋನ್ನಲ್ಲಿ ಮಾತನಾಡುತ್ತಿದ್ದರು. ಹೊರಗಡೆ ನಿಂತಿದ್ದ ವ್ಯಕ್ತಿಯೊಬ್ಬ ಟೈರ್ ಪಕ್ಕ ಹಣ ಬಿದ್ದಿದೆ ಎಂದು ಸನ್ನೆ ಮಾಡಿ ಹೇಳಿದ. ಪಾಲಾಕ್ಷಿ ಆ ಹಣ ಎತ್ತಿಕೊಳ್ಳಲು ಹೋದಾಗ ಸ್ಕಾರ್ಪಿಯೋದಲ್ಲಿದ್ದ ರು. 6.83 ಲಕ್ಷ ಎಗರಿಸಿ ಕಳ್ಳ ಪರಾರಿಯಾಗಿದ್ದಾನೆ. ವಾಹನದಲ್ಲಿ ಹಣ ಇಲ್ಲದ್ದನ್ನು ಕಂಡು ಗಾಬರಿಗೊಂಡ ಪಾಲಾಕ್ಷಿ ಗಾಂಧಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗಮನ ಬೇರೆಡೆಗೆ ಸೆಳೆದು ಹಣ ಎಗರಿಸುವ ಘಟನೆಗಳು ಆಗಾಗ ನಡೆಯುತ್ತಿದ್ದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಕೆಲ ತಿಂಗಳ ಹಿಂದಷ್ಟೇ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ನ ರು. 30 ಲಕ್ಷ ಇದೇ ರೀತಿ ನಾಪತ್ತೆಯಾಗಿತ್ತು. ಇಂಥ ಪ್ರಕರಣಗಳು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿವೆ. ಎಸ್ಪಿ ಡಾ ಚೇತನ್ ಸಿಂಗ್ ರಾಥೋಡ್ ಮಾತನಾಡಿ, ಇಂಥ ಕಳ್ಳರು ಬ್ಯಾಂಕ್ಗಳ ಸಮೀಪದಲ್ಲೇ ಇರುತ್ತಾರೆ. ಬ್ಯಾಂಕ್ಗೆ ಹಣ ಕಟ್ಟಲು ಹೋಗುವಾಗ, ಡ್ರಾ ಮಾಡಿಕೊಂಡು ಬರುವಾಗ ತೀರಾ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

