ಬಳ್ಳಾರಿ

ಮಳೆ ಬಂದರೂ ತಪ್ಪದ ಗೋಳು

Published On :

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜು. 12
ಹಳ್ಳಿಗಳ ಉದ್ಧಾರವನ್ನೇ ಮೂಲಮಂತ್ರ ಎಂದು ಜಪಿಸುವ ಸರ್ಕಾರ ಉದ್ಯೋಗ ಖಾತ್ರಿಯಂತಹ ಯೋಜನೆಗಳಿಂದ ಗ್ರಾಮೀಣಾಭಿವೃದ್ಧಿಗೆ ಕೋಟಿ ಕೋಟಿ ಹಣ ವೆಚ್ಚ ಮಾಡಿದರೂ ಅಭಿವೃದ್ಧಿ ಮಾತ್ರ ಶೂನ್ಯ. ಮಳೆ ಬಂದಾಗ ಜನರ ಕಷ್ಟ ಕೇಳೋರಿಲ್ಲ, ಮಂತ್ರಕ್ಕಿಂತ ಉಗುಳೆ ಜಾಸ್ತಿ ಎಂಬಂತಾಗಿದೆ.
ಹೌದು, ತಾಲೂಕಿನ ಕರಡಿ ಅಯ್ಯನಹಳ್ಳಿ ಗ್ರಾಮಸ್ಥರ ಬದುಕು ನಿಜಕ್ಕೂ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ರೈತರ, ಕೂಲಿ ಕಾರ್ಮಿಕರ ಮನೆಯಲ್ಲಿನ ದವಸ ಧಾನ್ಯ ಮಳೆ ನೀರಿಗೆ ಹಾನಿಯಾಗಿವೆ. ಮಳೆ ಬಂದಾಗ ಕಾಡಿನಿಂದ ನಾಡಿಗೆ ನುಗ್ಗುವ ಮಳೆ ನೀರು ಬೇರೆಡೆ ಸಾಗಲು ದಾರಿ ಕಾಣದೆ ಮಧ್ಯದಲ್ಲಿ ಗುಂಡಿಯಾಗಿ ನಿಂತು ಸಾಂಕ್ರಾಮಿಕ ರೋಗಗಳಿಗೆ ಆಹ್ವಾನಿಸುತ್ತಿದೆ.
ಕರಡಿ ಅಯ್ಯನಹಳ್ಳಿ ಗ್ರಾಮದಲ್ಲಿ ಮಳೆ ಬಂದಾಗ ಪ್ರವಾಹದಂತೆ ಮಳೆ ನೀರು ಮನೆಗಳಿಗೆ ನುಗುತ್ತಿದೆ. ಇದರಿಂದ ತಿಂಗಳುಗಟ್ಟಲೇ ಜನಜೀವನ ಅಸ್ತವ್ಯಸ್ತವಾಗುತ್ತದೆ. ಹಳ್ಳಿಗಳಲ್ಲಿ ಮಳೆ ಬಂದರೆ ಸಂತೋಷ ಪಡುವ ಜನರೇ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿನ ಜನರಿಗೆ ಮಳೆ ನರಕಯಾತನೆ ನೆನಪಿಸುತ್ತಿದೆ.
ಮಾಗಳ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಕರಡಿ ಅಯ್ಯನಹಳ್ಳಿ ಗ್ರಾಮಸ್ಥರ 30 ವರ್ಷಗಳ ಸಮಸ್ಯೆಗೆ ಯಾರು ಸ್ಪಂದಿಸಿಲ್ಲ. ಕೇವಲ ಬೊಗಸೆ ತುಂಬಾ ಭರವಸೆಗಳನ್ನು ಕೇಳಿ ರೋಸಿ ಹೋಗಿದ್ದೇವೆ. ಈ ಜನಪ್ರತಿನಿಧಿಗಳ ಭರವಸೆಗಳಿಂದ ನಮ್ಮ ಸಮಸ್ಯೆಗೆ ಇನ್ನು ಪರಿಹಾರ ಸಿಕ್ಕಿಲ್ಲ. ಎಲ್ಲರಿಗೂ ಮನವಿ ಮಾಡಿಕೊಂಡು ಸಾಕಾಗಿದೆ ಎಂದು ಗ್ರಾಮಸ್ಥರು ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ.
ಗ್ರಾಮದೊಳಗೆ ಕಳೆದ 25-30 ವರ್ಷಗಳಿಂದ ಮಳೆ ನೀರು ನುಗ್ಗಿ ಮನೆಗಳ ಗೋಡೆಗಳು ನೆನೆದು  ಕುಸಿಯುವ ಹಂತದಲ್ಲಿವೆ. ಇದರಿಂದ ಜೀವವನ್ನು ಕೈಯಲ್ಲಿ ಹಿಡಿದು ಬದುಕಬೇಕಾಗಿದೆ. ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅಧಿಕಾರಾವಧಿಯಲ್ಲಿ ಈ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ಕಂಡು ಹಿಡಿಯುವ ಉದ್ದೇಶದಿಂದ ಕಾಮಗಾರಿಗೆ ಸರ್ವೆ ಕಾರ್ಯ ನಡೆದಿತ್ತು. ಆದರೆ ಗ್ರಾಮದ ಕೆಲ ಪ್ರಭಾವಿ ವ್ಯಕ್ತಿಗಳ ಹುನ್ನಾರದಿಂದ ಕಾಮಗಾರಿಗೆ ಚಾಲನೆ ಸಿಗಲಿಲ್ಲ. ಇದೇ ರೀತಿ ಪ್ರತಿ ವರ್ಷ ಕಷ್ಟ ಅನುಭವಿಸುತ್ತೇವೆ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮ ಸಂಪೂರ್ಣ ದ್ವೀಪದಂತಾಗುತ್ತಿದ್ದು, ಮುಳ್ಳಿನ ಬೇಲಿಗಳಿಂದ ವಿಷ ಜಂತುಗಳು ಮನೆಯೊಳಗೆ ನುಗ್ಗುತ್ತಿವೆ. ಇದರಿಂದ ರಾತ್ರಿಯೆಲ್ಲಾ ಜಾಗರಣೆ ಮಾಡುವ ಪರಿಸ್ಥಿತಿ ಇದೆ. ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಗುಡಿಸಲುಗಳೇ ಆಸರೆ, ಆದರೆ ಗುಡಿಸಲಿಗೂ ನೀರು ನುಗ್ಗಿ ಮನೆಯಲ್ಲಿ ವಸ್ತುಗಳು ನೀರುಪಾಲಾಗಿವೆ. ಮಳೆ ನೀರು ಸಂಗ್ರಹದಿಂದ ಓಡಾಡಲು ರಸ್ತೆ ಇಲ್ಲದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.