ದುಡಿಯುವ ವರ್ಗದ ಶೋಷಣೆ
ಬಳ್ಳಾರಿ: ಕೇಂದ್ರ ಸರ್ಕಾರದ ಆರ್ಥಿಕ ಕ್ಷೇತ್ರದ ನಿರ್ಧಾರಗಳು ಸಂಕಷ್ಟದಲ್ಲಿ ಬದುಕುತ್ತಿರುವ ದುಡಿಯುವ ವರ್ಗದ ಮೇಲೆ ಹೆಚ್ಚಿನ ಶೋಷಣೆಯನ್ನುಂಟು ಮಾಡಲಿವೆ ಎಂದು ಸಂಸದ ತಪನ್ ಸೇನ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಒಳ್ಳೆಯ ದಿನಗಳು ಬರಲಿವೆ ಎಂಬ ಘೋಷಣೆಯೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ಸರ್ಕಾರ ಕಾರ್ಮಿಕ ಹಾಗೂ ದುಡಿವ ವರ್ಗಕ್ಕೆ ಕಷ್ಟದ ದಿನಗಳನ್ನು ತಂದರೆ, ಕಾರ್ಪೋರೇಟ್ ಹಾಗೂ ಬಂಡವಾಳ ಶಾಹಿಗಳಿಗೆ ಒಳ್ಳೆಯ ದಿನಗಳನ್ನು ತರುತ್ತಿದೆ ಎಂದರು.
ಬಜೆಟ್ ಮಂಡನೆ ಪೂರ್ವದಲ್ಲಿ ವಿವಿಧ ಸಂಘ, ಸಂಸ್ಥೆಗಳ ಸಭೆ ಕರೆದಿದ್ದ ಕೇಂದ್ರ ಸರ್ಕಾರ, ಎಲ್ಲರಿಂದಲೂ ಅಭಿಪ್ರಾಯ, ಸಲಹೆ ಸಂಗ್ರಹಿಸಿತ್ತು. ವಿವಿಧ ವಿಷಯಗಳ ಕುರಿತು ಚರ್ಚಿಸಿತ್ತು. ದೇಶದ ಎಲ್ಲ ಕಾರ್ಮಿಕ ಸಂಘಟನೆಗಳೂ ಮುಕ್ತ ಆರ್ಥಿಕತೆಯನ್ನು ವಿರೋಧಿಸಿ ವರದಿ ಸಲ್ಲಿಸಿದ್ದವು. ಸರ್ಕಾರವೂ ತಮ್ಮ ಆರ್ಥಿಕ ನೀತಿಗಳಲ್ಲಿ ಬದಲಾವಣೆ ಮಾಡುವುದಾಗಿ ಭರವಸೆಯೂ ನೀಡಿತ್ತು. ಆದರೂ, ತಮ್ಮದೇ ಆದ ಮುಂಗಡಪತ್ರವನ್ನು ಮಂಡಿಸಿದೆ. ಇದು ಕೇಂದ್ರ ಸರ್ಕಾರ ದೇಶದ ಜನರಿಗೆ ಮಾಡಿದ ವಂಚನೆ ಎಂದು ಕಿಡಿಕಾರಿದರು.
2014-15ನೇ ಸಾಲಿನ ಬಜೆಟ್ನಲ್ಲಿ ಮುಕ್ತ ಆರ್ಥಿಕತೆಯನ್ನು ಒಪ್ಪಿಕೊಂಡಿರುವ ಎನ್ಡಿಎ ಸರ್ಕಾರ, ತನ್ನ ಖಾಸಗೀಕರಣ, ಜಾಗತೀಕರಣ ನೀತಿಗಳನ್ನು ಮುಂದುವರೆಸಿದೆ. ತೆರಿಗೆ ವ್ಯವಸ್ಥೆಯಲ್ಲಿ ನೇರ ತೆರಿಗೆಗಳಿಂದ ವಿನಾಯತಿ ತೋರಿದಂತೆ ಕಂಡುಬಂದರೂ, ಪರೋಕ್ಷವಾಗಿ ಜನಸಾಮಾನ್ಯರಿಗೆ ಸಂಕಷ್ಟದ ದಿನಗಳನ್ನು ತಂದೊಡ್ಡಲಿದೆ. ಕಾರ್ಮಿಕ ವರ್ಗ ಶೋಷಣೆಯಾಗಲಿದೆ. ಮುಕ್ತ ಆರ್ಥಿಕ ನೀತಿ ಹೆಸರಿನಲ್ಲಿ ಬೃಹತ್ ಪ್ರಮಾಣದ ಸಾರ್ವಜನಿಕ ಆಸ್ತಿಯನ್ನು ಖಾಸಗಿ ಕಂಪನಿಗಳ ಹಸ್ತಾಂತರವಾಗಲಿದೆ ಎಂದು ದೂರಿದರು.
ದೇಶದ ರಾಜಕೀಯ ಪಕ್ಷಗಳಿಗೆ ಕಾರ್ಪೋರೇಟ್ ವಲಯ ದೇಣಿಗೆ ನೀಡುವುದನ್ನು ಸ್ಥಗಿತಗೊಳಿಸಬೇಕು. ಆಗ ಬಂಡವಾಳಶಾಹಿ ಕಂಪನಿಗಳ ರಾಜಕೀಯ ಪಕ್ಷಗಳ ಮೇಲಿನ ಹಿಡಿತ ತಪ್ಪುತ್ತದೆ. ಆದರೂ, ದೇಣಿಗೆ ನೀಡಬೇಕಿದ್ದರೆ ನೇರವಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಲಿ. ಆಯೋಗ ಅಗತ್ಯತೆಗಳಿಗೆ ಅನುಗುಣವಾಗಿ ಪಕ್ಷಗಳಿಗೆ ಹಣ ವಿತರಿಸಲಿ. ಆಗ ಅಲ್ಪ ಮಟ್ಟಿಗೆ ಸುಧಾರಣೆಗಳು ಕಾಣಬಹುದು ಎಂದು ತಿಳಿಸಿದರು. ದೇಶದಲ್ಲಿ ಚುನಾವಣಾ ವ್ಯವಸ್ಥೆಯನ್ನು ಬದಲಾಯಿಸಬೇಕಾದ ಅಗತ್ಯವಿದೆ. ಲೋಕಸಭೆ ಚುನಾವಣೆಯಲ್ಲಿ ಕೇವಲ ಶೇ.33ರಷ್ಟು ಮತ ಪಡೆದು, ಕಾನೂನು ರೂಪಿಸುವ, ಅದನ್ನು ಜಾರಿಗೊಳಿಸುವ ಸರ್ವಶಕ್ತಿ ಪಡೆದುಕೊಂಡಿದೆ ಎಂದರೆ, ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮತ್ತೊಂದು ಮುಖವಾಗಿದೆ. ಶೇ.30 ರಷ್ಟು ಮತಗಳಿಸಿದ ವ್ಯಕ್ತಿಗಳು ಸ್ಥಾನಗಳಿಸದ ಉದಾಹರಣೆಗಳಿವೆ. ಈ ನಿಟ್ಟಿನಲ್ಲಿ ದೇಶದ ಚುನಾವಣಾ ವ್ಯವಸ್ಥೆ ಬದಲಿಸಿ, ಯೂರೋಪ್ ಮಾದರಿಯನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆಯಿದೆ ಎಂದರು.
ಈ ಸಂದರ್ಭದಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಪ್ರಸನ್ನ ಕುಮಾರ್, ಜನರಲ್ ಕೌನ್ಸಿಲ್ ಸಭೆಯ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಟಿ.ಜಿ. ವಿಠಲ್, ಜಿಲ್ಲಾ ಕಾರ್ಯದರ್ಶಿ ಜೆ. ಸತ್ಯಬಾಬು, ಹುಳ್ಳಿ ಉಮೇಶ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

