ಗಣಿಗಾರಿಕೆ ಲೋಪ: ಜಾಗೃತರಾಗಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 7
ಗಣಿಗಾರಿಕೆಯಲ್ಲಿ ಲೋಪದೋಷಗಳಾಗುವುದನ್ನು ನಿಯಂತ್ರಿಸಲು ಜಾಗ್ರತರಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ವಿಶೇಷ ತಪಾಸಣಾ ತಂಡಗಳನ್ನು ರಚಿಸಬೇಕು. ತಾಲೂಕು ಮಟ್ಟದಲ್ಲಿ ವಾರಕ್ಕೊಮ್ಮೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸಂಯುಕ್ತ ಸಭೆ ನಡೆಸಿ ಸಮನ್ವಯತೆ ಸಾಧಿಸಿಕೊಂಡು ಸ್ಥಳೀಯ ಮಾಹಿತಿ, ಘಟನಾವಳಿಗಳನ್ನು ಆಧರಿಸಿ ಪ್ರಗತಿ ಪರಿಶೀಲನೆ ನಡೆಸಬೇಕು. ವರದಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು. ಚೆಕ್ ಪೋಸ್ಟ್ಗಳನ್ನು ಚುರುಕುಗೊಳಿಸಬೇಕು.
ತಪಾಸಣೆ ನಡೆಸಿ: ಹಿಂದೆ ನಡೆದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ಟಾಕ್ ಯಾರ್ಡ್ಗಳಲ್ಲಿದ್ದ ದಾಸ್ತಾನು ಪ್ರಮಾಣವನ್ನು ಪರಿಶೀಲಿಸಿ, ಪ್ರಸ್ತುತವಾಗಿರುವ ದಾಸ್ತಾನುಗಳ ಮಾಹಿತಿಯನ್ನು 10 ದಿನಗಳೊಳಗೆ ತಮಗೆ ಸಲ್ಲಿಸಬೇಕು. ಪ್ರಕರಣಗಳ ತನಿಖೆ ಚುರುಕುಗೊಳಿಸಬೇಕು. ಸ್ಪಾಂಜ್ ಐರನ್ ಕಂಪನಿಗಳು (ಮೆದುಕಬ್ಬಿಣ ಘಟಕ) ಚಾಲ್ತಿಯಲ್ಲಿರುವ ಮಾಹಿತಿ, ಇವರಿಗೆ ಸರಬರಾಜಾಗುವ ಕಚ್ಚಾ ಸಾಮಗ್ರಿ ಪರಿಶೀಲನೆ ನಡೆಸಬೇಕು. ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ರಕ್ಷಣಾ ದ್ವಾರ ಅಳವಡಿಸಿ: ಈಗಾಗಲೇ ಬಂದ್ ಮಾಡಿರುವ ಮೈನಿಂಗ್ ಕಂಪನಿಗಳ ಬಗ್ಗೆ ನಿಗಾ ಇಡಬೇಕು. ಇವರಲ್ಲಿ ಯಾವುದೇ ಇ ಅಕ್ಷನ್ ನಡೆಯುತ್ತಿಲ್ಲದಿರುವುದರಿಂದ ಇವರಲ್ಲಿರುವ ಕಚ್ಚಾ ಸಾಮಗ್ರಿಯನ್ನು ನಿಯಂತ್ರಿಸಲು ಕ್ರಮಕೈಗೊಳ್ಳಬೇಕು. ಇಂಥ ಪ್ರಕರಣಗಳಲ್ಲಿ ಅರಣ್ಯ ಇಲಾಖೆಯು ಜಾಗೃತಿ ವಹಿಸಿ ರಕ್ಷಣಾ ದ್ವಾರವನ್ನು ಅಳವಡಿಸಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಿ: ಸ್ಥಳೀಯ ಅಧಿಕಾರಿಗಳಿಗೆ ಮೊದಲು ಮಾಹಿತಿ ದೊರಕುವುದರಿಂದ ಲೋಪದೋಷಗಳಾಗದಂತೆ ಪೂರಕವಾಗಿ ಕ್ರಮಕೈಗೊಳ್ಳಬೇಕು. ಕಂದಾಯ ಇಲಾಖೆ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಕೆಳಹಂತದ ಅಧಿಕಾರಿಗಳು ಪ್ರಾಮಾಣಿಕವಾಗಿ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಇಂಥ ಪ್ರಕರಣಗಳಲ್ಲಿ ಲೋಪದೋಷಗಳಿಗೆ ಕಾರಣವಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನ್ಸಿಂಗ್ ರಾಥೋರ್ ಮಾತನಾಡಿ, ವಿಚಾರಣಾಧೀನ ಪ್ರಕರಣಗಳ ತನಿಖೆ ಚುರುಕುಗೊಳಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಪೂರಕವಾದ ದಾಖಲಾತಿಗಳನ್ನು ಪಡೆದು ತನಿಖೆ ನಡೆಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಣಿಕಂಠನ್, ಸಹಾಯಕ ಆಯುಕ್ತ ಅನಿರುದ್ಧ ಶ್ರವಣ್, ಡಿವೈಎಸ್ಪಿ ರುದ್ರಮುನಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಪಂಪಾಪತಿ, ನೂರ್ ಮಹಮದ್, ತಹಸೀಲ್ದಾರರು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

