ಬಳ್ಳಾರಿ

ಮಳೆ ಮಾಯ: ಬಾಡುತ್ತಿದೆ ಬೆಳೆ

Published On :

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜು. 2
ಆರಂಭದಲ್ಲಿ ಮುಂಗಾರು ಹಂಗಾಮಿನ ಭರವಸೆ ಮೂಡಿಸಿದ್ದ ಮಳೆ ಕಳೆದ ತಿಂಗಳಿನಿಂದ ಕೈ ಕೊಟ್ಟಿದ್ದು, ಈಗಾಗಲೇ ಬಿತ್ತನೆ ಮಾಡಿರುವ ಬೆಳೆಗಳೆಲ್ಲ ಬಾಡುತ್ತಿದ್ದು ರೈತರು ಸಂಕಷ್ಟ ಸಿಲುಕಿದ್ದಾರೆ.
ಮುಂಗಾರು ಆರಂಭಕ್ಕೂ ಮುನ್ನ ಉತ್ತಮ ಮಳೆಯಾಗಿರುವುದನ್ನು ಕಂಡ ರೈತರು ಹರ್ಷಗೊಂಡಿದ್ದರು. ಆದರೆ, ಬಿತ್ತನೆ ಮಾಡಿರುವ ಬೆಳೆಗಳೆಲ್ಲಾ ಸಂದಿಗ್ಧ ಸ್ಥಿತಿಯಲ್ಲಿದೆ. ಮಳೆ ಕೈ ಕೊಟ್ಟಿದ್ದರಿಂದ ಬೆಳೆದಿರುವ ಬೆಳೆ ನೋಡಿ ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಬೆಳೆಗಳು ಒಣಗುತ್ತಿದ್ದು, ಇನ್ನು ಒಂದು ವಾರ ಮಳೆ ಬೀಳದಿದ್ದರೆ ಬೆಳೆಗಳು ಒಣಗಿ ಕೋಟ್ಯಂತರ ರು. ನಷ್ಟ ಅನುಭವಿಸಬೇಕಾದ ಸ್ಥಿತಿಗೆ ರೈತ ಸಮುದಾಯಕ್ಕೆ ಬಂದಿದೆ.
ಉತ್ತಮ ಮಳೆ ಬಂದಿದ್ದರಿಂದ ಖುಷಿಯಿಂದ ಉಳುಮೆ ಮಾಡಿ ಬಿತ್ತೀವಿ. ಆದ್ರ ಬೆಳೆ ನೆಲ ಬಿಟ್ಟು ಮೇಲೆದ್ಮೇಲೆ ಬಿಸಿಲು, ಗಾಳಿಗೆ ಬೆಳೆಯಲ್ಲಾ ಒಣಗಾಕತ್ಯಾವ. ವಾರದೊಳಗ ಮಳಿ ಬರ್‌ಲಿಲ್ಲಂದ್ರ ನಮ್ಮ ಕತಿ ಮುಗಿದಂಗ ಎಂದು ತನ್ನ ನೋವನ್ನು ರೈತರು ತೋಡಿಕೊಳ್ಳುತ್ತಿದ್ದಾರೆ. ಈ ಬಾರಿ ಮುಂಗಾರ ಹಂಗಾಮಿನಲ್ಲಿ 58200 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಶೇ. 57ರಷ್ಟು ಸರಾಸರಿಯಲ್ಲಿ 33129 ಹೆಕ್ಟೇರ್ ಬಿತ್ತನೆಯಾಗಿದೆ. ಈ ಬಾರಿಯೂ ರೈತರು ಅತಿ ಹೆಚ್ಚು ಮೆಕ್ಕಜೋಳ ಬಿತ್ತನೆ ಮಾಡಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಾಲತೇಶ ಮಾಹಿತಿ ನೀಡಿದರು.
ಜೂನ್ ಅಂತ್ಯಕ್ಕೆ ತಾಲೂಕಿನಲ್ಲಿ 66.9 ಮಿ.ಮೀ. ವಾಡಿಕೆ ಮಳೆ ಬರಬೇಕಿತ್ತು. ಜೂ. 12ರ ವರೆಗೂ 58.8 ಮಿ.ಮೀ. ಮಳೆ ಬಿದ್ದಿದೆ. ಕಳೆದ ಒಂದು ತಿಂಗಳಿನಿಂದ ಮಳೆ ಪ್ರಮಾಣ ಕಡಿಮೆಯಾಗಿ ಒಣ ಹವೆ ಮುಂದುವರಿದಿದೆ. ಈ ರೀತಿ ಹವಾಮಾನದಿಂದ ಕೆಂಪು ಮಿಶ್ರಿತ ಜಮೀನುಗಳ ಬೆಳೆಗಳು ತೇವಾಂಶದ ಕೊರತೆ ಉಂಟಾಗಿ ಬೆಳೆಯಲ್ಲಾ ಬಾಡಿವೆ. ಇನ್ನು ಒಂದು ವಾರದಲ್ಲಿ ಮಳೆ ಬೀಳದೇ ಇದ್ದರೆ ಹಾನಿ ಪ್ರಮಾಣ ಹೆಚ್ಚಾಗುತ್ತದೆ ಎಂದು ಮಾಹಿತಿ ನೀಡಿದರು.
ಆರಿದ್ರ ಮಳೆ ಆದಂಗ, ಹಿರೇ ಸೊಸೆ ನಡೆದಂಗ ಎಂಬ ಗ್ರಾಮೀಣರ ಗಾದೆ ಮಾತಿನಂತೆ ನೆಚ್ಚಿಕೆ ಇಲ್ಲದ ಆರಿದ್ರ ಮಳೆ ನೆಲಕ್ಕೆ ಬಿದ್ದರೆ ಮಾತ್ರ ಸಾಯುತ್ತಿರುವ ಬೆಳೆಗಳು ಬದುಕಲು ಸಾಧ್ಯ. ಮುನಿಸಿಕೊಂಡಿರುವ ಮಳೆರಾಯ ವಾರದೊಳಗೆ ಕೃಪೆ ತೋರಿದರೆ ಮಾತ್ರ ರೈತರ ಬದುಕು ಹಸನಾಗುತ್ತದೆ.
ಕೊಳವೆ ಬಾವಿಗಳಿಂದ ನೀರಾವರಿ ಮಾಡಿಕೊಂಡಿರುವ ರೈತರು ಕೂಡ ಸಂಕಷ್ಟಕ್ಕೆ ಸಿಲುಕಿದ್ದು, ಅಂತರ್ಜಲ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ಬಿತ್ತನೆ ಮಾಡಿರುವ ಬೆಳೆಗಳಿಗೆ ನೀರು ಸಾಲದೇ ಒಣಗುತ್ತಿವೆ. ನಂತರ ಈಗಾಗಲೇ ವಿದ್ಯುತ್ ಸಾಕಷ್ಟು ಬಾರಿ ಕೈ ಕೊಡುತ್ತಿದ್ದು, 7 ತಾಸು ಇದ್ದ ಕರೆಂಟ್ ಈಗ 6 ತಾಸು ಮಾತ್ರ ಪೂರೈಕೆ ಮಾಡುತ್ತಾರೆ. ಈ 6 ತಾಸು ವಿದ್ಯುತ್ ಪೂರೈಕೆಯಲ್ಲಿ ಸಾಕಷ್ಟು ಬಾರಿ ಕೈ ಕೊಡುತ್ತಿರುವ ಹಿನ್ನೆಲೆಯಲ್ಲಿ 4-5 ತಾಸು ಮಾತ್ರ ಕರೆಂಟ್ ನೀಡುತ್ತಿದ್ದಾರೆ ಎಂದು ರೈತರು ತಮ್ಮ ನೋವು ತೋಡಿಕೊಳ್ಳುತ್ತಾರೆ.
ಉತ್ತಮ ಮಳೆ ಬಂದಿದ್ದರಿಂದ ಖುಷಿಯಿಂದ ಉಳುಮೆ ಮಾಡಿ ಬಿತ್ತೀವಿ. ಆದ್ರ ಬೆಳೆ ನೆಲ ಬಿಟ್ಟು ಮೇಲೆದ್ದ್ಮೇಲೆ ಬಿಸಿಲು, ಗಾಳಿಗೆ ಬೆಳೆಯಲ್ಲಾ ಒಣಗಾಕತ್ಯಾವ. ವಾರದೊಳಗ ಮಳಿ ಬರ್‌ಲಿಲ್ಲಂದ್ರ ನಮ್ಮ ಕತಿ ಮುಗಿದಂಗ.
- ಹೂವಿನಹಡಗಲಿ
ತಾಲೂಕಿನ ರೈತರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.