ಬಿಜೆಪಿ ಟಿಕೆಟ್ಗೆ ಲಾಬಿ
ಬಳ್ಳಾರಿ: ಬಳ್ಳಾರಿ ಉಪಚುನಾವಣೆ ಟಿಕೆಟಿಗಾಗಿ ಬಿಜೆಪಿಯಲ್ಲಿ ಲಾಬಿ ತೀವ್ರಗೊಂಡಿದೆ. ಶ್ರೀರಾಮುಲು ಅವರು ಕುಟುಂಬ ರಾಜಕಾರಣದಿಂದ ದೂರು ಸರಿಯುವ ಚಿಂತನೆಯೂ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಈ ಬಾರಿ ಉಪಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಯಾವ ರೀತಿ ತಂತ್ರ ಹೆಣೆಯುತ್ತದೆ ಎಂಬುದರ ಆಧಾರದ ಮೇಲೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಅವರ ಮೇಲೆ ಕುಟುಂಬ ರಾಜಕಾರಣದ ಆರೋಪ ಆಂತರಿಕವಾಗಿ ಕೇಳಿ ಬಂದಿತ್ತು. ಅಂದರೆ ಈ ಹಿಂದೆ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಬಿಜೆಪಿ ಆಡಳಿತದ ಅವಧಿಯಲ್ಲಿ ಸಚಿವರಾಗಿದ್ದರು. ಸೋಮಶೇಖರ ರೆಡ್ಡಿ ಬಳ್ಳಾರಿಯ ಶಾಸಕರಾಗಿ, ಕೆಎಂಎಫ್ ಅಧ್ಯಕ್ಷರಾಗಿದ್ದರು. ಬಿ. ಶ್ರೀರಾಮುಲು ಅವರೂ ಸಚಿವರಾಗಿದ್ದು, ತಮ್ಮ ಸಹೋದರಿ ಶಾಂತಾ ಅವರಿಗೆ ಸಂಸತ್ ಟಿಕೆಟ್ ನೀಡಿ, ಸಂಸದರನ್ನಾಗಿ ಮಾಡಿದ್ದರು. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸಂಬಂಧಿ ಸಣ್ಣಫಕ್ಕೀರಪ್ಪ ಅವರಿಗೆ ಟಿಕೆಟ್ ಕೊಡಿಸಿ, ರಾಯಚೂರು ಸಂಸದರನ್ನಾಗಿ ಮಾಡಿದ್ದರು. ಇಂತಹ ಸಂದರ್ಭದಲ್ಲಿ ಬಿಜೆಪಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಅವರೇ ಕುಟುಂಬಕ್ಕೆ ಅಧಿಕಾರ ಸೀಮಿತವಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಆರೋಪದಿಂದ ಮುಕ್ತರಾಗುವ ಚಿಂತನೆ ಶ್ರೀರಾಮುಲು ಅವರಲ್ಲಿದೆ ಎನ್ನಲಾಗುತ್ತಿದೆ.
ಕೈ ಟಿಕೆಟ್ ಮೇಲೆ ಕಮಲ ಹೆಜ್ಜೆ...
ಸಂಸದ ಶ್ರೀರಾಮುಲು ಅವರಿಗೆ ಕುಟುಂಬದ ಹೊರತಾಗಿ ಹೊರಗಿನವರಿಗೆ ಟಿಕೆಟ್ ಕೊಡಬೇಕೆಂಬ ಇಚ್ಛೆಯೇ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದ್ದರೂ ಕಾಂಗ್ರೆಸ್ ಶತಾಯಗತಾಯವಾಗಿ ಗೆಲ್ಲಬೇಕೆಂದು ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಲು ಹೆಚ್ಚಿನ ಆಸಕ್ತಿ ತೋರಿದಲ್ಲಿ, ಇದಕ್ಕೆ ಪರ್ಯಾಯವಾಗಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕಾಂಗ್ರೆಸ್ಗೆ ಸೆಡ್ಡು ಹೊಡೆಯಲು ಶ್ರೀರಾಮುಲು ಮುಂದಾಗಲಿದ್ದಾರೆ ಎಂಬ ಮಾತಿದೆ. ಪಕ್ಷ(ಅಥವಾ ಶ್ರೀರಾಮುಲು) ಅವರು ಶಾಂತಾ ಅಥವಾ ಶ್ರೀರಾಮುಲು ಕುಟುಂಬದವರನ್ನು ಕಣಕ್ಕಿಳಿಸುವ ನಿರ್ಧಾರ ತೆಗೆದುಕೊಂಡರೂ ಆಶ್ಚರ್ಯವಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಹಿಂದೆ ಜಿಲ್ಲೆಯ ಒಟ್ಟಾರೆ ಅಧಿಕಾರ ರೆಡ್ಡಿ ಸಹೋದರರು, ಶ್ರೀರಾಮುಲು ಕೈಲಿದ್ದಾಗ ಆದ ಬೆಳವಣಿಗೆಗಳು ಬಿಜೆಪಿಗೆ ಪಾಠವಾಗಿದೆ. ಹೀಗಾಗಿ ಈ ವಿಷಯದಲ್ಲಿ ಎಚ್ಚರಿಕೆ ಹೆಜ್ಜೆ ಇಡಲಿದೆ ಎಂಬ ಮಾತು ಕೇಳಿಬರುತ್ತಿದೆ. ಇದರಿಂದಾಗಿ ಬಳ್ಳಾರಿ ಗ್ರಾಮೀಣ ಟಿಕೆಟ್ ಶ್ರೀರಾಮುಲು ಕುಟುಂಬ ವರ್ಗಕ್ಕೋ ಅಥವಾ ಹೊರಗಿನವರಿಗೋ ಎಂಬ ಕುತೂಹಲವಿದೆ. ಆದರೂ ಈ ಬಾರಿ ಬಳ್ಳಾರಿ ಗ್ರಾಮೀಣ ಟಿಕೆಟ್ ರೆಡ್ಡಿ ಮತ್ತು ಶ್ರೀರಾಮುಲು ಕುಟುಂಬದ ಹೊರಗಿನವರಿಗೆ ಕೊಡುವ ಸುದ್ದಿಯ ಹಿನ್ನೆಲೆಯಲ್ಲಿ ಹೊರಗಿನ ಐದಾರು ಜನರು ಟಿಕೆಟ್ಗಾಗಿ ತೀವ್ರ ಲಾಬಿ ನಡೆಸುತ್ತಿದ್ದಾರೆ.
ಒಲವು ಗಳಿಸಲೆತ್ನ...
ಶ್ರೀರಾಮುಲು ಅವರು ಈ ಬಾರಿ ಬಳ್ಳಾರಿ ಗ್ರಾಮೀಣ ಉಪಚುನಾವಣೆಯಲ್ಲಿ ತಮ್ಮ ಕುಟುಂಬ ಬಿಟ್ಟು ಹೊರಗಿನವರಿಗೆ ಟಿಕೆಟ್ ಕೊಡಿಸಲಿದ್ದಾರೆ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿರುವುದರಿಂದ ಬಳ್ಳಾರಿ ಗ್ರಾಮೀಣ ಟಿಕೆಟ್ಗಾಗಿ ಸಾಕಷ್ಟು ಲಾಬಿ ನಡೆಯುತ್ತಿದೆ. ಶ್ರೀರಾಮುಲು ಸಂಪರ್ಕ ಇಟ್ಟುಕೊಳ್ಳಿ, ಅವರೊಂದಿಗೆ ಮಾತನಾಡಿ ಎಂದು ಸ್ಥಳೀಯ ಕೆಲವು ಮುಖಂಡರಿಗೆ ರಾಜ್ಯ ಮುಖಂಡರು ಸೂಚನೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಂದರೆ ಅಂದರೆ ಬಳ್ಳಾರಿ ಗ್ರಾಮೀಣ ಟಿಕೆಟ್ ನೀಡುವಲ್ಲಿ ಶ್ರೀರಾಮುಲು ನಿರ್ಧಾರ ಅಂತಿಮ ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ. ಇದರಿಂದಾಗಿ ಆಕಾಂಕ್ಷಿಗಳು ಶ್ರೀರಾಮುಲು ಅವರ ಒಲವನ್ನು ಗಳಿಸುವಲ್ಲಿ ಮುಂದಾಗಿದ್ದಾರೆ.
ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

