ನಾಟಕೋತ್ಸವ,ಕವಿಗೋಷ್ಠಿ ಇಂದು
ಹೊಸಪೇಟೆ: ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮರಿಯಮ್ಮನಹಳ್ಳಿಯ ಮಾರುತಿ ಕಲಾರಂಗ ಆಶ್ರಯದಲ್ಲಿ 2012-13ನೇ ಸಾಲಿನ ಪರಿಶಿಷ್ಟ ಪಂಗಡ ನೋಂದಾಯಿತ ಸಂಘ- ಸಂಸ್ಥೆಗಳ ಧನಸಹಾಯ ಯೋಜನೆಯಡಿ ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿ ಮತ್ತು ನಾಟಕೋತ್ಸವ ಮಾ. 9ರಂದು ಸಂಜೆ 4.30ಕ್ಕೆ ಮರಿಯಮ್ಮನಹಳ್ಳಿಯ ದುರ್ಗಾದಾಸ್ ಕಲಾಮಂದಿರದಲ್ಲಿ ನಡೆಯಲಿದೆ. ಹಿರಿಯ ರಂಗ ಕಲಾವಿದೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಕೆ. ನಾಗರತ್ನಮ್ಮ ಉದ್ಘಾಟಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗ್ತಿ ಅಧ್ಯಕ್ಷತೆ ವಹಿಸುವರು. ಲಲಿತ ಕಲಾರಂಗದ ಅಧ್ಯಕ್ಷ ಹುರುಕೊಳ್ಳಿ ಮಂಜುನಾಥ, ಸೃಷ್ಟಿ ಕಲಾಬಳಗದ ಉಪಾಧ್ಯಕ್ಷ ಸಿ. ಪ್ರಕಾಶ್, ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನಾಗರಾಜ್ ಹವಾಲ್ದಾರ್, ಕಲಾವಿದ ಕುಂಬಾರ ಪಂಚಪ್ಪ ಭಾಗವಹಿಸುವರು. ಪ್ರಿಯದರ್ಶಿನಿ ಕಾಲೇಜಿನ ಉಪನ್ಯಾಸಕ ಎಂ. ಸೋಮೇಶ್ ಉಪ್ಪಾರ್ ಮರಿಯಮ್ಮನಹಳ್ಳಿ ಪರಿಸರದ ಜಾನಪದ ರಂಗ ಭೂಮಿ ಕುರಿತು ಉಪನ್ಯಾಸ ನೀಡುವರು. ಕವಿಗೋಷ್ಠಿ, ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಮಾರುತಿ ಕಲಾರಂಗದ ಮುಖ್ಯಸ್ಥರಾದ ಕೆ. ರಾಮಚಂದ್ರಪ್ಪ, ಕೆ. ವೆಂಕಣ್ಣ ತಿಳಿಸಿದ್ದಾರೆ.
ಶಿವರಾತ್ರಿ ಪ್ರಯುಕ್ತ ವಿಶೇಷ ಕ್ರಾರ್ಯಕ್ರಮ
ಹೊಸಪೇಟೆ: ಪದ್ಮಶಾಲಿ ಬಹೂತ್ತಮ ಸಮಾಜದಿಂದ ಮಹಾ ಶಿವರಾತ್ರಿ ಪ್ರಯುಕ್ತ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಜಾಗರಣೆ ಅಂಗವಾಗಿ ಮಾ. 10ರಂದು ರಾತ್ರಿ 10 ಗಂಟೆಯಿಂದ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ನರಹರಿ ಸದ್ಗುರು ಆಶ್ರಮದ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಪದ್ಮಶಾಲಿ ಸಮಾಜದ ಭಕ್ತರಿಂದ ಶ್ರೀ ಶಂಕರ ನಾಮಸ್ಮರಣೆ, ಪದ್ಮಶಾಲಿ ಪದ್ಮಾವತಿ ಮಹಿಳಾ ಸಂಘದವರಿಂದ ಭಜನಾ ಕಾರ್ಯಕ್ರಮ ನಡೆಯಲಿವೆ. ಶಿವರಾತ್ರಿಯಂದ 4 ಶ್ರೇಷ್ಠ ಯಾಮಗಳಲ್ಲಿ ರುದ್ರಾಭಿಷೇಕ ವಿಶೇಷ ಪೂಜೆ ನಡೆಯಲಿದ್ದು, ಭಾನುವಾರ ಸಂಜೆ 6ರಿಂದ 9ಗಂಟೆ ವರೆಗೆ ಪ್ರಥಮ ಯಾಮಪೂಜೆ, ರಾತ್ರಿ 9ರಿಂದ 12ರ ವರೆಗೆ ದ್ವಿತೀಯ ಯಾಮಪೂಜೆ, ರಾತ್ರಿ 12ರಿಂದ 3ರ ವರೆಗೆ ತೃತೀಯ ಯಾಮಪೂಜೆ, ಸೋಮವಾರ ಬೆಳಗಿನ ಜಾವ 3ರಿಂದ 6 ಗಂಟೆಯವರೆಗೆ ಚತುರ್ಥ ಯಾಮಪಾಜೆ ನಡೆಯಲಿದೆ. ಮಾ. 11ರಂದು ಮಾರ್ಕಂಡೇಶ್ವರ ದೇವರಿಗೆ ಪಂಚಾಮೃತಾಭಿಷೇಕ ನಡೆಸಲಾಗುವುದು. ಸಮಸ್ತ ಸದ್ಭಕ್ತರೆಲ್ಲರೂ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪದ್ಮಶಾಲಿ ಬಹೂತ್ತಮ ಸಮಾಜದ ಮುಖಂಡರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂಡೂರು: ಸೋಲು-ಗೆಲವಿನ ಲೆಕ್ಕಾಚಾರ
ಸಂಡೂರು: ಸಂಡೂರು ಪುರಸಭೆಗೆ ಮತದಾನ ಮುಗಿದಿದ್ದು, ಈಗ ಅಭ್ಯರ್ಥಿಗಳ ಸೋಲು-ಗೆಲವಿನ ಲೆಕ್ಕಾಚಾರ ಆರಂಭವಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ರಾಜಕೀಯ ಮಂದಿಗಳ ಎಡೆಬಿಡದ ಓಡಾಟ, ಮತಯಾಚನೆ ಮುಂತಾದ ಚಟುವಟಿಕೆಗಳಿಂದ ಗಿಜಿಗುಡುತ್ತಿದ್ದ ಓಣಿಗಳು, ಮತದಾನ ಮುಗಿಯುತ್ತಿದ್ದಂತೆ ಥಂಡಾ ಆಗಿದ್ದು, ಒಂದು ರೀತಿ ಮಳೆ ಬಂದು ನಿಂತ ಅನುಭವವಾಗುತ್ತಿದೆ.
ಲೆಕ್ಕಾಚಾರ: ಪುರಸಭೆ ವ್ಯಾಪ್ತಿಯ 23 ವಾರ್ಡ್ಗಳಲ್ಲಿಯೂ ಕಾಂಗ್ರೆಸ್ ಹಾಗೂ ಬಿಎಸ್ಆರ್ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಬಿಜೆಪಿ 16, ಜೆಡಿಎಸ್ 12, ಕೆಜೆಪಿ 4, ಸಿಪಿಐ 2 ವಾರ್ಡ್ಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಒಂದು ವಾರ್ಡಿನಲ್ಲಿ ಮಾತ್ರ ಪಕ್ಷೇತರ ಅಭ್ಯರ್ಥಿ ಸ್ಪರ್ಧಿಸಿದ್ದಾರೆ. 23 ಸ್ಥಾನಗಳಿಗೆ ಒಟ್ಟು 81 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಹೋಟೆಲ್ಗಳು, ಅಂಗಡಿಗಳ ಮುಂದೆ ಹಾಗೂ ಅರಳಿ ಕಟ್ಟೆಯ ಮೇಲೆ ಅಭ್ಯರ್ಥಿಗಳ ಸೋಲು-ಗೆಲವಿನ ಸೋಲಿನ ಲೆಕ್ಕಾಚಾರ ಶುರುವಾಗಿದೆ. ಅಭ್ಯರ್ಥಿಗಳೂ ತಮ್ಮ ಫಲಿತಾಂಶವನ್ನು ತಿಳಿಯಲು ಮತ ಎಣಿಕೆ ದಿನವನ್ನು ಎದುರು ನೋಡುತ್ತಿದ್ದಾರೆ.
ಭವಿಷ್ಯ ಭದ್ರ: ಮತದಾರ ಈಗಾಗಲೇ ತನ್ನ ಅಭಿಪ್ರಾಯವನ್ನು ತಿಳಿಸಿಯಾಗಿದೆ. ಅವರ ಅಭಿಪ್ರಾಯಗಳು ಮತಯಂತ್ರಗಳಲ್ಲಿ ಭದ್ರವಾಗಿದ್ದು, ಮಾ. 11ರಂದು ಸ್ಪರ್ಧಿಗಳ ಫಲಿತಾಂಶ ಪ್ರಕಟಗೊಳ್ಳಲಿವೆ. ಫಲಿತಾಂಶದ ಬಗ್ಗೆ ಎಲ್ಲರೂ ಕಾತುರರಾಗಿದ್ದಾರೆ. ಜನರ ಎಲ್ಲ ರೀತಿಯ ಲೆಕ್ಕಾಚಾರ, ಪ್ರಶ್ನೆ, ಕುತೂಹಲಕ್ಕೆ ಮಾ. 11ರಂದು ಹೊರಬೀಳಲಿರುವ ಫಲಿತಾಂಶ ತೆರೆ ಎಳೆಯಲಿದೆ.
ಇಂದು ವಿದ್ಯುತ್ ವ್ಯತ್ಯಯ
ಹೊಸಪೇಟೆ: ಇಲ್ಲಿನ 220/ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕೆಲಸ ನಿಮಿತ್ತ ಮಾ. 9ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆ ವರೆಗೂ ನಗರದ ಕೆಲವು ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಬಾಲಾ ಟಾಕೀಸ್, ಸುಣ್ಣದ ಭಟ್ಟಿ, ಹಂಪಿ ರಸ್ತೆ, ಬಳ್ಳಾರಿ ರಸ್ತೆ, ಮೇನ್ ಬಜಾರ್, ರಾಣೀಪೇಟೆ, ಶಾನ್ಭಾಗ್ ವೃತ್ತ, ಕೋರ್ಟ್ ಪ್ರದೇಶ, ಸ್ಟೇಷನ್ ರಸ್ತೆ, ಪಟೇಲ್ ನಗರ, ಚಿತ್ತವಾಡ್ಗಿ, ಅಮರಾವತಿ, ತಿರುಮಲ ನಗರ, ಅನ್ನಪೂರ್ಣ ಬಡಾವಣೆ, ಸಾಯಿರಾಮ್ ಬಡಾವಣೆ, ಕಾಲೇಜು ರಸ್ತೆ, ಬಸವೇಶ್ವರ ಬಡಾವಣೆ, ಚಾಪಲ್ ಗಡ್ಡೆ, ದೇವಿ ನಗರ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕು ಎಂದು ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಇಂದು ದತ್ತಿ ಕಾರ್ಯಕ್ರಮ
ಬಳ್ಳಾರಿ: ಶಿವಲಿಂಗ ಸ್ವಾಮಿಗಳ ಮಠ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಮಠಾಧೀಶರ ಧರ್ಮ ಪರಿಷತ್ ಜಂಟಿಯಾಗಿ ಅರಿವು- ಆಚಾರ ಮಾಸಿಕ ಕಾರ್ಯಕ್ರಮ, 119ನೇ ಮಹಾಮನೆ ದತ್ತಿ ಕಾರ್ಯಕ್ರಮವನ್ನು ಮಾ. 9ರಂದು ಸಂಜೆ 6.30ಕ್ಕೆ ನಗರದ ಗ್ರಹಂ ರಸ್ತೆಯ ಶಿವಲಿಂಗ ಸ್ವಾಮಿ ಮಠದಲ್ಲಿ ಏರ್ಪಡಿಸಿದೆ. ಉರವಕೊಂಡ ಗವಿಮಠದ ಸಂಸ್ಥಾನ ಉತ್ತರಾಧಿಕಾರಿ ಡಾ. ಕರಿಬಸವರಾಜೇಂದ್ರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿರಿಗೇರಿ ಎರ್ರಿಸ್ವಾಮಿ ಭಾಗವಹಿಸಲಿದ್ದಾರೆ. ಉಪನ್ಯಾಸಕ ತಿಪ್ಪೇಸ್ವಾಮಿ ಅವರು 'ಷಟ್ಸ್ಥಲ ಸೋಪಾನದಲ್ಲಿ - ಮಹೇಶ' ಕುರಿತಾಗಿ ಉಪನ್ಯಾಸ ನೀಡಲಿದ್ದಾರೆ. ಎಸ್.ಪಿ. ಹೊಂಬಳ ಕಾರ್ಯಕ್ರಮ ನಿರೂಪಿಸಲಿದ್ದಾರೆ. ನಿವೃತ್ತ ಮುಖ್ಯಗುರು ಪೊಂಪನಗೌಡ ಭಕ್ತಿಸೇವೆ ನೀಡಲಿದ್ದಾರೆ ಎಂದು ಅಖಲಿ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ. ಸಿದ್ದಲಿಂಗಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಾರಿ ಹಾಯ್ದು ಬಾಲಕಿಗೆ ಗಾಯ
ಸಂಡೂರು: ತಾಲೂಕಿನ ನರಸಿಂಗಾಪುರ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಅದಿರು ಸಾಗಣೆ ಲಾರಿಯೊಂದು ಹೋಟೆಲ್ಗೆ ಹೋಗಿ ಬರುತ್ತಿದ್ದ ಬಾಲಕಿಯ ಮೇಲೆ ಹರಿದ ಪರಿಣಾಮ ಆಕೆಯ ಕಾಲಿಗೆ ತೀವ್ರ ಗಾಯವಾಗಿದ್ದು, ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕು ವರ್ಷದ ಬಾಲಕಿ ಮೀನಾ ಗಾಯಗೊಂಡಿದ್ದಾಳೆ. ಸುದ್ದಿ ತಿಳಿದ ಗ್ರಾಮಸ್ಥರು ಒಂದೆರಡು ಗಂಟೆಗಳ ಕಾಲ ಲಾರಿಗಳ ಸಂಚಾರವನ್ನು ಗ್ರಾಮದಲ್ಲಿ ಸ್ಥಗಿತಗೊಳಿಸಿದ್ದರು ಎಂದು ವರದಿಯಾಗಿದೆ. ಪ್ರಕರಣ ದಾಖಲಾಗಿದೆ.
ಘರ್ಷಣೆ: ಮೂವರಿಗೆ ಗಾಯ
ಸಂಡೂರು: ತಾಲೂಕಿನ ಲಕ್ಷ್ಮಿಪುರದಲ್ಲಿ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು, ಮೂವರು ಗಾಯಗೊಂಡಿದ್ದಾರೆ. ಗುರುವಾರ ರಾತ್ರಿ ಘರ್ಷಣೆ ನಡೆದಿದ್ದು, ಅಂಬರೀಶ್, ಪರಶುರಾಮಪ್ಪ ಹಾಗೂ ತಾಯಪ್ಪ ಎಂಬುವರು ಗಾಯಗೊಂಡಿದ್ದಾರೆ. ಅವರನ್ನು ಸಂಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅಂಬರೀಶ್ ಅವರು ನೀಡಿದ ದೂರಿನ ಮೇರೆಗೆ ಸಂಡೂರು ಪೊಲೀಸರು ಮಲ್ಲಕಾರ್ಜುನ, ಬಸವರಾಜ, ನಿಂಗಪ್ಪ, ಮುದುಕಪ್ಪ, ಮುಕ್ಕಣ್ಣ, ಶಿವಕುಮಾರ ಹಾಗೂ ಯಲ್ಲಪ್ಪ ಎಂಬುವರನ್ನು ಶುಕ್ರವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಂಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲುವೆಗೆ ಬಿದ್ದು ಬಾಲಕ ಸಾವು
ಹೊಸಪೇಟೆ: ಕಾಲುವೆಗೆ ಸ್ನಾನಕ್ಕೆಂದು ತೆರಳಿದ್ದ ಬಾಲಕನೋರ್ವ ಕಾಲು ಜಾರಿ ಬಿದ್ದು ನೀರು ಪಾಲಾಗಿರುವ ಘಟನೆ ತಾಲೂಕಿನ ಕಮಲಾಪುರ ಪಟ್ಟಣದಲ್ಲಿ ಗುರುವಾರ ನಡೆದಿದೆ. ತಾಲೂಕಿನ ಚಿಲಕನಹಟ್ಟಿ ಗ್ರಾಮದ ಬೋಸಯ್ಯ ಎಂಬುವರ ಪುತ್ರ ಸಂತೋಷ (16) ಮೃತ ದುರ್ದೈವಿ. ಕಮಲಾಪುರ ಪಟ್ಟಣದ ಸಮೀಪ ಗೋನಾಳ್ ಕೆರೆಯಲ್ಲಿ ನಡೆಯುತ್ತಿರುವ ಊರಮ್ಮನ ಹಬ್ಬಕ್ಕೆಂದು ಸಂಬಂಧಿಕರ ಮನೆಗೆ ಬಂದಿದ್ದ ಬಾಲಕ ಸ್ನಾನ ಮಾಡಲು ಎಚ್ಪಿಸಿ ಕಾಲುವೆಯಲ್ಲಿ ಇಳಿದಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ. ಶುಕ್ರವಾರ ಸಂಜೆಯವರೆಗೂ ಶವ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

