ಹಲವು ಕೌತುಕಗಳ ಚುನಾವಣೆ
- ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 3
ಸ್ಥಳೀಯ ಸಂಸ್ಥೆಗಳ ಚುನಾವಣೆ ಬಳ್ಳಾರಿ ಮಟ್ಟಿಗೆ ಹಲವು ವಿಶೇಷತೆ, ಕುತೂಹಲಗಳನ್ನು ಹುಟ್ಟುಹಾಕಿದೆ. ಮಹಾನಗರ ಪಾಲಿಕೆ ಚುಕ್ಕಾಣಿ ಹಿಡಿದಿರುವ ಬಿಎಸ್ಸಾರ್ ಪಕ್ಷಕ್ಕೆ ಇದು ಅಗ್ನಿ ಪರೀಕ್ಷೆಯಾದರೆ, ಕಾಂಗ್ರೆಸ್ಗೆ ಮರಳಿ ತನ್ನ ಛಾಪನ್ನು ಪಡೆಯಬೇಕಿದೆ. ರೆಡ್ಡಿಗಳ ಹೊರತಾಗಿ ಬಿಜೆಪಿಗೆ ಶಕ್ತಿ ಇದೆ ಎಂದು ತೋರಿಸುವುದು ಬಿಜೆಪಿಗೆ ಅನಿವಾರ್ಯ. ಜೆಡಿಎಸ್ನ ಭರತರೆಡ್ಡಿಯ ರಾಜಕೀಯ ಭವಿಷ್ಯಕ್ಕೂ ಇದೇ ನಿರ್ಣಾಯಕ.
ಬಳ್ಳಾರಿ ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುಕ್ಕಾಣಿ ಹಿಡಿಯುವ ಬಿಎಸ್ಸಾರ್ ಪ್ರಯತ್ನಕ್ಕೆ ಪೂಜಾಗಾಂಧಿ ಕೆಜೆಪಿ ಬಿಟ್ಟು ಬಿಎಸ್ಸಾರ್ ಪಕ್ಷಕ್ಕೆ ಸೇರ್ಪಡೆಯಾಗಿ ಸಾಥ್ ನೀಡಿದ್ದಾರೆ. ಪೂಜಾಗಾಂಧಿ, ರಕ್ಷಿತಾ ಅವರನ್ನು ಪ್ರಚಾರದ ಸ್ಟಾರ್ ಕ್ಯಾಂಪೇನರಾಗಿ ಬಿಎಸ್ಸಾರ್ ಬಳಿಸಿಕೊಳ್ಳುವ ಮೂಲಕ ಪಕ್ಷಕ್ಕೆ ತಾರಾ ಮೆರುಗು ನೀಡಲು ಹೊರಟಿದ್ದು, ತಾರೆಗಳ ಅಭಿಮಾನಿಗಳು ಮತವಾಗಿ ಪರಿವರ್ತನೆಯಾಗಲಿವೆಯೇ ಎಂಬುದಕ್ಕೆ ಫಲಿತಾಂಶ ಉತ್ತರ ನೀಡಲಿದೆ.
ಕೈನಲ್ಲಿ ಒಗ್ಗಟ್ಟಿನ ಪ್ರದರ್ಶನ: ಒಂದು ಕಾಲದಲ್ಲಿ ಬಳ್ಳಾರಿ ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು ಎಂಬ ಮಾತಿದೆ. ಆದರೆ ಪಕ್ಷದ ಮುಖಂಡರಲ್ಲಿ ಒಗ್ಗಟ್ಟಿನ ಪ್ರದರ್ಶನ, ಹೊಂದಾಣಿಕೆ ಇಲ್ಲದ ಕಾರಣ ಕಾಂಗ್ರೆಸ್ ಭದ್ರಕೋಟೆಗೆ ರೆಡ್ಡಿಗಳು ಮುತ್ತಿಗೆ ಹಾಕಿ ವಶಪಡಿಸಿಕೊಂಡಿದ್ದರು. ಆದರೆ ಹಲವು ಸೋಲುಗಳಿಂದ ಎಚ್ಚೆತ್ತಿರುವ ಕಾಂಗ್ರೆಸ್ ಮುಖಂಡರಿಗೆ ಜ್ಞಾನೋದಯವಾದಂತೆ ಕಾಣುತ್ತಿದ್ದು, ಇದೀಗ ಒಗ್ಗಟ್ಟಿನ ಪ್ರದರ್ಶನದ ಮೂಲಕ ಭದ್ರಕೋಟೆಗಿರುವ ಮುಸುಕಿದ ಮೋಡವನ್ನು ಕಳಚಲು ಮುಂದಾಗಿದ್ದಾರೆ.
ದಿವಾಕರಬಾಬು, ಅಲ್ಲಂ ವೀರಭದ್ರಪ್ಪ, ಕೆ.ಸಿ. ಕೊಂಡಯ್ಯ ಅವರು ಇದೀಗ ತಾತ್ಕಾಲಿಕವಾಗಿ ತಮ್ಮಲ್ಲಿನ ಭಿನ್ನಾಭಿಪ್ರಾಯ ಬದಿಗೊತ್ತಿ, ಒಗ್ಗಟ್ಟು ಪ್ರದರ್ಶನ ಮಾಡಲು ಮುಂದಾಗಿದ್ದಾರೆ.
ಇದಕ್ಕೆ ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಸಾಥ್ ನೀಡಿರುವುದು ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದೆ. ಈ ಬಾರಿ ಕೈ ಒಗ್ಗಟ್ಟು ಫಲ ನೀಡಲಿದೆಯೋ ಎಂಬುದನ್ನು ಕಾದು ನೋಡಬೇಕು.
ಬಿಜೆಪಿಗೆ ಸುರೇಶ್ಕುಮಾರ್ ಸಾಥ್: ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಬಿಜೆಪಿಯಿಂದ ಹೊರ ನಡೆದಿರುವುದು ಸಹಜವಾಗಿಯೇ ರೆಡ್ಡಿ ಸಹೋದರರ ಹೊರತಾಗಿ ಬಿಜೆಪಿಗೆ ಅಸ್ತಿತ್ವ ಇಲ್ಲ ಎಂಬ ಮಾತಿದೆ. ಆದರೆ ಕೆಲ ಸಮುದಾಯಗಳು ಮೊದಲಿನಿಂದಲೂ ಆರ್ಎಸ್ಎಸ್ನಿಂದಾಗಿ ಬಿಜೆಪಿಯಲ್ಲೇ ಗುರುತಿಸಿಕೊಂಡಿರುವುದರಿಂದ ಯಾರು ಪಕ್ಷ ಬಿಟ್ಟು ಹೋದರೂ, ಭದ್ರವಾದ ಮತಗಳು ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂಬ ಮಾತು ಪಕ್ಷದಲ್ಲಿದೆ. ಇದೀಗ ಕಾನೂನು ಸಚಿವ ಸುರೇಶ್ಕುಮಾರ್ ಮಾ. 4ರಂದು ಬಳ್ಳಾರಿಯಲ್ಲಿ ಪ್ರಚಾರ ಮಾಡುವ ಮೂಲಕ ಬಿಜೆಪಿಯ ಮೂಲ ಮತಗಳನ್ನು ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ. ಸುರೇಶ್ಕುಮಾರ್ ಅವರ ಆದರ್ಶ ಬಿಜೆಪಿಗೆ ವರವಾಗಲಿಯೇ ಎಂಬುದು ಕುತೂಹಲಕಾರಿ ಸಂಗತಿ.
ಜೆಡಿಎಸ್ಗೆ ಭರತರೆಡ್ಡಿ ಮೆರುಗು: ಜೆಡಿಎಸ್ನಲ್ಲಿ ಸೂರ್ಯನಾರಾಯಣ ರೆಡ್ಡಿ ತರುವಾಯ ಅವರ ಮಗ ಭರತ ರೆಡ್ಡಿ ಇತ್ತೀಚೆಗೆ ರಾಜಕೀಯದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರು ಸಕ್ರಿಯ ರಾಜಕಾರಣದಲ್ಲಿ ಕಾಣಿಸಿಕೊಳ್ಳದಿದ್ದರೂ, ಇದೀಗ ಜೆಡಿಎಸ್ ಪರ ಮತ ಯಾಚನೆಗೆ ಮುಂದಾಗಿದ್ದಾರೆ. ಇದಕ್ಕೆ ಸ್ಪಂದನೆ ವ್ಯಕ್ತವಾಗಿ, ಆವರ ಭವಿಷ್ಯದ ರಾಜಕೀಯ ಜೀವನಕ್ಕೆ ಭಾಷ್ಯ ಬರೆಯಲಿದೆಯೇ ಕಾದುನೋಡಬೇಕು. ಒಟ್ಟಾರೆ ಈ ಚುನಾವಣೆ ಹಲವು ಕುತೂಹಲಕಾರಿ ವಿಷಯಗಳಿಗೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

