ಜನಪದ ಸೊಗಡು ಪಸರಿಸಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 31
ಮಕ್ಕಳನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ಗುಂಗಿನಿಂದ ಹೊರಬರುವಂತೆ ಮಾಡಲು ಜನಪದ ಸೊಗಡನ್ನು ಪಸರಿಸುವ ಹಾಗೂ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಬಾಲವಿಕಾಸ ಅಕಾಡೆಮಿ ಕಾರ್ಯ ಮಾಡುತ್ತಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ್ ಟೆಂಗಿನಕಾಯಿ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿಯಾಗಿ ಏರ್ಪಡಿಸಿದ್ದ ಮಕ್ಕಳ ಹಬ್ಬ ಸಾಂಸ್ಕೃತಿಕ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದಂತೆ ಈಗಿನಿಂದಲೇ ಅವರಿಗೆ ದೇಶೀಯ ಕಲೆಯ ಬಗ್ಗೆ ಪರಿಚಯ ಮಾಡಿಕೊಡಬೇಕಿದೆ ಎಂದರು.
ಪ್ರತಿ ಮಕ್ಕಳಲ್ಲಿಯೂ ಕ್ರಿಯಾತ್ಮಕತೆ ಇದ್ದೆ ಇರುತ್ತದೆ, ಮಕ್ಕಳು ಈ ಶಕ್ತಿಗಳನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಂಡು ಉತ್ತಮ ನಾಗರಿಕರಾಗಿ ಹೊರಹೊಮ್ಮುವಂತೆ ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಬಾಲವಿಕಾಸ ಅಕಾಡೆಮಿ ವತಿಯಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ರಾಜ್ಯಾದ್ಯಂತ ಮಕ್ಕಳ ಹಬ್ಬ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ದೇಶಿಯ ಆಟಗಳ ಪುಸ್ತಕ: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ನಡೆಯಲಿರುವ ಈ ಸಾಂಸ್ಕೃತಿಕ ಮೇಳದಲ್ಲಿ ಮಕ್ಕಳಿಗಾಗಿ ವಿವಿಧ ದೇಶಿಯ ಕಲೆ, ಗ್ರಾಮೀಣ ಕ್ರೀಡೆಗಳಲ್ಲಿ ಸ್ಪರ್ಧಿಸಲು ವೇದಿಕೆ ನಿರ್ಮಿಸಿಕೊಡಲಾಗಿದೆ. ಸ್ಪರ್ಧೆಯ 3 ವಿಜೇತ ತಂಡಗಳಿಗೆ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವಕಾಶ ನೀಡಲಾಗುವುದು. ಮಕ್ಕಳ ಹಳ್ಳಿಯ ಆಟಗಳು ಕುರಿತು ಪುಸ್ತಕ ಹೊರತರಲಾಗಿದೆ. ವೀಡಿಯೋ ಪ್ರದರ್ಶನದ ಮೂಲಕ ಮಕ್ಕಳಿಗೆ ಲಗೋರಿ, ಆಣಿಕಲ್ಲು, ಮರಕೋತಿ, ಬುಗುರಿ ಮತ್ತಿತರ ಆಟಗಳ ಪರಿಚಯ ಮಾಡಿಕೊಡುವ ಕಾರ್ಯವನ್ನೂ ಅಕಾಡೆಮಿ ಮಾಡುತ್ತಿದೆ ಎಂದರು.
ಮಕ್ಕಳ ಪ್ರತಿಭೆ ಗುರುತಿಸಿ: ಅಧ್ಯಕ್ಷತೆ ವಹಿಸಿದ್ದ ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ಮಾತನಾಡಿ, ಜನಪದ ಕಲೆ, ಸಾಹಿತ್ಯದ ಪುನರುತ್ಥಾನಕ್ಕೆ ನಾವೆಲ್ಲರೂ ಪ್ರೋತ್ಸಾಹಿಸುವ ಪಣ ತೊಡಬೇಕು. ಪೋಷಕರು, ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಹೊರತರಲು ಮುಂದಾಗಬೇಕು. ಮಕ್ಕಳ ಪ್ರತಿಭೆಹೊರತರುವ ನಿಟ್ಟಿನಲ್ಲಿ ಶಾಲೆಗಳಲ್ಲಿ 3 ತಿಂಗಳಿಗೊಮ್ಮೆ ಕಾರ್ಯಕ್ರಮಗಳನ್ನು ಆಯೋಜಿಸಲು ಸಲಹೆ ನೀಡಿದರು.
ಜಿಪಂ ಅಧ್ಯಕ್ಷೆ ಸುಮಂಗಳಮ್ಮ ಗುಬಾಜಿ, ಪಾಲಿಕೆ ಮೇಯರ್ ಇಬ್ರಾಹಿಂಬಾಬು, ಬಾಲವಿಕಾಸ ಅಕಾಡೆಮಿ ರಾಜ್ಯ ಮಟ್ಟದ ಸದಸ್ಯ ಪ್ರದೀಪ್ ಭೂಸನೂರಮಠ, ಜಿಲ್ಲಾ ಮಟ್ಟದ ಸದಸ್ಯ ಪರಮೇಶ್ವರಯ್ಯ ಸೊಪ್ಪಿನಮಠ, ಪಾಲಿಕೆ ಸದಸ್ಯ ಹುಲಿರಾಜು, ಮಲ್ಲಸಜ್ಜನ ವ್ಯಾಯಾಮ ಶಾಲೆಯ ಕಾರ್ಯದರ್ಶಿ ಟಿ.ಜಿ. ವಿಠ್ಠಲ್, ಜಿಪಂ ಸಹಾಯಕ ಕಾರ್ಯದರ್ಶಿ ಹೊಸಮನಿ ಶಂಕರಪ್ಪ, ಎಲ್ಲ ತಾಲೂಕುಗಳ ವಿವಿಧ ಶಾಲೆಯ ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಸ್. ಕಲಾದಗಿ ಪ್ರಸ್ತಾವಿಕ ಮಾತನಾಡಿದರು. ಹಿರೇಹಡಗಲಿಯ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಗೂ ರೈತಗೀತೆ ಹಾಡಿದರು. ಕೊಟ್ರಪ್ಪ ವಂದಿಸಿದರು. ಶಾಸಕ ಸೋಮಶೇಖರ ರೆಡ್ಡಿ ಚಿಣ್ಣಿದಾಂಡು ಆಡುವ ಮೂಲಕ ಮಕ್ಕಳ ಗ್ರಾಮೀಣ ಕ್ರೀಡೆಗಳಿಗೆ ಚಾಲನೆ ನೀಡಿದರು. ವಿವಿಧ ತಾಲೂಕುಗಳ ಶಾಲೆಗಳಿಂದ ಆಗಮಿಸಿದ್ದ ಮಕ್ಕಳು ಕೋಲಾಟ, ಖವಾಲಿ, ದೇಶಭಕ್ತಿಗೀತೆ, ಜಾನಪದ ನೃತ್ಯ ಮತ್ತಿತರ ಕಲೆಗಳನ್ನು ಪ್ರದರ್ಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

