ಡೆಂಕಣ ಮರಡಿಯಲ್ಲಿ ಹರಕೆ ಹೊತ್ತರೆ ಫಲ
ಚಂದ್ರು ಕೊಂಚಿಗೇರಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಫೆ. 27
ಸುಕ್ಷೇತ್ರ ಮೈಲಾರಲಿಂಗನ ಕಾರ್ಣಿಕ ನುಡಿ ಹೇಳುವ ಡೆಂಕಣ ಮರಡಿಯಲ್ಲಿ ಹರಕೆ ಹೊತ್ತು ಆಕೃತಿ ಮಾಡಿದರೆ ವರ್ಷದಲ್ಲೇ ಪ್ರಗತಿ ಸಾಧಿಸುತ್ತಾರೆಂಬ ನಂಬಿಕೆಯಿದೆ.
ಭಕ್ತರು ತಮ್ಮ ಬದುಕಿನಲ್ಲಿ ನೆಮ್ಮದಿ, ಸುಖ, ಶಾಂತಿಗಾಗಿ ಡೆಂಕಣ ಮರಡಿ ತುಂಬೆಲ್ಲಾ ಆಕೃತಿಗಳನ್ನು ನಿರ್ಮಾಣ ಮಾಡುತ್ತಾರೆ. ಹರಕೆ ಕಟ್ಟಿಕೊಂಡು ಮಣ್ಣಿನಲ್ಲೇ ಮನೆ ಆಕೃತಿ, ಕೃಷಿ ಮಾಡುವವರು ಧಾನ್ಯ ರಾಶಿಗಳ ಆಕೃತಿ ಮಾಡುವ ಪರಿಪಾಠ ಮೈಲಾರ ಕಾರ್ಣಿಕದ ಸ್ಥಳ ಡೆಂಕಣ ಮರಡಿಯಲ್ಲಿ ಇಂದಿಗೂ ಚಾಲ್ತಿಯಲ್ಲಿದೆ.
ಧಾನ್ಯ ರಾಶಿಗಳ ಆಕೃತಿ: ಡೆಂಕಣ ಮರಡಿಯಲ್ಲಿ ನಾಡಿನ ಭವಿಷ್ಯ ಹೇಳುವ ಗ್ವಾರಪ್ಪನಿಗೆ ಪೂಜೆ ಸಲ್ಲಿಸುತ್ತಾ, ಇಲ್ಲಿರುವ ದೊಡ್ಡ ಆಲದ ಮರದ ಕೆಳಗೆ ಕುದುರೆಕಾರರು ನಾರಿನ ಬಾರುಕೋಲಿನಿಂದ ಕಾಲಿಗೆ ಹೊಡೆದುಕೊಳ್ಳುತ್ತಾ ತಮ್ಮ ಸೇವೆ ಮಾಡುತ್ತಾರೆ. ದೇವರಲ್ಲಿ ನಂಬಿಕೆ ಇಟ್ಟು ತಮ್ಮ ಆಸೆ ಪ್ರಕಾರವಾಗಿ ತಮ್ಮ ಹೊಲಗಳಲ್ಲಿ ಮಳೆ-ಬೆಳೆ ಚೆನ್ನಾಗಿ ಬರಲಿ, ಮುಂದಿನ ವರ್ಷಕ್ಕೆ ಹೊಸ ಮನೆ ಕಟ್ಟುವಂತಾಗಲೀ ಎಂಬ ಇತ್ಯಾದಿ ನಂಬಿಕೆಗಳನ್ನು ಇಟ್ಟು ಮನೆ ಮತ್ತು ಧಾನ್ಯ ರಾಶಿಗಳ ಆಕೃತಿಗಳನ್ನು ಮಾಡುತ್ತಾರೆ.
ಮನೆಗಳಲ್ಲಿ ಯಾವುದೇ ತೊಂದರೆಗಳು ಬಾರದಂತೆ ಬೇಡಿಕೊಂಡು ಮೈಲಾರಲಿಂಗೇಶ್ವರ ದೇವರಿಗೆ ದೇವಸ್ಥಾನದ ಆವರಣದಲ್ಲಿ ದೀವಟಿಕೆಗೆ ಎಣ್ಣೆ ಹಾಕಿ ಸುಡುತ್ತಾರೆ. ದೇವಸ್ಥಾನದಲ್ಲಿರುವ ಆಲದ ಮರದಡಿ ದುಂಡಾಕಾರದ ದೇವರ ಕಲ್ಲುಗಳ ಮುಂದೆ ಬೇಡಿಕೊಂಡು ದುಂಡಾಕಾರದ ಕಲ್ಲುಗಳನ್ನು ಎತ್ತುತ್ತಾರೆ, ಈ ಕಲ್ಲುಗಳು ಮೇಲಕ್ಕೆ ಎತ್ತಿದರೆ ಆಸೆ ಈಡೇರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ದೇವಸ್ಥಾನದ ಮುಂದಿನ ಆವರಣದಲ್ಲಿ ಕುದುರೆಕಾರರು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತಾ ನಾರಿನ ಬಾರುಕೋಲುಗಳಿಂದ ಕಾಲಿಗೆ ಹೊಡೆದುಕೊಳ್ಳುತ್ತಾರೆ. ಈ ರೀತಿ ದೇವರ ಸೇವೆ ಮಾಡುವವರಿಗೆ ಭಕ್ತರು ದಾಣಿ ಮಂಡಕ್ಕಿಗಳನ್ನು ನೀಡುತ್ತಾರೆ.
ಗೊರವರ ದೋಣಿ ಸೇವೆ (ಜಾತ್ರೆಯಲ್ಲಿ ತಯಾರಿಸಿರುವ ಪ್ರಸಾದವನ್ನು ಗೊರವರನ್ನು ಕರೆತಂದು ದೋಣಿಗೆ ಪೂಜೆ ಮಾಡಿಸುವುದು) ಮಾಡಿದ ನಂತರವೇ ಎಲ್ಲರೂ ಊಟ ಮಾಡುತ್ತಾರೆ. ಹಣ್ಣು, ತುಪ್ಪ, ಮನೆಯಿಂದ ತಂದಿರುವ ಮೀಸಲು ಬುತ್ತಿಯನ್ನು ದೋಣಿಗೆ ತುಂಬಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

