ಬಳ್ಳಾರಿ

ಆಡಳಿತದಲ್ಲಿ ಕಿತ್ತಾಡಿದ್ದೇ ಸಾಧನೆ

Published On :

ಜಿ. ಸೋಮಶೇಖರ್
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಫೆ. 23
ಕೊಟ್ಟೂರು ಪಟ್ಟಣ ಪಂಚಾಯಿತಿಯ ಆಡಳಿತ ಅಭಿವೃದ್ಧಿ, ಉತ್ತಮ ಆಡಳಿತ ನಿರ್ವಹಣೆಗಿಂತ ಸದಾ ಒಂದಿಲ್ಲೊಂದು ತಗಾದೆ ತೆಗೆಯುತ್ತಾ, ಪರಸ್ಪರರ ವಿರುದ್ಧ ಜಿಲ್ಲಾಧಿಕಾರಿ ಮತ್ತು ಲೋಕಾಯುಕ್ತರಿಗೆ ದೂರು ಸಲ್ಲಿಸುತ್ತಲೇ ಭರ್ಜರಿ ಐದು ವರ್ಷಗಳ ಪೂರ್ಣಾವಧಿಯನ್ನು ಇಲ್ಲಿನ ಕೌನ್ಸಿಲರ್‌ಗಳು ಪೂರೈಸಿದ್ದಾರೆ.
80ರ ದಶಕದಲ್ಲಿ ಪುರಸಭೆ ಸ್ಥಾನಮಾನ ಹೊಂದಿದ್ದ ಕೊಟ್ಟೂರು ಸದಸ್ಯರು ಮತ್ತು ಅಧಿಕಾರಿಗಳ ಬೇಜಾವಾಬ್ದಾರಿತನದಿಂದಾಗಿ ಪಟ್ಟಣ ಪಂಚಾಯಿತಿಯಾಗಿ ಹಿಂಬಡ್ತಿ ಪಡೆಯುವಂತಾಗಿದ್ದು ನಿಜಕ್ಕೂ ದುರಂತ. 20 ಸದಸ್ಯ ವಾರ್ಡುಗಳನ್ನು ಹೊಂದಿರುವ ಪಟ್ಟಣದಲ್ಲಿ ಸಮರ್ಪಕ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಪ್ರತಿ ವರ್ಷ ಸರ್ಕಾರ ನೀಡುತ್ತಾಬಂದ ಎಸ್‌ಎಫ್‌ಸಿ ಅನುದಾನ ಮುಖ್ಯಮಂತ್ರಿಗಳ ವಿಶೇಷ ಯೋಜನೆಯಡಿ ಅನುದಾನಗಳನ್ನು ಇಲ್ಲಿನ ಕೌನ್ಸಿಲರ್ ಮಹಾಶಯರು ಪದೇಪದೇ ಚರಂಡಿ ಕಾಮಗಾರಿ, ರಸ್ತೆಯ ಮೆಟಲಿಂಗ್ ಡಾಂಬರೀಕರಣ, ಡೆಕ್ ಸ್ಲ್ಯಾಬ್‌ಗಳ ನಿರ್ಮಾಣಕ್ಕೆ ಬಳಕೆ ಮಾಡಿಕೊಂಡಿದ್ದು ಬಿಟ್ಟರೆ ಶಾಶ್ವತ ಕಾಮಗಾರಿಗಳಿಗೆ ಬಳಕೆ ಮಾಡಿದ ಉದಾಹರಣೆ ಸಿಗುವುದಿಲ್ಲ.
ಪ್ರಮುಖ ಧಾರ್ಮಿಕ ಮತ್ತು ಮಾರುಕಟ್ಟೆ ಪಟ್ಟಣ ಎಂದು ಗುರುತಿಸಿಕೊಂಡಿರುವ ಕೊಟ್ಟೂರು ಪಟ್ಟಣದಲ್ಲಿ ನೈರ್ಮಲ್ಯಕ್ಕೆ ಅತಿ ಹೆಚ್ಚು ಗಮನಕೊಡುವುದು ಅವಶ್ಯವಾಗಿದೆ. 20 ವಾರ್ಡ್‌ಗಳ ಪೈಕಿ ಬೆರಳಣಿಕೆಯ ಪ್ರಮಾಣದಲ್ಲಿ ಮೂತ್ರಾಲಯ ಇವೆ. ಪಟ್ಟಣದ ಬಹುತೇಕ ಕಡೆಗಳಲ್ಲಿ ರಸ್ತೆ ಬದಿಯ ಚರಂಡಿ, ಖಾಲಿ ಜಾಗಗಳೇ ಮೂತ್ರವಿಸರ್ಜನಾ ತಾಣಗಳು. ಪಟ್ಟಣದ ಪ್ರತೀ ವಾರ್ಡಿನಲ್ಲಿ ಒಂದಾದರೂ ಶೌಚಾಲಯ ನಿರ್ಮಿಸಬೇಕಿರುವುದು ಅವಶ್ಯ. ಈ ಚುನಾವಣೆಯಲ್ಲಿ ಆಯ್ಕೆಯಾಗಿ ಬರುವವರು ಇತ್ತ ಗಮನಹರಿಸಲಿ. ಹರಿಜನ ಕೇರಿ, 16ನೇ ವಾರ್ಡ್‌ನ ಪ್ರದೇಶ ಮತ್ತಿತರ ಕಡೆಗಳಲ್ಲಿ ಸೋಲಾರ್ ವಿದ್ಯುತ್‌ದೀಪ ಕಂಬಗಳ ಅಳವಡಿಕೆ, ಹೈಮಾಸ್ಕ್ ಕಂಬಗಳನ್ನು ಅಳವಡಿಸಿರುವುದು ಗಮನಾರ್ಹ ಅಂಶ.
ಉದ್ಯಾನಗಳ ಅಧ್ವಾನ: ಪಟ್ಟಣದ ಪ್ರತೀ ವಾರ್ಡಿನಲ್ಲಿ ಉದ್ಯಾನವನಕ್ಕಾಗಿ ಸ್ಥಳ ಸಾಕಷ್ಟು ಮೀಸಲಾಗಿದ್ದರೂ ಆಂಜನೇಯ ಮತ್ತು ಎಲ್.ಬಿ. ಬಡಾವಣೆಗಳಲ್ಲಿ ಮಾತ್ರ ರು. 20 ಲಕ್ಷ ವೆಚ್ಚದ ಉದ್ಯಾನವನಕ್ಕೆಂದು ಕಾಂಪೌಂಡ್ ನಿರ್ಮಿಸಲಾಗಿದೆ. ಕಾಂಪೌಂಡ್ ಒಳಗೆ ಯಾವುದೇ ಸಸಿ, ಗಿಡ, ಮರಗಳು ಎಲ್ಲೂ ಇಲ್ಲ. ರಾಜೀವ್‌ನಗರ, ಜೆಪಿ ನಗರ ಆಶ್ರಯ ಬಡಾವಣೆಗಳು ಮೂಲಭೂತ ಸಮಸ್ಯೆಗಳಿಂದ ನರಳುತ್ತಿವೆ. ರಸ್ತೆ, ಚರಂಡಿಗಳನ್ನು ನಿರ್ಮಿಸುವ ಪ್ರಸ್ತಾವನೆ ಪ್ರತಿ ಸಲ ಸದಸ್ಯರು ಮಂಡಿಸಿದ್ದಾದರೂ ಕಾರ್ಯರೂಪ ಪಡೆದಿಲ್ಲ. ಈ ಬಡಾವಣೆಗಳ ಜನರ ಬವಣೆಯನ್ನು ನೀಗಿಸಬೇಕಿದೆ.
ಪಟ್ಟಣ ಪಂಚಾಯಿತಿ ಸದಸ್ಯರಲ್ಲಿ ಹೆಚ್ಚಾಗಿ ಹೊಂದಾಣಿಕೆಯ ಅಭಾವ ಕಂಡುಬಂದಿದೆ. ಇದರಿಂದಾಗಿ ಪಟ್ಟಣಕ್ಕೆ ಅತಿ ಆವಶ್ಯಕವಾಗಿ ಬೇಕಿರುವ ಒಳಚರಂಡಿ ಯೋಜನೆ ಜಾರಿಗೆ ಸರ್ಕಾರ ರು. 7.5 ಕೋಟಿ ಯೋಜನೆ ರೂಪಿಸಿದ್ದರೂ ಇಂತಹ ಮಹತ್ವದ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸೂಕ್ತ ಸಮಯದಲ್ಲಿ ಸಾಮಾನ್ಯ ಸಭೆಯ ನಿರ್ಣಯ ಕೈಗೊಳ್ಳದೇ ಇರುವ ಕಾರಣದಿಂದಾಗಿ ಈ ಯೋಜನೆ ನೆನೆಗುದಿಗೆ ಬಿದ್ದಿದೆ.
ಅನುದಾನ ಬಂದರೂ: ಕೊಟ್ಟೂರು ಪಟ್ಟಣ ಪಂಚಾಯಿತಿಗೆ ಹೊಸ ಕಟ್ಟಡ ನಿರ್ಮಾಣ ಕಾರ್ಯ ಆವಶ್ಯವಾಗಿದೆ. ಇದಕ್ಕಾಗಿ ರು. 50 ಲಕ್ಷಕ್ಕೂ ಅಧಿಕ ಅನುದಾನ ಸುಮಾರು 2 ವರ್ಷಗಳಿಂದ ಮೀಸಲಿಡಲಾಗಿದೆ. ಆದರೂ ಕಟ್ಟಡ ನಿರ್ಮಿಸುವ ಕೆಲಸಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಮುಂದಾಗಲಿಲ್ಲ. ಪಟ್ಟಣದ ಘನ ತ್ಯಾಜ್ಯ ವಿಲೇವಾರಿ ಘಟಕದ ನಿರ್ಮಾಣಕ್ಕೆ ರು. 1.5 ಕೋಟಿಗೂ ಅಧಿಕ ಹಣ ಮೀಸಲಾಗಿದೆ. ಇದು ಕೂಡ 2 ವರ್ಷಗಳಿಂದ ಕಾರ್ಯಗತಗೊಂಡಿಲ್ಲ.
1ನೇ ವಾರ್ಡ್‌ನ ಮಂಜುಳಾ ಲಿಂಗಾಚಾರಿ, ಜೆ. ಬಸವರಾಜ್ (2), ಮರಬದ ನಾಗರಾಜ್(3) ರತ್ನಮ್ಮ ಕೊಟ್ರೇಶ್ (4), ಎಂ. ನಾಗೇಂದ್ರಪ್ಪ (5), ಸಿರಿಬಿ ಅಂಜಿನಮ್ಮ (6), ಡಿ. ಮಲ್ಲಿಕಾರ್ಜುನ (7), ಪಿ. ಭರಮನಗೌಡ (8), ಕಾಸಲ ಸಾವಿತ್ರಮ್ಮ (9),(ಅಧ್ಯಕ್ಷೆ), ಬಿ. ಉಮೇಶ್ (10), ಹುಡೇದ ಶಂಕ್ರಪ್ಪ,(11), ಉಮಾರಾಜಶೇಖರ (12), ಎಂ.ಎಂ.ಜೆ. ಕುಮಾರಸ್ವಾಮಿ (13), ಎಚ್.ಆರ್. ಕೊಟ್ರೇಶ್ (14), ಬೂದಿ ಮೀನಾಕ್ಷಮ್ಮ (15), ಕೊಟ್ರೇಶ್ ಕಾಮಶೆಟ್ಟಿ (16), ಎಚ್. ಗುರುಬಸವರಾಜ್(17)  (ಉಪಾಧ್ಯಕ್ಷ), ವೀಣಾ ವಿವೇಕಾನಂದಗೌಡ (18), ಶಶಿಕಲಾ ನಾಗರಾಜ (19), ಬಿ. ದುರುಗೇಶ್ (20) ನಿರ್ಗಮಿತ ಸದಸ್ಯರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.