ಬಳ್ಳಾರಿ: ಜನಜೀವನ ಸಹಜ ಸ್ಥಿತಿಗೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 21
ಬೆಲೆ ಏರಿಕೆ ನೀತಿ ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಅಖಿಲ ಭಾರತ ಮುಷ್ಕರಕ್ಕೆ ಎರಡನೇ ದಿನವಾದ ಗುರುವಾರ ಬಳ್ಳಾರಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಲಾ - ಕಾಲೇಜುಗಳು, ಬಸ್ಗಳು ಎಂದಿನಂತೆ ಸಂಚಾರ ನಡೆದಿತ್ತು. ಬಹುತೇಕ ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು.
ದೂರ ಸಂಚಾರ ನಿಗಮ ನಿಯಮಿತ, ಬ್ಯಾಂಕ್, ವಿಮೆ ಹಾಗೂ ಅಂಚೆ ಕಚೇರಿ ನೌಕರರು ಸೇವೆ ಸ್ಥಗಿತಗೊಳಿಸುವ ಮೂಲಕ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಪೆಟ್ರೋಲ್ ಬಂಕ್, ಚಿತ್ರಮಂದಿರಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು. ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನಗರದಲ್ಲಿ ಮೆರವಣಿಗೆ ನಡೆಸಿತು. ಗಡಗಿ ಚನ್ನಪ್ಪ ವೃತ್ತದಲ್ಲಿ ಕೇಂದ್ರದ ಪ್ರತಿಕೃತಿ ದಹಿಸಿದರು.
ಕಾರ್ಯಕರ್ತೆಯರ ಮೆರವಣಿಗೆ: ಜಂಟಿ ಸಮಿತಿ ಮುಖಂಡರಾದ ಜೆ. ಸತ್ಯಬಾಬು, ಕೆ. ಸೋಮಶೇಖರ್, ಆರ್.ಎಸ್. ಬಸವರಾಜ್, ಆದಿಮೂರ್ತಿ, ವಿಜಯಕುಮಾರ್, ಕಾಂತಯ್ಯಸ್ವಾಮಿ ಗುತ್ತರಗಿಮಠ, ಚೆನ್ನಪ್ಪ, ನಾಗಲಕ್ಷ್ಮೀ, ಭುವನಾ, ಚಂದ್ರಕುಮಾರಿ ಮತ್ತಿತರರು ಉಪಸ್ಥಿತರಿದ್ದರು. ಮುಷ್ಕರ ಬೆಂಬಲಿಸಿ ನೂರಾರು ಅಂಗನವಾಡಿ ಕಾರ್ಯಕರ್ತೆಯರು ನಗರದಲ್ಲಿ ಮೆರವಣಿಗೆ ನಡೆಸಿದರು. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕಚೇರಿಗೆ ತೆರಳಿ, ಮನವಿ ಸಲ್ಲಿಸಿದರು. ಸಂಘದ ಎರ್ರೆಮ್ಮ, ನೀಲಾವತಿ, ಸರಸ್ವತಿ ನೇತೃತ್ವ ವಹಿಸಿದ್ದರು.
ಅಂಚೆ ಕಚೇರಿ ಎದುರು ಧರಣಿ: ಅಖಿಲ ಭಾರತ ಮುಷ್ಕರ ಬೆಂಬಲಿಸಿ ಇಲ್ಲಿನ ಅಂಚೆ ಇಲಾಖೆಯ ಪ್ರಧಾನ ಕಚೇರಿ ಮುಂದೆ ಧರಣಿ ನಡೆಸಿದ ನೌಕರರು, ಅಂಚೆ ನೌಕರರ ವೇತನ ಪರಿಷ್ಕರಣೆ ಹಾಗೂ ಗ್ರಾಮೀಣ ಅಂಚೆ ನೌಕರರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಎಂ. ಸತೀಶ್, ವೈ.ರಾಂ ಪ್ರಸಾದ್, ಬಿ.ಎಂ. ದ್ವಾರಕೀಶ್, ಅಶ್ವತ್ಥ್ ನಾರಾಯಣ, ಕೆ. ಎರಿಸ್ವಾಮಿ, ಬಸವರಾಜ್ ಇದ್ದರು. ರಾಷ್ಟ್ರೀಕೃತ ಬ್ಯಾಂಕ್ಗಳ ನೌಕರರು ಹಾಗೂ ಸಂಘಗಳ ಪದಾಧಿಕಾರಿಗಳು ಇಲ್ಲಿನ ಭಾರತೀಯ ಸ್ಟೇಟ್ ಬ್ಯಾಂಕ್ ಮುಖ್ಯ ಕಚೇರಿ ಪ್ರತಿಭಟನೆ ನಡೆಸಿದರು.
ಎಸ್ಬಿಐ ಕಾರ್ಮಿಕ ಸಂಘಟನೆಯ ಬಿ. ರಾಮುಡು, ನಾಗರಾಜ್ ವಿ. ಬಳ್ಳಾರಿ ಜಿಲ್ಲಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ನ ಅಧ್ಯಕ್ಷ ಸತ್ಯನಾರಾಯಣ, ಜೆ. ಯೋಗೇಂದ್ರ, ಹಂಪಯ್ಯ, ಆನಂದತೀರ್ಥ, ಭಾಗವಹಿಸಿದ್ದರು. ತುಂಗಭದ್ರಾ ಗ್ರಾಮೀಣ ಬ್ಯಾಂಕ್ ನೌಕರರ ಸಂಘ ಪ್ರತ್ಯೇಕವಾಗಿ ಧರಣಿ ನಡೆಸಿ, ಮುಷ್ಕರದ ಎರಡನೇ ದಿನಕ್ಕೆ ಬೆಂಬಲ ಸೂಚಿಸಿತು.
ಗ್ರಾಮೀಣ ಜನರ ಪರದಾಟ
ಹೂವಿನಹಡಗಲಿ: ಬೆಲೆ ಏರಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೇಶವ್ಯಾಪ್ತಿ ಕರೆ ನೀಡಿದ್ದ ಬಂದ್ಗೆ ತಾಲೂಕಿನಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗುರುವಾರವೂ ತಾಲೂಕಿನ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಉಳಿದಂತೆ ವಿವಿಧ ಬ್ಯಾಂಕ್, ಅಂಚೆ ಕಚೇರಿ, ಸಾರಿಗೆ ವ್ಯವಸ್ಥೆ ಅಸಮರ್ಪಕವಾಗಿದ್ದರಿಂದ ಗ್ರಾಮೀಣ ಪ್ರದೇಶದ ಜನತೆ ಪ್ರಯಾಣಿಸಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ತಾಲೂಕಿನ ಯಾವ ಕಡೆಗಳಲ್ಲಿಯೂ ಬಂದ್ ಹಿನ್ನೆಲೆಯಲ್ಲಿ ಅನಾಹುತಗಳು ಸಂಭವಿಸದೆ ಶಾಂತಿಯುತವಾಗಿ ನಡೆದಿದೆ.
ಸಿಗಲಿಲ್ಲ ಜನಬೆಂಬಲ
ಹಗರಿಬೊಮ್ಮನಹಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಎರಡು ದಿನಗಳ ಕಾಲ ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಎರಡನೆ ದಿನ ಗುರುವಾರ ಪಟ್ಟಣದಲ್ಲಿ ಜನಬೆಂಬಲ ಸಿಗಲಿಲ್ಲ. ಹೀಗಾಗಿ ಮುಷ್ಕರ ಸಂಪೂರ್ಣ ವಿಫಲವಾಯ್ತು. ಹೊಟೇಲ್, ತರಕಾರಿ ಮಾರುಕಟ್ಟೆ ಸೇರಿದಂತೆ ಎಲ್ಲ ವಾಣಿಜ್ಯ ವಹಿವಾಟು ನಡೆಸುವಂತಹ ಸಂಸ್ಥೆಗಳು ಎಂದಿನಂತೆ ಯಥಾಪ್ರಕಾರ ತಮ್ಮ ವ್ಯವಹಾರ ನಡೆಸಿದವು. ಆದರೆ, ಬ್ಯಾಂಕ್ಗಳು ಮುಚ್ಚಲ್ಪಟ್ಟಿದ್ದವು. ಸರ್ಕಾರಿ ವಿದ್ಯಾಸಂಸ್ಥೆಗಳಲ್ಲಿ ತರಗತಿಗಳು ಪ್ರಾರಂಭವಾದವು.
ಪ್ರಧಾನಿ ಪ್ರತಿಕೃತಿ ದಹನ: ಮಾತಿನ ಚಕಮಕಿ
ಹಗರಿಬೊಮ್ಮನಹಳ್ಳಿ: ಪಟ್ಟಣದ ಬಸವೇಶ್ವರ ಬಜಾರ್ನ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ ಮೇಲೆ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಪ್ರತಿಕೃತಿ ದಹಿಸುವ ಸಂಭಂದ ಮುಷ್ಕರ ಬೆಂಬಲಿತ ಪ್ರತಿಭಟನಾಕಾರರು ಹಾಗೂ ಪಿಎಸೈ ಮಧ್ಯೆ ಗುರುವಾರ ಮಧ್ಯಾಹ್ನ ಆರಂಭವಾದ ತೀವ್ರ ಮಾತಿನ ಚಕಮಕಿ, ಎಳೆದಾಟ, ತಳ್ಳಾಟದ ನಂತರವೂ ಪ್ರಧಾನಿ ಪ್ರತಿಕೃತಿಗೆ ಬೆಂಕಿ ಹಚ್ಚಿ ದಹಿಸಲಾಯಿತು.
ಮಹಿಳಾ ಪ್ರತಿಭಟನಾಕಾರರನ್ನು ಹೆದ್ದಾರಿ ಮೇಲೆಯೇ ಎಳೆದಾಡಿದ್ದಲ್ಲದೆ, ಅವರ ಮೇಲೆ ಏಕಾಏಕಿ ಲಾಠಿ ಬೀಸಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ, ಸಿಐಟಿಯು ಕಾರ್ಮಿಕ ಸಂಘಟನೆ, ಆಟೋ, ಅಂಗನವಾಡಿ, ಬಿಸಿಯೂಟ ನೌಕರರ ಸಂಘ, ಎಸ್ಎಫ್ಐ, ಡಿವೈಎಫ್ಐ, ಪ್ರಾಂತ ರೈತ ಸಂಘ, ರಾಜ್ಯ ಸರ್ಕಾರಿ ನೌಕರರ ಒಕ್ಕೂಟಕ್ಕೆ ಸೇರಿದ ನೂರಾರು ಸಂಖ್ಯೆಯ ಪ್ರತಿಭಟನಾಕಾರರು, ಪಿಎಸೈಯನ್ನು ತಕ್ಷಣ ಅಮಾನತುಗೊಳಿಸುವಂತೆ ಆಗ್ರಹಿಸಿದರು. ಚಳುವಳಿಗಾರರ ಮೇಲಿನ ಪೊಲೀಸ್ ದೌರ್ಜನ್ಯಕ್ಕೆ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಬಸವೇಶ್ವರ ಬಜಾರ್ನಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಾಲೂಕ ಕಚೇರಿ ಮುಂದೆ ಧರಣಿ ನಡೆಸಿ ಹಲ್ಲೆಗೆ ಯತ್ನಿಸಿರುವ ಪಿಎಸೈಯನ್ನು ಅಮಾನತು ಮಾಡುವಂತೆ ಒಕ್ಕೂರಲಿನಿಂದ ಒತ್ತಾಯಿಸಿದರು.
ಸಿಪಿಎಂ ತಾಲೂಕು ಕಾರ್ಯದರ್ಶಿ ರಂಗಪ್ಪ ದಾಸರ, ಎಸ್. ಜಗನ್ನಾಥ, ಪ್ರಾಂತ ರೈತ ಸಂಘದ ಅಧ್ಯಕ್ಷ ಕೊಟಿಗಿ ಮಲ್ಲಿಕಾರ್ಜುನ, ಸರ್ಕಾರಿ ನೌಕರರ ಒಕ್ಕೂಟದ ಮುಖಂಡ ರಂಗನಾಥಹವಾಲ್ದಾರ, ಜನವಾದಿ ಮಹಿಳಾ ಸಂಘಟನೆಯ ಮಾಳಮ್ಮ, ಸಿಐಟಿಯು ತಾಲೂಕಾಧ್ಯಕ್ಷ ಕೈಲಾಸ್ಮೂರ್ತಿ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಸೌಭಾಗ್ಯಮ್ಮ, ಅಂಗವಿಕಲರ ಸಂಘದ ಎಚ್. ಉಸ್ಮಾನ್ಭಾಷ, ಎಸ್ಎಫ್ಐ ಕಾರ್ಯದರ್ಶಿ ಎ.ಕೆ.ದೊಡ್ಡಬಸವರಾಜ, ಡಿವೈಎಫ್ಐನ ಓ. ತಿಂದಪ್ಪ, ಬಸವರಾಜ ಕಮ್ಮಾರ್, ಬೆಂಗಳೂರು ವಿರೇಶ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

