ಬಳ್ಳಾರಿ

ತುಂಗಭದ್ರೆ ಪಾತ್ರದಲ್ಲಿ ಜೀವಜಲವಿಲ್ಲ!

Published On :

-ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 16
ಮೊನ್ನೆ ತಾನೆ ತನ್ನ ಪಾಲಿನ ನೀರಲ್ಲದೆ ಅಕ್ರಮವಾಗಿ 6 ಟಿಎಂಸಿ ನೀರನ್ನು ಕದ್ದಿದ್ದ ಆಂಧ್ರಪ್ರದೇಶ ಈಗ ನದಿ ಕೋಟಾದ ನೀರನ್ನು ಕಾಲುವೆ ಮೂಲಕ ಪಡೆಯಲು ಮುಂದಾಗಿದೆ. ಆಂಧ್ರದ ಈ ಧೋರಣೆಗೆ ರಾಜ್ಯದ ರೈತ ಬಲಿಯಾಗುತ್ತಿದ್ದಾನೆ.
ಜಲಾಶಯದ ನೀರನ್ನು ನದಿ ಮೂಲಕ ಪಡೆಯುವುದನ್ನು ಬಿಟ್ಟು, ಎಚ್ಎಲ್ ಕಾಲುವೆ ಬಳಸುವುದರಿಂದ ನದಿ ಪಾತ್ರದ ಹಳ್ಳಿಗಳ ಜನತೆ ಕುಡಿಯಲು, ಹೊಲ-ಗದ್ದೆಗಳಿಗೂ ನೀರಿಲ್ಲದೆ ಸಮಸ್ಯೆ ಎದುರಿಸುವಂತಾಗಿದೆ. ತುಂಗಭದ್ರಾ ಜಲಾಶಯದಲ್ಲಿ 212 ಟಿಎಂಸಿ ನೀರು ಬದಲಾಗಿ, ಈ ವರ್ಷ ಕೇವಲ 125 ಟಿಎಂಸಿ ನೀರು ಸಂಗ್ರಹವಾಗಿ 107 ಟಿಎಂಸಿಯಷ್ಟು ನೀರು ಕಡಿಮೆಯಾಗಿದ್ದರಿಂದ ನದಿ ನೀರನ್ನೇ ನಂಬಿಕೊಂಡು ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಬತ್ತ ಈಗ ಮಣ್ಣು ಪಾಲಾಗುತ್ತಿದೆ.
ನದಿ ನೀರು ಕಾಲುವೆಗೆ: ಈ ವರ್ಷ ಆಂಧ್ರಪ್ರದೇಶಕ್ಕೆ ಜಲಾಶಯದಿಂದ 9.734 ಟಿಎಂಸಿ ನೀರು ನದಿ ಕೋಟಾ ಇದ್ದು, ನವೆಂಬರ್ ಒಳಗೆ 0.633 ಟಿಎಂಸಿ ಪಡೆದಿದೆ. ಇನ್ನು 3 ಟಿಎಂಸಿ ನೀರನ್ನು ಎಚ್ಎಲ್ ಕಾಲುವೆ ಮೂಲಕ ಪಡೆದಿದೆ. ನದಿ ಮೂಲಕ ಪಡೆಯುವ ನೀರನ್ನು ಆಂಧ್ರಪ್ರದೇಶ ಸ್ಥಗಿತಗೊಳಿಸಿದ್ದರಿಂದ ನದಿ ನೀರನ್ನು ನಂಬಿ ಬಿತ್ತನೆ ಮಾಡಿದ ರೈತರ ಪಾಡು ಹೇಳತೀರದು. ಇಲ್ಲಿವರೆಗೆ ಎಚ್ಎಲ್ ಕಾಲುವೆಗೆ ನೀರು ಬಿಡುವ ವಿಷಯದಲ್ಲಿ ಗೊಂದಲವಾಗಿತ್ತು. ಈಗ ನದಿ ನೀರಿನ ಸಮಸ್ಯೆ ಎದುರಾಗಿದೆ.
ಏನಿದು ನದಿ ನೀರಿನ ಸಮಸ್ಯೆ?: ತುಂಗಭದ್ರಾ ಜಲಾಶಯದಿಂದ ಆಂಧ್ರಪ್ರದೇಶ ಹಾಗೂ ಕರ್ನಾಟಕ ಕುಡಿಯಲು ಹಾಗೂ ನೀರಾವರಿಗೆ ನೀರು ಬಳಕೆ ಮಾಡುತ್ತವೆ. ಆಂಧ್ರದ ಪಾಲಿನ ನೀರನ್ನು ನದಿ ಹಾಗೂ ಕಾಲುವೆ ಮೂಲಕ ಬಿಡಲಾಗುತ್ತಿತ್ತು. ಆದರೆ, ನೀರು ಪಡೆಯಲು ನದಿ ಬದಲು ಕಾಲುವೆಯನ್ನು ಬಳಸುವುದರಿಂದ ನದಿ ಪಾತ್ರದಲ್ಲಿ ನೀರಿಲ್ಲದೆ ಗ್ರಾಮಸ್ಥರಿಗೆ ಕುಡಿಯಲು ಹಾಗೂ ಬೆಳೆಗೆ ಉಣಿಸಲು ನೀರಿಲ್ಲದೆ ತುಂಬ ಕಷ್ಟವಾಗಿದೆ.
ಮಾರ್ಚ್ ಅಥವಾ ಏಪ್ರಿಲ್ವರೆಗೆ ನದಿಯಲ್ಲಿ ನೀರು ಹರಿಯಬೇಕು. ನದಿಯಲ್ಲಿ ನೀರಿದೆ, ಬೆಳೆ ತೆಗೆದು ಬರವನ್ನು ದೂರ ಮಾಡಿಕೊಳ್ಳೋಣ ಎಂದು ಸಾವಿರಾರು ಎಕರೆಯಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ನದಿ ನೀರನ್ನು ಏಕಾಏಕಿ ಬಂದ್ ಮಾಡಿದ್ದರಿಂದ ಅವರೆಲ್ಲ ಕಂಗಾಲಾಗಿದ್ದಾರೆ.
'ಸದ್ಯಕ್ಕೆ ಬೇಡ' ಎಂದು ಆಂಧ್ರ ತನ್ನ ನದಿ ಕೋಟಾದ ನೀರು ಸ್ಥಗಿತಗೊಳಿಸಿ ರಾಜ್ಯದ ರೈತರನ್ನು ಶೋಷಿಸುತ್ತಿದೆ. ಈ ವಿಷಯ ಮೊದಲೇ ಗೊತ್ತಾಗಿದ್ದರೆ, ರೈತರು ಖರ್ಚು ಮಾಡಿ ಬೆತ್ತ ಬಳೆಯುತ್ತಿರಲಿಲ್ಲ. ಬರದ ನಡುವೆ ಬಿತ್ತಿದ ಬೆಳೆಗೆ ನೀರಿಲ್ಲ ಎಂದರೆ ಹೇಗೆ? ಅಲ್ಲದೆ, ನದಿಯಲ್ಲಿನ ಜಲಚರಗಳಿಗೂ ಕುತ್ತು ಬಂದಿದೆ. ನದಿ ಪಾತ್ರದ ಗ್ರಾಮ ಹಾಗೂ ಪಟ್ಟಣಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ.
50ಕ್ಕೂ ಹೆಚ್ಚು ಹಳ್ಳಿಗಳಿಗೆ: ನದಿ ಪಾತ್ರದಲ್ಲಿ ಹುಲಿಗಿ, ಹಂಪಿ, ಶಿವಪುರ, ಮಹಮದ್ ನಗರ, ಆನೆಗುಂದಿ, ಬುಕ್ಕಸಾಗರ, ನಡವಿ, ನಿಟ್ಟೂರು, ಮಣ್ಣೂರು, ಸೂಗೂರು, ಮುದ್ದಟನೂರು, ಕೆಂಚನಗುಡ್ಡ, ದೇವಲಾಪುರ, ಸಿರುಗುಪ್ಪ, ಇಬ್ರಾಹಿಂಪುರ, ಬಾಗೇವಾಡಿ, ಹೊನ್ನಾರಳ್ಳಿ, ಶ್ರೀಧರಗಡ್ಡೆ, ಹಚ್ಚೊಳ್ಳಿ, ಚಿಕ್ಕಬಳ್ಳಾರಿ, ಮುರಣಿ, ಚಳ್ಳೆಕೂಡ್ಲೂರು, ಮಾಟೂರು ಮುಂತಾದ 56-60 ಹಳ್ಳಿಗಳು ನೀರಿಲ್ಲದೆ ಪರಿತಪಿಸುತ್ತಿವೆ. ಬೇಸಿಗೆ ಬಂದಂತೆಲ್ಲ ಈ ಸಮಸ್ಯೆ ಉಲ್ಬಣಿಸುತ್ತದೆ.
ತುಂಗಭದ್ರಾ ಮಂಡಳಿ ಪ್ರಕಾರ, ಈ ವರ್ಷ 212 ಟಿಎಂಸಿ ಬದಲಾಗಿ ಕೇವಲ 125 ಟಿಎಂಸಿ ನೀರು ಇದೆ. 107 ಟಿಎಂಸಿ ನೀರು ಕಡಿಮೆ ಇರುವುದರಿಂದ ಸಮಸ್ಯೆ ಉದ್ಭವಿಸಿದೆ. ನೀರು ಕಡಿಮೆ ಇದೆ, ಎರಡನೇ ಬೆಳೆಯಾಗಿ ಬತ್ತ ಬೆಳೆಯಬೇಡಿ ಎಂದಿದ್ದರೂ ಬಿತ್ತಿದ್ದಾರೆ. ಇದೇ ಸಮಸ್ಯೆಗೆ ಕಾರಣ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.