20ಕ್ಕೆ ಬಳ್ಳಾರಿ ಬಂದ್: ಜೆಸಿಟಿಯು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 14
ಕಾರ್ಮಿಕ ಶೋಷಣೆಗೆ ಇತಿಶ್ರೀ ಹಾಡಲು. ಗುತ್ತಿಗೆ ಕಾರ್ಮಿಕ ಪದ್ಧತಿ, ಬೆಲೆ ಏರಿಕೆ ನಿಯಂತ್ರಣಕ್ಕೆ ಆಗ್ರಹಿಸಿ. ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹಾಗೂ ಸಾರ್ವಜನಿಕ ಉದ್ಯಮಗಳಲ್ಲಿ ಖಾಸಗೀಕರಣ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಗಳ ಜಂಟಿ ಸಮಿತಿ (ಜೆಸಿಟಿಯು) ಫೆ. 20 ಮತ್ತು 21ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಬಳ್ಳಾರಿ ಬಂದ್ಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಜೆಸಿಟಿಯುನ ಸೋಮಶೇಖರ, ಸತ್ಯಬಾಬು ಮನವಿ ಮಾಡಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕರು ಶೋಷಣೆ ಎದುರಿಸುತ್ತಾ ಬಂದಿದ್ದಾರೆ. ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕರ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ನಗರದ ಎಲ್ಲ ಅಂಗಡಿ ಮುಂಗಟ್ಟುಗಳು, ಶಾಲಾ-ಕಾಲೇಜುಗಳು, ಬ್ಯಾಂಕ್ಗಳು, ಸಾರಿಗೆ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡುವ ಮೂಲಕ ಕಾರ್ಮಿಕರ ಮುಷ್ಕರಕ್ಕೆ ಬೆಂಬಲ ನೀಡಬೇಕು ಎಂದು ಕೋರಿದರು.
ಜಾಗತೀಕರಣ ಹಾಗೂ ಉದಾರೀಕರಣ ನೀತಿಯಿಂದಾಗಿ ಬೆಲೆ ಏರಿಕೆಗಳು ಹೆಚ್ಚಳವಾಗುತ್ತಿರುವುದರಿಂದ ಕಾರ್ಮಿಕರು ಮತ್ತಷ್ಟು ಶೋಷಣೆಗೆ ಒಳಗಾಗುತ್ತಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಜನರು ಜೀವಿಸುವುದು ದುಸ್ತರವಾಗಿದೆ. ಬೆಲೆ ಏರಿಕೆ ನೀತಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಧಕ್ಕೆ ತಂದಿದೆ. ಕೇಂದ್ರ ಕಾರ್ಮಿಕ ಸಂಘಟನೆಗಳು ದೇಶದ ಕಾರ್ಮಿಕರ ಹಾಗೂ ಜನಸಾಮಾನ್ಯರ ಹಿತದೃಷ್ಟಿಯಿಂದ ದುಡಿಯುವ ಜನರ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ನಿರಂತರ ಹೋರಾಟ ನಡೆಸುತ್ತಾ ಬಂದಿವೆ. ಆದರೂ ಸರ್ಕಾರಗಳು ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ದೂರಿದರು.
ಬೇಡಿಕೆ ಈಡೇರಿಸಲಿ: ಬೆಲೆ ಏರಿಕೆ ನಿಯಂತ್ರಣ, ಉದ್ಯೋಗ ಸೃಷ್ಟಿಸಲು ಹಾಗೂ ರಕ್ಷಿಸಲು ಪ್ಯಾಕೇಜ್, ಕಾರ್ಮಿಕರ ಕಾನೂನುಗಳನ್ನು ಜಾರಿಗೊಳಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಸಾರ್ವತ್ರಿಕವಾಗಿ ಎಲ್ಲ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸಲು ಹಣಕಾಸು ಸಂಪನ್ಮೂಲ ಒದಗಿಸುವ ಕಾರಣಗಳನ್ನು ರೂಪಿಸಿ, ಅನುಷ್ಠಾನಗೊಳಿಸಬೇಕು. ಲಾಭದಾಯಕ ಸಾರ್ವಜನಿಕ ಕ್ಷೇತ್ರದ ಕೈಗಾರಿಕೆಗಳ ಷೇರು ಮಾರಾಟ ಮಾಡದಿರಲು ಹಾಗೂ ಖಾಸಗೀಕರಣ ಮಾಡದಂತೆ ಒತ್ತಾಯಿಸಿ, ಬೋನಸ್ ಭವಿಷ್ಯ ನಿಧಿ ಪಾವತಿಗಿರುವ ಎಲ್ಲಾ ಮಿತಿ ಹಾಗೂ ಅರ್ಹತೆಗಳನ್ನು ತೆಗೆದುಹಾಕಿ, ಗ್ರಾಚ್ಯುಟಿ ಮೊತ್ತವನ್ನು ಏರಿಸಬೇಕು. 45 ದಿನಗಳ ಒಳಗಾಗಿ ಕಾರ್ಮಿಕ ಸಂಘಟನೆಗಳ ಕಡ್ಡಾಯ ನೊಂದಣಿ ಮತ್ತು ಐಎಲ್ಓನ 87ನೇ ಹಾಗೂ 98ನೇ ಸಮಾವೇಶ ಕೂಡಲೇ ದೃಢಿಕರಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಸಿಟಿಯುನ ಸತ್ಯಬಾಬು, ಆರ್.ಎಸ್. ಬಸವರಾಜ್, ಕೆ. ಸೋಮಶೇಖರ್, ಎ. ದೇವದಾಸ್, ಗಣಪತಿ ಹೆಗಡೆ, ಕೆ.ಎಂ. ಗುರುಮೂರ್ತಿ, ಎಆರ್ಎಂ ಇಸ್ಮಾಯಿಲ್, ಆದಿಮೂರ್ತಿ, ಕಾಂತಯ್ಯಸ್ವಾಮಿ, ಚನ್ನಪ್ಪ, ವಿಜಯಕುಮಾರ್, ಟಿ.ಜಿ. ವಿಠ್ಠಲ್ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

