ಬಳ್ಳಾರಿ

ಎಲ್ಲ ಪಕ್ಷಗಳಿಂದ ಎಸ್ಸಿಗಳ ಕಡೆಗಣನೆ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 4
ಪರಿಶಿಷ್ಟ ಜಾತಿಯವರನ್ನು ರಾಜಕೀಯ ಪಕ್ಷಗಳು ಮತಬ್ಯಾಂಕಾಗಿ ಬಳಕೆ ಮಾಡುತ್ತಿದ್ದು, ಅವರಿಗೆ ಸೂಕ್ತ ಸ್ಥಾನಮಾನ ನೀಡುತ್ತಿಲ್ಲ, ಜೆಡಿಎಸ್ ಅಧಿಕಾರಕ್ಕೆ ಬಂದರೆ ಅವರಿಗೆ ಆದ್ಯತೆ ನೀಡಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ನಾರಾ ಸೂರ್ಯನಾರಾಯಣ ರೆಡ್ಡಿ ಹೇಳಿದರು.
ಸೋಮವಾರ ನಗರದ ರಾಘವ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಜಾಗೃತಿ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳಾದ ಹರಿಜನ, ಕೊರಮ, ಕೊರಚ, ಭೋವಿ ಜನಾಂಗದವರನ್ನು ಮತ ಬ್ಯಾಂಕಾಗಿ ಬಳಕೆ ಮಾಡಿಕೊಳ್ಳುತ್ತಾರೆ. ಆದರೆ ಅವರಿಗೆ ರಾಜಕೀಯವಾಗಿ ಸ್ಥಾನಮಾನ ನೀಡದೆ, ಅವರನ್ನು ಹಿಂದುಳಿಯುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಪ.ಜಾತಿ ಸಮುದಾಯದವರನ್ನು ಕೇವಲ ದುಡಿಮೆಗಾಗಿ ಸೀಮಿತಿಗೊಳಿಸಿದ್ದಾರೆ.  ಒಂದೇ ಜನಾಂಗದಿಂದ ರಾಜಕೀಯ ಅಧಿಕಾರ ನಡೆಸಲು ಸಾಧ್ಯವಿಲ್ಲ, ಎಲ್ಲರನ್ನು ಸಮಾನಾಗಿ ಕಂಡಾಗ ಮಾತ್ರ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಹಿಂದುಳಿದ ಜನಾಂಗಗಳನ್ನು ಮುಂದೆ ತರುವ ಕೆಲಸ ಆಗಬೇಕಿದೆ. ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದರೆ ಮಾತ್ರ ಪ.ಜಾತಿಗೆ ಆದ್ಯತೆ ನೀಡಲಾಗುತ್ತದೆ. ಈ ಹಿಂದೆಯು ಕುಮಾರಣ್ಣ ನೇತೃತ್ವದ ಸರ್ಕಾರದಲ್ಲಿ ಜೆಡಿಎಸ್ ಪರಿಶಿಷ್ಟ ಜಾತಿಗೆ ಆದ್ಯತೆ ನೀಡಿತ್ತು. ಮುಂದಿನ ದಿನಗಳಲ್ಲಿಯೂ ನೀಡುತ್ತದೆ ಎಂದರು.
ಬಳ್ಳಾರಿಯಿಂದ ಮುನ್ನಬಾಯಿ ಸ್ಪರ್ಧೆ: ಬಳ್ಳಾರಿ ನಗರ ಕ್ಷೇತ್ರದಲ್ಲಿ ಮುನ್ನಬಾಯಿ ಅವರಿಗೆ ಟಿಕೆಟ್ ನೀಡಲಾಗುತ್ತದೆ. ಈ ಮೂಲಕ ಅಲ್ಪಸಂಖ್ಯಾತರಿಗೆ ಜೆಡಿಎಸ್ ಆದ್ಯತೆ ನೀಡಿದೆ. ಬಳ್ಳಾರಿ ಜಿಲ್ಲೆಯಲ್ಲಿ ಅಧಿಕಾರ ಹಿಡಿದವರು ಲೂಟಿಗಾಗಿ ಜಿಲ್ಲೆಯನ್ನು ಬಳಕೆ ಮಾಡುತ್ತಿದ್ದಾರೆ. ಎಲ್ಲಾ ಜನಾಂಗದವರಿಗೆ ಜೆಡಿಎಸ್ ಆದ್ಯತೆ ನೀಡಲಿದೆ ಎಂದು ತಿಳಿಸಿದರು.
ಶ್ರೀರಾಮುಲು ಸುಳ್ಳ, ರೆಡ್ಡಿಗಳು ಲೂಟಿಕೋರರು: ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಂಡ್ರಿಗಿ ನಾಗಾರಾಜ್ ಮಾತನಾಡಿ, ಜನಾರ್ದನ ರೆಡ್ಡಿ ಕಳ್ಳ, ಶ್ರೀರಾಮುಲು ಸುಳ್ಳ, ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ ಲೂಟಿಕೋರರು ಎಂದು ಬಿಎಸ್ಸಾರ್ ಪಕ್ಷದವರನ್ನು ಜರಿದರೆ, ಕಾಂಗ್ರೆಸ್‌ನ ಕೊಂಡಯ್ಯ ಕಣ್ಣಿಗೆ ಕಾಣುವುದಿಲ್ಲ, ಕೆಲಸ ಮಾಡಿಕೊಡದ ಅಲ್ಲಂ ವೀರಭದ್ರಪ್ಪ, ಯಾವಾಗೋ ಬರುವ ಅನಿಲ್ ಲಾಡ್ ಇದು ಕಾಂಗ್ರೆಸ್ ಪರಿಸ್ಥಿತಿ. ಇನ್ನು ಬಿಜೆಪಿ ರಾಮಲಿಂಗಪ್ಪ, ಬುಡಾ ವಿನೋದ್ ಇಂತಹ ಪಕ್ಷದಿಂದ ಏನು ಮಾಡಲು ಸಾಧ್ಯ..? ಅದಕ್ಕಾಗಿ ಜೆಡಿಎಸ್ ಉತ್ತಮವಾಗಿದ್ದು, ಜೆಡಿಎಸ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಮತ ಮಾರಬೇಡಿ: ಪ್ರತಿ ಓಟಿಗೆ ರು. 500 ಕೊಟ್ಟು ಓಟು ಗಿಟ್ಟಿಸಿಕೊಳ್ಳಲು ಮುಂದಾಗುವವರಿಗೆ ತಕ್ಕಪಾಠ ಕಲಿಸಬೇಕು. ಐದು ವರ್ಷಕ್ಕೊಮ್ಮೆ ರು. 500 ಕೊಟ್ಟವರಿಗೆ ಓಟು ಹಾಕಿದರೆ, ಪ್ರತಿ ದಿನಕ್ಕೆ 15 ಪೈಸೆ ಆಗುತ್ತದೆ. 15 ಪೈಸೆಗೆ ಓಟು ಮಾರಿಕೊಳ್ಳಬೇಡಿ ಎಂದು ಮತದಾರರಿಗೆ ಕಿವಿ ಮಾತು ಹೇಳಿದ ಅವರು, ಬಳ್ಳಾರಿಯನ್ನು ಸಿಂಗಾಪುರ ಮಾಡುವುದು ಬೇಡ, ಮೊದಲಿನಂತೆ ಬಳ್ಳಾರಿಯನ್ನು ಉಳಿಸಿದರೆ ಸಾಕು ಎಂದು ಲೇವಡಿ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀರಾಂಪುರ ಕಾಲೋನಿಯ ಕೆಲವರು ಜೆಡಿಎಸ್‌ಗೆ ಸೇರ್ಪಡೆಗೊಂಡರು. ಮುಖಂಡರಾದ ಮಾಯಪ್ಪ, ವಿಘ್ನೇಶ್, ನರಸಿಂಹಬಾಬು, ಮಾರೆಪ್ಪ, ಹಂಪಮ್ಮ, ನಾಗರತ್ನಮ್ಮ, ಸಂತೋಷ್, ಶಿವಣ್ಣ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.