ಬೆಳಗಾವಿ

ಮೇಲ್ಮನೆಯಲ್ಲೂ ಕಬ್ಬಿನ ಕಟಾವು...

Published On :

- ಶ್ರೀಶೈಲ ಮಠದ
ಸುವರ್ಣ ವಿಧಾನ ಪರಿಷತ್ತು: ಸೌಧದ ಹೊರಗೆ ಕಬ್ಬು ದರ ನಿಗದಿ ಸಂಬಂಧ ರೈತರಿಂದ ಧರಣಿ ಸತ್ಯಾಗ್ರಹ ನಡೆಯುತ್ತಿದ್ದರೆ ಸದನದಲ್ಲಿಯೂ ಕಬ್ಬು ಬೆಳೆಗಾರರ ಸಮಸ್ಯೆಯ ವಿಷಯ ಪ್ರತಿಧ್ವನಿಸಿತು.
ಕಬ್ಬಿಗೆ ಬೆಂಬಲ ಬೆಲೆ ನೀಡಬೇಕು, ಕೇಂದ್ರದ ನೆರವಿಗೆ ಸರ್ವಪಕ್ಷಗಳ ನಿಯೋಗವೊಂದನ್ನು ಕರೆದೊಯ್ಯಬೇಕು ಎಂದು ಪ್ರತಿಪಕ್ಷದ ಸದಸ್ಯರು ಆಗ್ರಹಿಸಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಡಿ.ವಿ. ಸದಾನಂದಗೌಡ, ಸಕ್ಕರೆ ಕಾರ್ಖಾನೆ ಹಾಗೂ ರೈತರ ಹಿತದೃಷ್ಟಿಯಿಂದ ದರ ನಿಗದಿ ಮಾಡಬೇಕು. ಅಲ್ಲದೇ, ಬೆಂಬಲ ಬೆಲೆ ಘೋಷಣೆ ಮಾಡಬೇಕು. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸರ್ವಪಕ್ಷಗಳ ನಿಯೋಗವೊಂದನ್ನು ಕರೆದೊಯ್ಯಬೇಕು ಎಂದು ಆಗ್ರಹಿಸಿದರು.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿನ ಬೆಳೆ ಬೆಳೆಯಲಾಗುತ್ತದೆ. ಕಬ್ಬಿನ ಬೆಳೆಬೆಳೆಯುವಲ್ಲಿ ದೇಶದಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ. ಕಬ್ಬು ಬೆಳೆಗಾರರಿಗೆ ಸೂಕ್ತ ದರ ದೊರೆಯದೇ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕಬ್ಬಿನ ಬೆಳೆಗೂ ಬೆಂಬಲ ಬೆಲೆ ಘೋಷಣೆ ಮಾಡಿ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.
ರೈತರ ಭಾಗ್ಯ ಏಕಿಲ್ಲ?: ಶಾದಿಭಾಗ್ಯ, ಕ್ಷೀರಭಾಗ್ಯ, ಅನ್ನಭಾಗ್ಯ ಆಯ್ತು? ಆದರೆ, ರೈತರ ಭಾಗ್ಯ ಏಕಿಲ್ಲ ಎಂದು ಪ್ರಶ್ನಿಸಿದ ಬಸವರಾಜ ಹೊರಟ್ಟಿ ಈ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚತ್ತು ಕಾಳಜಿ ಇಲ್ಲ. ಕಬ್ಬಿನ ಬೆಳೆಗಾರರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಅದನ್ನು ಗಮನಿಸುತ್ತಿಲ್ಲ. ಕಬ್ಬಿನ ದರ ನಿಗದಿ ಮಾಡಿದ್ದರೂ ಅದನ್ನು ಕಾರ್ಖಾನೆಯಾಗಲಿ, ರೈತರು ಒಪ್ಪುತ್ತಿಲ್ಲ ಎಂದರು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ದಿನೇಶ ಗುಂಡೂರಾವ್, ರೈತರ ಪರವಾಗಿಯೇ ಕಬ್ಬಿನ ದರ ನಿಗದಿಪಡಿಸಲಾಗಿದೆ ಎಂದರು.  ನಮ್ಮ ಬಾಯಿ ಮುಚ್ಚಿಸಲು ಕಬ್ಬಿನ ದರ ನಿಗದಿಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಆರೋಪಿಸಿದ ಸದಾನಂದಗೌಡ, ಕಬ್ಬು ದರ ನಿಯಂತ್ರಣ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿಗಳೇ ಭಾಗವಹಿಸಲಿಲ್ಲ ಏಕೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕೃಷಿ ಸಚಿವ ಕೃಷ್ಣ ಭೈರೇಗೌಡ, ಸಭೆಯಲ್ಲಿ ಪಾಲ್ಗೊಳ್ಳುವ ಅವಕಾಶ ಇಲ್ಲ. ಹಾಗಾಗಿ ಅವರು ಪಾಲ್ಗೊಂಡಿಲ್ಲ. ನಂತರ ಮುಖ್ಯಮಂತ್ರಿಗಳೇ ರೈತ ಮುಖಂಡರೊಂದಿಗೆ ಸಂಧಾನ ಸಭೆ ನಡೆಸಿದ್ದಾರೆ ಎಂದು ಸ್ಪಷ್ಟಪಡಿಸಿದರು.  ಭೋಜನ ವಿರಾಮದ ನಂತರ ಮುಂದುವರೆದ ಚರ್ಚೆಯಲ್ಲಿ ಮಹಾಂತೇಶ ಕವಟಗಿಮಠ, ಅರುಣ ಶಹಾಪುರ ಕೇಂದ್ರದ ನೆರವು ಪಡೆಯಲು ಸರ್ವಪಕ್ಷಗಳ ನಿಯೋಗವೊಂದನ್ನು ಕರೆದೊಯ್ಯಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.