ಬೆಳಗಾವಿ

ಲೋಕ ಸಮರಕ್ಕೆ ಕ್ಷಣಗಣನೆ ಆರಂಭ

Published On :

ಬೆಳಗಾವಿ: ತೀವ್ರ ಕುತೂಹಲ ಕೆರಳಿಸಿರುವ ಬೆಳಗಾವಿ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿದ್ದು, ಚುನಾವಣಾ ಸಿಬ್ಬಂದಿ ಮತಯಂತ್ರಗಳೊಂದಿಗೆ ಆಯಾ ಮತಗಟ್ಟೆಗಳಿಗೆ ಬುಧವಾರ ಸಂಜೆಯೇ ತೆರಳಿದ್ದಾರೆ.
ನಗರದ ಸರ್ದಾರ್ಸ್ ಪ್ರೌಢಶಾಲೆಯಲ್ಲಿ ಚುನಾವಣಾ ಸಿಬ್ಬಂದಿಗಳಿಗೆ ಮತಯಂತ್ರ ಹಂಚಿಕೆ ಮಾಡಲಾಗಿದೆ. ಸಿಬ್ಬಂದಿಗಳು ಅದನ್ನು ಪರಿಶೀಲಿಸಿ, ಅದನ್ನು ಬಳಸುವ ಕುರಿತಂತೆ ಆರಂಭಿಕ ಮಾಹಿತಿ ಸಂಗ್ರಹಿಸಿ ತೆರಳಿದರು.  ತಾಲೂಕು ಕೇಂದ್ರಗಳಿಂದ ಸೂಕ್ತ ಭದ್ರತೆಯೊಂದಿಗೆ ಮತಗಟ್ಟೆ ಸಿಬ್ಬಂದಿ ನಿಗದಿಪಡಿಸಿದ ಮತಗಟ್ಟೆಗಳಿಗೆ ತೆರಳಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1873 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ಕಣದಲ್ಲಿರುವ 15 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಪ್ರಭುಗಳು ಇಂದು ಮತಯಂತ್ರದಲ್ಲಿ ಗುಂಡಿ ಒತ್ತುವ ಮೂಲಕ ನಿರ್ಧರಿಸಲಿದ್ದಾರೆ.
ಪ್ರತಿಯೊಂದು ಮತಗಟ್ಟೆಗೆ ಒಬ್ಬರು ಮತಗಟ್ಟೆ ಅಧಿಕಾರಿ ಮತ್ತು ನಾಲ್ವರು ಸಹಾಯಕ ಮತಗಟ್ಟೆ ಅಧಿಕಾರಿ ಹಾಗೂ 1500ಕ್ಕಿಂತ ಅಧಿಕ ಮತದಾರರನ್ನು ಹೊಂದಿರುವ ಮತಗಟ್ಟೆಗೆ ಹೆಚ್ಚುವರಿಯಾಗಿ ಸಹಾಯಕ ಅಧಿಕಾರಿಯನ್ನು ನಿಯೋಜನೆ ಮಾಡಲಾಗಿದೆ. ಒಬ್ಬ ಗ್ರೂಪ್ ಡಿ ನೌಕರ, ಭದ್ರತಾ ಸಿಬ್ಬಂದಿ ನೇಮಿಸಲಾಗಿದೆ. ಒಟ್ಟು 10857 ಮತಗಟ್ಟೆ ಸಿಬ್ಬಂದಿಗಳ ಸೇವೆ ಪಡೆದುಕೊಳ್ಳಲಾಗುತ್ತಿದೆ. ಹೆಚ್ಚುವರಿಯಾಗಿ 900 ಮತಗಟ್ಟೆ ಸಿಬ್ಬಂದಿಗಳನ್ನು ಕಾಯ್ದಿರಿಸಲಾಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 172 ಅತೀ ಸೂಕ್ಷ್ಮ, 331 ಸೂಕ್ಷ್ಮ ಸೇರಿದಂತೆ ಒಟ್ಟು 1873 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿಯೊಂದು ಮತಗಟ್ಟೆಗಳಲ್ಲಿ
 ವಿಧಾನಸಭಾ ಕ್ಷೇತ್ರವಾರು ವಿವರ ಹೀಗಿದೆ. ಅರಬಾವಿ ವಿಧಾನಸಭೆ ಕ್ಷೇತ್ರದಲ್ಲಿ 25 ಅತೀ ಸೂಕ್ಷ್ಮ, 37 ಸೂಕ್ಷ್ಮ ಮತಗಟ್ಟೆ ಸೇರಿದಂತೆ ಒಟ್ಟು 252 ಮತಗಟ್ಟೆ ಸ್ಥಾಪಿಸಲಾಗಿದೆ. ಗೋಕಾಕ ವಿಧಾನಸಭೆ ಕ್ಷೇತ್ರದಲ್ಲಿ 24 ಅತೀ ಸೂಕ್ಷ್ಮ, 38 ಸೂಕ್ಷ್ಮ ಸೇರಿದಂತೆ ಒಟ್ಟು 243 ಮತಗಟ್ಟೆ ಸ್ಥಾಪಿಸಲಾಗಿದೆ. ಬೆಳಗಾವಿ ಉತ್ತರ ಕ್ಷೇತ್ರದಲ್ಲಿ 22 ಅತೀ ಸೂಕ್ಷ್ಮ, 39 ಸೂಕ್ಷ್ಮ ಸೇರಿದಂತೆ 236 ಮತಗಟ್ಟೆ ಸ್ಥಾಪಿಸಲಾಗಿದೆ. ಬೆಳಗಾವಿ ದಕ್ಷಿಣದಲ್ಲಿ 20 ಅತೀ ಸೂಕ್ಷ್ಮ, 30 ಸೂಕ್ಷ್ಮ ಸೇರಿದಂತೆ 240 ಮತಗಟ್ಟೆ ಸ್ಥಾಪಿಸಲಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 10 ಅತೀ ಸೂಕ್ಷ್ಮ, 93 ಸೂಕ್ಷ್ಮ ಸೇರಿದಂತೆ 262 ಮತಗಟ್ಟೆ ಸ್ಥಾಪಿಸಲಾಗಿದೆ. ಬೈಲಹೊಂಗಲ ಕ್ಷೇತ್ರದಲ್ಲಿ 20 ಅತೀ ಸೂಕ್ಷ್ಮ, 30 ಸೂಕ್ಷ್ಮ ಸೇರಿದಂತೆ 202 ಮತಗಟ್ಟೆ ಸ್ಥಾಪಿಸಲಾಗಿದೆ. ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ 20 ಅತೀ ಸೂಕ್ಷ್ಮ, 30 ಸೂಕ್ಷ್ಮ ಸೇರಿದಂತೆ 216 ಮತಗಟ್ಟೆ ಸ್ಥಾಪಿಸಲಾಗಿದೆ. ರಾಮದುರ್ಗ ಕ್ಷೇತ್ರದಲ್ಲಿ 22 ಅತೀ ಸೂಕ್ಷ್ಮ, 34 ಸೂಕ್ಷ್ಮ ಸೇರಿದಂತೆ 222 ಮತಗಟ್ಟೆ ಸ್ಥಾಪಿಸಲಾಗಿದೆ.
ಚಿಕ್ಕೋಡಿ: ಮತದಾನಕ್ಕೆ ಕ್ಷಣಗಣನೆ
ಚಿಕ್ಕೋಡಿ: ತೀವ್ರ ಕುತೂಹಲ ಕೆರಳಿಸಿರುವ 16ನೇ ಲೋಕಸಭೆ ಚುಣಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಶಾಂತಿಯುತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಸರ್ಕಾರಿ ಆಡಳಿತ ಸಜ್ಜುಗೊಂಡಿದೆ.
ಬಿಜೆಪಿಯ ರಮೇಶ ವಿಶ್ವನಾಥ ಕತ್ತಿ, ಬಿಎಸ್ಪಿಯ ಕಾಡಾಪುರೆ ಮಚ್ಛೇಂದ್ರ ದವಲು, ಕಾಂಗ್ರೆಸ್‌ನ ಪ್ರಕಾಶ ಬಾಬಣ್ಣ ಹುಕ್ಕೇರಿ, ಎನ್‌ಸಿಪಿಯ ಪ್ರತಾಪರಾವ ಅಳಗೌಡಾ ಪಾಟೀಲ, ಜೆಡಿಎಸ್‌ನ ಶ್ರೀಮಂತ ಬಾಳಾಸಾಹೇಬ ಪಾಟೀಲ, ಆಮ್ ಆದ್ಮಿ ಪಕ್ಷದ ಅಷ್ಫಾಕ್ ಅಹ್ಮದ ಮಡಕಿ ಸೇರಿದಂತೆ ಒಟ್ಟು 12 ಅಭ್ಯರ್ಥಿಗಳ ಭವಿಷ್ಯ ಗುರುವಾರ ಮತಯಂತ್ರಗಳಲ್ಲಿ ಭದ್ರವಾಗಲಿದೆ.
ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ 169 ಅತಿಸೂಕ್ಷ್ಮ ಹಾಗೂ 272 ಸೂಕ್ಷ್ಮ ಹಾಗೂ 1287 ಸಾಮಾನ್ಯ ಮತಗಟ್ಟೆಗಳು ಸೇರಿದಂತೆ ಒಟ್ಟು 1728 ಮತಗಟ್ಟೆಗಳಿದ್ದು, ಇದೇ ಮೊದಲ ಬಾರಿಗೆ ಚುನಾವಣೆ ಆಯೋಗ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 11 ತಾಸುಗಳ ಕಾಲ ಮತದಾನಕ್ಕೆ ಅವಕಾಶ ನೀಡಿರುವುದು ಮತ್ತು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಜಾಗೃತಿ ಮೂಡಿಸಲು ವಿವಿಧ ಪ್ರಯತಗಳನ್ನು ಆಯೋಗ ಕೈಗೊಂಡಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವ ನಿರೀಕ್ಷೆಯಿದೆ ಎಂದು ದೀಪಾ ಚೋಳನ ತಿಳಿಸಿದ್ದಾರೆ.
ಬೆಳಗ್ಗೆಯಿಂದಲೇ ಚಿಕ್ಕೋಡಿ, ರಾಯಬಾಗ, ಹುಕ್ಕೇರಿ, ಅಥಣಿ ಸೇರಿದಂತೆ 8 ವಿಧಾನಸಭೆ ಕ್ಷೇತ್ರಗಳಲ್ಲಿರುವ ಮತಗಟ್ಟೆಗಳಿಗೆ ತೆರಳುವುದಕ್ಕಾಗಿ ಆಗಮಿಸಿದ್ದ ಸಿಬ್ಬಂದಿ ಮತಯಂತ್ರಗಳನ್ನು ಪಡೆದು, ಪರಿಶೀಲನೆ ಮಾಡಿಕೊಂಡು, ಸರ್ಕಾರಿ ಬಸ್‌ಗಳ ಮೂಲಕ ತಮ್ಮ ತಮ್ಮ ಮತಗಟ್ಟೆಗೆ ತೆರಳಿದರು.
ಅತ್ಯಂತ ತುರುಸಿನ ಕ್ಷೇತ್ರವಾಗಿರುವ ಚಿಕ್ಕೋಡಿಯಲ್ಲಿ ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ ಮತ್ತು ಸಂಸದ ರಮೇಶ ಕತ್ತಿ ಅವರ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಮತದಾನ ಸಂದರ್ಭದಲ್ಲಿ ಯಾವುದೇ ಗದ್ದಲ-ಗಲಾಟೆ ಉಂಟು ಮಾಡುವ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳುವಂತೆ ಬಂದೋಬಸ್ತಿಯಲ್ಲಿರುವ ಸಿಬ್ಬಂದಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
ನೆತ್ತಿ ಸುಡುವ ಬಿಸಿಲು... ಕಂಕುಳಲ್ಲಿ ಕೂಸು...
ಮಹಿಳಾ ಸಿಬ್ಬಂದಿ ಫಜೀತಿಗೆ ಸ್ಪಂದಿಸಿದ ಚುನಾವಣೆ ಅಧಿಕಾರಿ
ಚಿಕ್ಕೋಡಿ: ನೆತ್ತಿ ಸುಡುವ ಬಿಸಿಲಿನಲ್ಲಿಯೂ ಹಸುಗೂಸುಗಳನ್ನು ಬಗಲಲ್ಲಿ ಟ್ಟುಕೊಂಡು, ಬಹಳಷ್ಟು ಮಹಿಳಾ ಸಿಬ್ಬಂದಿ ಚುನಾವಣೆ ಕೆಲಸಕ್ಕಾಗಿ ಆಗಮಿಸಿದ್ದರು.
ಅಳುತ್ತಿರುವ ಮಕ್ಕಳನ್ನು ವೀಕ್ಷಿಸಿದ ಚುನಾವಣೆ ಅಧಿಕಾರಿಗಳು ಪುಟ್ಟ ಕಂದಮ್ಮಗಳನ್ನು ಕರೆದುಕೊಂಡು ಬಂದಿದ್ದ ಸಿಬ್ಬಂದಿಯನ್ನು ಕಾಯ್ದಿರಿಸಿದರು. ಅಗತ್ಯ ಬಿದ್ದಾಗ ಇವರ ಸೇವೆ ಬಳಸಿಕೊಳ್ಳಿ ಇಲ್ಲದಿದ್ದರೆ, ಬೇರೆ ಸಿಬ್ಬಂದಿ ಕಳುಹಿಸಿಕೊಡಿ ಎಂದು ತಹಸೀಲ್ದಾರ್‌ರಿಗೆ ದೀಪ ಚೋಳನ ಹೇಳಿದರು.
1839 ಪೊಲೀಸ್ ಸಿಬ್ಬಂದಿ: ಸುಗಮ ಹಾಗೂ ನ್ಯಾಯಸಮ್ಮತ ಮತದಾನ ನಡೆಯಲು ಓರ್ವ ಎಎಸ್‌ಪಿ, 5 ಜನ ಡಿಎಸ್‌ಪಿ, 8 ಜನ ಸಿಪಿಐ 2 ಸಿಐಎಸ್‌ಎಫ್, 2 ಕೆಎಸ್‌ಆರ್‌ಪಿ ತುಕಡಿಗಳು ಮತ್ತು ಪಿಸಿ, ಡಬ್ಲುಪಿಸಿ, ಹೋಮಗಾರ್ಡ ಸೇರಿದಂತೆ 1839 ಜನ ಸಿಬ್ಬಂದಿ ನಿಯೋಜಿಸಲಾಗಿದೆ. ಕೆಲ ಜನ ಬಾಣಂತಿಯರಿಗೆ ಚುನಾವಣೆ ಆದೇಶ ಬಂದಿದ್ದು, ಅವರನ್ನು ಹೆಚ್ಚುವರಿ ಸಿಬ್ಬಂದಿ ಜಾಗೆಯಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಂದು ನಿಯೋಜನೆ ಮಾಡಲಾಗುವುದು ಎಂದರು.
ಬೆಳಗಾವಿ ಅಭ್ಯರ್ಥಿಗಳು
*     ಸುರೇಶ ಅಂಗಡಿ                  :    ಬಿಜೆಪಿ
*     ಲಕ್ಷ್ಮಿ ಹೆಬ್ಬಾಳಕರ                  :    ಕಾಂಗ್ರೆಸ್
*     ನಾಸಿರ್ ಬಾಗವಾನ್                  :    ಜೆಡಿಎಸ್
*     ರಮೇಶ ಕಡಲಾಸ್ಕರ್               :    ಬಿಎಸ್ಪಿ
*     ದಯಾನಂದ ಚಿಕ್ಕಮಠ             :    ಎಸ್ಪಿ
*     ಮುತ್ತಪ್ಪ ಅಂಗಡಿ                   :    ಆಪ್
*     ಪರಪ್ಪ ಅಂತಕ್ಕನವರ                  :    ಪಕ್ಷೇತರ
*     ಮೋಹನ ಮೋರೆ                  :    ಪಕ್ಷೇತರ
*     ಡಾ.ರಾಜಮಹೇಂದ್ರ ಗಾಂವಕರ :    ಪಕ್ಷೇತರ
*     ರಾಮಪ್ಪ ಚಲವಾದಿ                  :    ಪಕ್ಷೇತರ
*     ಶಿವಗೌಡಪ್ಪ ಖಾನಗೌಡರ         :    ಪಕ್ಷೇತರ
*     ಶಂಕರ ರಾಥೋಡ                  :   ಪಕ್ಷೇತರ
*     ಸಂತೋಷ ಬಾವಡೇಕರ            :   ಪಕ್ಷೇತರ
*     ಸಂತೋಷ ಶೇಠ್                  :   ಪಕ್ಷೇತರ
*     ಹಣಮಂತ ಮಜುಕರ              :   ಪಕ್ಷೇತರ
ಒಟ್ಟು ಮತದಾರರು- 1575341
ಪುರುಷ ಮತದಾರರು- 803278
ಮಹಿಳಾ ಮತದಾರರು- 771911
ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದರೂ ಕಾಂಗ್ರೆಸ್- ಬಿಜೆಪಿ ನಡುವೆಯೇ ನೇರ ಹಣಾಹಣಿ ಏರ್ಪಟ್ಟಿದೆ. ಅಭ್ಯರ್ಥಿಗಳು ಕೊನೆಯ ಕ್ಷಣದ ಕಸರತ್ತನ್ನು ನಡೆಸಿದ್ದಾರೆ. ಆದರೆ, ಮತದಾರ ಪ್ರಭುಗಳು ಯಾರ ಕೈ ಹಿಡಿಯುತ್ತಾರೋ? ಯಾರಿಗೆ ಕೈ ಕೊಡುತ್ತಾರೋ ಎಂಬುದನ್ನು ಮೇ 16ರವರೆಗೆ ಕಾಯ್ದುನೋಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.