ಬೆಳಗಾವಿ

ಹನಿ ನೀರಿಗೂ ಹಾಹಾಕಾರ

Published On :

ಬೆಳಗಾವಿ: ಸಪ್ತ ನದಿಗಳ ಬೀಡು ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರಗಾಲ ಎದುರಾಗಿದ್ದು, ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಜಿಲ್ಲೆಯ17 ಗ್ರಾಮಗಳ 60 ಸಾವಿರಕ್ಕೂ ಹೆಚ್ಚು ಜನರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಜನಪ್ರತಿನಿಧಿಗಳು ಚುನಾವಣೆಯಲ್ಲಿ ಬ್ಯೂಸಿಯಾಗಿದ್ದರೆ, ಜನರು ಮಾತ್ರ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ರಾಯಬಾಗ, ರಾಮದುರ್ಗ, ಗೋಕಾಕ, ಸವದತ್ತಿ ತಾಲೂಕಿನಲ್ಲಿ ಸಮಸ್ಯೆ ವಿಕೋಪಕ್ಕೆ ಹೋಗಿದೆ. ಜನ, ಜಾನುವಾರುಗಳು ಜೀವಜಲಕ್ಕಾಗಿ ಪರಿತಪಿಸುತ್ತಿವೆ.
ಈ 17 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಒಂದು ಅರ್ಥದಲ್ಲಿ ಪ್ರತಿ ವರ್ಷದ ಅವಸ್ಥೆಯಾಗಿದೆ. ಕಳೆದ ನಾಲ್ಕೈದು ದಶಕಗಳಿಂದಲೂ ಇಲ್ಲಿನ ಜನರಿಗೆ ಶಾಶ್ವತ ಕುಡಿಯುವ ನೀರಿನ ಮೂಲ ಇಲ್ಲ. ಜಿಲ್ಲಾಡಳಿತ ಪೂರೈಸುವ ಟ್ಯಾಂಕರ್ ದಿನಕ್ಕೆ ಒಂದೆರಡು ಬಾರಿ ಬರುತ್ತಿದ್ದು, ಆಗಲೇ ನೀರು ತುಂಬಿಸಿಕೊಳ್ಳಬೇಕು. ಇಲ್ಲವಾದರೆ ಇಲ್ಲ ಎಂಬ ಪರಿಸ್ಥಿತಿ. ಪ್ರತಿ ದಿನವೂ ಟ್ಯಾಂಕರ್ ನೀರಿಗಾಗಿ ಕಾಯಬೇಕಾದ ಸ್ಥಿತಿ ಇಲ್ಲಿನ ಜನರದ್ದು.
ಪ್ರತಿ ವರ್ಷ ಟ್ಯಾಂಕರ್ ನೀರಿಗೆ ಲಕ್ಷಾಂತರ ರುಪಾಯಿ ವ್ಯಯಿಸುವ ಸರ್ಕಾರ, ಇಲ್ಲಿ ಶಾಶ್ವತ ಕುಡಿಯುವ ನೀರಿನ ಮೂಲ ಹುಡುಕುವಲ್ಲಿ ವಿಫಲವಾಗಿದೆ. ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳಲ್ಲಿ ಜಲಮೂಲ ಪಾತಾಳಕ್ಕೆ ಇಳಿದಿದ್ದರಿಂದ ಈ ಗ್ರಾಮಗಳಲ್ಲಿ ಕೊಳವೆ ಬಾವಿಗಳೆಲ್ಲ ವಿಫಲವಾಗುತ್ತಿದೆ. ಕಿರು ನೀರು ಸರಬರಾಜು, ಪೈಪ್‌ಲೈನ್ ನೀರಿನ ವ್ಯವಸ್ಥೆ ಅಥವಾ ಬಹುಗ್ರಾಮ ಕುಡಿಯುವ ನೀರಿನ ಸೌಲಭ್ಯದೊಂದಿಗೆ ಗ್ರಾಮಸ್ಥರ, ಜಾನುವಾರುಗಳ ನೀರಿನ ದಾಹ ತಣಿಸಬಹುದಾದರೂ ಆಡಳಿತದಲ್ಲಿರುವವರ ಇಚ್ಥಾಶಕ್ತಿ ಕೊರತೆಯಿಂದ ಯಾವುದೇ ಕ್ರಮವಾಗಿಲ್ಲ.
     ರಾಯಬಾಗದಲ್ಲಿ ಸಮಸ್ಯೆ ರೌದ್ರಾವತಾರ
ರಾಯಬಾಗ ತಾಲೂಕಿನಲ್ಲಿ ನೀರಿನ ಸಮಸ್ಯೆ ಸ್ವಲ್ಪ ಗಂಭೀರ ಸ್ವರೂಪ ಪಡೆದಿದೆ. ಇಲ್ಲಿ ಸುಮಾರು 30 ಸಾವಿರ ಜನರು ಪ್ರತಿ ದಿನವೂ ಟ್ಯಾಂಕರ್ ನೀರನ್ನು ಅವಲಂಬಿಸಿದ್ದಾರೆ. ಕೆಲವೆಡೆ 25 ಕಿ.ಮೀ. ದೂರದಿಂದ ಟ್ಯಾಂಕರ್ ಮೂಲಕ ನೀರು ತಂದು ಪೂರೈಸಬೇಕಾದ ಸ್ಥಿತಿ ಇದೆ. ಸುಮಾರು 8-10 ಗ್ರಾಮಗಳಲ್ಲಿ ಜಲಮೂಲವೇ ಇಲ್ಲ. ತುಸು ನೀರಿಗೂ ಟ್ಯಾಂಕರ್‌ನ್ನೇ ಕಾಯಬೇಕಾಗಿದೆ.
ತಾಲೂಕಿನ ಕಟಕಬಾವಿ, ಮಾವಿನಹೊಂಡ, ಸವಸುದ್ದಿ, ಮಾರಡಿ, ಭೆಂಡವಾಡ, ಗಿರಿನಾಯಕವಾಡಿ, ಬ್ಯಾಕೂಡ, ದೇವನಕಟ್ಟಿ ಸಮಸ್ಯಾತ್ಮಕ ಗ್ರಾಮಗಳಾಗಿವೆ. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿದರೂ ಅದು ಒಂದರ್ಥದಲ್ಲಿ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಾದಂತಾಗುತ್ತಿದೆ. ಸುಮಾರು 9 ಸಾವಿರ ಜನಸಂಖ್ಯೆ ಇರುವ ಮಾವಿನಹೊಂಡ, ಮತ್ತು ಸಂಸುದ್ದಿ ಗ್ರಾಮಗಳಿಗೆ 22 ಕಿ.ಮೀ. ದೂರದ ಕಂಕಣವಾಡಿಯಿಂದ ನೀರು ಪೂರೈಕೆಯಾಗುತ್ತಿದೆ.
ಮಾರಡಿ ಗ್ರಾಮಕ್ಕೆ 24 ಕಿ.ಮೀ. ದೂರದಿಂದ ನೀರು ಹೋಗಬೇಕು. ತಾಲೂಕಿನಲ್ಲಿ 12 ಟ್ಯಾಂಕರ್ ಜೀವಜಲ ಪೂರೈಸುವ ಕಾರ್ಯದಲ್ಲಿ ನಿರತವಾಗಿದ್ದು, ಅದು ಪೂರ್ತಿ ಸಾಕಾಗುವುದಿಲ್ಲ ಎಂಬ ದೂರು ಕೇಳಿ ಬರುತ್ತಿದೆ.
ಗೋಕಾಕ ತಾಲೂಕಿನ ಮೆಳವಂಕಿ(ಬಸವನಗರ ಕ್ರಾಸ್) ಸದಾಶಿವ ನಗರ, ಮೆಳವಂಕಿ ಗ್ರಾಮ, ಚಿಗಡೊಳ್ಳಿ ಸೇರಿದಂತೆ ಒಟ್ಟು 16590 ಜನರಿಗೆ ಕುಡಿಯುವ ನೀರಿನ ಸಮಸ್ಯೆಯಿದ್ದು, ಗೋಕಾಕ ನಗರಸಭೆಯ ಜಲಶುದ್ಧೀಕರಣ ಘಟಕದಿಂದ 4 ಟ್ಯಾಂಕ್‌ರಗಳ ಮೂಲಕ ನೀರು ಪೂರೈಸಲಾಗುತ್ತಿದೆ.
ಸವದತ್ತಿ ತಾಲೂಕಿನ ಹಾರುಗೋಪ್ಪ, ಹೂಲಿಕೇರಿ, ರಾಮದುರ್ಗ ತಾಲೂಕಿನ ಸೊಪಡ್ಲ, ಓಬಳಾಪುರ, ಮುದೇನೂರ ಸೇರಿ ಒಟ್ಟು 11 ಸಾವಿರ ಜನಸಂಖ್ಯೆಯಿರುವ ಈ ಮೇಲಿನ ಗ್ರಾಮಗಳಿಗೆ ಒಟ್ಟು 5 ಟ್ಯಾಂಕ್‌ರ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಬಿಸಿಲ ಬೇಗೆ, ಸೆಖೆ ಹೆಚ್ಚಾಗುತ್ತಿದ್ದು, ಮೇ ತಿಂಗಳ ಹೊತ್ತಿಗೆ ನೂರಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಶಾಶ್ವತ ಯೋಜನೆಗೆ ಶಿಫಾರಸು
ಜಿಲ್ಲೆಯಲ್ಲಿ ತೀವ್ರ ಕುಡಿವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ನದಿಯಿಂದ ಪೈಪ್‌ಲೈನ್ ಮೂಲಕ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾದ ಅಗತ್ಯವಿದೆ. ಈ ಕುರಿತಂತೆ ಚುನಾವಣೆಗೂ ಪೂರ್ವದಲ್ಲಿಯೇ ಜಿಲ್ಲಾ ಪಂಚಾಯಿತಿಗೆ ಪತ್ರ ಬರೆದು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎನ್. ಜಯರಾಂ ಹೇಳಿದ್ದಾರೆ.  ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಇರುವ 4 ತಾಲೂಕಿನ 17 ಗ್ರಾಮಗಳಿಗೆ 21 ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಕುಡಿಯುವ ನೀರಿಗಾಗಿ ಜಿಲ್ಲಾಡಳಿತದ ಬಳಿ 2.50 ಕೋಟಿ ಅನುದಾನ ಲಭ್ಯವಿದೆ. ಬರಗಾಲದ ಪರಿಹಾರ ಕಾಮಗಾರಿ, ಕುಡಿಯುವ ನೀರಿನ ಕಾಮಗಾರಿಯನ್ನು ತುರ್ತಾಗಿ ಕೈಗೊಳ್ಳುವಂತೆ ಎಲ್ಲ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ ಎಂದರು.
-ರಾಯಣ್ಣ ಆರ್.ಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.