ನ್ಯಾಯಸಮ್ಮತ ಚುನಾವಣೆಗೆ ಸಕಲ ಕ್ರಮ
ಬೆಳಗಾವಿ: ಲೋಕಸಭಾ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತ ಸಕಲ ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್. ಜಯರಾಂ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 4040 ಮತಗಟ್ಟೆಗಳಿವೆ. ಒಟ್ಟು 33,73,140 ಮತದಾರರಿದ್ದಾರೆ. ಇದರಲ್ಲಿ 17,31,934 ಪುರುಷ ಮತದಾರರು, 16,40,979 ಮಹಿಳಾ ಮತದಾರರಿದ್ದಾರೆ. 227 ಇತರ ಮತದಾರರಿದ್ದಾರೆ ಎಂದರು.
ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ ಒಟ್ಟು 6628 ಸೇವಾ ಮತದಾರಿದ್ದರೆ, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 5892 ಸೇವಾ ಮತದಾರಿದ್ದಾರೆ. ಒಟ್ಟು 12520 ಸೇವಾ ಮತದಾರರಿಗೆ ಮತ ಚಲಾಯಿಸುವ ಕುರಿತು ಅಂಚೆ ಮತಪತ್ರಗಳನ್ನು ರವಾನಿಸಲಾಗಿದೆ.
ಮತದಾನ ದಿನದಂದು ನಿರ್ಭೀತರಾಗಿ ಮತ ಚಲಾಯಿಸಲು ಸ್ಥಳೀಯ ಭದ್ರತಾ ಸಿಬ್ಬಂದಿ ಅಲ್ಲದೇ, ಸಿಎಆರ್ಎಫ್ ತುಕಡಿಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗುವುದು. ಪ್ರತಿ ಮತಗಟ್ಟೆಗೆ ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬ ಮತಗಟ್ಟೆ ಅಧಿಕಾರಿ ಮತ್ತು 4 ಸಹಾಯಕ ಮತಗಟ್ಟೆ ಅಧಿಕಾರಿ ಹಾಗೂ 1500ಕ್ಕಿಂತ ಹೆಚ್ಚಿನ ಮತದಾರರನ್ನು ಹೊಂದಿರುವ ಮತಗಟ್ಟೆಗೆ ಹೆಚ್ಚುವರಿ ಸಹಾಯಕ ಅಧಿಕಾರಿಯನ್ನು ನೇಮಿಸಲಾಗುವುದು. ಅಲ್ಲದೇ, ಕನಿಷ್ಠ ಒಬ್ಬ ಭದ್ರತಾ ಸಿಬ್ಬಂದಿ ನಿಯೋಜಿಸಲಾಗುತ್ತಿದೆ ಎಂದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 1728 ಮತಗಟ್ಟೆಗಳಿದ್ದು, ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಒಟ್ಟು 8440 ಮತಗಟ್ಟೆ ಸಿಬ್ಬಂದಿಗಳ ಸೇವೆ ಪಡೆಯಲಾಗುತ್ತದೆ. 850 ಮತಗಟ್ಟೆ ಸಿಬ್ಬಂದಿಯನ್ನು ಕಾಯ್ದಿಟ್ಟ ಸಿಬ್ಬಂದಿ ಎಂದು ನೇಮಿಸಲಾಗಿದೆ. 900 ಮತಗಟ್ಟೆ ಸಿಬ್ಬಂದಿಯನ್ನು ಕಾಯ್ದಿರಿಸಲಾಗಿದೆ ಎಂದರು. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಒಟ್ಟು 1873 ಮತಗಟ್ಟೆಗಳನ್ನು ರಚಿಸಲಾಗಿದೆ. ಒಟ್ಟು 8974 ಮತಗಟ್ಟೆ ಸಿಬ್ಬಂದಿ ಸೇವೆ ಪಡೆಯಲಾಗುವುದು ಎಂದು ಹೇಳಿದರು.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಖಾನಾಪುರ ಮತ್ತು ಕಿತ್ತೂರ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 439 ಮತಗಟ್ಟೆ ರಚಿಸಲಾಗಿದೆ. ಒಟ್ಟು 2124 ಮತಗಟ್ಟೆ ಸಿಬ್ಬಂದಿ ಸೇವೆ ಪಡೆಯಲಾಗುವುದು. 212 ಮತಗಟ್ಟೆ ಸಿಬ್ಬಂದಿ ಕಾಯ್ದಿರಿಸಲಾಗಿದೆ ಎಂದು ಅವರು ಹೇಳಿದರು.
ಪೊಲೀಸ್ ಅಧಿಕಾರಿಗಳಿಂದ 22 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯಿಂದ 143 ಪ್ರಕರಣಗಳನ್ನು ದಾಖಲಿಸಲಾಗಿದೆ. ರು. 67.12 ಲಕ್ಷ ಮೊತ್ತದ ವಿವಿಧ ಸಾಮಗ್ರಿಗಳನ್ನು ಮತ್ತು 1.55 ಲಕ್ಷ ನಗದಗು ಜಪ್ತು ಮಾಡಲಾಗಿದೆ. ಅನಧಿಕೃತವಾಗಿ ಭಿತ್ತಿ ಪತ್ರ ಹಚ್ಚಿರುವುದಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
ಶೇ.99ರಷ್ಟು ಗುರುತಿನ ಚೀಟಿ ವಿತರಣೆ: ಜಿಲ್ಲೆಯಲ್ಲಿ ಶೇ. 99ರಷ್ಟು ಮತದಾರರಿಗೆ ಚುನಾವಣಾ ಆಯೋಗದ ಗುರುತಿನ ಪತ್ರಗಳನ್ನು ವಿತರಿಸಲಾಗಿದೆ. ಇನ್ನೂ 18 ಸಾವಿರ ಮತದಾರರಿಗೆ ಗುರುತಿನ ಚೀಟಿ ವಿತರಿಸಬೇಕಿದೆ. ಇದೇ ಮೊದಲ ಬಾರಿಗೆ ಚುನಾವಣಾ ಮತದಾನದ ಸ್ಲೀಪ್ಗಳನ್ನು ಅಧಿಕಾರಿಗಳೇ ಮದತಾರರರಿಗೆ ನೀಡಲಿದ್ದಾರೆ. ಅಲ್ಲದೇ, ಏ.12ರಿಂದ 14ವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಪ್ರತಿ ಮನೆಗಳಿಗೆ ಭೇಟಿ ನೀಡಿ, ಭಾವಚಿತ್ರವುಳ್ಳ ಮತದಾರರ ಚೀಟಿಯನ್ನು ವಿತರಿಸುವರು. ಅವರಿಗೆ ಸೂಕ್ತ ಸಹಕಾರ ನೀಡಬೇಕು ಎಂದು ಅವರು ಕೋರಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 15 ಉಮೇದುವಾರದಿದ್ದಾರೆ. ಇವರ ಹೆಸರನ್ನು ಮತಯಂತ್ರದಲ್ಲಿ ನಿಮಯಬದ್ಧವಾಗಿ ಸೂಕ್ತ ಚಿಹ್ನೆಗಳಿಂದ ತೋರಿಸಲಾಗಿದೆ. ಅಲ್ಲದೇ, ಈ ಚುನಾವಣೆಯಲ್ಲಿ ನೋಟಾ ಮೇಲಿನವರೂ ಯಾರೂ ಅಲ್ಲ ಎಂಬ 16ನೇ ಒತ್ತುಗುಂಡಿಯ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರವೀಣಕುಮಾರ, ವಾರ್ತಾ ಇಲಾಖೆ ಉಪನಿರ್ದೇಶಕ ಬಸವರಾಜ ಕಂಬಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

