ಬೆಳಗಾವಿ

ವಿವಿಧ ಉದ್ಯಮದ ಸಾವಿರ ಮಾದರಿ

Published On :


ಯೋಜನಾ ವರದಿ ಸಿದ್ಧ: ಸಚಿವ ನಿರಾಣಿ

ಧಾರವಾಡ: ಉತ್ತರ ಕರ್ನಾಟಕದ ತಾಂತ್ರಿಕ ಹಾಗೂ ವ್ಯವಹಾರ ನಿರ್ವಹಣೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಂತ ಉದ್ಯೋಗ ಆರಂಭಿಸಲು ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 'ಉದ್ಯಮಿಯಾಗು ಉದ್ಯೋಗ ನೀಡು' ಎಂಬ ಯೋಜನೆ ಜಾರಿ ಮಾಡಿದ್ದು, ಈ ಪೈಕಿ ವಿವಿಧ ಉದ್ಯಮಗಳಿಗೆ ಸಂಬಂಧಿಸಿದಂತೆ ಒಂದು ಸಾವಿರ ಮಾದರಿ ಯೋಜನಾ ವರದಿ ಸಿದ್ಧಪಡಿಸಲಾಗಿದೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ ನಿರಾಣಿ ಹೇಳಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಹಾಗೂ ವರ್ಣಾಸ್ ಲೀಡರ್ಸ್ ಫ್ಯಾಕ್ಟರಿ ಜಂಟಿಯಾಗಿ ನಗರದ ಡಾ. ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ 'ಉದ್ಯಮಿಯಾಗು ಉದ್ಯೋಗ ನೀಡು' ಯೋಜನೆಯ ಪ್ರೇರಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಉ.ಕ ಭಾಗದ ಸುಮಾರು 2 ಸಾವಿರ ವಿದ್ಯಾರ್ಥಿಗಳನ್ನು ಈ ಯೋಜನೆಯಲ್ಲಿ ತೊಡಗಿಸಿದ್ದು, ಯಾವ ಉದ್ಯಮ ಸ್ಥಾಪಿಸಬೇಕು, ಅದರ ಹಂತಗಳೇನು ಎಂಬುದರ ಕುರಿತು ಶಿಬಿರದ ನಂತರ ಅವರಿಗೆ 3 ರಿಂದ 7 ದಿನಗಳವರೆಗೆ ತರಬೇತಿ ನೀಡಲಾಗುವುದು. ಅಲ್ಲದೇ, ವಿವಿಧ ಬ್ಯಾಂಕ್‌ಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಉದ್ಯಮ ಸ್ಥಾಪಿಸಬೇಕೆನ್ನುವ ವಿದ್ಯಾರ್ಥಿಗಳಿಗೆ ಸಾಲದ ಸೌಲಭ್ಯ ಸಹ ನೀಡಲಾಗುವುದು ಎಂದರು.
ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಒಂದೊಂದು ವಿಶೇಷತೆ ಇದ್ದು, ಆಯಾ ಜಿಲ್ಲೆಯಲ್ಲಿ ದೊರೆಯುವ ಸಂಪನ್ಮೂಲಗಳಿಗೆ ತಕ್ಕಂತೆ ಉದ್ಯಮ ಸ್ಥಾಪಿಸಲು ಪ್ರಯತ್ನಿಸಲಾಗುವುದು. ಉತ್ತರ ಕರ್ನಾಟಕದಲ್ಲಿ ಆಹಾರ ಸಂಸ್ಕರಣೆಯ ಉದ್ಯಮಕ್ಕೆ ಬರುವ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಈ ಉದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅಲ್ಲದೇ, ಬೆಳಗಾವಿಯಲ್ಲಿ ಫೌಂಡ್ರಿ, ಬಿಜಾಪುರದಲ್ಲಿ ತೋಟಗಾರಿಕೆ, ಬಾಗಲಕೋಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ, ಹುಬ್ಬಳ್ಳಿ-ಧಾರವಾಡದಲ್ಲಿ ಶಿಕ್ಷಣ ಹಾಗೂ ಇನ್ನಿತರೆ ಉದ್ಯಮಗಳನ್ನು ಸ್ಥಾಪಿಸಬಹುದು ಎಂದರು.
ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಮಾರಂಭವೊಂದರಲ್ಲಿ ಭಾಗವಹಿಸುತ್ತಿರುವ ರತನ್ ಟಾಟಾ ಅವರಲ್ಲಿ ವಿವಿಧ ಉದ್ಯಮಗಳಿಗೆ # 25 ಸಾವಿರ ಕೋಟಿ ಬಂಡವಾಳ ಹಾಕಲು ಮನವಿ ಮಾಡಲಾಗಿದೆ. ಅಲ್ಲದೇ, ಇನ್‌ಫೋಸಿಸ್ ಸಂಸ್ಥೆಯು ಐಟಿ ಕ್ಷೇತ್ರವನ್ನು ಹುಬ್ಬಳ್ಳಿಗೂ ವಿಸ್ತರಿಸಬೇಕೆಂದು ವಿಮಾನ ನಿಲ್ದಾಣದ ಬಳಿ 50 ಎಕರೆ ಭೂಮಿಯನ್ನು ಹಾಗೂ ದೇಶಪಾಂಡೆ ಫೌಂಡೇಶನ್‌ಗೆ 12 ಎಕರೆ ಭೂಮಿ ನೀಡಲಾಗಿದೆ ಎಂದರು.
ಕೈಗಾರಿಕಾ ಸ್ಥಾಪನೆಗೆ ಕೃಷಿಯೇತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕೆಂದು ಕೆಐಎಡಿಬಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ, ವಿಪಕ್ಷಗಳು ವಿನಾಕಾರಣ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. ಹೀಗಾದರೆ, ಕೈಗಾರಿಕಾಭಿವೃದ್ಧಿ ಸಾಧ್ಯವೇ ಎಂದು ನಿರಾಣಿ ಪ್ರಶ್ನಿಸಿದರು. ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಎಂ. ವಿದ್ಯಾಶಂಕರ, ಆಯುಕ್ತ ಮಹೇಶ್ವರರಾವ್, ವರ್ಣಾಸ್ ಲೀಡರ್ಸ್ ಫ್ಯಾಕ್ಟರಿ ಸಿಇಓ ದಿನೇಶ ಬಡಗುಂಡಿ, ಸಿಡಾಕ್ ನಿರ್ದೇಶಕ ಪ್ರಕಾಶ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಎನ್.ಜಿ. ಜವಳಿ, ವಿಲಾಸ ಕಾಮತ ಇದ್ದರು. ಅನು ಹಾಗೂ ರಮಣಿ ವೆಂಕಟ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.