ಝಾಪಾಗಳಿಂದ ಝಾಲಾಚ್ ಪಾಹಿಜೆ ನಾಟಕ
ಬೆಳಗಾವಿ: ಬೆಳಗಾವಿ ಮಹಾಷ್ಟ್ರಕ್ಕೆ ಸೇರಲೇಬೇಕು ಎಂದು ಏನೆಲ್ಲ ಹೋರಾಟಗಳನ್ನು ಎಂಇಎಸ್ ಕೃಪಾಪೋಷಿತ ನಾಟಕ ಮಂಡಳಿಯ ಮೂಲಕ ಪ್ರದರ್ಶನ ನೀಡುತ್ತಲೇ ಜನತೆಗೆ ಪುಕ್ಕಟೆ ಮನರಂಜನೆ ಒದಗಿಸುತ್ತ ಸೋತು ಸುಣ್ಣಾಗಿರುವ ಎಂಇಎಸ್ ಧುರೀಣರು ಈಗ ಮಹಾರಾಷ್ಟ್ರದ ಮೂಲಕ ಖರೇ ಖರೇ ನಾಟಕವೊಂದನ್ನು ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಅದುವೇ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಆಧಾರಿತ ವಿಷಯದ ಮೇಲೆ 'ಝಾಲಾಚ್ ಪಾಹಿಜೆ' ಎಂಬ ವಿವಾದಾತ್ಮಕ ನಾಟಕ. ಈ ನಾಟಕ ಪ್ರದರ್ಶನಕ್ಕೆ ಮಹಾರಾಷ್ಟ್ರ ಕಲಾನಿಧಿ ಸಂಘಟನೆ ಮುಂದಾಗಿದೆ. ದಿನಾಂಕ ಮಾತ್ರ ನಿಗದಿಯಾಗಿಲ್ಲ.
ಬೆಳಗಾವಿ ಗಡಿ ವಿಷಯದ ಕುರಿತು ಸದಾ ಒಂದಿಲ್ಲೊಂದು ನೆಪ ಮಾಡಿಕೊಂಡು ಕನ್ನಡಿಗರು, ಕರ್ನಾಟಕದೊಂದಿಗೆ ಕಾಲು ಕೆದರಿ ಜಗಳ ತೆಗೆಯುತ್ತ ಬಂದು, ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಇನ್ನಿಲ್ಲದ ದುಸ್ಸಾಹಸಕ್ಕೆ ಕೈಹಾಕುತ್ತಿರುವ ಎಂಇಎಸ್ ವಿವಾದಾತ್ಮಕ ಹೆಸರಿನಲ್ಲಿ ನಾಟಕ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಸಂಯುಕ್ತ ಮಹಾರಾಷ್ಟ್ರ ಚಳವಳಿಯಲ್ಲಿ ನೂರಾರು ಮರಾಠಿಗರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಬೆಳಗಾವಿ, ನಿಪ್ಪಾಣಿ, ಕಾರವಾರ, ಭಾಲ್ಕಿ, ಬೀದರ ಸೇರಿದಂತೆ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ನಮ್ಮ ಐದು ದಶಕಗಳ ಬೇಡಿಕೆಗೆ ಇದವರೆಗೂ ನ್ಯಾಯ ದೊರೆತಿಲ್ಲ. ಇನ್ನು ಮುಂದೆ ನಾವು ಸುಮ್ಮನ್ನೇ ಕುಳಿತುಕೊಂಡರೇ ನಮಗೆ ಉಳಿಗಾಲ ಕಂಡಿತ ಇಲ್ಲ ಎಂಬುದನ್ನು ಅರಿತ ಎಂಇಎಸ್ ಈ ಬಾರಿ ವಿವಾದಾತ್ಮಕ ನಾಟಕ ಪ್ರದರ್ಶನಕ್ಕೆ ರಂಗಭೂಮಿಯನ್ನು ಸಜ್ಜುಗೊಳಿಸಲು ಹೊಂಚುಹಾಕಿದೆ.
ಈ ನಾಟಕವನ್ನು ಮಹಾರಾಷ್ಟ್ರ ರಾಜ್ಯದಲ್ಲಿ ಅಷ್ಟೇ ಅಲ್ಲದೇ, ಕರ್ನಾಟಕದ ಗಡಿಭಾಗದ ಹಳ್ಳಿಗಳಲ್ಲಿಯೂ ಪ್ರದರ್ಶಿಸುವ ಮೂಲಕ ಕನ್ನಡಿಗರ ವಿರುದ್ಧ ಮರಾಠಿಗರನ್ನು ಎತ್ತಿಕಟ್ಟಲು ಸಂಚು ರೂಪಿಸಿದೆ. ಕನ್ನಡ-ಮರಾಠಿ ಭಾಷಿಕರ ನಡುವೆ ಹುಳಿಹಿಂಡುವ ಕೆಲಸಕ್ಕೆ ಮುಂದಾಗಿದೆ.
ಎಂಇಎಸ್ ಮುಖಂಡರು ಕಾರುತ್ತಿರುವ ಬೆಂಕಿಗೆ ಮಹಾನಾಯಕರು ತುಪ್ಪ ಹಾಕುವ ಕೆಲಸ ಮಾಡುತ್ತ ಬಂದಿದ್ದಾರೆ. ಬೆಳಗಾವಿ ವಿಷಯದಲ್ಲಿ ಮರಾಠಿ ಭಾಷಿಕರಿಗೆ ಅನ್ಯಾಯವಾಗುತ್ತಲೇ ಇದೆ.
ನಾವು ಎಂದಿಗೂ ಸಹಿಸುವುದಿಲ್ಲ. ಬೆಳಗಾವಿ ಗಡಿ ಜ್ವಲಂತ ಸಮಸ್ಯೆ ಕುರಿತು ನಾಟಕ ಪ್ರದರ್ಶನವೊಂದೇ ಮಾರ್ಗ ಉಳಿದಿದೆ. ಈ ನಾಟಕ ಪ್ರದರ್ಶನ ಮಾಡುವ ಮೂಲಕ ಮರಾಠಿಗರನ್ನು ಸೆಳೆದುಕೊಳ್ಳುವ ತಂತ್ರಗಾರಿಕೆ ರೂಪಿಸುತ್ತಿರುವ ನಿತೇಶ ರಾಣೆ ಎಂಬುವರು ಮುಂಬೈನಲ್ಲಿ ವಿವಾದಾತ್ಮಕ ನಾಟಕದ ಹೆಸರನ್ನು ಘೋಷಿಸಿದ್ದಾರೆ. ಅಲ್ಲದೇ, ಗಡಿಭಾಗದಲ್ಲಿಯೂ ಈ ನಾಟಕ ಪ್ರದರ್ಶನ ಮಾಡುವ ಮೂಲಕ ಮರಾಠಿಗರನ್ನು ಜಾಗೃತಗೊಳಿಸಲಾಗುವುದು ಎಂದಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಈ ನಾಟಕ: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ತಯಾರಿ ಮಾಡಿಕೊಳ್ಳುತ್ತಿರುವ ಎಂಇಎಸ್ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗಡಿ ಪ್ರದೇಶದಲ್ಲಿರುವ ವಿಧಾನಸಭೆ ಕ್ಷೇತ್ರಗಳ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿರುವುದು. ಮರಾಠಿಗರನ್ನು ಮರಳು ಮಾಡಲೆಂದೇ ನಾಟಕ ಪ್ರದರ್ಶಿಸುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.
ಬೆಳಗಾವಿ ಗಡಿ ವಿವಾದ ಸುಪ್ರೀಂಕೋರ್ಟ್ನಲ್ಲಿದೆ. ಆದರೂ, ಗಡಿ ವಿಷಯವನ್ನು ಮುಂದಿಟ್ಟುಕೊಂಡು ಕರ್ನಾಟಕ ಹಾಗೂ ಕನ್ನಡಿಗರ ಮೇಲೆ ಕಿಡಿ ಕಾರುವ ಮಹಾರಾಷ್ಟ್ರ ಸರ್ಕಾರ, ಕೆಲವು ಮಹಾರಾಷ್ಟ್ರ ಜನಪ್ರತಿನಿಧಿಗಳು ಹಾಗೂ ಎಂಇಎಸ್ ಪದಾಧಿಕಾರಿಗಳು ಕಿತಾಪತಿ ನಡೆಸುತ್ತಲೇ ಎಲ್ಲ ಹೋರಾಟಗಳಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದರೂ ಎಂಇಎಸ್ ತನ್ನ ಹಳೆಯ ಚಾಳಿ ಬಿಡುತ್ತಿಲ್ಲ.
ಕನ್ನಡಪರ ಸಂಘಟನೆಗಳಿಂದ ಖಂಡನೆ: ಎಸ್ಪಿಗೆ ಮನವಿ
ಎಂಇಎಸ್ನ ಈ ನಾಟಕೀಯ ಬೆಳವಣಿಗೆ ಗಡಿಭಾಗದ ಕನ್ನಡಪರ ಸಂಘಟನೆಗಳನ್ನು ಕೆರಳಿಸುವಂತೆ ಮಾಡಿದೆ.ಎಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಬೆಳಗಾವಿಯಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಝಾಲಾಚ್ ಪಾಹಿಜೆ ನಾಟಕಕ್ಕೆ ನಿರ್ಬಂಧ ಹೇರಬೇಕು. ಯಾವುದೇ ಕಾರಣಕ್ಕೂ ಈ ವಿವಾದಾತ್ಮಕ ನಾಟಕ ಪ್ರದರ್ಶನಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.
ಎಂಇಎಸ್, ಮಹಾರಾಷ್ಟ್ರ ನಾಯಕರ ಈ ನಿಲುವು ಖಂಡನಾರ್ಹ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಂಇಎಸ್ ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಸದಾ ಒಂದಿಲ್ಲೊಂದು ಕುತಂತ್ರ ಮಾಡುತ್ತಲೇ ಇರುತ್ತದೆ. ಈ ನಾಟಕ ಪ್ರದರ್ಶನದ ಮೂಲಕ ಕರ್ನಾಟಕ-ಮಹಾರಾಷ್ಟ್ರ ಉಭಯ ರಾಜ್ಯಗಳ ನಡುವೆ ಭಾಷಾ ವೈಷಮ್ಯ ಹೆಚ್ಚಿಸಿ ಕನ್ನಡ-ಮರಾಠಿ ಭಾಷಿಕರ ನಡುವೆ ವಿಷ ಬೀಜ ಬಿತ್ತುವ ಕೆಲಸಕ್ಕೆ ಕೈಹಾಕಲಾಗಿದೆ. ಈ ನಾಟಕಕ್ಕೆ ನಿರ್ಬಂಧ ಹೇರಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮಹಾದೇವ ತಳವಾರ, ಗಣೇಶ ರೋಕಡೆ, ಸುರೇಶ ಗವಣ್ಣವರ, ದೇವೇಂದ್ರ ತಳವಾರ, ಶಶಿಕಾಂತ ಅಷ್ಟೇಕರ, ಅಶೋಕ ಅಪ್ಪುಗೊಳ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

