ಬೆಂಗಳೂರು ನಗರ

ಸ್ನಾತಕೋತ್ತರ ಪ್ರವೇಶ ವೇಳಾಪಟ್ಟಿ ಬದಲು

Published On :

ಬೆಂಗಳೂರು: ಬೆಂಗಳೂರು ವಿವಿ ಪಿ.ಜಿ.ಕೋರ್ಸ್ ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿ ಬದಲಾಗಿದೆ. ದಂಡ ರಹಿತ ಅರ್ಜಿ ಸಲ್ಲಿಕೆಗೆ ಆ.1ರವರೆಗೆ ಅವಕಾಶ. ಆ.2ರಂದು ಅರ್ಹತಾ ಪಟ್ಟಿ ಬಿಡುಗಡೆಯಾಗುತ್ತದೆ. ಅರ್ಹತಾ ಪಟ್ಟಿ ಬದಲಾವಣೆಗೆ ಆ.5ರವರೆಗೆ ದೂರು ಸಲ್ಲಿಸಬಹುದು. ಅಂತಿಮ ಪಟ್ಟಿ ಆ.7ಕ್ಕೆ ಪ್ರಕಟವಾಗಲಿದೆ. ವಿಜ್ಞಾನಕ್ಕೆ ಆ.8, 9, ಅರ್ಥಶಾಸ್ತ್ರ ಎಂಎಸ್‌ಡ್ಲ್ಯೂಗೆ ಆ.11 ಹಾಗೂ ಕಲೆ, ವಾಣಿಜ್ಯ ಹಾಗೂ ಶೈಕ್ಷಣಿಕ ವಿಭಾಗದ ಕೋರ್ಸ್‌ಗಳಿಗೆ ಆ.12 ಮತ್ತು 13ರಂದು ಕೌನ್ಸೆಲಿಂಗ್ ನಡೆಯಲಿದೆ. ಆ.14ರಿಂದ ತರಗತಿಗಳು ಆರಂಭವಾಗಲಿವೆ.

ರೋಗಿಗಳ ಜತೆ ಮುರುಘಾ ಶರಣರ ಪಂಚಮಿ
ಬೆಂಗಳೂರು: ಚಿತ್ರದುರ್ಗದ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ರೋಗಿಗಳೊಂದಿಗೆ ನಾಗರ ಪಂಚಮಿ ಆಚರಿಸಲಿದ್ದಾರೆ. ಮೂಢನಂಬಿಕೆ ಮತ್ತು ಅಜ್ಞಾನ ಅಳಿಸಲು ನಾಗರಪಂಚಮಿಯಂದು ಹುತ್ತಕ್ಕೆ ಹಾಲು ಎರೆಯುವ ಬದಲು ಆಸ್ಪತ್ರೆಯಲ್ಲಿನ ಮಕ್ಕಳಿಗೆ ಹಾಗೂ ರೋಗಿಗಳಿಗೆ ಶರಣರು ಹಾಲು ಉಣಿಸುವ ವಿನೂತನ ಕಾರ್ಯಕ್ರಮವನ್ನು ಬಸವ ಕೇಂದ್ರ ಹಮ್ಮಿಕೊಂಡಿದೆ. ಕಾರ್ಯಕ್ರಮ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಜು.31ರಂದು ನಡೆಯಲಿದ್ದು ಸಚಿವ ದಿನೇಶ್ ಗುಂಡೂರಾವ್ ಉದ್ಘಾಟನೆ ಮಾಡಲಿದ್ದಾರೆ.

ಕನ್ನಡ ಇ-ತಂತ್ರಾಂಶ: ಅಧಿಕಾರಿಗಳಿಗೆ ಮಾಹಿತಿ
ಬೆಂಗಳೂರು: ಕನ್ನಡದ ಹೊಸ ಯುನಿಕೋಡ್ ತಂತ್ರಾಂಶವನ್ನು ಕಂಪ್ಯೂಟರ್ ಹಾಗೂ ಮೊಬೈಲ್‌ನಲ್ಲಿ ಹೇಗೆ ಬಳಸಬೇಕೆಂಬುದರ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ. ದಯಾನಂದ್ ಮಾಹಿತಿ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಯನ ಸಭಾಂಗಣದಲ್ಲಿ ಬುಧವಾರ ವಿವಿಧ ಜಿಲ್ಲೆಯಿಂದ ಬಂದ ಅಧಿಕಾರಿಗಳಿಗೆ 'ಕನ್ನಡ ಇ-ತಂತ್ರಾಂಶ ಕಾರ್ಯಾಗಾರ' ಆಯೋಜಿಸಿತ್ತು. ಕರ್ನಾಟಕ ಸರ್ಕಾರದ ನುಡಿ ತಂತ್ರಾಂಶದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಹೊಸದಾದ ಕ್ಷೇಮಾ ಕೀಲಿಮಣೆ ವಿನ್ಯಾಸವನ್ನು ಯುನಿಕೋಡ್ ತಂತ್ರಾಂಶಕ್ಕಾಗಿ ರೂಪಿಸಲಾಗಿದೆ. ಹತ್ತು ವರ್ಷಗಳ ಹಿಂದೆ ನುಡಿ, ಬರಹ ತಂತ್ರಾಂಶದಲ್ಲಿ ಸಿದ್ಧವಿಟ್ಟಿರುವ ಮಾಹಿತಿಯನ್ನು ನಾವು ಅಭಿವೃದ್ಧಿಪಡಿಸಿರುವ ಹೊಸ ಯುನಿಕೋಡ್‌ನಲ್ಲಿ ಪರಿವರ್ತಿಸಿಕೊಂಡು ಆನ್‌ಲೈನ್ ಪತ್ರ ವ್ಯವಹಾರವನ್ನು ಸುಗಮವಾಗಿ ಮಾಡಬಹುದು ಎಂದು ದಯಾನಂದ್ ತಿಳಿಸಿದರು. ಯುನಿಕೋಡ್‌ಗೆ ಪೂರಕವಾಗಿ ಬ್ರೈಲ್ ಕನ್ನಡ ತಂತ್ರಾಂಶ, ಮೊಬೈಲ್ ಬಳಕೆಯ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿದ್ದು, ಬಳಕೆಗಾಗಿ ಸದ್ಯಕ್ಕೆ 12 ಬಗೆಯ ಫಾಂಟ್ ವಿನ್ಯಾಸಗೊಳಿಸಲಾಗಿದೆ ಎಂದರು. ಪ್ರತಿ ಫಾಂಟ್‌ಗೂ ಕನ್ನಡದ 8 ಜ್ಞಾನಪೀಠ ಸಾಹಿತಿಗಳ ಹೆಸರು ಇಡಲಾಗಿದೆ. ಜತೆಗೆ ಪೂರ್ಣಚಂದ್ರ ತೇಜಸ್ವಿ, ಪು.ತಿ. ನರಸಿಂಹಚಾರ್ ಹಾಗೂ ಕನ್ನಡದ ಪ್ರಸಿದ್ಧ ನದಿಗಳ ಹೆಸರನ್ನು ಅಭಿಮಾನದ ಸಂಕೇತವಾಗಿ ಇಡಲಾಗಿದೆ ಎಂದರು. ಇದೇ ವೇಳೆ ಅಧಿಕಾರಿಗಳಿಗೆ ಕ್ಷೇಮಾ ಕೀಲಿ ಮಣೆ ಹಾಗೂ ಹೊಸ ತಂತ್ರಾಂಶ ಬಳಸುವ ಬಗ್ಗೆ ತಂತ್ರಜ್ಞ ಮಂಜಾಚಾರ್ ವಿವರಿಸಿದರು.

ಬಯಲಾಯ್ತು ಅರಣ್ಯ ಇಲಾಖೆ ಭೂ ಅತಿಕ್ರಮಣ
ಬೆಂಗಳೂರು: ನೌಕರರಿಗೆ ಭವಿಷ್ಯ ನಿಧಿ ಪಾವತಿಸದಿರುವ ಪ್ರಕರಣದ ವಿಚಾರಣೆ ವೇಳೆ 500ಕ್ಕೂ ಹೆಚ್ಚು ಎಕರೆ ಅರಣ್ಯ- ಕಂದಾಯ ಇಲಾಖೆಯ  ಭೂಮಿ ಅತಿಕ್ರಮಣ ಆಗಿರುವುದು ಬೆಳಕಿಗೆ ಬಂದಿದೆ. ಎನ್.ಆರ್.ಪುರ   ಕೊಪ್ಪ ಹಾಗೂ  ಕರ್ಕೇಶ್ವರ ಗ್ರಾಮಗಳ ನಡುವೆ ಅಲಿಗೇಶ್ವರ ಎಸ್ಟೇಟ್‌ನ ಕಾರ್ಮಿಕರಿಗೆ ಪಿಎಫ್ ನೀಡದ ಹಿನ್ನೆಲೆಯಲ್ಲಿ ಭವಿಷ್ಯ ನಿಧಿ ಅಧಿಕಾರಿಗಳು 233 ಎಕರೆ ಜಮೀನನ್ನು ಹರಾಜು ಪ್ರಕ್ರಿಯೆಗೆ ಮುಂದಾಗಿದ್ದರು. ಇದನ್ನು ಪ್ರಶ್ನಿಸಿ ಅಲಿಗೇಶ್ವರ ಎಸ್ಟೇಟ್‌ನ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ಎಸ್ಟೇಟ್ ಪರ ವಕೀಲ 1900 ಎಕರೆ ಆಸ್ತಿ ಹೊಂದಿರುವುದಾಗಿ ತಿಳಿಸಿದ್ದರು. ಈ ಬಗ್ಗೆ ದಾಖಲೆ ಪರಿಶೀಲಿಸಿದಾಗ 500 ಎಕರೆ ಅತಿಕ್ರಮ ಆಗಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆದುಕೊಂಡಿತು. ಆದರೆ ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿದಾಗ ಇನ್ನುಳಿದ 1400 ಎಕರೆಯಲ್ಲಿ 78 ಎಕರೆ ಕಂದಾಯ ಇಲಾಖೆಯ ಜಾಗ ಅತಿಕ್ರಮ ಆಗಿರುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನ್ಯಾ. ನಾರಾಯಣ ಸ್ವಾಮಿ ಅವರ ಪೀಠ ಆದೇಶಿಸಿ ವಿಚಾರಣೆ ಮುಂದೂಡಿದೆ.

ರೌಡಿ ಶೀಟರ್ ಗಿರಿ ಸೇರಿ ಮತ್ತೆ ಮೂವರ ಬಂಧನ
ಶಿವಮೊಗ್ಗ:  ಡಿಸಿಸಿ ಬ್ಯಾಂಕ್ ನಗರ ಶಾಖೆಯ ಅಡಮಾನ ಅವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಅಪರಾಧ ಪತ್ತೆದಳ ಪೊಲೀಸರು ಬುಧವಾರ ಮತ್ತೆ ರೌಡಿ ಶೀಟರ್ ಮಾರ್ಕೆಟ್ ಗಿರಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿ ಗೀತಾ ಹಾಗೂ ರುದ್ರೇಶ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಇದೊಂದಿಗೆ ಬಂಧಿತರ ಸಂಖ್ಯೆ 15ಕ್ಕೆ ಏರಿದೆ. ಈಗಾಗಲೇ ಬಂಧಿತ ಪ್ರಮುಖ ಆರೋಪಿ ಶಾಖಾ ವ್ಯವಸ್ಥಾಪಕರಾದ ಶೋಭಾ ಅವರೊಂದಿಗೆ ರೌಡಿ ಶೀಟರ್ ಮಾರ್ಕೆಟ್ ಗಿರಿ ಸ್ನೇಹ ಸಂಪಾದಿಸಿ, ಬ್ಯಾಂಕ್‌ಗೆ ನಕಲಿ ದಾಖಲೆ ನೀಡಿ ಹಣ ಪಡೆದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೂಡಿದ್ದಾರೆಂಬ ಆರೋಪದ ಮೇರೆಗೆ ಈತನನ್ನು ಬಂಧಿಸಲಾಗಿದೆ. ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ 3 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದಲ್ಲಿ ಮಂಗಳವಾರ ಶೋಭಾ ಅವರ ಚಿಕ್ಕಪ್ಪ ನಾಗರಾಜ್ ಮನೆಯಲ್ಲಿ ವಶಪಡಿಸಿಕೊಂಡ ವಸ್ತುಗಳಲ್ಲಿ ಬೆಳ್ಳಿ ಮೌಲ್ಯ 10 ಲಕ್ಷ, ಸ್ಥಿರಾಸ್ತಿ ದಾಖಲೆ ಮೌಲ್ಯ ಅಂದಾಜು 10 ಕೋಟಿ ಎಂದು ಡಿಸಿಐಬಿ ಇನ್‌ಸ್ಪೆಕ್ಟರ್ ಜೈರಾಜ್ ಹೇಳಿದ್ದಾರೆ.

167 ಕಾರ್ಮಿಕರ ವಜಾ
ದೊಡ್ಡಬಳ್ಳಾಪುರ: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಬಾಂಬೆ ರೇಯಾನ್ ಫ್ಯಾಷನ್ ಲಿಮಿಟೆಡ್‌ನ ಪ್ರೊಸಸಿಂಗ್ ಯೂನಿಟ್‌ನ 167 ಕಾರ್ಮಿಕರನ್ನು ಏಕಾಏಕಿ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಕಾರ್ಮಿಕರು ಬುಧವಾರ ಕಾರ್ಖಾನೆಯ ಮುಂದೆ ಪ್ರತಿಭಟನೆ ನಡೆಸಿದರು.

ಇಂದಿರಾ ಹತ್ಯೆಯಾಗುವುದು ಇವರಿಗೆ ಮೊದಲೇ ಗೊತ್ತಿತ್ತು!
ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಗೆ ಮೊದಲೇ ಎಚ್ಚರಿಕೆ ಪತ್ರ ನೀಡಿದ್ದ ಸ್ವಯಂಘೋಷಿತ ತ್ರಿಕಾಲಜ್ಞಾನಿ ಟಿಡಿಆರ್ ಹರಿಶ್ಚಂದ್ರಗೌಡ, ಇದರ ಮಾರಾಟಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಇಂದಿರಾ ಗಾಂಧಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ರಾಷ್ಟ್ರಪತಿಗೆ 8 ತಿಂಗಳು 20 ದಿನಗಳ ಮುಂಚೆಯೇ ರಾಷ್ಟ್ರಪತಿ ಕಚೇರಿಗೆ ಪತ್ರ ಬರೆದಿದ್ದೆ. ಈಗ ಆ ಪತ್ರವನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಗೆ 500 ಲಕ್ಷ ಕೋಟಿಗೆ ಮಾರಲು ನಿರ್ಧರಿಸಿದ್ದೇನೆ. ಇದಕ್ಕೆ ಅನುಮತಿ ನೀಡಬೇಕು ಎಂದು ಪ್ರಧಾನಿಗೆ ಪತ್ರ ಬರೆದಿದ್ದೇನೆ ಎಂದು ಹರಿಶ್ಚಂದ್ರಗೌಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.