ಬೆಂಗಳೂರು ನಗರ

ಇನ್ನೂ ಮೂರು ಹೇಯ ಕೃತ್ಯ

Published On :

ಭೈರವೇಶ್ವರನಗರದಲ್ಲಿ ಬಾಲಕಿ ಮೇಲೆ ದುರುಳನೊಬ್ಬನ ಬಲಾತ್ಕಾರ
ಕುಮಾರಸ್ವಾಮಿ ಬಡಾವಣೆ ಬಾಲಕಿ ಮೇಲೆ ಲೈಂಗಿಕ ಹಲ್ಲೆ ಯತ್ನ
ಬೆಂಗಳೂರು:  ವಿಬ್‌ಗ್ಯೊರ್ ಶಾಲೆಯ ಬಾಲಕಿ ಮೇಲೆ ಅತ್ಯಾಚಾರ ನಡೆದ ಪ್ರಕರಣ ಇನ್ನೂ ಹಸಿರಾಗಿದೆ. ಅದರ ಬೆನ್ನಲ್ಲೇ ಮತ್ತೆರಡು ಪ್ರಕರಣಗಳು ನಡೆದಿವೆ. ಮೊದಲ ಪ್ರಕರಣದಲ್ಲಿ ಕೀಚಕನೊಬ್ಬ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮತ್ತೊಬ್ಬ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಎರಡೂ ಪ್ರಕರಣಗಳಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅವರಿಬ್ಬರನ್ನೂ ರೌಡಿ ಪಟ್ಟಿಗೆ ಸೇರಿಸಲಾಗಿದೆ.
ಮೊದಲ ಪ್ರಕರಣ: ಮಾಗಡಿ ರಸ್ತೆ ಸುಂಕದಕಟ್ಟೆ ಭೈರವೇಶ್ವರ ನಗರದಲ್ಲಿ ಗಾರ್ಮೆಂಟ್ಸ್ ಉದ್ಯೋಗಿಯೊಬ್ಬರ 7 ವರ್ಷದ ಮಗಳ ಮೇಲೆ ಶ್ರೀನಿವಾಸ್ (25) ಎಂಬಾತ ಅತ್ಯಾಚಾರ ಎಸಗಿದ್ದಾನೆ. ಆರೋಪಿಯನ್ನು ಬಂಧಿಸಿರುವ ಕಾಮಾಕ್ಷಿಪಾಳ್ಯ ಪೊಲೀಸರು ರೌಡಿ ಪಟ್ಟಿಯಲ್ಲಿ ಹೆಸರು ಸೇರಿಸಿದ್ದಾರೆ.
ಪತಿಯಿಂದ 5 ವರ್ಷಗಳ ಹಿಂದೆ ದೂರವಾಗಿರುವ ಮಹಿಳೆಯೊಬ್ಬರು ತನ್ನ ಮಗಳೊಂದಿಗೆ ಇಲ್ಲಿನ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಬಾಲಕಿ ಸಮೀಪದ ಖಾಸಗಿ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಅವರ ಮನೆ ಪಕ್ಕದಲ್ಲೇ ಮತ್ತೊಂದು ಕುಟುಂಬ ವಾಸವಿದ್ದು ಆ ಮಹಿಳೆ ಬಾಲಕಿ ಓದುತ್ತಿದ್ದ ಶಾಲೆಯಲ್ಲೇ ಆಯಾ ಆಗಿ ಕೆಲಸ ಮಾಡುತ್ತಿದ್ದಳು.  
ಜು.25ರಂದು ಬೆಳಗ್ಗೆ ಮಹಿಳೆ ಮಗಳನ್ನು ಶಾಲೆಗೆ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಆದರೆ, ಸಂಜೆ ಬರುವುದು ತಡವಾಗಲಿದ್ದ ಹಿನ್ನೆಲೆಯಲ್ಲಿ ಆಯಾ ಅವರಿಗೆ ಮಾಹಿತಿ ನೀಡಿದ್ದರು. ಮನೆಗೆ ಹೋಗುವಾಗ ಮಗಳನ್ನು ಕರೆದುಕೊಂಡು ಹೋಗಿ. ನಾನು ಬಂದ ಬಳಿಕ ನಮ್ಮ ಮನೆಗೆ ಕರೆದುಕೊಂಡುಹೋಗುತ್ತೇನೆ ಎಂದಿದ್ದರು.
ಅದರಂತೆ ಸಂಜೆ ಆಯಾ, ಬಾಲಕಿಯನ್ನು ಮನೆಗೆ ಕರೆದೊಯ್ದಿದ್ದರು. ಆದರೆ, ಕೆಲಸವಿದ್ದ ಹಿನ್ನೆಲೆಯಲ್ಲಿ ಆಯಾ ಬಾಲಕಿಯನ್ನು ಮನೆಯಲ್ಲೇ ಬಿಟ್ಟು ಹೊರಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಒಬ್ಬನೇ ಇದ್ದ ಆರೋಪಿ ಶ್ರೀನಿವಾಸ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ರಾತ್ರಿ ಮನೆಯಲ್ಲಿ ಬಾಲಕಿ ಬಾಲಕಿ ಅಸ್ವಸ್ಥಳಾದಳು. ಆಸ್ಪತ್ರೆಯಲ್ಲಿ ವೈದ್ಯರು ತಪಾಸಣೆ ನಡೆಸಿದ  ಸಂದರ್ಭದಲ್ಲಿ ಅತ್ಯಾಚಾರ ನಡೆದಿರುವುದು ಖಚಿತವಾಯಿತು.
ತಾಯಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಅತ್ಯಾಚಾರ ಹಾಗೂ ಪೋಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶ್ರೀನಿವಾಸ್‌ನನ್ನು ಬಂಧಿಸಿ  ರೌಡಿ ಪಟ್ಟಿಗೆ ಸೇರಿಸಿದ್ದಾರೆ.
ಮತ್ತೊಂದು ಪ್ರಕರಣ:  ಕುಮಾರಸ್ವಾಮಿ ಬಡಾವಣೆ ಕಾಶಿ ವಿಶ್ವೇಶ್ವರ ನಗರದಲ್ಲಿ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದಿದೆ. ತಮಿಳುನಾಡು ಮೂಲದ ಆರೋಪಿ ದಂಡಪಾಣಿ (52) ಎಂಬಾತನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಪೊಲೀಸರು ಅತ್ಯಾಚಾರ, ಪೋಸ್ಕೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ರೌಡಿ ಪಟ್ಟಿಗೆ ಹೆಸರು ಸೇರಿಸಿದ್ದಾರೆ. ಆರೋಪಿ ಹಾಗೂ ನೊಂದ ಬಾಲಕಿ ಪೋಷಕರು ಕಳೆದ ಹಲವು ವರ್ಷಗಳಿಂದ ಕಾಶಿ ವಿಶ್ವೇಶ್ವರ ನಗರದಲ್ಲಿ ವಾಸವಿದ್ದರು. ಅಕ್ಕಪಕ್ಕದ ಮನೆಯಾಗಿದ್ದ ಕಾರಣ ಒಬ್ಬರಿಗೊಬ್ಬರು ಪರಿಚಿತರಾಗಿದ್ದರು. ಪಾತಕಿ ದಂಡಪಾಣಿ ಬಾಲಕಿ ಮನೆಗೂ  ಹೋಗುತ್ತಿದ್ದ.
ಮಂಗಳವಾರ ಏನಾಯಿತು?: ಮನೆಯಲ್ಲಿ ಮೂವರು ಬಾಲಕಿಯರು ಇದ್ದಿದ್ದರು. ಕೆಲಸದ ನಿಮಿತ್ತ ಹೊರಗೆ ತೆರಳಿದ್ದ ಪೋಷಕರು ವಾಪಸಾಗಿರಲಿಲ್ಲ. ಈ ವೇಳೆ ಮನೆಗೆ ಬಂದ ದಂಡಪಾಣಿ ಹೊರಗಿನ ಕೊಠಡಿಯಲ್ಲಿ ಒಬ್ಬಳೇ ಕುಳಿತಿದ್ದ 14 ವರ್ಷದ ಬಾಲಕಿಯನ್ನು ಮಾತನಾಡಿಸುವ ನೆಪದಲ್ಲಿ ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಭಯಗೊಂಡ ಬಾಲಕಿ ಕಿರುಚಿಕೊಂಡ ಹಿನ್ನೆಲೆಯಲ್ಲಿ ಮತ್ತೊಂದು ಕೊಠಡಿಯಲ್ಲಿದ್ದ ಇನ್ನಿಬ್ಬರು ಯುವತಿಯರು ಹೊರಗೆ ಓಡಿ ಬಂದಿದ್ದಾರೆ. ಆಗ, ಏನು ಆಗಿಲ್ಲವೆಂದು ಹೇಳಿ ದಂಡಪಾಣಿ ಮನೆಯಿಂದ ಪರಾರಿಯಾಗಿದ್ದ. ಪೋಷಕರು ವಾಪಸ್ ಆದ ಬಳಿಕ ಬಾಲಕಿ ನಡೆದ ಘಟನೆ ವಿವರಿಸಿದ್ದಾಳೆ. ಹೀಗಾಗಿ ಪೋಷಕರು ಕುಮಾರಸ್ವಾಮಿ ಬಡಾವಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಾಲ ಕೊಡಿಸುವ ನೆಪದಲ್ಲಿ ಲೈಂಗಿಕ ಕಿರುಕುಳ: ಬಂಧನ
ಬೆಂಗಳೂರು: ರಾಜಗೋಪಾಲನಗರ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ 36 ವರ್ಷದ ಮಹಿಳೆಗೆ ಸಾಲ ಕೊಡಿಸುವ ನೆಪದಲ್ಲಿ ವ್ಯಕ್ತಿಯೊಬ್ಬ ಬುಧವಾರ ಲೈಂಗಿಕ ಕಿರುಕುಳ ನೀಡಿದ್ದಾನೆ.
ಹೆಗ್ಗನಹಳ್ಳಿ ನಿವಾಸಿ ಲಕ್ಕಪ್ಪ ನಾಯ್ಕ(54) ಎಂಬಾತನನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ತಾನು ಸರ್ಕಾರಿ ಕಚೇರಿಯೊಂದರಲ್ಲಿ ಮೇಲ್ವಿಚಾರಕನಾಗಿದ್ದೇನೆ ಎಂದು ಹೇಳಿಕೊಂಡಿದ್ದ ಲಕ್ಕಪ್ಪ ನಾಯ್ಕ ಕೆಲ ತಿಂಗಳುಗಳ ಹಿಂದೆ ಮಹಿಳೆಗೆ ಆಕಸ್ಮಿಕವಾಗಿ ಪರಿಚಯವಾಗಿದ್ದ. ಮಹಿಳೆಗೆ ಅಗತ್ಯವಿದ್ದ ಸಾಲ ಕೊಡಿಸುವುದಾಗಿ ನಂಬಿಸಿದ್ದ. ಆದರೆ, ಕಳೆದ ಎರಡು ತಿಂಗಳುಗಳಿಂದ ಮಹಿಳೆಗೆ ನಿರಂತರವಾಗಿ ಕರೆ ಮಾಡಿ ತನ್ನೊಂದಿಗೆ ಸಹಕರಿಸುವಂತೆ ಕಿರುಕುಳ ನೀಡುತ್ತಿದ್ದ ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಸಾಲದ ವಿಚಾರವಾಗಿ ಮಾತನಾಡಲು ಬುಧವಾರ ಮಧ್ಯಾಹ್ನ ರಾಜಗೋಪಾಲನಗರದಲ್ಲಿರುವ ಸ್ನೇಹಿತರ ಮನೆಗೆ ಬರುವಂತೆ ಕೇಳಿದ್ದಾನೆ. ಆತನ ಮಾತನ್ನು ನಂಬಿದ ಮಹಿಳೆ ಹೇಳಿದ ಸ್ಥಳಕ್ಕೆ ಹೋದಾಗ ನಾಯ್ಕ ಬಿಟ್ಟು ಮನೆಯಲ್ಲಿ ಬೇರಾರೂ ಇರಲಿಲ್ಲ. ಒಳಗೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ. ಹೀಗಾಗಿ ಆಕೆ ಸ್ನೇಹಿತರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ನೇಹಿತರು, ಸಂಬಂಧಿಗಳು ಸ್ಥಳಕ್ಕೆ ಆಗಮಿಸಿ ನಾಯ್ಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆ ಬಗ್ಗೆ ಮಹಿಳೆ ದೂರು ನೀಡಿದ ಹಿನ್ನೆಲೆಯಲ್ಲಿ ನಾಯ್ಕನನ್ನು ಬಂಧಿಸಲಾಗಿದೆ. ತಾನು ಸರ್ಕಾರಿ ನೌಕರ ಎಂದು ಹೇಳಿದ್ದಾನೆ. ಆದರೆ, ನಾಯ್ಕ ಹೇಳುತ್ತಿರುವುದು ಸುಳ್ಳು ಎಂದು ಮಹಿಳೆ ಹೇಳುತ್ತಿದ್ದಾಳೆ. ಹೀಗಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಉತ್ತರ ವಿಭಾಗ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.