ಯಳ್ಳೂರಲ್ಲಿ ತೆರವು
ಬೆಂಗಳೂರು: ಬೆಳಗಾವಿಯ ಯಳ್ಳೂರಿನಲ್ಲಿ ಅಕ್ರಮವಾಗಿ ಎಂಇಎಸ್ ಕಾರ್ಯಕರ್ತರು ಕಲ್ಲು ನೆಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲು ತೆರವುಗೊಳಿಸಿರುವುದಾಗಿ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ. ಕಲ್ಲು ತೆರವಿನ ನಂತರ ನಡೆದ ವಿದ್ಯಮಾನಗಳ ಬಗ್ಗೆ ಅರ್ಜಿದಾರರ ಭೀಮಪ್ಪ ಗುಂಡಪ್ಪ ಗಡಾದ್ ಪರ ವಕೀಲರು ನ್ಯಾ.ಎನ್.ಕುಮಾರ್ ಮತ್ತು ನ್ಯಾ. ಬಿ.ಮನೋಹರ್ ಅವರ ಗಮನಕ್ಕೆ ತಂದರು.
ಕಲ್ಲು ತೆರವಿನ ನಂತರವೂ ಕೆಲವು ಪುಂಡರು ಯಳ್ಳೂರು ಅಲ್ಲದೆ ಇತರ ಗಡಿ ಭಾಗಗಳಲ್ಲೂ ಮರಾಠಿ ನಾಮ ಫಲಕ ಹಾಕಿದ್ದಾರೆ ಎಂದು ದ್ವಿಸದಸ್ಯ ಪೀಠಕ್ಕೆ ವಿವರಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಂಡಿದೆ. ಆದರೆ ಕೆಲವರು ಕಲ್ಲನ್ನು ಮತ್ತದೇ ಸ್ಥಳದಲ್ಲಿ ನೆಡುತ್ತಿದ್ದು ಈಗಾಗಲೇ ಎರಡು ಬಾರಿ ಕಲ್ಲು ತೆರವುಗೊಳಿಸಿರುವುದಾಗಿ ಸರ್ಕಾರಿ ವಕೀಲರು ಪೀಠದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಹೈಕೋರ್ಟ್ನ ದ್ವಿಸದಸ್ಯ ಪೀಠ ಅರ್ಜಿ ವಿಚಾರಣೆ ಮುಂದೂಡಿದೆ.
ಯಳ್ಳೂರಿನಲ್ಲಿ ಅಕ್ರಮವಾಗಿ 'ಮಹಾರಾಷ್ಟ್ರ ರಾಜ್ಯ ಯಳ್ಳೂರು' ಎಂದು ನಾಮ ಫಲಕ ತೆರೆವಿಗೆ ಹೈಕೋರ್ಟ್ನ ಮುಖ್ಯ ನ್ಯಾ. ಡಿ.ಎಚ್.ವಾಘೇಲ ಮತ್ತು ನ್ಯಾ.ಎಚ್.ಜಿ.ರಮೇಶ್ ಅವರಿದ್ದ ಪೀಠ ತೆರವುಗೊಳಿಸುವಂತೆ ಈ ಹಿಂದೆ ನಿರ್ದೇಶಿಸಿದ್ದರು.
ಕನ್ನಡಿಗರು ಭಯೋತ್ಪಾದಕರಲ್ಲ
ಶಿವಸೇನೆ ಹೇಳಿಕೆ ಖಂಡನೀಯ. ಇಂಥ ಪರಿಭಾಷೆಯನ್ನು ಬಳಸುವ ಶಿವಸೇನೆ ಮುಖಂಡರೇ ನಿಜವಾದ ಭಯೋತ್ಪಾದಕರು. ಕನ್ನಡ ನೆಲದಲ್ಲಿ ಕನ್ನಡದ ನಾಮಫಲಕ ಹಾಕುವುದಕ್ಕೆ ಶಿವಸೇನೆಯ ಅಪ್ಪಣೆ ಪಡೆಯುವ ಅಗತ್ಯವಿಲ್ಲ. ಉಚ್ಚ ನ್ಯಾಯಾಲಯದ ಆದೇಶದ ಪ್ರಕಾರವೇ ಕರ್ನಾಟಕ ಪೊಲೀಸರು ಕ್ರಮ ಜರುಗಿಸಿದ್ದಾರೆ. ಕೇಂದ್ರ ಸರ್ಕಾರ ಶಿವಸೇನೆಗೆ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಕರ್ನಾಟಕದ ತಂಟೆಗೆ ಹೋಗದಂತೆ ಸೂಚನೆ ನೀಡಬೇಕು. ಶಿವಸೇನೆ ರಾಜಕೀಯ ಪ್ರೇರಿತವಾಗಿ ನಡೆದುಕೊಳ್ಳುವುದನ್ನು ಬಿಡಬೇಕು. ಸರ್ಕಾರ ಇಂಥ ಅನ್ಯಾಯ ಸಹಿಸಬಾರದು.
- ಡಾ. ಬರಗೂರು ರಾಮಚಂದ್ರಪ್ಪ, ಸಾಹಿತಿ
ಶಿವಸೇನೆಯೇ ಭಯೋತ್ಪಾದಕ
ಗೂಂಡಾಗಿರಿ ಮಾಡುವ ಶಿವಸೇನೆ ಮುಖಂಡರೇ ನಿಜವಾದ ಭಯೋತ್ಪಾದಕರು. ಕರ್ನಾಟಕ ಪೊಲೀಸರು ಭಯೋತ್ಪಾದಕರು ಎಂಬ ಹೇಳಿಕೆ ಅಕ್ಷಮ್ಯ ಅಪರಾಧ. ನಾವೇನು ಮಹಾರಾಷ್ಟ್ರದಲ್ಲಿ ಕನ್ನಡದ ನಾಮಫಲಕ ಹಾಕಿಲ್ಲ. ದೇಶದಲ್ಲಿ ಶಿವಸೇನೆಯನ್ನು ಬಹಿಷ್ಕರಿಸಬೇಕು, ರದ್ದುಗೊಳಿಸಬೇಕು. ಇಂಥ ಕ್ರಮವನ್ನು ಕೇಂದ್ರದ ಮೋದಿ ಸರ್ಕಾರ ತೆಗೆದುಕೊಳ್ಳಬೇಕು.
-ವಾಟಾಳ್ ನಾಗರಾಜ್, ಕನ್ನಡಪರ ಹೋರಾಟಗಾರ
ಗೂಂಡಾ ಕಾಯ್ದೆಯಡಿ ಬಂಧಿಸಬೇಕು
ಇಂಥ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಶಿವಸೇನೆ ಮುಖಂಡರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಭಾರತದಲ್ಲಿ ಶಿವಸೇನೆ ಭಯೋತ್ಪಾದನೆ ಮಾಡುತ್ತಿದ್ದರೆ, ಕರ್ನಾಟಕದಲ್ಲಿ ಎಂಇಎಸ್ ಭಯೋತ್ಪಾದನೆ ನಡೆಸುತ್ತಿದೆ. ಇವುಗಳನ್ನು ನಿಷೇಧಿಸಬೇಕು. ಕಾರ್ಯಕರ್ತರ ಕೈಗೆ ದೊಣ್ಣೆ ಕೊಟ್ಟು ಅಮಾಯಕರ ಮೇಲೆ ಹಲ್ಲೆ ಮಾಡುವುದನ್ನು ನಾವು ಸಹಿಸುವುದಿಲ್ಲ.
-ಟಿ.ಎ. ನಾರಾಯಣಗೌಡ, ಕರವೇ ಅಧ್ಯಕ್ಷ
ಸೌಹಾರ್ದಕ್ಕೆ ಭಂಗ ತರೋದು ಸರಿಯಲ್ಲ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಗೆ ಹಾನಿ ಮಾಡುವ ಮೂಲಕ ಶಿವಸೇನೆ ಕಾರ್ಯಕರ್ತರು ಗೂಂಡಾ ವರ್ತನೆ ಮಾಡಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರು ಅಣ್ಣ-ತಮ್ಮಂದಿರಂತೆ ವಾಸಿಸುತ್ತಿದ್ದಾರೆ. ಇವರ ಸೌಹಾರ್ದಕ್ಕೆ ಭಂಗ ತರುವುದು ಸರಿಯಲ್ಲ.
-ವ.ಚ. ಚನ್ನೇಗೌಡ, ಕನ್ನಡಪರ ಹೋರಾಟಗಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

