ಬೆಂಗಳೂರು ನಗರ

ಸದನದಲ್ಲೇ ನೈಸ್ ಉತ್ತರ

Published On :

ವಿಧಾನಸಭೆ: ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ಬಂದ ನೈಸ್ ಯೋಜನೆ ಬಗ್ಗೆ ಚರ್ಚೆ ನಡೆಸುವಂತೆ ಬಿಜೆಪಿ ಹಾಗೂ ಜೆಡಿಎಸ್ ಶಾಸಕರ ಒತ್ತಾಯಕ್ಕೆ ರಾಜ್ಯ ಸರ್ಕಾರ ಮಣಿದಿರುವುದು ಮಾತ್ರವಲ್ಲ, ನೈಸ್ ಸಂಸ್ಥೆ ವಿರುದ್ಧ ಸದನ ಸಮಿತಿ ಮೂಲಕ ತನಿಖೆ ನಡೆಸುವುದಕ್ಕೆ ಸಿಎಂ ಸಿದ್ದರಾಮಯ್ಯ ಜತೆ ಚರ್ಚಿಸಿ ಸದನದಲ್ಲೇ ಉತ್ತರ ನೀಡುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ಬೇಡಿಕೆ ಚರ್ಚೆ ಸಂದರ್ಭದಲ್ಲಿ ನೈಸ್ ಅವ್ಯವಹಾರದ ಬಗ್ಗೆ ಪ್ರಸ್ತಾಪಿಸುವುದಕ್ಕೆ ಅವಕಾಶ ನೀಡುವಂತೆ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್, ಸುರೇಶ್‌ಕುಮಾರ್, ಸತೀಶ್‌ರೆಡ್ಡಿ, ಕೃಷ್ಣಪ್ಪ, ಜೆಡಿಎಸ್‌ನ ಮಂಜುನಾಥ್ ಸೇರಿದಂತೆ ಹಲವರು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಕೋರಿದರು.
ಸಾಧ್ಯವಾದರೆ ನಿಯಮ 69ರ ಅನ್ವಯ ಇಂದೇ ಚರ್ಚೆಗೆ ಅವಕಾಶ ಕೊಡಿ ಎಂದು ವಿಶ್ವನಾಥ್ ಆಗ್ರಹಿಸಿದರು. ಆದರೆ ಇದು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ್ದರಿಂದ ಬೇಡಿಕೆ ಸಂದರ್ಭದಲ್ಲೇ ಚರ್ಚೆ ಮಾಡುವಂತೆ ಸ್ಪೀಕರ್ ಅನುಮತಿ ನೀಡಿದರು. ಇದಕ್ಕೆ ಶಾಸಕ ಅಶೋಕ್ ಖೇಣಿ ಸಹಜವಾಗಿಯೇ ವಿರೋಧ ವ್ಯಕ್ತಪಡಿಸಿದರು. ಆದರೆ ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ, ಇದು ಕೇವಲ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಲ್ಲ. ಕೈಗಾರಿಕೆ, ವಾಣಿಜ್ಯ ಇಲಾಖೆಯೂ ಸೇರಿದೆ. ಬೇಡಿಕೆ ಅನ್ವಯ ಚರ್ಚೆ ನಡೆಸುವ ಬದಲು ನಿಯಮ 69 ಅಥವಾ ವಿಶೇಷ ಚರ್ಚೆಯ ರೂಪದಲ್ಲಿ ಮಾತನಾಡಿ ಎಂದು ಕ್ರಿಯಾಲೋಪ ಎತ್ತಿದರು.
ಆದರೆ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಇದು ನಮ್ಮ ಇಲಾಖೆಗೆ ಸಂಬಂಧಿಸಿದ್ದು. ಹೀಗಾಗಿ ಈ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಯಲಿ. ಸರ್ಕಾರ ಉತ್ತರ ನೀಡುತ್ತದೆ ಎಂದರು. ರಾಯರೆಡ್ಡಿ ಅವರ ಕ್ರಿಯಾಲೋಪವನ್ನು ತಳ್ಳಿ ಹಾಕಿದ ಕಾನೂನು ಸಚಿವ ಜಯಚಂದ್ರ, ಇದು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಚರ್ಚೆಗೆ ನಿಯಮಗಳ ಅಡ್ಡಿ ಇಲ್ಲ ಎಂದು ಚರ್ಚೆಗೆ ಅವಕಾಶ ನೀಡಿದರು.
ಪ್ರಪಂಚದಲ್ಲೇ ವಿಶೇಷ: ನೈಸ್ ಅಕ್ರಮವನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಬಿಜೆಪಿಯ ಎಸ್.ಆರ್. ವಿಶ್ವನಾಥ್, ಈ ಸಂಸ್ಥೆ ನಮ್ಮ ಸರ್ಕಾರವೂ ಸೇರಿದಂತೆ ಎಲ್ಲ ಸರ್ಕಾರಗಳಿಗೂ ಟೋಪಿ ಹಾಕಿದೆ. ಹೀಗಾಗಿ ಇದನ್ನು ಟೋಪಿ ಸಂಸ್ಥೆ ಎಂದೇ ಕರೆಯಬೇಕು. ಮೂಲ ಯೋಜನೆಯಲ್ಲಿಲ್ಲದ ಹಲವು ಕ್ರಮಗಳನ್ನು ಕಾನೂನು ಬಾಹಿರವಾಗಿ ನೈಸ್ ಜಾರಿಗೆ ತಂದಿದ್ದು, ಶೂನ್ಯ ಬಂಡವಾಳ ಹೂಡಿಕೆಯಲ್ಲಿ 1117 ಎಕರೆ ಭೂಮಿಯನ್ನು ಪುಕ್ಕಟೆಯಾಗಿ ಪಡೆದಿದೆ. ಇಂಥ ಒಂದು ಅವ್ಯವಹಾರದ ಯೋಜನೆ ಪ್ರಪಂಚದ ಯಾವ ಭಾಗದಲ್ಲೂ ನಡೆದಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ನಡೆದಿರುವುದು ವಿಶೇಷ ಎಂದರು.
ಮೂಲ ಒಪ್ಪಂದಕ್ಕೆ ವಿರುದ್ಧವಾಗಿ ನೈಸ್, ಲೋಕೋಪಯೋಗಿ ಇಲಾಖೆ ಮಧ್ಯೆ ಸರ್ಕಾರ ಮತ್ತು ಸಂಪುಟ ಸಭೆ ಗಮನಕ್ಕೆ ತಾರದೇ ಅಧಿಕಾರಿಗಳು ಅಪವಿತ್ರ ತ್ರಿಕೋನ ಒಪ್ಪಂದ ಮಾಡಿಕೊಂಡಿದ್ದಾರೆ. ಇದನ್ನು ಆರ್‌ಟಿಐ ಕಾಯ್ದೆ ಅನ್ವಯ ನಾನು ಪಡೆದಿದ್ದೇನೆ. ಮೂಲ ಒಪ್ಪಂದ ಬಿಟ್ಟು ಮತ್ತೆಲ್ಲ ಕ್ರಮಗಳನ್ನು ನೈಸ್ ತೆಗೆದುಕೊಂಡಿದೆ.
ಬೆಂಗಳೂರು-ಮೈಸೂರು ರಸ್ತೆ ನಿರ್ಮಾಣ ಮಾತಿರಲಿ, 14 ವರ್ಷದಲ್ಲಿ ಕೇವಲ 45 ಕಿಮೀ ಟಾರ್ ರಸ್ತೆ ಹಾಗೂ 8 ಕಿಮೀ ಕಾಂಕ್ರಿಟ್ ರಸ್ತೆ ನಿರ್ಮಿಸಿದ್ದಾರೆ. ಆದರೆ ಇದೇ ರಸ್ತೆಯಲ್ಲಿ ಟೋಲ್ ಸಂಗ್ರಹಿಸುತ್ತಿದ್ದಾರೆ. 2013ರ ವರೆಗೆ ಸರ್ಕಾರದ ಜತೆ ಸಮಾಲೋಚಿಸಿ ಟೋಲ್ ದರ ಹೆಚ್ಚಿಸುತ್ತಿದ್ದ ನೈಸ್ ಈಗ ಸರ್ಕಾರವನ್ನು ಸಂಪರ್ಕಿಸದೇ ಟೋಲ್ ದರವನ್ನು ಶೇ.300ರಷ್ಟು ಹೆಚ್ಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ನಿರ್ಮಾಣ, ಟೋಲ್ ಸಂಗ್ರಹ, ಮೇಲ್ಸೇತುವೆ, ಟೌನ್‌ಶಿಫ್ ಸೇರಿದಂತೆ ಹಲವು ವಿಚಾರಗಳಲ್ಲಿ ನೈಸ್ ಸಂಸ್ಥೆ ಒಪ್ಪಂದ ಉಲ್ಲಂಘಿಸಿದೆ. 1291 ಎಕರೆಯನ್ನು ಈ ಸಂಸ್ಥೆ ಅಕ್ರಮವಾಗಿ ಪಡೆದುಕೊಂಡಿದೆ. ಇದರಿಂದ ಸರ್ಕಾರಕ್ಕೆ 10ರಿಂದ 12 ಸಾವಿರ ಕೋಟಿ ನಷ್ಟವಾಗಿದೆ. ಹೀಗಾಗಿ ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು. ಇಲ್ಲವಾದರೆ ಒಪ್ಪಂದವನ್ನು ರದ್ದುಪಡಿಸಿ ಸರ್ಕಾರವೇ ರಸ್ತೆ ನಿರ್ಮಿಸುವಂತೆ ಆಗ್ರಹಿಸಿದರು.
ಸದನ ಸಮಿತಿ
ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೈಸ್‌ಗೆ ನೀಡಿದ್ದ ಎಲ್ಲ ಭೂಮಿಯನ್ನು ವಶಪಡಿಸಿಕೊಳ್ಳುವಂತೆ ಸಲಹೆ ನೀಡಿದ್ದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಈ ಸಂದರ್ಭದಲ್ಲಿ ಹೇಳಿದರು. ಆದರೆ ಸದನ ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಈಗ ಸರ್ಕಾರ ಈ ಬಗ್ಗೆ ಸದನ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಆದರೆ ತಕ್ಷಣಕ್ಕೆ ಪ್ರತಿಪಕ್ಷಗಳ ಬೇಡಿಕೆ ಒಪ್ಪಿಕೊಳ್ಳದ ಸರ್ಕಾರ, ಈ ಬಗ್ಗೆ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದೆ.
ಶಾಸನ ಸಭೆ ಮಾರಾಟಕ್ಕಿಲ್ಲ: ಕಾಗೋಡು
ನೈಸ್ ಅವ್ಯವಹಾರದ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಿದ್ದು, ಈ ಬಗ್ಗೆ ಸರ್ಕಾರ ಸ್ಪಷ್ಟೀಕರಣ ನೀಡಲೇಬೇಕು ಎಂದು ತಾಕೀತು ಮಾಡಿರುವ ಸ್ಪೀಕರ್ ಕಾಗೋಡು ತಿಮ್ಮಪ್ಪ, ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಸದನಕ್ಕೆ ಬರಬೇಡಿ ಎಂದು ಶಾಸಕ ಅಶೋಕ್ ಖೇಣಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ನೈಸ್ ವಿರುದ್ಧ ಮಾಡಿರುವ ಆರೋಪಕ್ಕೆ ಉತ್ತರ ನೀಡಲು ನನಗೆ ಅವಕಾಶ ನೀಡಲೇಬೇಕು ಎಂದು ಖೇಣಿ ಪಟ್ಟು ಹಿಡಿದಾಗ ಸಿಟ್ಟಿಗೆದ್ದ ಸ್ಪೀಕರ್, ಮಿಸ್ಟರ್ ಖೇಣಿ ಈ ಶಾಸನ ಸಭೆ ಯಾರಿಗೂ ಮಾರಾಟಕ್ಕೆ ಇಲ್ಲ. ಸ್ವಾರ್ಥ ಇಟ್ಟುಕೊಂಡು ಯಾರು ಸದನದ ಒಳಗೆ ಬರಬೇಡಿ. ಈಗ ಚರ್ಚೆಯಾಗಿರುವುದು ಸಾರ್ವಜನಿಕ ವಿಚಾರ. ನೀವು ಸಾರ್ವಜನಿಕ ಹಿತಾಸಕ್ತಿ ಇಟ್ಟುಕೊಂಡು ಮಾತನಾಡುವುದಿದ್ದರೆ ಅವಕಾಶ ನೀಡುತ್ತೇನೆ. ನಿಮ್ಮ ವೈಯಕ್ತಿಕ ಹಿತಾಸಕ್ತಿ ಬಗ್ಗೆ ಇಲ್ಲಿ ಮಾತನಾಡಬೇಡಿ ಎಂದು ಗುಡುಗಿದಾಗ ಇಡಿ ಸದನ ಮೇಜುಕುಟ್ಟಿ ಸ್ವಾಗತಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.