ಸೋಮವಾರ ಶಾಲೆ ಶುರು
ಕೃಷ್ಣರಾಜಪುರ: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣದಿಂದ ದೇಶಾದ್ಯಂತ ಸುದ್ದಿಯಾಗಿರುವ ವಿಬ್ಗ್ಯೊರ್ ಶಾಲೆ ಸೋಮವಾರದಿಂದ ಆರಂಭವಾಗಲಿದೆ. ಪೋಷಕರು ಯಾವುದೇ ರೀತಿಯಲ್ಲಿ ಆತಂಕಪಡಬೇಕಾಗಿದ್ದಲ್ಲ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆಯಲ್ಲಿ ಎಂಟು ದಿನಗಳಿಂದ ಶಾಲೆ ಮುಚ್ಚಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಮಂಗಳವಾರ ಅಲ್ಲಿಗೆ ಭೇಟಿ ನೀಡಿದ್ದರು. ಇದರ ಜತೆಗೆ ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆಯಿಂದಲೂ ಶಾಲೆ ಮುಚ್ಚುವಂತೆ ಎಚ್ಚರಿಕೆ ನೀಡಲಾಗಿತ್ತು.
ಶಾಲೆಯಲ್ಲಿ ಅತ್ಯಾಚಾರ ಘಟನೆ ನಡೆದಿದೆ ಎಂದ ಮಾತ್ರಕ್ಕೆ ಅದನ್ನು ಮುಚ್ಚಲು ಸಾಧ್ಯವಿಲ್ಲ ಎಂದು ಪೊಲೀಸ್ ಆಯುಕ್ತ ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಾಗೂ ಪೋಷಕರ ಒತ್ತಾಸೆಯಿಂದ ಸೋಮವಾರದಿಂದ ಶಾಲೆ ಪುನಾರಂಭವಾಗಲಿದೆ. ಶಾಲೆಯ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಬಗೆಹರಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಭದ್ರತೆ ನೀಡುವ ಬಗ್ಗೆ ವಿಬ್ಗ್ಯೊರ್ ಶಾಲೆಯ ಆಡಳಿತ ಮಂಡಳಿಗೆ ಸೂಚಿಸಲಾಗಿದೆ ಎಂದು ಅವರು ಸಭೆಯಲ್ಲಿ ಪೋಷಕರಿಗೆ ಧೈರ್ಯ ತುಂಬಿದರು.
ಸಿಬ್ಬಂದಿ ವಿವರ ಪಡೆಯಿರಿ: ಶಾಲೆಗೆ ಸಿಬ್ಬಂದಿ ನೇಮಕ ವೇಳೆ ಅವರ ಸಂಪೂರ್ಣ ವಿವರಗಳನ್ನು ಪಡೆದುಕೊಳ್ಳತಕ್ಕದ್ದು ಎಂದು ಆಡಳಿತ ಮಂಡಳಿಗೆ ತಾಕೀತು ಮಾಡಿದರು.
ಮಾಹಿತಿ ಅಸಾಧ್ಯ: ಪ್ರಕರಣದ ಬಗ್ಗೆ ಡಿಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಹೀಗಾಗಿ ಈ ಹಂತದಲ್ಲಿ ಹೆಚ್ಚಿನ ವಿವರ ನೀಡಲು ಅಸಾಧ್ಯ. ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಅದನ್ನು ಎಲ್ಲ ಶಾಲೆ ಮತ್ತು ಕಾಲೇಜುಗಳು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದು ರೆಡ್ಡಿ ತಿಳಿಸಿದರು. ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಶಾಲೆ ಮತ್ತು ಕಾಲೇಜುಗಳ ಆಡಳಿತ ಮಂಡಳಿಗಳ ಜತೆಗೆ ಸಂಪರ್ಕದಲ್ಲಿ ಇದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ರೆಡ್ಡಿ ತಿಳಿಸಿದರು.
ಅರಿವಿಂದ ಅತ್ಯಾಚಾರ ತಡೆಯಲು ಸಾಧ್ಯ
ಕೃಷ್ಣರಾಜಪುರ: ಅತ್ಯಾಚಾರ ತಡೆಯಲು ಕಾನೂನಿಗಿಂತ ಮಹಿಳೆಯರು ಮತ್ತು ಪುರುಷರಲ್ಲಿ ಅರಿವು ಮೂಡಿಸಬೇಕು. ಆಗ ಮಾತ್ರ ಇಂಥ ಪ್ರಕರಣಗಳನ್ನು ತಡೆಯಲು ಸಾಧ್ಯ ಎಂದು ಸಿಲಿಕಾನ್ ಸಿಟಿ ಕಾಲೇಜು ಮುಖ್ಯಸ್ಥ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಹೆಣ್ಣುಮಕ್ಕಳಿಗೆ ಗೌರವ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವಕರಲ್ಲಿ ಅರಿವು ಮೂಡಿಸಿ ಹೆಣ್ಣುಮಕ್ಕಳನ್ನು ಗೌರವಿಸುವಂತೆ ಮನವಿ ಮಾಡಬೇಕು ಎಂದರು. ಪ್ರತಿಯೊಬ್ಬರೂ ಹೆಣ್ಣನ್ನು ಪೂಜ್ಯಬಾವದಿಂದ ಕಾಣಬೇಕು ಹಾಗೂ ಗೌರವ ನೀಡಬೇಕು ಎಂಬುದನ್ನು ಮಕ್ಕಳಲ್ಲಿ ಅರಿವು ಅತ್ಯಗತ್ಯ ಎಂದರು. ಖ್ಯಾತ ಶಿಕ್ಷಣ ತಜ್ಞ ಕೆ.ನರಹರಿ, ಜ್ಞಾನೇಶ್, ಆದಿಲಕ್ಷ್ಮೀ, ದೀಪ್ತಿ ಶಿರಹಟ್ಟಿ ಇದ್ದರು.
ಸಿಸಿಟಿವಿ ಸರಿಪಡಿಸಲು ಸೂಚನೆ
ಶಾಲೆಯಲ್ಲಿ ಅಳವಡಿಸಲಾಗಿರುವ 24 ಸಿಸಿಟಿವಿ ಕ್ಯಾಮೆರಾಗಳ ಪೈಕಿ ಕೆಲವು ಕಾರ್ಯ ನಿರ್ವಹಿಸುತ್ತಿಲ್ಲ. ಅವುಗಳನ್ನು ದುರಸ್ತಿಗೊಳಿಸಲು ಆಡಳಿತ ಮಂಡಳಿಗೆ ಸೂಚಿಸಲಾಗಿದೆ ಎಂದರು ಎಂ.ಎನ್.ರೆಡ್ಡಿ.
ಕೇಸು ದಾಖಲು ವಿಳಂಬಕ್ಕೆ ಕಾರಣ ಏನು?
ಬೆಂಗಳೂರು: ತೂಬರಹಳ್ಳಿಯ ವಿಬ್ಗ್ಯೊರ್ ಶಾಲೆ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರವನ್ನು ಪೋಷಕರು ಗಮನಿಸದೆ ಇದ್ದದ್ದು ಹಾಗೂ ಬಾಲಕಿ ಅದನ್ನು ಹೇಳಿಕೊಳ್ಳದೇ ಇದ್ದದ್ದರಿಂದ ಪ್ರಕರಣ ದಾಖಲಿಸಲು ವಿಳಂಬವಾಗಿತ್ತು.
ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಬಾಲಕಿಗೆ ಗೊತ್ತಿರಲಿಲ್ಲ. ಆದರೆ, 8 ದಿನಗಳ ಬಳಿಕ ಜ್ವರ ಹಾಗೂ ಅನಾರೋಗ್ಯ ಉಂಟಾಗಿದ್ದ ಕಾರಣ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ವೈದ್ಯರ ಪರಿಶೀಲನೆ ವೇಳೆ ಅತ್ಯಾಚಾರ ನಡೆದಿರುವುದು ಗಮನಕ್ಕೆ ಬಂದಿತ್ತು. ಬಾಲಕಿ ಚೇತರಿಸಿಕೊಂಡ ಬಳಿಕ ಪೋಷಕರು ಸೂಕ್ಷ್ಮವಾಗಿ ವಿಚಾರಿಸಿದಾಗ ಶಿಕ್ಷಕ ಅತ್ಯಾಚಾರ ನಡೆಸಿರುವ ವಿಚಾರವನ್ನು ತಿಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಾದ ಬಳಿಕ ತನಿಖೆ ಆರಂಭಿಸಿದ ಪೊಲೀಸರು ಮಹಿಳಾ ಪೊಲೀಸ್ ಅಧಿಕಾರಿ ಸಹಾಯದೊಂದಿಗೆ ಬಾಲಕಿಗೆ ಶಿಕ್ಷಕರ ಫೋಟೋಗಳನ್ನು ತೋರಿಸಿದಾಗ ಅತ್ಯಾಚಾರ ಎಸಗಿದ ಶಿಕ್ಷಕ ಮುಸ್ತಫಾನನ್ನು ಗುರುತಿಸಿದ್ದಾಳೆ. ಅಲ್ಲದೇ ಅತ್ಯಾಚಾರ ನಡೆದಿದ್ದ ಕೊಠಡಿಯನ್ನು ತೋರಿಸಿದ್ದಾಳೆ. ಕೊಠಡಿಯಲ್ಲಿ ಹಾಗೂ ಪ್ರವೇಶಿಸುವ ಬಾಗಿಲ ಬಳಿ ಸಿಸಿ ಕ್ಯಾಮರಾ ಇರಲಿಲ್ಲ. ಬೇರೆ ಕಡೆ ಇದ್ದ ಸಿಸಿ ಕ್ಯಾಮರಾಗಳ ದೃಶ್ಯಗಳು ಅಸ್ಪಷ್ಟವಾಗಿದ್ದರಿಂದ ಆರೋಪಿಯನ್ನು ಗುರುತಿಸಲಾಗಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

