ಬೆಂಗಳೂರು ನಗರ

ವರುಣನ ಆರ್ಭಟ; ಜನರ ಸಂಕಟ

Published On :

ಬೆಂಗಳೂರು: ರಾಜ್ಯದ ಅಲ್ಲಲ್ಲಿ ಭಾನುವಾರವೂ ವರಣುನ ಆರ್ಭಟ ಮುಂದುವರಿದಿದೆ. ಹಲವೆಡೆ ಸೇತುವೆಗಳು ಮುಳುಗಿದ್ದರೆ, ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದರಿಂದ ಭಾನುವಾರವೂ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದೆ. ಪರಿಣಾಮ ಚಿಕ್ಕೋಡಿ ತಾಲೂಕಿನ ಮಲಿಕವಾಡ ಗ್ರಾಮದಲ್ಲಿ ದೂಧಗಂಗಾ ನದಿಗೆ ನಿರ್ಮಿಸಿರುವ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಮಲಿಕವಾಡ-ದತ್ತವಾಡ ಸೇತುವೆ ಶನಿವಾರ ರಾತ್ರಿಯೇ ಜಲಾವೃತವಾಗಿದೆ. ತಾಲೂಕಿನಲ್ಲಿನ ವೇದಗಂಗಾ, ದೂಧಗಂಗಾ,್ತ ಕೃಷಾನದಿಗಳ ಕೆಳಮಟ್ಟದ ಆರು ಸೇತುವೆಗಳು ಮುಳುಗಡೆಂಾಗಿ ಸಂಪರ್ಕ ಕಡಿತಗೊಂಡಿದೆ. ಇದರಿಂದ ಈ ಮಾರ್ಗದ ಜನರು ಮಹಾರಾಷ್ಟ್ರದೊಂದಿಗೆ ಸಂಪರ್ಕ ಸಾಧಿಸಲು ಬೋರಗಾಂವ, ಕಾಗವಾಡ ಮತ್ತು ನಿಪ್ಪಾಣಿ ಮಾರ್ಗವಾಗಿ ಸಂಚರಿಸಬೇಕಿದೆ.
ಮಹಾರಾಷ್ಟ್ರದಿಂದ ರಾಜಾಪುರ ಬ್ಯಾರೇಜಿನಿಂದ 29,500 ಕ್ಯುಸೆಕ್, ದೂಧಗಂಗಾದಿಂದ 14,900 ಕ್ಯುಸೆಕ್ ಸೇರಿದಂತೆ ಒಟ್ಟು 44,400 ಕ್ಯುಸೆಕ್ ನೀರು ರಾಜಾಪುರ ಬ್ಯಾರೇಜ್ ಮೂಲಕ ಹರಿದು ಬರುತ್ತಿದೆ.
ಅಪಾಯ ಮಟ್ಟ ಮೀರಿವೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದರಿಂದ ರಸ್ತೆ, ತೋಟ, ಗದ್ದೆಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಜತೆಗೆ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಅಪಾಯ ಮಟ್ಟ ಮೀರಿವೆ. ಶೃಂಗೇರಿ, ಮೂಡಿಗೆರೆ, ಕುದುರೆಮುಖ, ಕೊಪ್ಪ ತಾಲೂಕುಗಳಲ್ಲೂ ವರುಣ ಆರ್ಭಟಿಸಿದ್ದಾನೆ. ಕಡೂರು, ತರೀಕೆರೆಯಲ್ಲಿ ತುಂತುರು ಮಳೆಯಾಗಿದೆ. ಭದ್ರಾ ನದಿ ನೀರಿನ ಮಟ್ಟ ಏರಿದ್ದರಿಂದ ಬಾಳೆಹೊನ್ನೂರು ಹೋಬಳಿಯ ಬಹುತೇಕ ಕಡೆ ಕೃಷಿ ಭೂಮಿಗಳು ಜಲಾವೃತಗೊಂಡಿದ್ದು, ರಸ್ತೆ ಸಂಪರ್ಕಗಳು ಕಡಿತಗೊಂಡಿವೆ.
ತಗ್ಗು ಪ್ರದೇಶಗಳು ಜಲಾವೃತ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾನುವಾರ ಮಳೆ ಕಡಿಮೆಯಾಗಿದ್ದರೂ, ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಹಲವೆಡೆ ಹಾನಿ ಸಂಭವಿಸಿದೆ. ನೇತ್ರಾವತಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿತೀರದ  ತಗ್ಗುಪ್ರದೇಶಗಳು ಜಲಾವೃತವಾಗಿವೆ.
ಕುಮಾರಧಾರ ಮುಳುಗಡೆ: ಕುಮಾರಧಾರಾ ನದಿ ಉಕ್ಕಿ ಹರಿದ ಪರಿಣಾಮ ಶನಿವಾರ ರಾತ್ರಿ 12 ಗಂಟೆ ಸುಮಾರಿಗೆ ಕುಮಾರಧಾರಾ ಸೇತುವೆ ಮುಳುಗಡೆಯಾಗಿತ್ತು. ಭಾನುವಾರ ಬೆಳಗ್ಗೆ 6.30ರ ಹೊತ್ತಿಗೆ ಪ್ರವಾಹ ಇಳಿಮುಖಗೊಂಡು ಸೇತುವೆ ವಾಹನಗಳ ಸಂಚಾರಕ್ಕೆ ಮುಕ್ತವಾಯಿತು.
ದ್ವೀಪವಾಯ್ತು: ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು,  ಭಾನುವಾರ ಅಲ್ಲಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ನಾಪೋಕ್ಲು- ಭಾಗಮಂಡಲ ಸಂಪರ್ಕ 2 ದಿನಗಳಿಂದ ಕಡಿತಗೊಂಡಿದೆ. ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಲಿಕೋಟು ಬಳಿಯ ತಂಡ್ರಹೊಳೆ ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆ ಸುರಿದ ಹಿನ್ನೆಲೆಯಲ್ಲಿ ಅಣೆಕಟ್ಟಿಗೆ ಒಳಹರಿವು ಹೆಚ್ಚಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.