ಬೆಂಗಳೂರು ನಗರ

ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ

Published On :

ಬೆಂಗಳೂರು: ಸರಗಳ್ಳರ ಹಾವಳಿ ಮುಂದುವರೆದಿದ್ದು ನಗರದ ಮೂರು ಕಡೆ ಮಹಿಳೆಯರ ಸರ ಅಪಹರಿಸಲಾಗಿದೆ. ವಿಳಾಸ ಕೇಳುವ ನೆಪದಲ್ಲಿ ದುಷ್ಕರ್ಮಿಗಳು ಮಹಿಳೆಯ ಸರ ಅಪಹರಿಸಿರುವ ಘಟನೆ ಎಚ್‌ಎಎಲ್‌ನ ಗುರುರಾಜ ಬಡಾವಣೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ನವರತ್ನಮ್ಮ ಸರ ಕಳೆದುಕೊಂಡವರು.
ಸೋಮವಾರ ಬೆಳಗ್ಗೆ ನವರತ್ನಮ್ಮ ತಮ್ಮ ಮನೆಯ ಮುಂದೆ ಗಿಡಗಳಿಗೆ ನೀರುಣಿಸುತ್ತಿದ್ದರು. ಈ ವೇಳೆ ನಡೆದುಕೊಂಡು ಬಂದ ದುಷ್ಕರ್ಮಿಯೊಬ್ಬ ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿ ಸುಮಾರು 3 ಲಕ್ಷ ಮೌಲ್ಯದ ಸರ ಕಿತ್ತುಕೊಂಡು ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಬೈಯ್ಯಪ್ಪನಹಳ್ಳಿ ಅಶ್ವತ್ಥಲಕ್ಷ್ಮೀ ಎಂಬುವರ ಸರವನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಅಶ್ವತ್ಥಲಕ್ಷ್ಮೀ ಅವರು ಬೆಳಗ್ಗೆ ತಮ್ಮ ಮಗನನ್ನು ಶಾಲಾ ಬಸ್ಸಿಗೆ ಹತ್ತಿಸಿ ವಾಪಸ್ ಮನೆಗೆ ಮರಳುತ್ತಿದ್ದರು. ಈ ವೇಳೆ ವಿಳಾಸ ಕೇಳುವ ನೆಪದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸರ ಅಪಹರಿಸಿ ಪರಾರಿಯಾಗಿದ್ದಾರೆ. ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿಟಕಿಯಿಂದ ಸರ ಕಳ್ಳತನ: ಕಿಟಕಿ ಬಳಿ ಮಲಗಿದ್ದ ಮಹಿಳೆಯಿಂದ ದುಷ್ಕರ್ಮಿಯೊಬ್ಬ ಸರ ಅಪಹರಿಸಿರುವ ಘಟನೆ ವಿಜಯನಗರದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ. ಇಲ್ಲಿನ ಪೈಪ್‌ಲೈನ್ ರಸ್ತೆ ನಿವಾಸಿ ಅಲಮೇಲು ಎಂಬುವರು ಬೆಳಗ್ಗೆ 6ರ ಸುಮಾರಿಗೆ ಮನೆಯಲ್ಲಿ ಮಲಗಿದ್ದು ಗಾಳಿ ಬರಲೆಂದು ಕಿಟಕಿ ತೆರೆದಿಟ್ಟಿದ್ದರು. ಈ ವೇಳೆ ಬಂದ ದುಷ್ಕರ್ಮಿ ಸುಮಾರು 2 ಲಕ್ಷ ಮೌಲ್ಯದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆ: ಕಚೇರಿಗೆ ತೆರಳಲು ಕ್ಯಾಬ್‌ಗಾಗಿ ಕಾಯುತ್ತ ನಿಂತಿದ್ದ ಟೆಕ್ಕಿಗೆ ಚಾಕುವಿನಿಂದ ಬೆದರಿಸಿದ ದುಷ್ಕರ್ಮಿಗಳು ಚಿನ್ನದ ಸರ ಹಾಗೂ ನಗದು ದೋಚಿರುವ ಘಟನೆ ಇಂದಿರಾನಗರದಲ್ಲಿ ನಡೆದಿದೆ. ಜಿಗಣಿಯಲ್ಲಿರುವ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ರಾಘವೇಂದ್ರ ದರೋಡೆಗೆ ಒಳಗಾದವರು.
ಸೋಮವಾರ ಬೆಳಗ್ಗೆ ಕಚೇರಿಗೆ ಹೋಗಲು ಮನೆ ಬಳಿ ಕ್ಯಾಬ್‌ಗಾಗಿ ಕಾಯುತ್ತ ನಿಂತಿದ್ದರು. ಈ ವೇಳೆ ವಿಳಾಸ ಕೇಳುವ ನೆಪದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಮಾತನಾಡಿಸಿದ್ದಾರೆ. ಬಳಿಕ ಚಾಕುವಿನಿಂದ ತಿವಿಯುವುದಾಗಿ ಬೆದರಿಸಿ 1,800 ಇದ್ದ ಪರ್ಸ್ ಹಾಗೂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ರಾಘವೇಂದ್ರ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.  ಬೈಯ್ಯಪ್ಪನಹಳ್ಳಿ ಹಾಗೂ ಎಚ್‌ಎಎಲ್‌ನಲ್ಲಿ ಸರ ಅಪಹರಿಸಿದ ದುಷ್ಕರ್ಮಿಗಳ ತಂಡವೇ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮನೆಕಳ್ಳತನ: ದೊಡ್ಡಕಲ್ಲಸಂದ್ರ ಕುವೆಂಪುಪುರದಲ್ಲಿ ಕೈಗಾರಿಕೆಯೊಂದರಲ್ಲಿ 60 ಸಾವಿರ ಕಳ್ಳತನವಾಗಿದೆ. ಕಾಟನ್‌ಪೇಟೆ ನಿವಾಸಿ ಪ್ರವೀಣ್ ಕುಮಾರ್ ಜೈನ್ ಎಂಬುವರು ಸಣ್ಣ ಕೈಗಾರಿಕೆ ನಡೆಸುತ್ತಿದ್ದ ಶನಿವಾರ ರಾತ್ರಿ ಬಾಗಿಲು ಹಾಕಿಕೊಂಡು ಮನೆಗೆ ಹೋಗಿದ್ದರು. ಸೋಮವಾರ ವಾಪಸ್ ಬಂದಾಗ ಬಾಗಿಲು ತೆಗೆದಿದ್ದು ದುಷ್ಕರ್ಮಿಗಳು ಹಣದ ಡಬ್ಬಿಯಲ್ಲಿಟ್ಟಿದ್ದ 60 ಸಾವಿರ ಕದ್ದೊಯ್ದಿದ್ದಾರೆ. ಸುಬ್ರಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆ ಹಿಂಬಾಗಿಲು ಮುರಿದು ಕಳವು
ಕತ್ರಿಗುಪ್ಪೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಮನೆ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಹಣ ಚಿನ್ನಾಭರಣ ಕದ್ದೊಯ್ದಿದ್ದಾರೆ.  ಟೆಕ್ಕಿ ಸಂಪತ್ ಕುಮಾರ್ ಜುಲೈ 30ರಂದು ಕುಟುಂಬ ಸಮೇತರಾಗಿ ಶಿವಮೊಗ್ಗಕ್ಕೆ ತೆರಳಿದ್ದರು. ಭಾನುವಾರ ಸಂಜೆ ಮನೆಗೆ ವಾಪಸಾಗಿದ್ದಾರೆ. ಮನೆ ಬಾಗಿಲು ತೆಗೆದು ಒಳಗೆ ಹೋದಾಗ ಹಿಂದಿನ ಬಾಗಿಲು ತೆರೆದಿದ್ದು ದುಷ್ಕರ್ಮಿಗಳು ಬೀರುವಿನಲ್ಲಿಟ್ಟಿದ್ದ ಹಣ, ಚಿನ್ನಾಭರಣ ದೋಚಿದ್ದರು. ಪತ್ನಿ ಮನೆಗೆ ಮರಳಿದ ಬಳಿಕ ಕಳ್ಳತನವಾಗಿರುವ ವಸ್ತುಗಳ ಮೌಲ್ಯ ತಿಳಿದು ಬರಲಿದೆ ಎಂದು ಸಂಪತ್‌ಕುಮಾರ್ ಪೊಲೀಸರಿಗೆ ತಿಳಿಸಿದ್ದಾರೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.