ಬೆಂಗಳೂರು ನಗರ

ಕೊಲೆ ಕೈವಾಡ ಬಗ್ಗೆ ತನಿಖೆಯಾಗಲಿ

Published On :

ಬೆಂಗಳೂರು: ತಮ್ಮ ವಿರುದ್ಧದ ಕೊಲೆ ಆರೋಪ ಹೊರಿಸಿರುವ ಸಂಬಂಧ ತನಿಖೆಯಾಗಬೇಕು ಎಂದು ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಒತ್ತಾಯಿಸಿದ್ದಾರೆ.
'ರಾಜ್ಯ ಮಹಿಳಾ ವಸತಿ ನಿಲಯದ ಅಲ್ಪಸಂಖ್ಯಾತ ಮಹಿಳೆ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದರು. ಇದರ ಹಿಂದೆ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಕೈವಾಡ ಇದೆ' ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವರದಿ ನೀಡಿತ್ತು. ಆದರೆ ಇದು ಸುಳ್ಳು ಎಂದಿರುವ ಮಾಣಿಪ್ಪಾಡಿ ತನಿಖೆಗೆ ಆಗ್ರಹಿಸಿದ್ದಾರೆ. ಈ ಬಗ್ಗೆ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.
ಶನಿವಾರ ಈ ಸಂಬಂಧ ಮಾತನಾಡಿದ ಮಾಣಿಪ್ಪಾಡಿ, ವಕ್ಫ್ ಆಸ್ತಿ ಬಹುಕೋಟಿ ಹಗರಣದಲ್ಲಿ ಹಲವು ಕಾಂಗ್ರೆಸ್ ನಾಯಕರು ಭಾಗಿಯಾಗಿರುವ ವಿಷಯವನ್ನು ಬಹಿರಂಗಪಡಿಸಿದ್ದೇನೆ. ಹೀಗಾಗಿ ನನ್ನ ಬಾಯಿ ಮುಚ್ಚಿಸಲು ರಾಜ್ಯ ಸರ್ಕಾರ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದೆ ಎಂದು ಹೇಳಿದರು.
ವಕ್ಪ್ ಆಸ್ತಿಯ ಕಬಳಿಕೆಯಿಂದ ಕೋಟ್ಯಾಂತರ ನಷ್ಟ ಉಂಟಾಗಿದೆ. ಹಲವು ಆಸ್ತಿಗಳನ್ನು ಭೂಮಾಫಿಯಾ, ಭೂಕಬಳಿಕೆದಾರರು, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಕ್ಫ್ ಮಂಡಳಿ ಅಧಿಕಾರಿಗಳು ಹಾಗೂ ಕೆಲ ಅಲ್ಪಸಂಖ್ಯಾತ ಸಮುದಾಯದ ನಾಯಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಆಸ್ತಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ನಾನು ಅಧ್ಯಕ್ಷನಾಗಿದ್ದ ವೇಳೆ ಈ ಹಗರಣವನ್ನು ಹೊರತೆಗೆದು 700 ಪುಟಗಳ ವರದಿಯನ್ನು ಹಿಂದಿನ ಮುಖ್ಯಮಂತ್ರಿಗಳಿಗೆ ಸಲ್ಲಿಸಿದೆ. ಮುಂದಿನ ಅಧಿವೇಶನದಲ್ಲಿ ಇದು ಮಂಡನೆಯಾಗಲಿದೆ ಎಂದು ಮಾಣಿಪ್ಪಾಡಿ ಹೇಳಿದರು.
ಇದಕ್ಕಾಗಿ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಅಧಿಕಾರಿಗಳು ಸೇರಿ ಬಾಲಕಿ ಅಪಹರಣದ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರೆ. ವರದಿ ವಿಶ್ವಾಸಾರ್ಹತೆ ಬಗ್ಗೆ ಪರಿಶೀಲಿಸದೆ ಸಚಿವೆ ಉಮಾಶ್ರೀ ಸಿಐಡಿ ತನಿಖೆಗೆ ಆದೇಶಿಸಿದ್ದಾರೆ. ವಕ್ಫ್ ಆಸ್ತಿ ವಾಪಸ್ ಕೊಡಿಸಲು ಯತ್ನಿಸಿರುವ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಮಾಣಿಪ್ಪಾಡಿ ಆರೋಪಿಸಿದರು.
ನನ್ನ ವಿರುದ್ಧ ಆಧಾರರಹಿತ ಸುಳ್ಳು ದಾಖಲೆ ಸೃಷ್ಟಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇನ್ನು ನನಗೆ ಬೆದರಿಕೆ ಕರೆಗಳು ಬರುತ್ತಿದ್ದ ಸೂಕ್ತ ರಕ್ಷಣೆ ನೀಡಬೇಕು ಎಂದು ಮಾಣಿಪ್ಪಾಡಿ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡಿದರು.  ಉಮಾಶ್ರೀ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದ್ದು ನ್ಯಾಯಾಲಯದ ಮೂಲಕ ನೋಟಿಸ್ ನೀಡಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.